ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ದಶಕ ಕಂಡ ಸರ್ವೋದಯ ಮೇಳ

Last Updated 6 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಗಾಂಧಿ ವಿಚಾರಧಾರೆಗಳ ಚಿಂತನ–ಮಂಥನದ ಮುಖ್ಯ ಭೂಮಿಕೆ ಎಂದೇ ಕರೆಯಲಾಗುವ ‘ಸರ್ವೋದಯ ಮೇಳ’ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆರಂಭವಾಗಿ ಏಳು ದಶಕಗಳು ಸಂದಿವೆ.
 
1948ರಿಂದ ಕಾವೇರಿ ನದಿತಟದಲ್ಲಿ ಆರಂಭವಾದ ಈ ಮೇಳ ತುರ್ತುಪರಿಸ್ಥಿತಿ ಸಂದರ್ಭದ ಮೂರು ವರ್ಷ ಹೊರತುಪಡಿಸಿ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಈ ಮೇಳದಲ್ಲಿ ಗಾಂಧೀಜಿ ಅವರನ್ನು ಹತ್ತಿರದಿಂದ ಬಲ್ಲವರು, ಅವರನ್ನು ಆತ್ಮದಂತೆ ಪ್ರೀತಿಸುವವರು ಪಾಲ್ಗೊಂಡು ಅಂದಂದಿನ ಕಾಲಘಟ್ಟದ ವಿಚಾರಗಳ ಕುರಿತು ಚರ್ಚೆ ನಡೆಸಿ ಪರಿಹಾರ ಮಾರ್ಗ ತೋರಿಸಿಕೊಟ್ಟಿದ್ದಾರೆ; ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಸಲಹೆ ನೀಡುತ್ತಾ ಬಂದಿದ್ದಾರೆ. ಆರ್ಥಿಕ ನೀತಿಗಳು, ಸಾಮಾಜಿಕ ಪಿಡುಗುಗಳು, ವಿದೇಶಾಂಗ ವ್ಯವಹಾರ, ಚುನಾವಣಾ ಪದ್ಧತಿ, ಶಿಕ್ಷಣ ನೀತಿ, ಮಹಿಳಾ ಸ್ವಾತಂತ್ರ್ಯ, ಜನತಂತ್ರ ವ್ಯವಸ್ಥೆ, ಮತದಾರನ ಜವಾಬ್ದಾರಿ... ಹೀಗೆ ಇತರ ಗಂಭೀರ ವಿಚಾರಗಳ ಕುರಿತು ‘ಸರ್ವೋದಯ ತತ್ವ’ದ ಅಡಿಯಲ್ಲಿ ಚಿಂತನ ನಡೆಸಿದ್ದಾರೆ. 
 
ಎಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ಈ ಮೇಳದಲ್ಲಿ ಹೊರರಾಜ್ಯ, ಹೊರಜಿಲ್ಲೆ ಹಾಗೂ ಸ್ಥಳೀಯ ಹಿರಿ–ಕಿರಿಯ ಗಾಂಧಿವಾದಿಗಳು ಪಾಲ್ಗೊಂಡು ಮುಕ್ತವಾಗಿ ವಿಷಯ ಹಂಚಿಕೊಂಡಿದ್ದಾರೆ; ಸಹಸ್ರಾರು ಮಂದಿಗೆ ಗಾಂಧಿ ವಿಚಾರಗಳ ಮಹತ್ವದ ಸಂಗತಿಗಳನ್ನು ಉಣಬಡಿಸಿದ್ದಾರೆ.
 
1948ರಿಂದ ಸುಮಾರು ಹತ್ತು ವರ್ಷಗಳ ಕಾಲ ಸರ್ವೋದಯ ಮೇಳ ಪಶ್ಚಿಮವಾಹಿನಿಯಲ್ಲಿ ಕಾವೇರಿ ನದಿಗೆ ಹೊಂದಿಕೊಂಡಿರುವ ‘ಮಹಾರಾಜರ ಛತ್ರ’ದಲ್ಲಿ ನಡೆಯುತ್ತಿತ್ತು. ನಂತರ ಅಲ್ಲಿಗೆ ಸಮೀಪದ ಚಂದ್ರಗಿರಿ ಚಲುವರಾಜಶೆಟ್ಟಿ ಛತ್ರದಲ್ಲಿ, ತದನಂತರ ಅದರ ಪಕ್ಕದ ನಂದಿ ಬಸಪ್ಪ ಛತ್ರದಲ್ಲಿ ನಡೆಯುತ್ತಿತ್ತು. ಕಳೆದ 6 ವರ್ಷಗಳಿಂದ ಪಟ್ಟಣದ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ಈ ಮೇಳ ಜರುಗುತ್ತಿದೆ. 60ನೇ ದಶಕದಲ್ಲಿ 5 ದಿನಗಳ ಕಾಲ ಸರ್ವೋದಯ ಮೇಳ ನಡೆಯುತ್ತಿತ್ತು. 90ರ ದಶಕದ ವೇಳೆಗೆ ಅದು ಮೂರು ದಿನಗಳಿಗೆ ಸೀಮಿತವಾಯಿತು. 1948ರ ಫೆ.12ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ನೇತೃತ್ವದಲ್ಲಿ ನಡೆದ ಗಾಂಧೀಜಿ ಚಿತಾಭಸ್ಮ ವಿಸರ್ಜನೆ ಕಾರ್ಯಕ್ಕೆ ಸಾಕ್ಷಿಯಾಗಿದ್ದ ಎಸ್‌.ವಿ. ಮಂಜುನಾಥ್‌ ಈಗಲೂ ಬೆಂಗಳೂರಿನಲ್ಲಿದ್ದಾರೆ.
 
ಪಾಲ್ಗೊಂಡ ಪ್ರಮುಖರು
ಇಲ್ಲಿ ನಡೆಯುತ್ತಿರುವ ಗಾಂಧಿ ವಿಚಾರ ಪ್ರಣೀತ ಸರ್ವೋದಯ ಮೇಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸುಚೇತ ಕೃಪಲಾನಿ, ಗಾಂಧೀಜಿ ಸಮೀಪ ಒಡನಾಡಿಯಾಗಿದ್ದ ದಾದಾ ಧರ್ಮಾಧಿಕಾರಿ, ಸರ್ವೋದಯ ಮಂಡಲದ ಅಧ್ಯಕ್ಷರಾಗಿದ್ದ ಸತ್ಯವ್ರತ, ಎಂ.ಎನ್‌. ಜೋಯಿಸ್‌, ನೀಲತ್ತಹಳ್ಳಿ ನ. ಭದ್ರಯ್ಯ, ವೆಂಕೋಬರಾವ್‌, ಗೊರೂರು ಗರುಡ ಶರ್ಮಾ, ಕೋ. ಚನ್ನಬಸಪ್ಪ, ಬಿ.ಆರ್‌. ಪ್ರಾಣೇಶರಾವ್‌, ಸೀತಾರಾಮ ಅಯ್ಯಂಗಾರ್‌, ಅನಂತರಂಗಾಚಾರ್‌, ಸುರೇಂದ್ರ ಕೌಲಗಿ, ಎಚ್‌.ಎಸ್‌. ದೊರೆಸ್ವಾಮಿ, ಕೆ.ಎಸ್‌. ನಾರಾಯಣಸ್ವಾಮಿ ಮೊದಲಾದವರು ಮೇಳದ ‘ಆಚಾರ್ಯ’ರಾಗಿ ಅಧ್ಯಕ್ಷತೆ ವಹಿಸಿಕೊಂಡು ಮಾರ್ಗದರ್ಶನ ಮಾಡಿದ್ದಾರೆ. ಕಾನೂನು ತಜ್ಞ ಸಿಕೆಎನ್‌ ರಾಜಾ, ಮನೋ ವಿಜ್ಞಾನಿ ಡಾ.ಅ. ಶ್ರೀಧರ್‌, ಪ್ರಸನ್ನ, ಡಾ.ಆರ್‌. ಸುಬ್ರಹ್ಮಣ್ಯಂ, ಪ್ರೊ.ಜಿ.ಎಸ್‌. ಜಯದೇವ, ಸಿ.ಪಿ. ನಾಗರಾಜ, ಡಾ. ಸುಮಿತ್ರ ಮಹದೇವ, ಡಿ.ಎಸ್‌. ನಾಗಭೂಷಣ, ಸವಿತ ನಾಗಭೂಷಣ, ಪ್ರೊ.ಮುಜಾಫರ್‌ ಅಸ್ಸಾದಿ, ಡಾ.ಚಿಕ್ಕಮರಳಿ ಬೋರೇಗೌಡ ಇತರ ಚಿಂತಕರು ವಿಷಯ ಮಂಡಿಸಿದ ಹೆಗ್ಗಳಿಕೆ ಈ ಮೇಳಕ್ಕಿದೆ.
 
ಈ ಬಾರಿಯ ಮೇಳದಲ್ಲಿ ಫೆ. 11ರಂದು ‘ಇಂದಿನ ಆರ್ಥಿಕ ಬೆಳವಣಿಗೆಗಳನ್ನು ಗಾಂಧೀಜಿಯವರ ಕಣ್ಣಲ್ಲಿ ಕಂಡಾಗ’ ಕುರಿತು ನ್ಯಾಷನಲ್‌ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ ಪ್ರೊ.ಅಬ್ದುಲ್‌ ಅಜೀಜ್‌ ಹಾಗೂ ಫೆ.12ರಂದು ‘ಗಾಂಧಿವಾದದ ವ್ಯಾಖ್ಯಾನಗಳು’ ಕುರಿತು ಬೆಂಗಳೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನಟರಾಜ ಹುಳಿಯಾರ್‌ ವಿಷಯ ಮಂಡಿಸಲಿದ್ದಾರೆ. ಸಂಪರ್ಕಕ್ಕೆ ಮೊ: 9880642275. 
 
**
ಪ್ರವರ್ತಕರು
ಸ್ವಾತಂತ್ರ್ಯ ಹೋರಾಟಗಾರ, ವಿಧಾನ ಪರಿಷತ್‌ ಮಾಜಿ ಸದಸ್ಯ ದಿವಂಗತ ಡಾ.ಸಿ. ಬಂದೀಗೌಡ ಸರ್ವೋದಯ ಮೇಳ ಆರಂಭಕ್ಕೆ ಪ್ರಮುಖ ಕಾರಣರು. ಆರಂಭದ ಮೂರ್ನಾಲ್ಕು ವರ್ಷ ಬೆರಳೆಣಿಕೆ ಮಂದಿ ಪಶ್ಚಿಮವಾಹಿನಿಯಲ್ಲಿ, ಗಾಂಧಿ ಚಿತಾಭಸ್ಮ ವಿಸರ್ಜಿಸಿದ ಸ್ಥಳದಲ್ಲಿ ಗಾಂಧಿ ವಿಚಾರಗಳನ್ನು ಚರ್ಚಿಸಲು ಆರಂಭಿಸಿದರು.
 
ವರ್ಷದಿಂದ ವರ್ಷಕ್ಕೆ ಈ ಚರ್ಚೆ ವಿಸ್ಕೃತ ರೂಪ ಪಡೆದು 60ರ ದಶಕದ ಹೊತ್ತಿಗೆ ರಾಜ್ಯಮಟ್ಟದ ಕಾರ್ಯಕ್ರಮವಾಗಿ ವಿಶೇಷ ಸ್ವರೂಪ ಪಡೆಯಿತು. ಡಾ.ಸಿ. ಬಂದೀಗೌಡ ಮತ್ತು ಅವರ ಒಡನಾಡಿಗಳು ರಾಜ್ಯ, ಹೊರ ರಾಜ್ಯಗಳಿಂದ ಗಾಂಧಿ ಅನುಯಾಯಿಗಳನ್ನು ಕರೆಸಿ ಸಾರ್ವಕಾಲಿಕವಾದ ಗಾಂಧಿ ವಿಚಾರಗಳನ್ನು ನಾಡಿನಾದ್ಯಂತ ಹರಡಲು ಕಾರಣರು. ಸ್ವಾಗತ ಸಮಿತಿ ರಚಿಸಿ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಮಾಡುತ್ತಾ ಬಂದಿದ್ದರು.
ಡಾ.ಸಿ. ಬಂದೀಗೌಡ ಈಚೆಗೆ ನಿಧನರಾಗಿದ್ದು, ಅವರ ಪುತ್ರ ಹಾಗೂ ಮೇಳದ ಸಂಯೋಜಕ ಡಾ.ಬಿ. ಸುಜಯಕುಮಾರ್‌ ಸರ್ವೋದಯ ಮೇಳವನ್ನು ಮುನ್ನಡೆಸುತ್ತಾ ಬಂದಿದ್ದಾರೆ.

‘ಸರ್ವೋದಯ ಮೇಳದಲ್ಲಿ ಗಾಂಧೀಜಿ ವಿಚಾರಧಾರೆಗಳ ಚೌಕಟ್ಟಿನಲ್ಲಿ ಪ್ರಚಲಿತ ವಿದ್ಯಮಾನಗಳ ಚರ್ಚೆ ನಡೆಯುತ್ತದೆ. ಶಾಲಾ, ಕಾಲೇಜು ಪಠ್ಯದಲ್ಲಿ ಗಾಂಧೀಜಿ ಚಿಂತನೆಗಳು ಕಡಿಮೆಯಾಗುತ್ತಿರುವ ಬಗ್ಗೆ ಮೇಳದಲ್ಲಿ ಠರಾವು ಅಂಗೀಕರಿಸಿ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆಯವರಿಗೆ ಸಲ್ಲಿಸಲಾಗಿದೆ. ಸಂಪೂರ್ಣವಾಗಿ ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸಲಾಗುತ್ತಿದೆ. ಪ್ರತಿ ವರ್ಷ ಹೊಸಬರು ಗಾಂಧಿ ವಿಚಾರದತ್ತ ಆಕರ್ಷಿತರಾಗಿ ಸರ್ಕಾರಗಳ ನೀತಿ, ನಿರ್ಧಾರಗಳಿಗೆ ಸಾಂದರ್ಭಿಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗಾಂಧಿ ವಿಚಾರಗಳು ಮುಗಿದು ಹೋದವೆ? ಎಂಬ ಸಂಶಯ ಮೂಡಿದಾಗಲೆಲ್ಲ ನಾಡಿನ ಯಾವುದೋ ಮೂಲೆಯಿಂದ ದಿಟ್ಟವಾದ ದನಿ ಏಳುತ್ತಿದೆ. ಅಷ್ಟರ ಮಟ್ಟಿಗೆ ಸರ್ವೋದಯ ಮೇಳ ಸಾಫಲ್ಯ ಪಡೆಯುತ್ತಿದೆ’ ಎನ್ನುವುದು ಡಾ.ಬಿ.ಸುಜಯಕುಮಾರ್‌ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT