ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ– ಜಲ ತುರ್ತುಪರಿಸ್ಥಿತಿ?

Last Updated 6 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹವಾಮಾನ ವೈಪರೀತ್ಯದಿಂದ ಭವಿಷ್ಯದಲ್ಲಿ ನಾಡು ಎದುರಿಸಬಹುದಾದ ಸಮಸ್ಯೆಗಳ ಕುರಿತು ಇನ್ನೂ ಊಹೆ ಮಾಡುತ್ತ ಕುಳಿತಿರಬೇಕಾದ್ದಿಲ್ಲ. ಕಳೆದ ಕೆಲವು ವರ್ಷಗಳಿಂದ ಮಳೆ ಕಡಿಮೆಯಾಗುತ್ತ, ಇದೀಗ  ಬರಗಾಲ ತನ್ನ ಪೂರ್ಣ ಸ್ವರೂಪದಲ್ಲಿ ನಮ್ಮ ಮನೆಯಂಗಳಕ್ಕೇ ಬಂದು ನಿಂತಿದೆ. ಬಹುಶಃ, ಸ್ವಾತಂತ್ರ್ಯೋತ್ತರದ ತಲೆಮಾರು ಕಂಡರಿಯದಿದ್ದ ಉರಿಬೇಸಿಗೆಯಿದು! ಬಾಹ್ಯನೀರಿನ ಮೂಲ ಹಾಗೂ ಅಂತರ್ಜಲ ಎರಡೂ ಬರಿದಾಗುತ್ತಿವೆ. ನೆಲ- ಜಲ- ಜನಜೀವನ ಎದುರಿಸುತ್ತಿರುವ ತುರ್ತು ಪರಿಸ್ಥಿತಿಯಲ್ಲವೇ ಇದು?

ರಾಜ್ಯದ 177 ತಾಲ್ಲೂಕುಗಳಲ್ಲಿ 165ಕ್ಕೂ ಹೆಚ್ಚು  ತಾಲ್ಲೂಕುಗಳನ್ನು ಸರ್ಕಾರವೇ ಬರಪೀಡಿತ ಎಂದು ಘೋಷಿಸಿದೆ. 5,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗೂ ಕೊರತೆಯಿದೆ. ಸಣ್ಣ ನೀರಾವರಿ ಇಲಾಖೆ ನಿರ್ವಹಿಸುವ 3,600 ಕೆರೆಗಳಲ್ಲಿ ಶೇ 55ರಷ್ಟು ಈಗಾಗಲೇ ಪೂರ್ತಿ ಬತ್ತಿದ್ದು, ಇನ್ನುಳಿದವು ಇನ್ನು ಕೆಲವೇ ವಾರಗಳಲ್ಲಿ ಒಣಗಲಿವೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಪಾಯದ ಗಂಟೆ ಬಾರಿಸಿದೆ. ರಾಜ್ಯದಾದ್ಯಂತ ಹಳ್ಳಿಗರೆಲ್ಲ ಬೇರೆ ದಾರಿಯಿಲ್ಲದೆ ಕೊಳವೆಬಾವಿ ತೆಗೆಸುವ ಕೆಲಸಕ್ಕೆ ಶರಣಾಗಿದ್ದಾರೆ. ವಾರ್ಷಿಕ 300- 400 ಸೆಂ.ಮೀ. ಮಳೆ ಬೀಳುತ್ತಿದ್ದ ಮಲೆನಾಡಿನ ಹೃದಯಭಾಗದ ಗ್ರಾಮಗಳಲ್ಲೂ ಕೊಳವೆಬಾವಿ ಯಂತ್ರಗಳು ಸಾವಿರ ಅಡಿಗಳವರೆಗೂ ನೆಲ ಕೊರೆದು ನೀರು ಹುಡುಕುತ್ತಿವೆ!

ಹಾಗಾದರೆ, ಸರ್ಕಾರ ಇವಕ್ಕೆಲ್ಲ ಪರಿಹಾರ ಒದಗಿಸುವ ಯೋಜನೆಗಳನ್ನು ರೂಪಿಸಿಲ್ಲವೇ? ಭಾರಿ ಬಜೆಟ್ಟಿನ ಸರ್ಕಾರಿ ಯೋಜನೆಗಳೇನೋ ಸದಾ ಇವೆ. ಈ ಹೊತ್ತಿಗೂ ಗ್ರಾಮೀಣಾಭಿವೃದ್ಧಿ ಇಲಾಖೆ ‘ಕೆರೆ ಸಂಜೀವಿನಿ’ ಯೋಜನೆಯಡಿ ಅಲ್ಲಲ್ಲಿ ಕೆರೆಗಳ ಹೂಳು ತೆಗೆಸುತ್ತಿದೆ.  ಕೃಷಿ ಇಲಾಖೆ ‘ಸುವರ್ಣ ಕೃಷಿಹೊಂಡ’ ಯೋಜನೆಯಡಿಯಲ್ಲಿ ಕೆರೆ ನಿರ್ಮಾಣಕ್ಕೆ ರೈತರಿಗೆ ಪ್ರೋತ್ಸಾಹಧನ ನೀಡುತ್ತಿದೆ. ಸಣ್ಣ ನೀರಾವರಿ ಇಲಾಖೆ ನಬಾರ್ಡ್ ನೆರವಿನಲ್ಲಿ ಕೆರೆಗಳ ಒಡ್ಡುಗಳನ್ನು ರಿಪೇರಿ ಮಾಡುತ್ತಿದೆ. ಅರಣ್ಯ ಇಲಾಖೆಯಂತೂ ಕಾಡು ಬೆಳೆಸುವುದಕ್ಕಾಗಿ ನೂರಾರು ಕೋಟಿಗಳ ಯೋಜನೆಗಳನ್ನೇ ಜಾರಿ ಮಾಡಿದೆ. ಆದರೆ, ಹತ್ತಾರು ಇಲಾಖೆಗಳು ಸಾವಿರಾರು ಕೋಟಿಗಳನ್ನು ವ್ಯಯಿಸಿ ಈವರೆಗೆ ರೂಪಿಸಿದ ಯೋಜನೆಗಳ ಫಲ ಮಾತ್ರ ನೆಲ, ಜಲ, ಕಾಡಿನ ಆರೋಗ್ಯದಲ್ಲೇಕೆ ಕಾಣುತ್ತಿಲ್ಲ?

ಸರ್ಕಾರವು ಅರಣ್ಯ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಕೈಗೊಂಡ ಹಲವಾರು ತಪ್ಪುನೀತಿ ಹಾಗೂ ಅಪಾರದರ್ಶಕ ಕಾರ್ಯಕ್ರಮಗಳ ನೈಜ ಪ್ರತಿಫಲನವಿದು. ಹಾಗಾಗಿಯೇ ತಜ್ಞರು ಹೇಳುತ್ತಿರುವುದು: ‘ಮಳೆ ಕೊರತೆ ನೈಸರ್ಗಿಕ ವಿದ್ಯಮಾನವಾದರೂ, ಬರ ಬಂದದ್ದು ಮಾತ್ರ ಮನುಷ್ಯನಿಂದ’ ಎಂದು. ಈ ಬರ ಒಮ್ಮೆಲೇ ಧುತ್ತೆಂದು ಬಂದಿಲ್ಲ. ಹಲವು ದಶಕಗಳಿಂದ ನೆಲ, ಕಾಡು, ಹೊಳೆ,  ಕೆರೆಗಳನ್ನು ಯಾವ ವಿವೇಕವೂ ಇಲ್ಲದೆ ಬಳಸಿದ ಹಾಗೂ ಅವೈಜ್ಞಾನಿಕವಾಗಿ ನಿರ್ವಹಿಸಿದ ಪರಿಣಾಮವಿದು.

ಕಲ್ಯಾಣರಾಜ್ಯದ ಕನಸು ಹೊತ್ತು ಈವರೆಗೆ ರಾಜ್ಯದಲ್ಲಿ ಜಾರಿಗೆ ಬಂದ ಅದೆಷ್ಟೋ ಲಕ್ಷ ಕೋಟಿಗಳ ಯೋಜನೆಗಳೆಲ್ಲವೂ ತಾಳ ತಪ್ಪಿದ್ದೆಲ್ಲಿ? ಈ ಸಂಕಷ್ಟದ ಕಾಲದಲ್ಲಾದರೂ ತೆರೆದ ಮನದಿಂದ ಚಿಂತಿಸಬೇಕಿದೆ. ಮಿತಿಮೀರುತ್ತಿರುವ ಸರ್ಕಾರಿ ನಿರ್ವಹಣಾ ವೆಚ್ಚ, ಕಾಲಮಿತಿಯಿಲ್ಲದ ಯೋಜನೆಗಳು, ಅವೈಜ್ಞಾನಿಕ ಅನುದಾನ ಹಂಚಿಕೆ, ಭ್ರಷ್ಟಾಚಾರ– ಇವೆಲ್ಲ ಸರ್ಕಾರಿ ಯೋಜನೆಗಳನ್ನು ಗಾಸಿಗೊಳಿಸುವ ಬಗೆ ನಮಗೆ ತಿಳಿದೇ ಇದೆ.  ಆದರೆ ಜನರಿಗೆ ನೀರು, ಉರುವಲು, ಮೇವು ಇತ್ಯಾದಿ ಪ್ರಾಥಮಿಕ ಅವಶ್ಯಕತೆಗಳಿಗೂ ಕುತ್ತು ಬಂದಿರುವ ಈ ದೀನಸ್ಥಿತಿಗೆ ಇನ್ನೂ ಆಳವಾದ ಕಾರಣಗಳಿವೆ. ಅವುಗಳಲ್ಲಿನ ಮೂರು ಮೂಲಭೂತ ಅಂಶಗಳನ್ನು ಚರ್ಚಿಸುವ ಮೂಲಕ, ಸುಸ್ಥಿರ ಅಭಿವೃದ್ಧಿ ಮಾರ್ಗಗಳ ಸಾಧ್ಯತೆಯನ್ನು ಸಾರ್ವಜನಿಕ ಚಿಂತನೆಯ ಮುನ್ನೆಲೆಗೆ ತರಬೇಕಾಗಿದೆ.

ಒಂದು, ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಸೂತ್ರಗಳನ್ನು ಅಭಿವೃದ್ಧಿ ಯೋಜನೆಗಳ ಭಾಗವನ್ನಾಗಿಸಿಕೊಳ್ಳಲು ಸರ್ಕಾರ ಸೋತಿರುವುದು. ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ‘ಅಭಿವೃದ್ಧಿ ಬೇರೆ- ಪರಿಸರ ಸಂರಕ್ಷಣೆ ಬೇರೆ’ ಎಂಬ ತಪ್ಪು ಪ್ರಮೇಯವನ್ನೇ ಆಡಳಿತ ವ್ಯವಸ್ಥೆ ಪೋಷಿಸುತ್ತಿದೆ. ಜನರಿಗೆ ಬೇಕಾದ ನೀರು, ಆಹಾರ, ಮೇವು, ಉರುವಲು ಕಟ್ಟಿಗೆ– ಇವೆಲ್ಲವುಗಳ ನಿರಂತರ ಪೂರೈಕೆ ಸಮೃದ್ಧ ಕೃಷಿ ಹಾಗೂ ನೈಸರ್ಗಿಕ ಪರಿಸರದಿಂದ ಮಾತ್ರ ಸಾಧ್ಯವಲ್ಲವೇ? ಹೀಗಾಗಿ ಕಾಡು, ಗೋಮಾಳ, ಕೆರೆ, ಹೊಳೆ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ನಿರಂತರ ನಾಶ ನೆಲದ ಧಾರಣಾ ಸಾಮರ್ಥ್ಯವನ್ನೇ ಕುಂದಿಸಿದೆ. ಅಭಿವೃದ್ಧಿ ಯೋಜನೆಗಳು ಇವುಗಳ ವ್ಯವಸ್ಥಿತ ನಿರ್ವಹಣೆಯನ್ನು ಒಳಗೊಂಡರೆ ಮಾತ್ರ ಮುಂದಿನ ದಾರಿ ಹಸನಾದೀತು.

ಎರಡು, ಅಡಳಿತ ವ್ಯವಸ್ಥೆಯ ಸಾಂಸ್ಥಿಕ ಲೋಪವೊಂದರ ಕುರಿತು. ದೇಶದಲ್ಲೇ ಮೊದಲಾಗಿ ಕರ್ನಾಟಕದಲ್ಲಿ ಮಾದರಿ ಪಂಚಾಯತ್‌ ರಾಜ್ ವ್ಯವಸ್ಥೆ ರೂಪುಗೊಂಡಿದ್ದೇನೋ ಸರಿ. ಆದರೆ, ಪ್ರಜಾಸತ್ತಾತ್ಮಕವಾದ ನೈಜ ಅಧಿಕಾರ ಈ ಸ್ಥಳೀಯ ಸರ್ಕಾರಗಳಿಗೆ ದಕ್ಕಲೇ ಇಲ್ಲ. ಫಲಾನುಭವಿಗಳನ್ನು ಆಯ್ದು ಅನುದಾನ ಹಂಚುವ ರಾಜಕೀಯ ವೇದಿಕೆಗಳಂತೆ ಅವನ್ನಿಂದು ಬಳಸಲಾಗುತ್ತಿದೆ. ಜಿಲ್ಲೆಯ ‘ಅಭಿವೃದ್ಧಿ ನೀಲನಕ್ಷೆ’ ರೂಪಿಸಿ, ಅದರ ಆಧಾರದಲ್ಲಿ ಸೂಕ್ತ ಯೋಜನೆ ರೂಪಿಸುವ ಸಾಮರ್ಥ್ಯ ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಬರಬೇಕಿತ್ತು. ಆದರೆ ಸೂಕ್ತ ನಾಯಕತ್ವ, ಪರಾಮರ್ಶೆ, ಪಾರದರ್ಶಕತೆಯ ಕೊರತೆಯಿಂದ ಗ್ರಾಮಾಡಳಿತ ವ್ಯವಸ್ಥೆಯೇ ಸೋತಂತಿದೆ. ಇಲ್ಲವಾದರೆ, ಬತ್ತುತ್ತಿರುವ ಕುಡಿಯುವ ನೀರಿನ ಯೋಜನೆಗಳ ಜಲಮೂಲ, ಅನುದಾನವೇ ಇಲ್ಲದ ಸಾಮಾಜಿಕ ಅರಣ್ಯ ಯೋಜನೆ ಅಥವಾ ಅತಿಕ್ರಮಣವಾಗುತ್ತಿರುವ ಕೆರೆ, ಗೋಮಾಳಗಳಂಥ ಗಂಭೀರ ವಿಷಯಗಳೆಲ್ಲ ಪಂಚಾಯತ್‌ ರಾಜ್ ಸಂಸ್ಥೆಗಳ ಅಂತರಂಗವನ್ನೇಕೆ ತಟ್ಟುತ್ತಿಲ್ಲ?

ಮೂರನೆಯದು, ಜನಸಹಭಾಗಿತ್ವದ ಕುರಿತು. ಹಳ್ಳಿಗಳ ಸಾಮಾಜಿಕ ಪರಿಸರ ಇಂದು ತುಂಬಾ ಚಲನಶೀಲವಾಗಿದೆ. ಸಾಧಕ ರೈತರಿದ್ದಾರೆ, ರೈತ ಸಂಘಟನೆಗಳಿವೆ. ಆರ್ಥಿಕವಾಗಿ ಸಶಕ್ತರಾಗುತ್ತಿರುವ ಸ್ವಸಹಾಯ ಸಂಘಗಳಿವೆ. ಕ್ರಿಯಾಶೀಲ ಯುವಕ-ಯುವತಿ ಮಂಡಳಿಗಳಿವೆ. ಕಾನೂನಿನ ಅನ್ವಯ ಪಂಚಾಯಿತಿಯೇ ರೂಪಿಸಿದ ‘ಜೀವವೈವಿಧ್ಯ ನಿರ್ವಹಣಾ ಸಮಿತಿ’ಗಳಿವೆ. ಹಲವೆಡೆ ಉತ್ತಮ ಪ್ರಾಥಮಿಕ ಸಹಕಾರಿ ಸಂಘಗಳಿವೆ. ಆದರೆ, ಈ ಎಲ್ಲ ಗ್ರಾಮ ಸಮುದಾಯಗಳು ಸರ್ಕಾರದ ಯೋಜನೆಗಳ ತಳಮಟ್ಟದ ಅನುಷ್ಠಾನದಲ್ಲಿ ಪಾಲ್ಗೊಳ್ಳುವ ಅವಕಾಶವೇ ನಿರ್ಮಾಣವಾಗುತ್ತಿಲ್ಲ. ಯೋಜನೆಗಳು ಈ ಸ್ಥಳೀಯ ಜನರಿಗಲ್ಲದೆ ಇನ್ನಾರಿಗೆ?

ಈ ಎಲ್ಲ ಅಂಶಗಳಿಂದಾಗಿಯೇ, ನಾಡು ಪರಿಸರ ತುರ್ತುಪರಿಸ್ಥಿತಿಯಂಥ ಸನ್ನಿವೇಶ ಎದುರಿಸುತ್ತಿರುವುದು. ಅಗತ್ಯವಿದ್ದೆಡೆ ತ್ವರಿತವಾಗಿ ನೀರು, ಮೇವು ಇತ್ಯಾದಿ ಪೂರೈಸುವುದಂತೂ ಆಡಳಿತದ ಆದ್ಯತೆಯಾಗಬೇಕು. ಕಾಳ್ಗಿಚ್ಚಿನಿಂದ ಅರಣ್ಯ ರಕ್ಷಿಸಿ, ವನ್ಯಜೀವಿಗಳಿಗೆ ಕನಿಷ್ಠ ಪ್ರಮಾಣದ ನೀರಾದರೂ ಲಭ್ಯವಾಗುವಂತೆ ನೋಡಿಕೊಳ್ಳುವುದೂ ಮುಖ್ಯವಾದದ್ದೆ. ಜೊತೆಗೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನೊಳಗೊಂಡ ಅಭಿವೃದ್ಧಿ, ಪಂಚಾಯತ್‌ ರಾಜ್ ಸಂಸ್ಥೆಗಳ ಸಬಲೀಕರಣ,  ನೈಜ ಜನಸಹಭಾಗಿತ್ವದಲ್ಲಿ ಅಭಿವೃದ್ಧಿ ಯೋಜನೆಗಳ ಜಾರಿಯಂಥ ಮೂಲಭೂತ ತತ್ವಗಳನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳುವ ವಿವೇಕ ಕೂಡ ಸರ್ಕಾರಿ ಆಡಳಿತ ವ್ಯವಸ್ಥೆಗೆ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT