ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ಮಾಡಿದ ವಂಚನೆ ಪ್ರಜಾತಂತ್ರದ ಹಿತಕ್ಕೆ ಮಾರಕ

Last Updated 6 ಫೆಬ್ರುವರಿ 2017, 19:33 IST
ಅಕ್ಷರ ಗಾತ್ರ

ಭಾರತದ ಪ್ರಜಾಪ್ರಭುತ್ವದ ಒಳಗೆ ಒಂದಷ್ಟು ಉಪಧಾರೆಗಳಿವೆ ಎಂದು ಭಾವಿಸುವುದಾದರೆ ಅದರಲ್ಲಿ ಬಹುಮುಖ್ಯವಾಗಿ ಕಾಣಿಸುವುದು ತಮಿಳುನಾಡಿನ ಪ್ರಜಾಪ್ರಭುತ್ವ. ದ್ರಾವಿಡ ಪಕ್ಷಗಳು ಇಲ್ಲಿ ಅಧಿಕಾರಕ್ಕೆ ಏರಲಾರಂಭಿಸಿದ ಐದು ದಶಕಗಳ ಅವಧಿಯಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣವೊಂದು ಇಲ್ಲಿ ನೆಲೆಗೊಂಡಿದೆ. ಈ ಬೆಳವಣಿಗೆಯನ್ನು ಲಭ್ಯವಿರುವ ಯಾವುದೇ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ದಕ್ಷಿಣ ಭಾರತದಲ್ಲಿ ಕೇರಳದ ನಂತರದ ಸ್ಥಾನ ತಮಿಳುನಾಡಿಗೆ ಇದೆ. ಅಖಿಲ ಭಾರತ ಅಂಕಿ ಅಂಶಗಳನ್ನಿಟ್ಟುಕೊಂಡು ನೋಡಿದರೆ ತಮಿಳುನಾಡಿಗೆ ಮೊದಲ ಹತ್ತು ರಾಜ್ಯಗಳ ಒಳಗೇ ಒಂದು ಸ್ಥಾನ ಸದಾ ಇದೆ. ಕಳೆದ ಐದು ದಶಕಗಳಲ್ಲಿ ಇಲ್ಲಿ ಆಡಳಿತ ನಡೆಸಿರುವ ಎಲ್ಲಾ ರಾಜಕೀಯ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಏಕವ್ಯಕ್ತಿ ಕೇಂದ್ರಿತವಾಗಿವೆ.

ಜಯಲಲಿತಾ ಅವರ ಅಂತ್ಯದ ಜೊತೆಗೆ ತಮಿಳುನಾಡಿನ ರಾಜಕೀಯ ಸಂಸ್ಕೃತಿಯಲ್ಲೊಂದು ಪಲ್ಲಟ ಸಂಭವಿಸಿತು ಎಂದು ಎಲ್ಲರೂ ಭಾವಿಸಿದ್ದಾಗ ಈ ಲೆಕ್ಕಾಚಾರವನ್ನು ಸುಳ್ಳು ಮಾಡಿ ‘ಚಿನ್ನಮ್ಮ’ ಎಂದೇ ಜನಪ್ರಿಯರಾಗಿರುವ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಪದವಿಯ ಹೊಸ್ತಿಲಲ್ಲಿ ಇದ್ದಾರೆ. ಭ್ರಷ್ಟಾಚಾರದ ಆರೋಪದ ಕಾರಣಕ್ಕೆ ಜಯಲಲಿತಾ ಕೂಡಾ ಸ್ವಲ್ಪ ಕಾಲ ಅಧಿಕಾರದಿಂದ ದೂರವಿದ್ದರು. ಆರೋಪ ಮುಕ್ತರಾಗುತ್ತಿದ್ದಂತೆಯೇ ಮತ್ತೆ ಮುಖ್ಯಮಂತ್ರಿಯಾದರು. ಈ ಘಟನಾವಳಿಗಳು ನಡೆದಾಗ ಅದಕ್ಕೊಂದು ವಿರೋಧ ಕಂಡುಬಂದಿರಲಿಲ್ಲ. ಆದರೆ ಶಶಿಕಲಾ ಅವರ ಆಯ್ಕೆ ಅಷ್ಟೊಂದು ಸುಲಲಿತವಾಗಿರಲಿಲ್ಲ. ಎಐಎಡಿಎಂಕೆಯ ಒಳಗಿನಿಂದ ಯಾವುದೇ ವಿರೋಧಗಳು ಬಂದಿಲ್ಲ ಎಂಬಂತೆ ನೋಡಿಕೊಳ್ಳುವಲ್ಲಿ ಆ ಪಕ್ಷ ಯಶಸ್ವಿಯಾಗಿದೆ.

ಆದರೆ ಜಯಲಲಿತಾರಿಗೆ ದೊರೆತ ಸ್ವಾಗತವಂತೂ ಶಶಿಕಲಾ ಅವರಿಗೆ ದೊರೆಯಲಿಲ್ಲ. ಪನ್ನೀರ್‌ಸೆಲ್ವಂ ಅವರು ರಾಜೀನಾಮೆಗೆ ಮುಂದಾದ ಮೇಲೆ ‘ನಕ್ಕೀರನ್’ ಆರಂಭಿಸಿದ ಫೇಸ್‌ಬುಕ್ ಸಮೀಕ್ಷೆಯಲ್ಲಿ ಮೂರೇ ಗಂಟೆಯೊಳಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಶಶಿಕಲಾ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸಿ ಅಭಿಪ್ರಾಯ ದಾಖಲಿಸಿದರು. ಚೇಂಜ್ ಡಾಟ್ ಆರ್ಗ್‌ನಲ್ಲಿ ಆರಂಭಿಸಲಾದ ಮನವಿಗೆ ಒಂದು ದಿನದೊಳಗೆ 55,000 ಮಂದಿ ಸಹಿ ಹಾಕಿದರು. ಈ ಸಂಖ್ಯೆಯೇ ತಮಿಳುನಾಡಿನ ಜನಸಾಮಾನ್ಯರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಸ್ವಲ್ಪಮಟ್ಟಿಗೆ ಸೂಚಿಸುತ್ತಿದೆ. ಆದರೆ ಇದೆಷ್ಟು ಆಳವಾಗಿ ಮನೆ ಮಾಡಿದೆ ಎಂಬುದನ್ನು ಚುನಾವಣೆಯಷ್ಟೇ ಸಾಬೀತು ಮಾಡಬಹುದು.

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ ಪ್ರಕರಣವೊಂದರಲ್ಲಿ ಶಶಿಕಲಾ ಆರೋಪಿ. ಇದಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದಿನವಾರ ನೀಡಲಿದೆ. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ಟಿ.ಟಿ.ವಿ. ದಿನಕರನ್ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣವೂ ಇದೆ. ಇದರಿಂದ ತಮ್ಮನ್ನು ಮುಕ್ತಗೊಳಿಸಬೇಕೆಂದು ಶಶಿಕಲಾ ಮಾಡಿಕೊಂಡಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಇಷ್ಟೆಲ್ಲದರ ಮಧ್ಯೆಯೂ ಇವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುವ ಎಐಎಡಿಎಂಕೆಯ ನಿರ್ಧಾರವನ್ನು ಹೇಗೆ ಅರ್ಥೈಸಬೇಕು? ಶಶಿಕಲಾ ಮತ್ತವರ ಕುಟುಂಬ ಜಯಲಲಿತಾರ ಮೇಲೆ ಹೊಂದಿದ್ದ ಹಿಡಿತವೇ ಒಂದು ನಿಗೂಢ ರಹಸ್ಯ.

ಅದು ಪಕ್ಷದ ಮೇಲಿನ ಹಿಡಿತಕ್ಕೂ ಈಗ ಅನ್ವಯಿಸುತ್ತಿದೆ. ತಮಿಳುನಾಡಿನ ರಾಜಕಾರಣದ ಪರಿಧಿಯೊಳಗೆ ಇದೇನೂ ಆಶ್ಚರ್ಯ ಹುಟ್ಟಿಸುವ ಸಂಗತಿಯಲ್ಲ. ಜನರು ಎಐಎಡಿಎಂಕೆಗೆ ಮತ ನೀಡಿದ್ದಕ್ಕೂ ಜಯಲಲಿತಾರ ವ್ಯಕ್ತಿತ್ವಕ್ಕೂ ಸಂಬಂಧವಿರಬಹುದು. ಎಐಎಡಿಎಂಕೆ ತನ್ನ ನಾಯಕಿಯನ್ನು ನಿಜವಾಗಿಯೂ ಗೌರವಿಸುತ್ತಿದ್ದರೆ ಈ ಜನಾದೇಶವನ್ನೂ ಗೌರವಿಸಬೇಕಿತ್ತು. ಪನ್ನೀರ್‌ಸೆಲ್ವಂ ಅವರನ್ನು ಬದಲಿಸಬೇಕು ಎಂದಾಗಿದ್ದರೆ ಈಗಾಗಲೇ ಜನರು ಆರಿಸಿರುವ ಮತ್ತೊಬ್ಬರನ್ನು ಮುಖ್ಯಮಂತ್ರಿ ಪದವಿಗೇರಿಸಬೇಕಿತ್ತು. ಭ್ರಷ್ಟಾಚಾರದ ಕಳಂಕ ಹೊತ್ತಿರುವ ಹೊರಗಿನ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆರಿಸಿರುವುದು ಮತದಾರರಿಗೆ  ಎಐಎಡಿಎಂಕೆ ಮಾಡಿರುವ ವಂಚನೆ ಎನ್ನದೆ ವಿಧಿಯಿಲ್ಲ. ಮುಂದಿನ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳಿವೆ ಎಂಬುದೊಂದೇ ಸದ್ಯಕ್ಕೆ ಎಐಎಡಿಎಂಕೆಗೆ ಇರುವ ಧೈರ್ಯ. ಪ್ರಜಾಪ್ರಭುತ್ವವನ್ನು ಒಳಗಿನಿಂದ ದುರ್ಬಲಗೊಳಿಸುವ ಈ ಬಗೆಯ ಅನೈತಿಕ ತಂತ್ರಗಳಿಗೆ ತಡೆಯೊಡ್ಡಲು ಜನರ ಬಳಿ ಯಾವುದೇ ಮಂತ್ರದಂಡವಿಲ್ಲ ಎಂಬುದೂ ನಿಜ. ಆದರೆ ಈ ಬೆಳವಣಿಗೆ ಒಟ್ಟು ಪ್ರಜಾತಂತ್ರದ ಹಿತಕ್ಕೆ ಮಾರಕವಾದುದು ಎಂಬುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT