ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸರಗಳ್ಳರು, 7 ದರೋಡೆಕೋರರ ಬಂಧನ

ರಾಮನಗರ, ಬೆಂಗಳೂರಿನಲ್ಲಿ 21 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳು
Last Updated 7 ಫೆಬ್ರುವರಿ 2017, 10:59 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆ ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ 21 ಕಳವು ಪ್ರಕರಣದಲ್ಲಿ ತೊಡಗಿಕೊಂಡಿದ್ದ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿನ ಮತ್ತೊಂದು ಪ್ರಕರಣದಲ್ಲಿ 7 ಮಂದಿ ದರೋಡೆಕೋರರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಪಾದರಾಯನಪುರ ನಿವಾಸಿ ಇಬ್ರಾಹಿಂ ಪಾಷಾ (27), ಆವಲಹಳ್ಳಿ ಬಿ.ಡಿ. ಕ್ವಾಟ್ರಸ್ ನಿವಾಸಿ ಫಯಾಜ್‌ ಅಹ್ಮದ್‌ (25) ಹಾಗೂ ಸುಭಾಷ್‌ನಗರ ನಿವಾಸಿ ಮುಬಾರಕ್‌ ಅಲಿ (27) ಸರಗಳವು ಆರೋಪದಡಿ ಬಂಧಿತರಾದವರು. ಇವರಿಂದ 18 ಚಿನ್ನದ ಸರ, 2 ಉಂಗುರಗಳು ಸೇರಿದಂತೆ ಒಟ್ಟು ಸುಮಾರು ₹ 16 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕ್‌ ಅನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

‘ಈ ಮೂವರು ರಾಮನಗರ ಪೊಲೀಸ್‌ ಜಿಲ್ಲೆ ವ್ಯಾಪ್ತಿಯ ಹಾರೋಹಳ್ಳಿ,  ಕಗ್ಗಲೀಪುರ, ಕುಂಬಳಗೂಡು, ಬ್ಯಾಡರಹಳ್ಳಿ, ತಾವರೆಕೆರೆ, ಚನ್ನಪಟ್ಟಣ, ಬಿಡದಿ ಠಾಣೆಗಳ ವ್ಯಾಪ್ತಿಯಲ್ಲಿ ಈಚೆಗೆ ನಡೆದ 9 ಸರಗಳವು ಪ್ರಕರಣಗಳು, 2 ಮನೆಗಳಲ್ಲಿ ಕನ್ನ ಹಾಕಿ ಕಳವು ಹಾಗೂ 1 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಂತೆಯೇ ಬೆಂಗಳೂರು ನಗರ ವ್ಯಾಪ್ತಿಯ ರಾಜಗೋಪಾಲ ನಗರ, ವಿಜಯನಗರ. ಹುಳಿಮಾವು, ಸುಬ್ರಮಣ್ಯಪುರ ಹಾಗೂ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿನ 8 ಸರಗಳ್ಳತನ, 1 ರಾತ್ರಿ ಕನ್ನಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

‘ಆರೋಪಿಗಳು ಈ ಹಿಂದೆಯೂ  ಬೆಂಗಳೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿನ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿದ್ದು, ಜಾಮೀನಿನ ಮೇಲೆ ಹೊರಬಂದು ಕೃತ್ಯ ಮುಂದುವರಿಸಿದ್ದರು. ತಾವು ಹೀಗೆ ಕಳವು ಮಾಡಿದ ಆಭರಣಗಳನ್ನು ಮೈಸೂರು ಹಾಗೂ ಕೇರಳದಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು ರಮೇಶ್‌ ವಿವರಿಸಿದರು.

ಡಿವೈಎಸ್ಪಿ ಎಂ.ಕೆ. ತಮ್ಮಯ್ಯ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಹಾರೋಹಳ್ಳಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಎನ್‌. ಶ್ರೀನಿವಾಸ್, ನಿಸ್ತಂತು ವಿಭಾಗದ ಇನ್‌ಸ್ಪೆಕ್ಟರ್‌ ಶಿವಶಂಕರ್‌, ಚನ್ನಪಟ್ಟಣ ಟೌನ್‌ ಸಿಪಿಐ ನಾರಾಯಣಸ್ವಾಮಿ, ಕಗ್ಗಲೀಪುರ ಠಾಣೆ ಪಿಎಸ್‌ಐ ಕೃಷ್ಣಕುಮಾರ್‌, ಹಾರೋಹಳ್ಳಿ ಠಾಣೆ ಪಿಎಸ್‌ಐ ಅನಂತರಾಮ್‌, ಸಿಬ್ಬಂದಿಯಾದ ಎಎಸ್‌ಐ ಮರೀಗೌಡ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ದುರ್ಗೇಗೌಡ, ಮಂಜುನಾಥ್‌, ಮುನಿರಾಜು, ನರಸಿಂಹಮೂರ್ತಿ ಹಾಗೂ ಕಾನ್‌ಸ್ಟೆಬಲ್‌ಗಳಾದ ಅನಂತಕುಮಾರ್‌, ಶಿವಕುಮಾರ್‌, ಕಾರ್ತೀಕ್‌ ಹಾಗೂ ಫೈರೋಜ್‌ ಅವರನ್ನು ಎಸ್ಪಿ ಅಭಿನಂದಿಸಿದರು.

ದರೋಡೆಕೋರರ ಬಂಧನ
ತಾಲ್ಲೂಕಿನ ಕೂಟಗಲ್ ಹೋಬಳಿಯ ಕೆಂಪವಡೇರಹಳ್ಳಿಯ ಗಂಗಾಧರ ಎಂಬುವರ ಮನೆಯಲ್ಲಿ ಈಚೆಗೆ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸಿದ್ದು, ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಅಂದು ಮನೆಯಲ್ಲಿ ಒಬ್ಬರೇ ಮಹಿಳೆ ಇರುವುದನ್ನು ಮನಗಂಡ ಆರೋಪಿಗಳನ್ನು ನೀರು ಕೇಳುವ ನೆಪದಲ್ಲಿ ಒಳ ಪ್ರವೇಶಿಸಿ ಆಕೆಯನ್ನು ಕಟ್ಟಿಹಾಕಿ ಮನೆಯಲ್ಲಿದ್ದ ₹ 60 ಸಾವಿರ ನಗದು ಹಾಗೂ 167 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದೋಚಿದ್ದರು. ಈ ಪ್ರಕರಣ ಸಂಬಂಧ ಚಿಂತಾಮಣಿ ತಾಲ್ಲೂಕಿನ ಎಂ.ಡಿ. ಸುಲ್ತಾನ್‌ (44), ರಾಮನಗರದವರಾದ ಯರಾಬ್‌ನಗರದ ಸಯ್ಯದ್‌ ಮುಜಾಹಿದ್ (33), ರೆಹಮಾನಿಯಾ ನಗರದ  ಸಯ್ಯದ್‌ ಮೌಲಾ (28), ಮದರ್‌ಖಾನ್ ಮೊಹಲ್ಲಾ ನಿವಾಸಿ ಅಬ್ದುಲ್‌ ಸಲಾಮ್‌ ಶಹಬದ್‌ (28), ಮುಜೀಬ್‌ (39), ಕೆಂಪೇಗೌಡ ಸರ್ಕಲ್‌ ನಿವಾಸಿ ರಾಜು (35) ಹಾಗೂ ಕೆಂಪವಡೇರಹಳ್ಳಿಯ ನಿವಾಸಿ ಮಲ್ಲೇಶ (34) ಎಂಬುವರನ್ನು ಬಂಧಿಸಲಾಗಿದೆ’ ಎಂದರು.

‘ಆರೋಪಿಗಳಿಂದ ₹ 2.35 ಲಕ್ಷ ಮೌಲ್ಯದ ಚಿನ್ನದ ಒಡವೆ, ₹ 20 ಸಾವಿರ ನಗದು, 6 ಮೊಬೈಲ್‌, 1 ಕಾರ್‌ ಹಾಗೂ 2 ಬೈಕ್‌ ಸೇರಿದಂತೆ ಒಟ್ಟು 7.5 ಲಕ್ಷ ಮೌಲ್ಯದ ಕಳವು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಲ್ಲಿ ಕೆಲವರು ಈ ಹಿಂದೆ ರಾಮನಗರದ ಕಾಳೇಗೌಡನ ದೊಡ್ಡಿ ಗ್ರಾಮದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಆನಂದ ಮೂರ್ತಿ ಎಂಬುವರನ್ನು ಅಡ್ಡಗಟ್ಟಿ ₹ 45 ಸಾವಿರ ನಗದು ಸುಲಿಗೆ ಮಾಡಿದ್ದರು. ಅಂತೆಯೇ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಕ್ವಾಲಿಸ್‌ ವಾಹನ ಕದ್ದಿದ್ದಾಗಿ ಹೇಳಿದ್ದಾರೆ’ ಎಂದರು.

ಈ ಪ್ರಕರಣಗಳನ್ನು ಪತ್ತೆ ಾಡಿದ ರಾಮನಗರ ಗ್ರಾಮಾಂತರ ಠಾಣೆ ಸಿಪಿಐ ಕೆ.ಎಂ. ರಮೇಶ್‌, ಇನ್‌ಸ್ಪೆಕ್ಟರ್‌ಗಳಾದ ರಘು, ಶಿವಶಂಕರ್, ಗ್ರಾಮಾಂತರ ಪಿಎಸ್‌ಐ ಮಹದೇವಸ್ವಾಮಿ, ಬಿಡದಿ ಪಿಎಸ್‌ಐ ಎ.ವಿ. ಕುಮಾರ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಬಿ.ಕೆ. ಪುರಂದರ, ನವೀನ್‌, ದಿಲೀಪ್‌, ಕಾನ್‌ಸ್ಟೆಬಲ್‌ಗಳಾದ ಎಂ.ಸಿ. ರಾಜು, ಮಹೇಶ್, ಮಾರುತಿ, ಮಧು, ಲೋಕೇಶ್‌, ಶಿವರಾಜು, ನಂದೀಶ್‌, ಚಾಲಕರಾದ ಇಬ್ರಾಹಿಂ, ವೆಂಕಟೇಶ್‌, ಅಶ್ವಥ್‌ ಅವರನ್ನು ಅಭಿನಂದಿಸಿದರು.

ಡಿವೈಎಸ್ಪಿ ತಮ್ಮಯ್ಯ ಹಾಗೂ ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮಹಿಳೆಯರೇ ಟಾರ್ಗೆಟ್‌
‘ಬೆಳಿಗ್ಗೆ ಹಾಗೂ ಸಂಜೆ  ವಾಯುವಿಹಾರಕ್ಕೆ ತೆರಳುವ ಒಂಟಿ ಮಹಿಳೆಯರೇ ಸರಗಳ್ಳರ ಟಾರ್ಗೆಟ್‌ ಆಗಿದ್ದರು. ಬೈಕಿನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಮಹಿಳೆಯರನ್ನು ಅಡ್ಡಗಟ್ಟಿ ಚಾಕು ತೋರಿಸಿ  ಬೆದರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿ ಆಗುತ್ತಿದ್ದರು. ಅಲ್ಲದೆ ರಾತ್ರಿ ವೇಳೆ ಬಾಗಿಲು ಹಾಕಿರುವ ಅಂಗಡಿಗಳ ಬಳಿ ಕಾರಿನಲ್ಲಿ ಹೋಗಿ, ರೋಲಿಂಗ್‌ ಶೆಟರ್‌ ಬಾಗಿಲುಗಳನ್ನು ಕಬ್ಬಿಣದ ಸರಳಿನಲ್ಲಿ ಮೀಟಿ ಅಂಗಡಿಯಲ್ಲಿನ ವಸ್ತುಗಳನ್ನು ದೋಚುತ್ತಿದ್ದರು’ ಎಂದು ರಮೇಶ್‌ ವಿವರಿಸಿದರು.

ಮುಖ್ಯಾಂಶಗಳು
* ಕೆಂಪವಡೇರಹಳ್ಳಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು
* ಕಗ್ಗಲೀಪುರ ಠಾಣೆ ಪೊಲೀಸರಿಂದ ಸರಗಳ್ಳರ ಬಂಧನ
* ಎರಡು ತಂಡಗಳಿಂದ ಪ್ರತ್ಯೇಕ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT