ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯ ಸಹಜ ಗುಣ ಹೊರಹಾಕುವ ಕ್ಲ್ಯಾಷ್

ಬೆಂಗಳೂರು ಚಲನಚಿತ್ರೋತ್ಸವ
Last Updated 7 ಫೆಬ್ರುವರಿ 2017, 17:12 IST
ಅಕ್ಷರ ಗಾತ್ರ
ADVERTISEMENT

ಕ್ಲ್ಯಾಷ್, ಇದು 2016 ರಲ್ಲಿ ನಿರ್ಮಾಣಗೊಂಡ ಈಜಿಫ್ಟ್ ಸಿನಿಮಾ. 2013 ಜೂನ್ ತಿಂಗಳಲ್ಲಿ ನಡೆದ ಈಜಿಫ್ಟ್‌ನಲ್ಲಿ ನಡೆದ ಸಾಮೂಹಿಕ ಕ್ರಾಂತಿಯ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ.

ಈ ಸಿನಿಮಾದ ಕಥಾ ಹಿನ್ನೆಲೆ, 2013ರಲ್ಲಿ ಈಜಿಫ್ಟ್‌ ಇತಿಹಾಸದಲ್ಲೇ ಅತಿದೊಡ್ಡ ರಾಜಕೀಯ ಕ್ರಾಂತಿಯೊಂದು ದಾಖಲಾಗಿದ್ದು, ಈಜಿಫ್ಟ್‌ ಅಧ್ಯಕ್ಷನ ವಿರುದ್ಧ ನಡೆದ ಕ್ರಾಂತಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. ಈಜಿಫ್ಟಿನ ಅಧ್ಯಕ್ಷನ ವಿರುದ್ದ ಶುರುವಾದ ಪ್ರತಿಭಟನೆ ಮೊದಲಿಗೆ ಶಾಂತಿಯುತವಾಗಿ ಪ್ರಾರಂಭವಾಗಿ ನಂತರ ಹಿಂಸಾ ರೂಪ ಪಡೆದು ಮುಸ್ಲಿಂರ ಪರ-ವಿರುದ್ಧದ ಪ್ರತಿಭಟನೆಯಾಗಿ ರೂಪಾಂತರಗೊಂಡು ಜನರು ಪರಸ್ಪರ ದ್ವೇಷಿಸುವ ಮಟ್ಟಕ್ಕೆ ಬೆಳೆದದ್ದು ವಿಪರ್ಯಾಸ.

ಈ ಐತಿಹಾಸಿಕ ಘಟನೆಯನ್ನು ಆಧರಿಸಿ ನಿರ್ಮಿಸಿರುವ ಸಿನಿಮಾ ಕ್ಲ್ಯಾಷ್. ಇಡೀ ಸಿನಿಮಾದ ಕಥೆ ನಡೆಯುವುದು ಒಂದು ಪೊಲೀಸ್ ವ್ಯಾನಿನಲ್ಲಿ, ಮೊದಲಿಗೆ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬಂದು ನಿಲ್ಲುವ ಖಾಲಿ ಪೊಲೀಸ್ ವ್ಯಾನಿನಲ್ಲಿ ಇಬ್ಬರು ಅಂತರರಾಷ್ಟ್ರೀಯ ಪತ್ರಕರ್ತರನ್ನು ಒಳಗೆ ತಳ್ಳುವ ಮೂಲಕ ಸಿನಿಮಾ ಆರಂಭಗೊಳ್ಳುತ್ತದೆ. ಕ್ರಮೇಣ ಪ್ರತಿಭಟನೆ ತೀವ್ರವಾದಂತೆಲ್ಲಾ ಅಧ್ಯಕ್ಷನ ಪರ ಮತ್ತು ವಿರೋಧವಿರುವ ಎರಡೂ ಗುಂಪಿನ ಬಣದವರನ್ನು ಬಂಧಿಸಿ ಈ ವ್ಯಾನಿಗೆ ಬಲವಂತವಾಗಿ ಹತ್ತಿಸಲಾಗುತ್ತದೆ. ಆ ಗುಂಪಿನಲ್ಲಿ ತಾಯಿ, ತಂದೆ, ಮಗಳು, ಮಗ,  ಇರುತ್ತಾರೆ.

ಅವರಿಬ್ಬರೇ ಮಹಿಳೆಯರು, ಆ ಇಡೀ ಪುರುಷ ಪ್ರಧಾನ ಬಂಧಿತರ ನಡುವೆ. ಮೊದಮೊದಲು ಸಿದ್ಧಾಂತ ಘರ್ಷಣೆಯ ಮೂಲಕ ಪರಸ್ಪರ ನಿಂದಿಸುತ್ತಾ ಹಲ್ಲೆ ಮಾಡುತ್ತಾ, ಆ ಬಂಧನದಿಂದ ಬಿಡುಗಡೆ ಬಯಸುವ ಬಂಧಿತರು ಸಮಯ ಕಳೆದಂತೆಲ್ಲಾ ಹೊರ ಜಗತ್ತಿಗೆ ಕಾಲಿರಿಸಲು ಭಯಪಡುತ್ತಾರೆ. ಬಂಧನಕ್ಕೊಳಗಾದ ಸಮಯದಿಂದ ಪರಸ್ಪರ ದ್ವೇಷಿಸುತ್ತಿದ್ದ ಭಿನ್ನಮತೀಯರು,  ಹೊರ ಜಗತ್ತಿನ ಜನರು  ಎದುರಿಸುವ ಆತಂಕದ ಕ್ಷಣಗಳಲ್ಲಿ ಕೆಲವರು ಪರಸ್ಪರ ಒಬ್ಬೊರಿಗೊಬ್ಬರು ಸಹಾಯ ಮಾಡುತ್ತಾ ತಾವು ತೊಟ್ಟಿದ್ದ ಸಿದ್ದಾಂತದ ಮುಖವಾಡ ಕಳಚಿಕೊಂಡರೆ, ಕೆಲವರು ತಾವು ತೊಟ್ಟಿರುವ ಮುಖವಾಡವೇ ಶಾಶ್ವತ ಎಂದು ಹಠ ತೊಟ್ಟು ನಿಲ್ಲುತ್ತಾರೆ.

ಆದರೆ ಹೊರ ಜಗತ್ತಿನಲ್ಲಿ ನಡೆಯುತ್ತಿರುವ ಸಿದ್ಧಾಂತದ ಬೆನ್ನೇರಿದ ತೀವ್ರಗಾಮಿಗಳಿಗೆ ಇವರೆಲ್ಲರೂ ಒಂದೇ. ಹಾಗಾಗಿ ಒಳಗೆ ಬಂಧಿತರಾಗಿರುವವರನ್ನೆಲ್ಲಾ ಹೊರಗಿನವರು ದ್ವೇಷಿಸುತ್ತಾ ನಮ್ಮವರು ವಿರೋಧಿಗಳು ಎಂಬ ಭೇದ ಭಾವವಿಲ್ಲದೇ ಹೊರಗಿನಿಂದ ಹಲ್ಲೆ ನಡೆಸುತ್ತಾರೆ. ಹೊರಗಿನ ದಾಳಿಯಲ್ಲಿ ನಲುಗಿದ ಒಳಗಿನವರು ಕ್ರಮೇಣ ಪರಸ್ಪರರ ವಿರುದ್ಧ ದ್ವೇಷವನ್ನು ಮರೆತು ತಮ್ಮೊಳಗಿನ ಮಾನವೀಯತೆಯ ಸಹಜ ಗುಣ ಹೊರಹಾಕುವ ಸನ್ನಿವೇಶಗಳು ತೀವ್ರವಾಗಿ ನೋಡುಗನನ್ನು ತಟ್ಟುತ್ತವೆ. ಇಡೀ ಸಿನಿಮಾದ ರೂಪಕ ಈ ಪೋಲೀಸ್ ವ್ಯಾನ್.  ಈ ಕ್ರಾಂತಿ ನಡೆಯುವಾಗ ಅಲ್ಲಿನ ಜನಸಾಮಾನ್ಯರ ಸ್ಥಿತಿ ಹೇಗಿತ್ತು ಎಂದು ನಿರೂಪಿಸಲು ಬಳಸಿರುವ ವ್ಯಾನೆಂಬ ರೂಪಕ ಬಹು ತೀಕ್ಷ್ಣವಾಗಿ ನಿರೂಪಿಸಲಾಗಿದೆ.

ಈ ಕ್ರಾಂತಿ ನಡೆದ ಸಂದರ್ಭದಲ್ಲಿ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡವರು, ಅದರ ಪರಿಣಾಮವನ್ನು ಅನುಭವಿಸಿದವರು ಒಂದಲ್ಲಾ ಒಂದು ರೀತಿಯಲ್ಲಿ ಈ ವ್ಯಾನೆಂಬ ಸೀಮಿತ ಸ್ಥಳದಲ್ಲಿ ಬಂಧಿಗಳಂತೆ ಬದುಕಿದ್ದವರು. ಅವರ ಮಧ್ಯೆ ಸಾಕ್ಷಿಯಂತೆ ಕಿಟಕಿಗೆ ಕೈಕೋಳ ತೊಟ್ಟು ಬಂಧಿತನಾಗಿದ್ದ ಪತ್ರಕರ್ತ ಮತ್ತು ಕಿಟಕಿಗಳೇ ಹೊರ ಜಗತ್ತನ್ನು ತಿಳಿಯಲು ಇದ್ದ ಕಿಂಡಿಗಳು! ಅದರಲ್ಲಿ ಕಂಡದ್ದೆಲ್ಲಾ ಸತ್ಯ.. ಅದರಲ್ಲಿ ಕಂಡಷ್ಟು ಮಾತ್ರವೇ ಸತ್ಯ. ಅದರಾಚೆ ಏನಾಯಿತೋ ಯಾರಿಗೂ ತಿಳಿಯದು. ತಿಳಿಸ ಬೇಕಿದ್ದ ಬಂಧುಗಳು ಸಂಬಂಧಿಕರು, ಮಗ-ಅಪ್ಪ ಅಣ್ಣ-ತಮ್ಮ ಅಕ್ಕ-ತಂಗಿ ಮತ್ತಿನ್ಯಾವುದೋ ವಾಹನದಲ್ಲಿ ಬಂಧಿತರು..

ಆ ಬಂಧನಕ್ಕೊಳಗಾಗಿರುವ ಕಾಲಾವಧಿಯಲ್ಲಿ ಬಂಧಿತರಾಗಿರುವ ಪ್ರತಿಯೊಬ್ಬರಿಗೂ ಅವರದೇ ಆದ ಜೀವನವಿದೆ, ಆ ಜೀವನಕ್ಕೊಂದು ಕಾರಣವಿದೆ ಎಂಬ ಅಂಶವನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ಕಟ್ಟಿಕೊಡುವ ಪರಿ ನೋಡಗರನ್ನು ತೀಕ್ಷ್ಣವಾಗಿ ತಟ್ಟುತ್ತದೆ. ಪುರುಷ ಹಾಗೂ ಹೊರಗಿನ ಪ್ರತಿಭಟನೆಯ ನಡುವೆ ನಲುಗುವ ಎರಡು ಹೆಣ್ಣು ಜೀವಗಳು ನಲುಗುವ ಪರಿ ಈಜಿಫ್ಟಿನ ಒಟ್ಟಾರೆ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಸಿನಿಮಾ ನಿರೂಪಣೆಯ ಜೊತೆಗೆ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ಪರಿಯೂ ಸಹ ತುಂಬಾ ಸಹಜವಾಗಿ, ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ಜೊತೆಗೆ ಹೊರಗಿನ ಪರಿಸ್ಥಿತಿಯನ್ನು ವೀಕ್ಷಕನ ಅನುಭವಕ್ಕೆ ದಾಟಿಸಲು ಬಳಸಿರುವ ಶಬ್ದವಿನ್ಯಾಸವಂತೂ ನೈಜವಾಗಿದೆ. ನೋಡುಗರಿಗೆ ತಾನೇ ಆ ಘಟನೆಗಳಿಗೆ ಸಾಕ್ಷಿಯಾದ ಅನುಭವ ಕಟ್ಟಿಕೊಡುತ್ತದೆ.

ಈ ಸಿನಿಮಾದ ಮರು ಪ್ರದರ್ಶನ 08ರ ಬುಧವಾರ ಮಧ್ಯಾಹ್ನ 3 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT