ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯುವ ನಾಣ್ಯ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಜಗದ, ಎಂದರೆ ವಿತ್ತಪ್ರಪಂಚದ ವ್ಯವಹಾರ ನಡೆಯುವುದು ದುಡ್ಡಿನ ಮೇಲೆ. ಅದು ವಿನಿಮಯ ಮೌಲ್ಯದ ಒಂದು ರೂಪ, ವಿಧಾನ. ಒಂದೊಂದು ದೇಶಕ್ಕೂ ತನ್ನದೇ ಆದ ಹಣವಿದೆ. ಅದಕ್ಕೆ ಡಾಲರ್, ಪೌಂಡ್, ದಿನಾರ್, ರುಬೆಲ್, ರೂಪಾಯಿ ಇತ್ಯಾದಿ ಬೇರೆ ಬೇರೆ ಹೆಸರೂ ಇದೆ. ಆದರೆ ಒಂದು ಸಾಮಾನ್ಯ ಅಂಶ ಎಂದರೆ ನಗದು ಹಣ ಎರಡು ರೂಪಗಳಲ್ಲಿ ಲಭ್ಯ; ನೋಟು ಮತ್ತು ನಾಣ್ಯ. ನಾಣ್ಯ ಹೇಗಿರಬೇಕು? ನಡೆಯುವಂತಿರಬೇಕು, ಅಸಲಿಯಾಗಿರಬೇಕು. ನಮೂದಿಸಿದ ಮೊತ್ತಕ್ಕೆ ತಕ್ಕುದಾಗಿರಬೇಕು. ನೋಟಾದರೆ ಹರಿದಿರಬಾರದು, ಹೊಲಸಾಗಿರಬಾರದು, ‘ಖೋಟಾ’ ಆಗಿರಬಾರದು. ವಾಣಿಜ್ಯ ಜಗತ್ತಿನ ಮಾತಿನಲ್ಲಿ ಹೇಳುವುದಾದರೆ, ‘ನಾಣ್ಯ ನಡೆಯುವಂತಿರಬೇಕು, ನೋಟು ಅಸಲಿಯಾಗಿರಬೇಕು’. ನಾಣ್ಯಗಳ ಅಧ್ಯಯನಕ್ಕೆಂದೇ ಇತಿಹಾಸಶಾಸ್ತ್ರದಲ್ಲಿ ಒಂದು ಉಪವಿಭಾಗವಿದೆ.

ನಾಣ್ಯ ಕೇವಲ ವಹಿವಾಟಿಗೆ ಮಾಧ್ಯಮವಾಗದೆ ಸಂಸ್ಕೃತಿಯ ಪ್ರತಿಬಿಂಬವೂ ಆಗಿರುತ್ತದೆ. ನಾಣ್ಯದ ಒಂದು ಮುಖದಲ್ಲಿ ಅದರ ಮೌಲ್ಯವು ಮತ್ತೊಂದು ಮುಖದಲ್ಲಿ ಸಂಸ್ಕೃತಿಸೂಚಕ ಚಿಹ್ನೆ, ದೇಶದ ಮೇಲೆ ಪ್ರಭಾವ ಬೀರಿದ ವ್ಯಕ್ತಿಯ ಚಿತ್ರದ ಮುದ್ರಣವೂ ಇರುತ್ತದೆ. ನಾಣ್ಯದ ಮೇಲೆ ಮುದ್ರಿತವಾದ ರಾಜ, ರಾಣಿ, ಕನಿಷ್ಕ, ಅಶೋಕ, ಚಂದ್ರಗುಪ್ತ, ಗಾಂಧಿ ಇವರ ಬಗ್ಗೆ ಆಲೋಚಿಸಿ, ಅವರ ವ್ಯಕ್ತಿತ್ವಗಳ ಬಗ್ಗೆ ಚಿಂತನೆ ನಡೆಸಿದರೆ ನಮ್ಮ ನಡತೆಯೆಂಬ ನಾಣ್ಯ ಹೇಗಿರಬೇಕು ಎಂಬ ಅಂಶ ಹೊಳೆದುಬಿಡುತ್ತದೆ. ನಾವು ಅರಿಯಬೇಕಾದ ಮುಖ್ಯ ಅಂಶ ಇದೇ. ಹೇಗೆ ನೋಟಾಗಲೀ ನಾಣ್ಯವಾಗಲೀ ಅಸಲಿಯಾಗಿರಬೇಕೋ ಹಾಗೇ ನಮ್ಮ ವ್ಯಕ್ತಿತ್ವವೂ ಅಸಲಿಯಾಗಿರಬೇಕು. ಹಾಗಿದ್ದಾಗಲೆ ಸಮಾಜದಲ್ಲಿ ಅದಕ್ಕೊಂದು ಚಲಾವಣೆ, ಗೌರವ.

ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬಂತೆ ಹೊಳೆಯುವುದೆಲ್ಲ ಸುವರ್ಣವಲ್ಲ! ಖೋಟಾ ನೋಟುಗಳಂತೆ ಖೋಟಾ ವ್ಯಕ್ತಿತ್ವಗಳು ಸಮಾಜದ ವಿವಿಧ ಪರೀಕ್ಷಣ ವ್ಯವಸ್ಥೆಯಲ್ಲಿ ಸಿಕ್ಕಿಬಿದ್ದು ಮುಖಭಂಗ ಅನುಭವಿಸುತ್ತಿವೆ. ದಿನಬೆಳಗಾದರೆ ಇಂತಹ ಅನೇಕ ಪ್ರಸಂಗಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ಹೇಗೆ ಮಾರುಕಟ್ಟೆಯಲ್ಲಿ ಖೋಟಾ ನೋಟುಗಳ ಹಾವಳಿಯಿದೆಯೋ ಹಾಗೆಯೇ ಈ ಜಗತ್ತಿನಲ್ಲಿ ಕೃತಕ ವ್ಯಕ್ತಿತ್ವಗಳ ಓಡಾಟವೂ ಇದೆ. ಹಾಗಾದರೆ ಎಂತಹ ನೋಟುಗಳು ನಮಗೆ ಬೇಕು? ಎಂತಹವು ನಮಗಿಷ್ಟ? ಹೊಸ ಹೊಸ ನೋಟು ಗರಿಗರಿ ನೋಟು ನಮ್ಮೆಲ್ಲರಿಗೂ ಇಷ್ಟ. ಏಕೆ ಗೊತ್ತೆ? ಅವು ಮಸುಕಾಗಿಲ್ಲ, ಕೊಳೆಯಾಗಿಲ್ಲ, ಹೆಚ್ಚು ಕೈ ಬದಲಾಯಿಸಿಲ್ಲ. ಅವುಗಳನ್ನು ನಮ್ಮ ಬಳಿ ಇಟ್ಟುಕೊಳ್ಳುವುದೇ ಒಂದು ಖುಷಿಯ ಸಂಗತಿ. ನಮ್ಮ ವ್ಕಕ್ತಿತ್ವವೆಂಬ ಮೌಲ್ಯ ಕೂಡ ಹೀಗೆ ಶುದ್ಧವೂ ಮಲಿನರಹಿತವೂ ಆಗಿದ್ದರೆ ನಮ್ಮನ್ನು ಎಲ್ಲರೂ ಆದರಿಸುತ್ತಾರೆ, ಗೌರವಿಸುತ್ತಾರೆ; ತಮ್ಮ ಬಳಿ ಇರಬೇಕು ಎಂದು ಬಯಸುತ್ತಾರೆ.

ಆಫ್ರಿಕಾದ ದಾದಾ ಅಬ್ದುಲ್ಲಾ ಆಂಡ್ ಕಂಪನಿಗೆ ವಕೀಲನಾಗಿ ಸೇವೆ ಸಲ್ಲಿಸಲು ಹೋಗಿದ್ದ ಮೋಹನದಾಸ ಗಾಂಧಿ ಒಬ್ಬ ಯಶಸ್ವಿ ವಕೀಲನಾಗಬಹುದಿತ್ತು. ಆದರೆ ಅಲ್ಲಿನ ಭಾರತೀಯ ಕರಾರು ಕೂಲಿ ಜನರ ಸ್ಥಿತಿಗತಿ ಕಂಡು ಕರಗಿ ಅವರನ್ನು ಸಂಘಟಿಸಿ ಸತ್ಯಾಗ್ರಹದ ಹೋರಾಟಕ್ಕೆ ಇಳಿದ ಮೋಹನ ದಾಸ. ಮುಂದೆ ಭಾರತದಲ್ಲೂ ಅದನ್ನೇ ವಿಸ್ತರಿಸಿ ಕೊನೆಗೆ ಸ್ವಾತಂತ್ರ ಹೋರಾಟ ನಿರ್ಣಾಯಕ ಆಗುವಂತೆ ಮಾಡಿದರು. ಹೀಗೆ ಮೋಹನ ದಾಸ ಮಹಾತ್ಮ ಗಾಂಧಿಯಾಗಿ ಪರಿವರ್ತನೆಯಾದರು. ಹುಳಗಳಂತೆ ಹುಟ್ಟಿ ಸಾಯುವ ಈ ಮನುಜಸಂತತಿಯಲ್ಲಿ ಮಹಾತ್ಮ ಗಾಂಧಿಯಾಗಿ ಮೌಲ್ಯವನ್ನು ಅವರು ಎತ್ತರಿಸಿಕೊಂಡದ್ದು ತಮ್ಮ ಸತತ ಪ್ರಯತ್ನದಿಂದ. ಹೌದು, ಹೇಗೆ ಒಂದು ಕಾಗದದ ಚೂರಿಗೆ ಹತ್ತು, ನೂರು, ಸಾವಿರ ಎಂದು ಬೆಲೆ ಕಟ್ಟುತ್ತೇವೋ ಹಾಗೇ ‘ಮನುಷ್ಯ’ ಆಗಿ ಹುಟ್ಟಿದವನು ತನ್ನ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಿಕೊಳ್ಳುತ್ತಾನೆ. ಆದರೆ ಇಲ್ಲೊಂದು ಸಣ್ಣ ಬದಲಾವಣೆ ಇದೆ.

ಈ ಬೆಲೆ ಹೊರಗಿನವರು ಕಟ್ಟುವುದಲ್ಲ. ವ್ಯಕ್ತಿ ತಾನೇ ಕಟ್ಟಿಕೊಳ್ಳುತ್ತಾನೆ. ಹಣ ಚಲಾವಣೆಗೆ ಬಂದ ಮಾತ್ರಕ್ಕೆ ಅದು ಹಣವಲ್ಲ. ನಮ್ಮ ಜೇಬಿನಲಿ ಕುಳಿತ ಕಾಗದದ ತುಂಡಿಗೂ ನೋಟಿಗೂ ಅಂತಹ ವ್ಯತ್ಯಾಸವೇನಿಲ್ಲ. ತನ್ನ ಮೇಲೆ ಮುದ್ರಿಸಿದ ಮೌಲ್ಯಕ್ಕೆ ತಕ್ಕಂತಹ ವಿನಿಮಯಕ್ಕೆ ಒಳಗಾದಾಗ ಮಾತ್ರ ಅದು ಹಣ. ಅದು ತನ್ನ ವಿನಿಮಯ ಶಕ್ತಿಯನ್ನು ನಿರೂಪಿಸಬೇಕು. ಮನುಷ್ಯರೂಪದಿಂದ ಮನುಷ್ಯನಾದರೆ ಪ್ರಯೋಜನವಿಲ್ಲ. ಅವನು ಮನುಷ್ಯತ್ವವನ್ನು ಚಲಾವಣೆಗೆ ತರುವ ಚಾಲಕಶಕ್ತಿಯನ್ನು ನಿರೂಪಿಸಬೇಕು. ಮಹಾತ್ಮ ಗಾಂಧಿ ದಂಡಿಯಾತ್ರೆಗೆ ಹೊರಟಾಗ ಇಡೀ ದೇಶ ಅವರ ಹಿಂದೆ ಹೊರಟಿತು. ಇಂದೂ ಜನನಾಯಕರು ಕರೆ ನೀಡುತ್ತಾರೆ; ಆದರೆ ಸೇರುವವರು ಎಷ್ಟು ಮಂದಿ?
ಮುಟ್ಟಿದರೆ ಕೈ ತೊಳೆದುಕೊಳ್ಳಬೇಕಾಗುವಂತಹ ನೋಟುಗಳು, ತೇಪೆ ಹಾಕಿದ ನೋಟುಗಳು ಅಲ್ಲಲ್ಲಿ ಕಾಣುತ್ತವೆ. ಎಲ್ಲರೂ ಬೇಗ ಅವನ್ನು ಕೈ ದಾಟಿಸುವ ಪ್ರಯತ್ನ ಮಾಡುತ್ತಾರೆ. ಅಂತಹ ನೋಟುಗಳು ಜೇಬಿನಲ್ಲಿದ್ದರೆ ಎಂತಹುದೋ ಮುಜುಗರ. ಎರಡು ಕಾರಣಗಳಿಗೆ ಜನ ಅವನ್ನು ದಾಟಿಸುವ ತುರ್ತುಪ್ರಯತ್ನ ಮಾಡುತ್ತಾರೆ. ಮೊದಲಿಗೆ, ಅದು ಮತ್ತಷ್ಟು ಹಳತಾದರೆ ದಾಟಿಸುವುದು ಕಷ್ಟ, ಎರಡನೆಯದು, ಅದು ಚಲಾವಣೆಗೆ ಯೋಗ್ಯವಲ್ಲ ಎಂಬ ಆಂತರಿಕ ಅರಿವು. ಮಾರೀಚನೂ ಕೂಡ ರಾವಣನಿಗೆ ಬುದ್ಧಿ ಹೇಳಿದ, ಸೀತೆಯ ಅಪಹರಣ ಮಾಡಬೇಡವೆಂದು. ವಿಭೀಷಣನೂ ಹೇಳಿದ ಯುದ್ಧ ಬೇಡವೆಂದು. ಆದರೆ ಕೇಳಬೇಕಲ್ಲ ರಾವಣ. ಹಾಗೆಯೇ ದುರ್ಯೋಧನನಿಗೂ ಬುದ್ಧಿ ಹೇಳಿದವರು ಇದ್ದಾರೆ.

ಅದು ಫಲಕಾರಿಯಾಗಲಿಲ್ಲ ಅಷ್ಟೆ. ಆಗ ಅವರ ಜೊತೆಗಿದ್ದವರು ರಾವಣ, ದುರ್ಯೋಧನರ ಸಂಪರ್ಕ ಕಡಿದುಕೊಂಡರು ಅಷ್ಟೆ. ದುಷ್ಟರ ಸಂಪರ್ಕ ಜೀವನದಲ್ಲಿ ಆದಾಗ ಅಷ್ಟೇ ಬೇಗ ಅವರಿಂದ ದಾಟಿಕೊಳ್ಳುವುದು ಒಳಿತು. ಹಾಗಾದರೆ ಹರಿದ, ಹಾಳಾದ, ಕೊಳಕಾದ ಹಣದ ದಾರಿ ಎತ್ತ? ಅದು ಸರ್ಕಾರದ ಕೇಂದ್ರ ಖಜಾನೆಗೆ ರವಾನೆಯಾಗಿ ಮತ್ತೆ ಮರುಮುದ್ರಣಗೊಂಡು ಚಲಾವಣೆಗೆ ಪ್ರವೇಶಿಸುತ್ತದೆ. ಕೊಳಕು ವ್ಯಕ್ತಿತ್ವಗಳೂ ಅಷ್ಟೆ. ಅದು ನಮಗೆ ಸಹ್ಯವಲ್ಲದಿದ್ದರೂ ಭಗವಂತನು ಅಂತಹವರನ್ನೂ ತನ್ನ ಸ್ಪರ್ಶದಿಂದ ಪರಿವರ್ತಿಸುತ್ತಾನೆ. ಕುಲಟೆಯೆಂಬ ಆಪಾದನೆ ಹೊತ್ತ ಹೆಣ್ಣನ್ನು ಸಮಾಜ ಚೌಕದಲ್ಲಿ ನಿಲ್ಲಿಸಿದಾಗ, ‘ಯಾರು ತಪ್ಪೇ ಮಾಡಿಲ್ಲವೋ ಅವರು ಮೊದಲಿಗೆ ಈ ಮಹಿಳೆಗೆ ಕಲ್ಲು ಹೊಡೆಯಿರಿ’ ಎಂದ ಕ್ರಿಸ್ತ. ಭಗವಂತನ ಪ್ರೇಮಖಜಾನೆಯಲ್ಲಿ ಈ ಕೊಳಕು ವ್ಕಕ್ತಿತ್ವವೆಲ್ಲ ಸಂಸ್ಕರಣಗೊಂಡು ಶುದ್ಧವ್ಯಕ್ತಿತ್ವ ಹೊರಬೀಳುತ್ತದೆ. ಎಲ್ಲ ಹಣವೂ ಒಂದಿಲ್ಲೊಂದು ದಿನ ಖಜಾನೆ ಸೇರಲೇಬೇಕಲ್ಲವೆ? ಎಲ್ಲರೂ ಒಂದಿಲ್ಲೊಂದು ದಿನ ಈ ಸಂಸ್ಕರಣಕ್ಕೆ ಒಳಗಾಗಲೇ ಬೇಕು. ದುಷ್ಟರೂ ಪರಿವರ್ತನೆಗೊಂಡು ಸಜ್ಜನರಾಗಲು ಸಾಧ್ಯ. ಮತ್ತು ಈ ಸಂಸ್ಕರಣ ಅನಿವಾರ್ಯ. ಅಂಗುಲಿಮಾಲನೂ ಭಿಕ್ಷುವಾಗಬೇಕು. ಬೇಡನೂ ವಾಲ್ಮೀಕಿಯಾಗಿ ಋಷಿಯಾಗಬೇಕು.

ನಾಣ್ಯಕ್ಕೆ ಮೌಲ್ಯವಿದೆ, ಅದು ಕಾಲದ ಮಿತಿಗೆ ಒಳಪಟ್ಟಿದೆ. ಬದುಕಿಗೂ ಕಾಲಮಿತಿಯಿದೆ. ವ್ಯಕ್ತಿಗಳು ಅಳಿಯುತ್ತಾರೆ. ಆದರೆ ಅವರು ನೀಡಿದ ಮೌಲ್ಯ, ಬಾಳಿದ ರೀತಿ ಮುಂದಿನ ಜನಾಂಗದ ಸಂಪತ್ತಾಗಿ ಉಳಿಯುತ್ತದೆ. ಅಶೋಕನ ಮುದ್ರೆಯ ನಾಣ್ಯ, ಅಂದಿನ ಕಾಲದ ನಾಣ್ಯ ಇಂದು ನಡೆಯದು, ಆದರೆ ಅದು ಚಿನ್ನದ್ದಾದರೆ ಆ ‘ಚಿನ್ನ’ಕ್ಕೆ ಬೆಲೆಯಿದೆ! ವ್ಯಕ್ತಿಗಳು ನಾಣ್ಯದಂತೆ, ವ್ಯಕ್ತಿತ್ವ ಮೌಲ್ಯದಂತೆ. ಮಹಾತ್ಮರ ಕಾಯಗಳು ಇಂದು ನಮ್ಮೊಂದಿಗಿಲ್ಲ, ಅವು ಕಾರ್ಯ ಮುಗಿಸಿ ಕಾಲದಲ್ಲಿ ಜೀರ್ಣವಾಗಿಬಿಟ್ಟವು. ಆದರೆ ಅವರ ವ್ಯಕ್ತಿತ್ವ ಮಹತ್ತ್ವದ್ದಾದರೆ ಅದು ಸದಾ ನಡೆಯುವ ನಾಣ್ಯವೇ. ಅಂತಹ ವ್ಯಕ್ತಿತ್ವವನ್ನು ಗಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಲಿ.

(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT