ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಹುಟ್ಟಿದ ಇ–ಕಾಮರ್ಸ್‌ ತಾಣ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಇದು, ತಾಜಾತಾಜಾ ಡಾಟ್ ಕಾಮ್ (taazataaza.com). ಹುಬ್ಬಳ್ಳಿಯ ಯುವ ಮಹಿಳಾ ಉದ್ಯಮಿ ಸ್ಥಾಪಿಸಿರುವ ಇ– ಕಾಮರ್ಸ್‌ ಅಂತರ್ಜಾಲ ತಾಣ. ಫ್ಲಿಪ್‌ಕಾರ್ಟ್‌, ಅಮೆಜಾನ್‌, ಸ್ನ್ಯಾಪ್‌ ಡೀಲ್‌ ಇತ್ಯಾದಿ ಪ್ರತಿಷ್ಠಿತ ಇ– ಕಾಮರ್ಸ್‌ ಸಂಸ್ಥೆಗಳ ಹಾಗೆ ಹಾಗೂ ಅದಕ್ಕಿಂತ ಭಿನ್ನವಾದ ಆಲೋಚನೆಗಳನ್ನು ಇಟ್ಟುಕೊಂಡು ಸ್ಥಾಪಿಸಿರುವ ಈ ಸಂಸ್ಥೆ  ತಾಜಾ ಉತ್ಪನ್ನಗಳ ಮಾರಾಟಕ್ಕೂ ವೇದಿಕೆಯಾಗುತ್ತಿದೆ.

ಒಂದೂವರೆ ವರ್ಷದ ಪರಿಶ್ರ ಮದ ನಂತರ ಅದೂ ಹುಬ್ಬಳ್ಳಿಯಂತಹ ಎರಡನೇ ಹಂತದ ನಗರ ದಲ್ಲಿ ಜನ್ಮತಾಳಿರುವ ಈ ಸಂಸ್ಥೆ ಇನ್ನೂ ಅಂಬೆಗಾಲು ಇಡುತ್ತಿದೆ. ಅಧಿಕೃತ ವಾಗಿ ಕಳೆದ ಆಗಸ್ಟ್‌ 15ರಿಂದ ಕಾರ್ಯಾರಂಭ ಮಾಡಿರುವ ಈ ಇ–ಕಾಮರ್ಸ್‌ ಸಂಸ್ಥೆಯ ಅಂತರ್ಜಾಲವನ್ನು ನಿತ್ಯ 500ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಉತ್ಪನ್ನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಾರದ ಕೊನೆ ದಿನಗಳಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿ, ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಇದೆ.

‘ಇಷ್ಟೊಂದು ಕಡಿಮೆ ಅವಧಿಯಲ್ಲಿ ಸಾರ್ವಜನಿಕರಿಂದ ಈ ರೀತಿಯ ಸ್ಪಂದನೆ ಸಿಕ್ಕಿರುವುದು ನಿಜಕ್ಕೂ ಸಂತಸದ ವಿಚಾರ’ ಎನ್ನುತ್ತಾರೆ ತಾಜಾತಾಜಾ ಡಾಟ್‌ ಕಾಮ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕಾ ರೆಡ್ಡಿ.

‘ಹಾಲಿ ಇರುವ ಎಲ್ಲ ಇ–ಕಾಮರ್ಸ್‌ ಸಂಸ್ಥೆಗಳಿ ಗಿಂತಲೂ ಇದು ಭಿನ್ನವಾಗಿದೆ. ಗ್ರಾಹಕರಿಗೆ ಉತ್ಪಾದ ಕರ ಜತೆ ನೇರ ಸಂವಹನಕ್ಕೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಉತ್ಪಾದಕರ ವಿವರಗಳು ಕೂಡ ಗ್ರಾಹಕರಿಗೆ ಸಿಗುವ ಹಾಗೆ ಮಾಡಲಾಗಿದೆ. ಉತ್ಪಾದಕರು ನೇರವಾಗಿಯೇ ತಮ್ಮ ಗ್ರಾಹಕರಿಗೆ ರಿಯಾಯ್ತಿಗಳನ್ನು ನೀಡುವು ದಕ್ಕೂ ವ್ಯವಸ್ಥೆ ಮಾಡಲಾಗಿದೆ. ಸಗಟು/ ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲವಾಗುವ ಹಾಗೆ ಅಂತರ್ಜಾಲ ತಾಣ ವಿನ್ಯಾಸಗೊಳಿಸಲಾಗಿದೆ’ ಎನ್ನುತ್ತಾರೆ ಅವರು.

‘ಸದ್ಯಕ್ಕೆ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜ, ಕಾಟನ್‌ ಮತ್ತು ರೇಷ್ಮೆ ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ವಿವಿಧ ಬಗೆಯ ಕಾಗದದ ಕೈಚೀಲ, ಅಲಂಕಾರಿಕ ಆಭರಣ, ಫ್ಯಾಷನ್‌ ಡಿಸೈನ್‌ ಬಟ್ಟೆಗಳು, ಮಕ್ಕಳ ಆಟಿಕೆ, ಪುಸ್ತಕ, ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಉತ್ಪನ್ನ, ಉಪ್ಪಿನಕಾಯಿ ಇತ್ಯಾದಿ ನೂರಕ್ಕೂ ಹೆಚ್ಚು ವಿವಿಧ ಬಗೆಯ ಉತ್ಪನ್ನಗಳು ಲಭ್ಯ ಇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಪನ್ನಗಳ ಮಾರಾಟಕ್ಕೂ ವೇದಿಕೆ ಆಗಲಿದೆ. ಈ ಸಂಸ್ಥೆ ಆರಂಭವಾಗಿ ಆರು ತಿಂಗಳು ಆಗಿದ್ದು, ಈ ಅವಧಿಯಲ್ಲಿ ತಯಾರಕರ ಜತೆಗೂ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ತಮ್ಮ ಉತ್ಪನ್ನಗಳನ್ನು ಇ– ಕಾಮರ್ಸ್‌ ಪ್ಲಾಟ್‌ಫಾರಂ ಮೂಲಕ ಮಾರಾಟ ಮಾಡುವಂತೆ ಕೋರಿಕೆ ಸಲ್ಲಿಸಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ಒಂದೊಂದೇ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕುತ್ತಿವೆ’ ಎನ್ನುತ್ತಾರೆ ಅವರು.

‘ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿ ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಭರಾಟೆ ಜಾಸ್ತಿ ಇರುತ್ತದೆ. ಹೀಗಾಗಿ ಗ್ರಾಹಕ ಉತ್ಪನ್ನಗಳ ಜತೆಗೆ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮಾರಾಟಕ್ಕೂ ವೇದಿಕೆ ಕಲ್ಪಿಸಲಾಗುವುದು. ಈ ಸಂಬಂಧ ಎಲೆಕ್ಟ್ರಾನಿಕ್ಸ್‌ ಸಂಸ್ಥೆಗಳ ಜತೆಗೂ ಮಾತುಕತೆ ನಡೆದಿದೆ. ಒಂದೆರಡು ತಿಂಗಳಲ್ಲಿ ಅದು ಕೂಡ ಕಾರ್ಯಾರಂಭ ಮಾಡಲಿದೆ’ ಎಂದು ರೆಡ್ಡಿ ವಿವರಿಸುತ್ತಾರೆ.



ದೇಶದ ವ್ಯಾಪ್ತಿ ಹೊಂದಿದೆ
‘ಹುಬ್ಬಳ್ಳಿಯಲ್ಲಿ ಸಂಸ್ಥೆಯ ಪ್ರಧಾನ ಕಚೇರಿ ಹಾಗೂ ಡೇಟಾ ಬೇಸ್‌ ಇದ್ದರೂ ಕೂಡ ಅದರ ವ್ಯಾಪ್ತಿ ಮಾತ್ರ ಇಡೀ ದೇಶಕ್ಕೆ ವ್ಯಾಪಿಸಿದೆ. ದೇಶದ ಹಲವು ರಾಜ್ಯ ಗ ಳಿಂದಲೂ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದು, ಅದನ್ನು ವಿದೇಶಗಳಿಗೂ ವಿಸ್ತರಿ ಸಲು ಸಿದ್ಧತೆ ನಡೆದಿದೆ. ಅಮೆರಿಕದಿಂದಲೂ ಕೆಲವರು ಉತ್ಪನ್ನಗಳ ಬಗ್ಗೆ ಹುಡು ಕಾಟ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಎಲ್ಲಿಂದಲೇ ಬೇಡಿಕೆ ಸಲ್ಲಿಸಿದರೂ ಅಲ್ಲಿಗೆ ಉತ್ಪನ್ನಗಳನ್ನು ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ರಿಯಾಯಿ ತಿಗಳನ್ನು ಕೂಡ ಗ್ರಾಹಕರಿಗೆ ವರ್ಗಾಯಿಸುತ್ತೇವೆ’ ಎನ್ನುತ್ತಾರೆ ರೆಡ್ಡಿ ಅವರು.

‘ವಿದೇಶಗಳಲ್ಲಿನ ಗ್ರಾಹಕರಿಗೆ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಬಗ್ಗೆ ಶಿಪ್ಪಿಂಗ್‌ ಸಂಸ್ಥೆಗಳ ಜತೆಗೂ ಮಾತುಕತೆ ನಡೆಸುತ್ತಿದ್ದೇವೆ. ಒಂದು ತಿಂಗಳಲ್ಲಿ ಅದು ಕೂಡ ಅಂತಿಮ ಆಗಲಿದ್ದು, ಜಗತ್ತಿನ ಯಾವುದೇ ದೇಶದಲ್ಲಿನ ಗ್ರಾಹಕರು ನಮ್ಮ  ಅಂತರ್ಜಾಲ ತಾಣದ ಮೂಲಕ ಸರಕುಗಳನ್ನು ಖರೀದಿಸಬಹುದು. ಮೊದಲಿಗೆ ಅಮೆರಿಕ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿನ ಗ್ರಾಹಕರಿಗೆ ಸೇವೆ ಒದಗಿಸಲಾಗುವುದು’ ಎನ್ನುತ್ತಾರೆ ರೆಡ್ಡಿ.

ಮೊದಲು ಖರೀದಿ ಆಗಿದ್ದೇ ರಾಷ್ಟ್ರಧ್ವಜ
‘ಪ್ರಾಯೋಗಿಕವಾಗಿ ತಾಜಾತಾಜ್‌ ಡಾಟ್‌ ಕಾಮ್‌ ಆರಂಭವಾದ ನಂತರ ಮೊದಲಿಗೆ ಖರೀದಿ ಅದ ವಸ್ತುವೇ ಭಾರತದ ರಾಷ್ಟ್ರ ಧ್ವಜ. ಹುಬ್ಬಳ್ಳಿ ಹೊರವಲಯದ ಬೆಂಗೇರಿಯಲ್ಲಿ ರಾಷ್ಟ್ರಧ್ವಜ ತಯಾರಿಸುತ್ತಿದ್ದು, ಅವುಗಳಿಗೆ ಉತ್ತಮ ಬೇಡಿಕೆ ಬಂದಿದೆ. ಶುದ್ಧ ಖಾದಿಯಾದ ಕಾರಣ ಅದಕ್ಕೆ ಬೇಡಿಕೆ ಹೆಚ್ಚಿದೆ. ಇದೇ ರೀತಿ ಸೀರೆಗಳಿಗೆ ಕೂಡ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಗ್ರಾಹಕ ಉತ್ಪನ್ನಗಳ ಮಾರಾಟದ ಕಡೆಗೂ ಆದ್ಯತೆ ನೀಡುತ್ತೇವೆ. ಈ ಸಂಬಂಧ ಅಂತಹ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿದೆ’ ಎನ್ನುತ್ತಾರೆ ರೆಡ್ಡಿ ಅವರು.

ಮಹಿಳಾ ಉದ್ಯಮಿ
ಹುಬ್ಬಳ್ಳಿಯಲ್ಲೇ ಹುಟ್ಟಿ ಬೆಳೆದು, ಇಲ್ಲಿನ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪೂರೈಸಿರುವ ಕಾರ್ತಿಕಾ ರೆಡ್ಡಿ ಅವರು ತಾಜಾತಾಜಾ ಡಾಟ್‌ ಕಾಮ್‌ನ ಮಾಲೀಕರು. ಔಸಂ ಇ–ಕಾಮರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಅಧೀನದಲ್ಲಿ ಈ ತಾಜಾತಾಜಾ ಡಾಟ್ ಕಾಮ್ ಕಾರ್ಯನಿರ್ವಹಿಸುತ್ತಿದೆ. ರೆಡ್ಡಿ ಅವರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ.

‘ಹುಬ್ಬಳ್ಳಿಯಂತಹ ನಗರದಲ್ಲಿ ಇದ್ದೂ ನಾವು ಅತ್ಯುತ್ತಮವಾದ ಇ – ಕಾಮರ್ಸ್‌ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ತಾಂತ್ರಿಕವಾಗಿ ಯಾವುದೇ ಬಹುರಾಷ್ಟ್ರೀಯ ಕಂಪೆನಿಗಿಂತಲೂ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಸದ್ಯ 8 ಮಂದಿ ನುರಿತ ಎಂಜಿನಿಯರ್‌ಗಳಿದ್ದಾರೆ. ಇಬ್ಬರು ವಿನ್ಯಾಸಗಾರರು ಇದ್ದಾರೆ. ಉತ್ಪನ್ನಗಳ ಛಾಯಾಚಿತ್ರಗಳನ್ನು ತ್ರೀಡಿ ರೂಪದಲ್ಲಿ ತೆಗೆದು, ಅದನ್ನು ಅಪ್‌ಲಿಂಕ್‌ ಮಾಡಲು ಇವರೆಲ್ಲರೂ ನೆರವಾಗುತ್ತಿದ್ದಾರೆ. ಇನ್ನು ಉಳಿದಂತೆ ಆನ್‌ಲೈನ್‌ನಲ್ಲಿ ಖರೀದಿ ಮಾಡಿದ ವಸ್ತುಗಳನ್ನು ತಕ್ಷಣ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಡಿ.ಟಿ.ಡಿ.ಸಿ, ಫೆಡೆಕ್ಸ್‌ ಮತ್ತು ಡೆಲಿವರಿ ಕೊರಿಯರ್‌ ಸಂಸ್ಥೆಗಳಿಗೆ ವಹಿಸಲಾಗಿದೆ. ದೇಶದ ಯಾವುದೇ ಮೂಲೆಯಲ್ಲಿನ ಗ್ರಾಹಕರು ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಖರೀದಿಸಿದರೂ ನಿಗದಿತ ಅವಧಿಯೊಳಗೆ ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ’ ಎನ್ನುತ್ತಾರೆ ಕಾರ್ತಿಕಾ ರೆಡ್ಡಿ.

ಸಂಸ್ಥೆ ಕಟ್ಟಲು ಪತಿ ಶ್ರೀನಿವಾಸುಲು ರೆಡ್ಡಿ ಆರ್ಥಿಕವಾಗಿ ನೆರವಾಗಿದ್ದಾರೆ. ಅವರ ಸಹಕಾರದಿಂದಲೇ ಈ ಪ್ರಯತ್ನಕ್ಕೆ ಕೈಹಾಕಿದ್ದು, ಒಳ್ಳೆ ಫಲಿತಾಂಶ ಸಿಗುತ್ತಿದೆ ಎನ್ನುತ್ತಾರೆ ಅವರು. ವಿವಿಧ ಬಗೆಯ 1,500ಕ್ಕೂ ಹೆಚ್ಚು ಉತ್ಪನ್ನಗಳು ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯ ಇವೆ. ನಿತ್ಯ ಇವುಗಳ ಸಂಖ್ಯೆ ಏರುತ್ತಲೇ ಇದೆ ಎನ್ನುತ್ತಾರೆ ಕಾರ್ತಿಕಾ ರೆಡ್ಡಿ.

***

ಹುಬ್ಬಳ್ಳಿಯೆಂದು ಮೂಗು ಮುರಿಯುವ ಕಾಲ ಹೋಯಿತು. ಹೈಸ್ಪೀಡ್‌ ಇಂಟರ್‌ನೆಟ್‌,  ಅನುಭವಿ ಉದ್ಯೋಗಿಗಳೂ ಸಿಗುವಾಗ ನಾವ್ಯಾಕೆ ದೊಡ್ಡ ನಗರಗಳಿಗೇ ಹೋಗಿ ಉದ್ಯಮ ಕಟ್ಟಬೇಕು?
–ಕಾರ್ತಿಕಾ ರೆಡ್ಡಿ, ಸಿಇಒ, ತಾಜಾತಾಜಾ ಡಾಟ್‌ ಕಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT