ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ರಂಗಭೂಮಿ ಪ್ರೋತ್ಸಾಹಿಸಿ

ಎರಡು ದಿನಗಳ ‘ಕಾಲೇಜು ರಂಗೋತ್ಸವ’ಕ್ಕೆ ಚಾಲನೆ ನೀಡಿದ ರಂಗ ಸಂಘಟಕ ಪ್ರೊ.ಎಸ್‌.ಹಾಲಪ್ಪ
Last Updated 8 ಫೆಬ್ರುವರಿ 2017, 6:15 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳಲ್ಲಿ ಭಾಷಾ ಶುದ್ಧತೆ, ಜೀವನ ಎದುರಿಸುವ  ಕಲಿಕೆಗೆ ಕಾಲೇಜು ರಂಗಭೂಮಿ ಸಾಕಷ್ಟು ಕೊಡುಗೆ ನೀಡಿದ್ದು, ಅದನ್ನು ಪೋಷಿಸಬೇಕು ಎಂದು ರಂಗ ಸಂಘಟಕ ಪ್ರೊ.ಎಸ್‌.ಹಾಲಪ್ಪ ಹೇಳಿದರು.

ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣ ಶಿವಮೊಗ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ‘ಕಾಲೇಜು ರಂಗೋತ್ಸವ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

1950 ಮತ್ತು 60ರ ದಶಕಗಳಲ್ಲಿ ಕಾಲೇಜು ರಂಗಭೂಮಿ ನೀಡಿದ ಕೊಡುಗೆ ಅಪಾರ. ಈ ಕ್ಷೇತ್ರದಲ್ಲಿ ಅಂದು ನಡೆದ ಪ್ರಯೋಗಗಳು ಮುಂದೆ ಹವ್ಯಾಸಿ ರಂಗಭೂಮಿಯಲ್ಲಿ ಕ್ರಾಂತಿಯನ್ನೇ ಮಾಡಿದವು. ಹೊಸ ನಾಟಕಗಳು, ನಿರ್ದೇಶಕರು, ನಟ–ನಟಿಯರು ರೂಪುಗೊಂಡರು ಎಂದು ಸ್ಮರಿಸಿದರು.

ಈಗ ಕಾಲೇಜುಗಳಲ್ಲಿ ನಾಟಕ ಕಲೆಯನ್ನು ಪೋಷಿಸುವವರೇ ಇಲ್ಲವಾಗಿ ದ್ದಾರೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾಗಿರುವ ರಂಗಭೂಮಿಯನ್ನು ಪುನರುತ್ಥಾನಗೊಳಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ಲೇಖಕ ಬಾ.ಮ.ಬಸವರಾಜಯ್ಯ ಮಾತನಾಡಿ, ಟೆಲಿವಿಷನ್‌  ಮಾಧ್ಯಮದಿಂದಾಗಿ ಅಭಿರುಚಿ ಹದಗೆಟ್ಟಿದೆ. ರಂಗಭೂಮಿಯಿಂದ ಮಾತ್ರ ಸದಭಿರುಚಿ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

‘ರಂಗಸಜ್ಜಿಕೆಯೇ ರಂಗಭೂಮಿಯ ಮೊದಲ ಹೆಜ್ಜೆ. ವಿದ್ಯಾರ್ಥಿಗಳು ರಂಗಭೂಮಿಯ ನೇಪಥ್ಯದಲ್ಲಿ ಕೆಲಸ ಮಾಡಿದರೆ ಜೀವನದಲ್ಲೂ ಶಿಸ್ತು ಕಲಿಯಲು ಸಾಧ್ಯ’ ಎಂದರು.

ಲೇಖಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ‘ವೃತ್ತಿರಂಗಭೂಮಿ ಉಳಿವಿಗೆ ರಂಗಾಯಣದ ರೀತಿಯಲ್ಲಿ ವೃತ್ತಿ ನಾಟಕ ಶಾಲೆ ಆರಂಭಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಲ್ಲದೇ, ಶಿವಮೊಗ್ಗ ಮತ್ತು ಕಲಬುರ್ಗಿ ರಂಗಾಯಣಗಳ ನಿರ್ದೇಶಕರ ಹುದ್ದೆ ಬಹುದಿನಗಳಿಂದ ಖಾಲಿ ಇದ್ದು, ಸರ್ಕಾರ ಶೀಘ್ರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಅರ್ಥವಾಗುವ ನಾಟಕ ಆಡಿ: ಪತ್ರಕರ್ತ ಬಿ.ಎನ್‌.ಮಲ್ಲೇಶ್ ಮಾತನಾಡಿ, ‘ಜನರಿಗೆ ಅರ್ಥವಾಗುವ ನಾಟಕಗಳನ್ನು ಪ್ರದರ್ಶಿಸಿದರೆ ರಂಗಭೂಮಿಗೆ ಪ್ರೋತ್ಸಾಹ ಇದ್ದೇ ಇದೆ’ ಎಂದು ಪ್ರತಿಪಾದಿಸಿದರು.

‘ಯಾವುದೇ ಊರಿನ ಸಾಂಸ್ಕೃತಿಕ ಆರೋಗ್ಯವನ್ನು ಗುರುತಿಸಬೇಕಾದರೆ ಅಲ್ಲಿನ ರಂಗಭೂಮಿ, ಸಾಹಿತಿ–ಕಲಾವಿದ ರನ್ನು ಗಮನಿಸಬೇಕು’ ಎಂದರು.
‘ರಂಗಭೂಮಿ ಚಳವಳಿ ನಿರಂತರವಾದದ್ದು; ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಕ್ರಿಯವಾಗಿದೆ. ಆದರೆ, ಹೊಸ, ನಟ, ನಟಿಯರು ಬರುತ್ತಿಲ್ಲ. ಅಂತಹ ಕೆಲಸ ಕಾಲೇಜು ರಂಗಭೂಮಿಯಿಂದ ಸಾಧ್ಯವಾಗ ಬೇಕಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಬಿಆರ್‌ ಡ್ರಾಮಾ ಕಂಪೆನಿ ಮಾಲೀಕ ಚಿಂದೋಡಿ ಚಂದ್ರಧರ ಮಾತನಾಡಿ, ವಿದ್ಯಾಭ್ಯಾಸ ಪ್ರತಿಯೊಬ್ಬರಿಗೆ ಅಗತ್ಯ, ಉದ್ಯೋಗ ಸಿಗುವವರೆಗೂ ಆಸಕ್ತರು ರಂಗಭೂಮಿಯಲ್ಲಿ ತೊಡಗಿ ಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ವೈಯಕ್ತಿಕ ಬದುಕಿನ ಬೇಸರ ಕಳೆಯುವುದರ ಜತೆಗೆ ಉಪ ಜೀವನ ನಡೆಸುವುದಕ್ಕೂ ರಂಗಭೂಮಿಯನ್ನು ವಿದ್ಯಾರ್ಥಿಗಳು ಆಧಾರ ವಾಗಿಟ್ಟುಕೊಳ್ಳಬೇಕು ಎಂದರು. ನಂತರ ವಿವಿಧ ಕಾಲೇಜು ವಿದ್ಯಾರ್ಥಿಗಳು ನಾಟಕ ಹಾಗೂ ಜಾನಪದ ನೃತ್ಯ ಪ್ರದರ್ಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಕಾಲೇಜು ರಂಗೋತ್ಸವ ಜಿಲ್ಲಾ ಸಂಚಾಲಕ ಎಸ್‌.ಎಸ್.ಸಿದ್ದರಾಜು ನಿರೂಪಿಸಿದರು.

*
ನಾಟಕ ಎಂದರೆ ಸುಳ್ಳಿಗೆ ದೂರವಾಗಿ, ಸತ್ಯಕ್ಕೆ ಹತ್ತಿರವಾಗಿ ಈ ಮಧ್ಯೆ ನಡೆಯುವ ಪ್ರಕ್ರಿಯೆ.
–ಚಿಂದೋಡಿ ಚಂದ್ರಧರ,
ಮಾಲೀಕ, ಕೆಬಿಆರ್‌ ಡ್ರಾಮಾ ಕಂಪೆನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT