ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಸಾಂಕ್ರಾಮಿಕ ರೋಗದಿಂದ ತತ್ತರ

ಒಂದೇ ದಿನ 10 ಜನರಲ್ಲಿ ಎಚ್1ಎನ್‌1 ಸೋಂಕು ಪತ್ತೆ
Last Updated 8 ಫೆಬ್ರುವರಿ 2017, 6:16 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ಗಂಭೀರ ಸಾಂಕ್ರಾಮಿಕ ರೋಗಗಳಾದ ಎಚ್‌1ಎನ್‌1, ಮಂಗನ ಕಾಯಿಲೆ ಪ್ರಕರಣ ತಾಲ್ಲೂಕಿನಲ್ಲಿ ಹೆಚ್ಚುತ್ತಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಒಂದೆಡೆ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಕ್ಸೆ–ಕೆಂಜಿಗುಡ್ಡೆ ಗ್ರಾಮದ ಕುಡುಪ (65) ಮಂಗನ ಕಾಯಿಲೆಗೆ ಮಂಗಳವಾರ ಬಲಿ ಯಾಗಿ ದ್ದಾರೆ. ಇನ್ನೊಂದೆಡೆ ಜೆಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ 10 ರೋಗಿಗಳಿಗೆ ಎಚ್‌1ಎನ್‌1 ಸೋಂಕು ತಗುಲಿ ರುವುದು ಮಂಗಳವಾರ ದೃಢಪಟ್ಟಿದೆ.

ಮಣಿಪಾಲದ ರೋಗಾಣು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿದ್ದ 24 ರೋಗಿಗಳ ರಕ್ತದ ಮಾದರಿಯಲ್ಲಿ 10 ಜನರಲ್ಲಿ ಎಚ್‌1ಎನ್‌1 ರೋಗ ಇರುವುದು ಪತ್ತೆಯಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ 36 ಮಂದಿಯಲ್ಲಿ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಕಾಯಿಲೆ ಸಾಂಕ್ರಾಮಿಕ ವಾಗಿರುವುದರಿಂದ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಡಲಾಗುತ್ತಿದೆ.

ತಾಲ್ಲೂಕಿನ ಹೊನ್ನೇತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರಳಿ ಗ್ರಾಮದ ನಾಗೇಶ್‌ ಫೆಬ್ರುವರಿ 4ರಂದು ಈ ರೋಗಕ್ಕೆ ಬಲಿಯಾಗಿದ್ದರು. ಈಗ ಈ ಕಾಯಿಲೆ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ವ್ಯಾಪಿಸಿದೆ.

ತಾಲ್ಲೂಕಿನ ಗುತ್ತನಹಳ್ಳಿ, ಆರಗ, ಅರಳಸುರಳಿ, ಕುಡುಮಲ್ಲಿಗೆ, ಮಹಿಷಿ, ದಬ್ಬಣಗದ್ದೆ, ಹಾರೇಗೊಪ್ಪ ಸೇರಿದಂತೆ ಪಟ್ಟಣದ ಕೆಸಿ ರಸ್ತೆಯ ನಿವಾಸಿಗಳಲ್ಲೂ ಎಚ್‌1ಎನ್‌1 ರೋಗ ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.

ನೂರು ಹಾಸಿಗೆಯ ಜೆಸಿ ಆಸ್ಪತ್ರೆ ರೋಗಿಗಳಿಂದ ಬಹುತೇಕ ಭರ್ತಿ ಯಾಗಿದೆ. ಎಚ್‌1ಎನ್‌1 ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಇದು ಅಂಟು ರೋಗವಾಗಿರುವ ಕಾರಣ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸ ಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಎಚ್‌1ಎನ್‌1 ರೋಗ ತಗುಲದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್‌ ತಿಳಿಸಿದರು.

ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ಗ್ರಾಮಸ್ಥರು, ನಾಳೆ ತಾಲ್ಲೂಕಿನ ಹಾರೋಗೊಳಿಗೆ, ಕುರುವಳ್ಳಿ ಭಾಗದಿಂದ ರೋಗಿಗಳು ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ್ದಾರೆ. ರೋಗಿಗಳು ಆಸ್ಪತ್ರೆಗೆ ಬರುವ ಸಂಖ್ಯೆ ಗಮನಿಸಿದರೆ ಹೆಚ್ಚಿನ ವೈದ್ಯಕೀಯ ಸೌಲಭ್ಯದ ಅಗತ್ಯವಿದೆ’ ಎಂದು ಆಸ್ಪತ್ರೆ ವೈದ್ಯರು ಅಭಿಪ್ರಾಯಪಡುತ್ತಾರೆ.

ಬೇಸಿಗೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ರೋಗದ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ. ಜ್ವರ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ವೈದ್ಯಕೀಯ ಸಿಬ್ಬಂದಿ ಸಲಹೆ ನೀಡಿದ್ದಾರೆ.

ರಕ್ತ ಪರೀಕ್ಷೆ ಮಾಡುವ ಪ್ರಯೋಗಾಲಯದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚು ಒತ್ತಡ ಸೃಷ್ಟಿಯಾಗಿದೆ. ನಿಗದಿತ ಸಮಯದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಯಿಲೆ ತೀವ್ರತೆ ಇರುವುದರಿಂದ ಆರೋಗ್ಯ ಇಲಾಖೆ ತಕ್ಷಣವೇ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಎಚ್‌1ಎನ್‌1 ರೋಗ ಹರಡುತ್ತಿರುವುದರಿಂದ ಜ್ವರ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವ ಬಗ್ಗೆ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ರೋಗ ಪೀಡಿತ ವಿದ್ಯಾರ್ಥಿಗಳು ಶಾಲೆಗೆ ಹೋಗು ವುದರಿಂದ ಇತರ ವಿದ್ಯಾರ್ಥಿಗಳಿಗೂ ರೋಗ ಹರಡುವ ಸಾಧ್ಯತೆ ಇದೆ ಎಂದು ಪೋಷಕರು ತಿಳಿಸಿದ್ದಾರೆ.

ಕೆಎಫ್‌ಡಿ ವಾರ್ಡ್‌ನಲ್ಲಿ 10 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್‌1ಎನ್‌1 ರೋಗಕ್ಕೆ ಸಂಬಂಧಿಸಿದಂತೆ 4 ಹಾಸಿಗೆಯ ವಾರ್ಡ್‌ ಬಳಕೆ ಮಾಡಿಕೊಳ್ಳಲಾಗಿದೆ. ಮಂಗನ ಕಾಯಿಲೆ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
– ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT