ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಭದ್ರತೆಯಲ್ಲಿ ತರಗತಿಗಳು ಆರಂಭ

ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪೊಲೀಸರ ಗಸ್ತು * ಬುರ್ಖಾ, ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಹಾಜರು
Last Updated 8 ಫೆಬ್ರುವರಿ 2017, 6:19 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮವಸ್ತ್ರ ವಿವಾದದಿಂದಾಗಿ ಮೂರು ದಿನಗಳಿಂದ ರಜಾ ಘೋಷಣೆಯಾಗಿದ್ದ ನಗರದ ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ತರಗತಿಗಳು ಮಂಗಳವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ಪುನರಾರಂಭಗೊಂಡವು.

ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈಚೆಗೆ ಬುರ್ಖಾ, ಸಮವಸ್ತ್ರ ವಿಚಾರ ವಿವಾದಕ್ಕೆ ಕಾರಣವಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ನೀಡಲಾಗಿತ್ತು. ಕಾಲೇಜು ಸುತ್ತಮುತ್ತ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ನಗರದ ಇತರೆ ಕಾಲೇಜುಗಳಲ್ಲಿಯೂ ಪರಿಸ್ಥಿತಿ ತಿಳಿಯಾದಂತೆ ಕಂಡುಬಂದಿತು.

ಭಾರಿ ಸಂಖ್ಯೆಯಲ್ಲಿ ಪೊಲೀಸ್ ವಾಹನಗಳು ಕಾಲೇಜು ಆವರಣದಲ್ಲಿ ಬೀಡುಬಿಟ್ಟಿದ್ದವು. ಕಾಲೇಜು ಪ್ರವೇಶ ದ್ವಾರದ ಬಳಿ ಪೊಲೀಸರು ಪ್ರತಿ ವಿದ್ಯಾರ್ಥಿಯನ್ನು ತಪಾಸಣೆ ಗೊಳಪಡಿಸಿದರು.ಗುರುತಿನ ಚೀಟಿ ಇದ್ದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ದೊರೆಯಿತು. ಇತರೆ ದಿನಗಳಿಗೆ ಹೋಲಿಸಿದರೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು.

ಕಳೆದ ಶನಿವಾರ ಜಿಲ್ಲಾಡಳಿತ ಮತ್ತು ಕಾಲೇಜು ಆಡಳಿತದ ನಡುವೆ ನಡೆದ ಸಭೆಯ ತೀರ್ಮಾನದಂತೆ ವಿದ್ಯಾರ್ಥಿಗಳು ಸಮವಸ್ತ್ರದ ಮೇಲೆ ಕೇಸರಿ ಶಾಲು ಅಥವಾ ಬುರ್ಖಾ ಧರಿಸಿ ಬರಲು ಅವಕಾಶ ನೀಡಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದರೆ, ಇನ್ನೂ ಕೆಲ ವಿದ್ಯಾರ್ಥಿಗಳು ಸಮವಸ್ತ್ರದ ಮೇಲೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನೂರಾರು ಪೊಲೀಸ್ ಸಿಬ್ಬಂದಿಯೊಂದಿಗೆ ಕಾಲೇಜು ಆವರಣದಲ್ಲಿ ಹಾಜರಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದರು.

ಈ ಮಧ್ಯೆ ಪೊಲೀಸರು ಸಹ್ಯಾದ್ರಿ ಕಾಲೇಜು ಆಡಳಿತ ವರ್ಗಕ್ಕೆ ನೊಟೀಸ್ ನೀಡಿದ್ದು, ಕಾಲೇಜು ಆವರಣದಲ್ಲಿ ಹೊರಗಿನ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸುವ ಜತೆಗೆ ಶಾಂತಿ ಕಾಪಾಡಲು ಸಮವಸ್ತ್ರ ಕಡ್ಡಾಯವಾಗಿ ಪಾಲಿಸಬೇಕು. ಅಹಿತಕರ ಘಟನೆ ಸಂಭವಿಸಿದಲ್ಲಿ, ಕಾಲೇಜು ಆಡಳಿತವನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೂರ್ವವಲಯ ಐಜಿಪಿ ಸಲೀಂ ಮಂಗಳವಾರ ನಗರಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಸಮವಸ್ತ್ರ ಮುಂದುವರಿಕೆ: ಪ್ರಾಂಶುಪಾಲ ಬಿ.ಸಿ.ಗೌಡರ್
ಜಿಲ್ಲಾಡಳಿತದ ಸಮಕ್ಷಮದಲ್ಲಿ ನಡೆದ ಸಭೆಯ ತೀರ್ಮಾನದಂತೆ ಕಾಲೇಜಿನಲ್ಲಿ ಸಮವಸ್ತ್ರ ಮುಂದುವರಿಸಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳು ಸಮವಸ್ತ್ರದ ಮೇಲೆ ಬುರ್ಖಾ ಅಥವಾ ಕೇಸರಿ ಶಾಲು ಧರಿಸಿ ಬರಲು ಅವಕಾಶ ನೀಡಲಾಗಿದೆ ಎಂದು ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸಿ. ಗೌಡರ್ ಶಿವಣ್ಣನವರ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ನಿಯಮ ಕಾಲೇಜಿನಲ್ಲಿ 2 ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ಆದರೆ, ಇದಕ್ಕೆ ವಿವಿ ಅಥವಾ ಸರ್ಕಾರದ ಅನುಮತಿ ಪಡೆದಿರಲಿಲ್ಲ. ಕಾಲೇಜು ಆಡಳಿತ ಮಂಡಳಿ ತೀರ್ಮಾನದಂತೆ ಪಾಲಿಸಿಕೊಂಡು ಬರಲಾಗುತ್ತಿದೆ ಎಂದರು.

ವಿದ್ಯಾರ್ಥಿನಿಯರು ತರಗತಿಯಲ್ಲಿ ಬುರ್ಖಾ ತೆಗೆಯುವಂತೆ ಈ ಹಿಂದೆ ಕೇಳಲಾಗಿತ್ತು. ಆದರೆ, ಕೆಲ ಕುಟುಂಬದವರು ಕಾಲೇಜು ಪ್ರವೇಶಾತಿ ಸಂದರ್ಭದಲ್ಲಿಯೇ ಈ ವಿಷಯ ತಿಳಿಸಿದ್ದರೆ ಕಾಲೇಜಿಗೆ ದಾಖಲು ಮಾಡುತ್ತಿರಲಿಲ್ಲ ಎಂದು ಹೇಳಿದ್ದರಿಂದ ಅವಕಾಶ ನೀಡಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಗ್ಗೆ ಪೋಷಕರಿಂದ ಒಪ್ಪಿಗೆ ಪತ್ರ ಪಡೆದ ನಂತರವೇ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದರು.   ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ತೆರಳಿರುವ ಅಧ್ಯಾಪಕರಿಗೆ ಹಿಂತಿರುಗುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT