ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ವಿಧಾನಸೌಧದಲ್ಲಿ ವಿ.ವಿ ಆಡಳಿತ ಕಚೇರಿ

ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ಕುಮಾರ್‌ ಕಾಮಗಾರಿ ಪರಿಶೀಲನೆ
Last Updated 8 ಫೆಬ್ರುವರಿ 2017, 6:27 IST
ಅಕ್ಷರ ಗಾತ್ರ

ಕೋಲಾರ: ‘ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆಗೊಂಡು ಘೋಷಣೆಯಾಗಿರುವ ಬೆಂಗಳೂರು ಉತ್ತರ ವಿ.ವಿಯ ಆಡಳಿತ ಕಚೇರಿಯು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಕಾರ್ಯಾರಂಭ ಮಾಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು.

ಮಿನಿ ವಿಧಾನಸೌಧ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, ವಿಶ್ವವಿದ್ಯಾಲಯದ ಆಡಳಿತಾತ್ಮಕ ಕಚೇರಿಗೆ ಅಗತ್ಯವಿರುವ ಕೊಠಡಿಗಳ ಸಂಬಂಧ ನೂತನ ವಿ.ವಿಯ ವಿಶೇಷಾಧಿಕಾರಿಗಳ ಜತೆ ಚರ್ಚೆ ನಡೆಸಿ ಮಾತನಾಡಿದರು.

ನೂತನ ವಿ.ವಿಯ ಆಡಳಿತ ಕಚೇರಿಯಲ್ಲಿ ಉಪ ಕುಲಪತಿಗೆ 2 ಕೊಠಡಿ ಸೇರಿದಂತೆ ವಿವಿಧ ವಿಭಾಗಗಳಿಗೆ ಒಟ್ಟು 38 ಕೊಠಡಿಗಳು ಬೇಕು ಎಂದು ವಿ.ವಿ ವಿಶೇಷಾಧಿಕಾರಿ ಕೆಂಪರಾಜ್ ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಮಿನಿ ವಿಧಾನಸೌಧ ಕಟ್ಟಡದ ಮೂರನೇ ಮಹಡಿಯಲ್ಲಿ ತಾತ್ಕಾಲಿಕ ಕಚೇರಿಗೆ ಅವಕಾಶ ಮಾಡಿ ಕೊಡುತ್ತೇವೆ. ಕೊಠಡಿ ದೊಡ್ಡದಿದ್ದರೆ  ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಜತೆ ಚರ್ಚಿಸಿ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳಲ್ಲಿ ತರಗತಿ ನಡೆಸಿ. ಒಟ್ಟಾರೆ ಮುಂದಿನ ಶೈಕ್ಷಣಿಕ ವರ್ಷದಿಂದ ಕೋಲಾರದಲ್ಲಿ ವಿ.ವಿ ತರಗತಿಗಳು ಆರಂಭವಾಗಬೇಕು ಎಂದು ಹೇಳಿದರು.

ಮಿನಿ ವಿಧಾನಸೌಧ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಬಾರದು. ಏ.1ಕ್ಕೆ ಕೊಠಡಿಗಳನ್ನು ವಿ.ವಿಗೆ ಹಸ್ತಾಂತರಿಸಬೇಕು. ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಆಡಳಿತ ಕಚೇರಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಮಿನಿ ವಿಧಾನಸೌಧ ಕಾಮಗಾರಿಗೆ ಇನ್ನೂ ₹ 80 ಲಕ್ಷ ಅಗತ್ಯವಿರುವ ಸಂಗತಿಯನ್ನು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮುನಿಆಂಜಪ್ಪ ಸಚಿವರ ಗಮನಕ್ಕೆ ತಂದಾಗ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಅನುಮಾನ ಬೇಡ: ಅಧಿಕಾರಿಗಳ ಜತೆ ಚರ್ಚೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ಕುಮಾರ್‌, ‘ನೂತನ ವಿ.ವಿಯ ಕ್ಯಾಂಪಸ್ ನಿರ್ಮಾಣ ಆಗುವವರೆಗೆ ತಾತ್ಕಾಲಿಕವಾಗಿ ಮಿನಿ ವಿಧಾನಸೌಧ ಕಟ್ಟಡದಲ್ಲಿ ವಿ.ವಿ ಆಡಳಿತ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ. ಈ ಕಚೇರಿಗೆ ಎಲ್ಲಾ ಸೌಕರ್ಯ ಕಲ್ಪಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಲಿವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.

ವಿ.ವಿಯ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಕ್ರಾಸ್ ಬಳಿ ಜಮೀನಿನ ಹಸ್ತಾಂತರ ಸಂಬಂಧ ಕಂದಾಯ ಸಚಿವರ ಜತೆ ಫೆ.9ರಂದು ಚರ್ಚೆ ನಡೆಸಲಾಗುತ್ತದೆ. ಅಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಜರಿರುತ್ತಾರೆ. ಫೆ.9ರಂದೇ  ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಜಿಲ್ಲೆಯ ಮಿನಿ ವಿಧಾನಸೌಧದಲ್ಲಿ ವಿ.ವಿ ಆಡಳಿತ ಕಚೇರಿ ಆರಂಭಿಸುವ ಬಗ್ಗೆ ವರ್ತೂರು ಪ್ರಕಾಶ್ ಜತೆ ಚರ್ಚಿಸುತ್ತೇನೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಸಿ.ಎನ್‌.ಮಂಜುನಾಥ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಇದ್ದರು

ಮನೆ  ನಿರ್ಮಾಣಕ್ಕೆ  ಹೂಹಳ್ಳಿ  ಗ್ರಾಮಸ್ಥರ ಮನವಿ
ಕೋಲಾರ:
ಗ್ರಾಮದ 4.9 ಎಕರೆ ಜಾಗದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೂಹಳ್ಳಿ ಗ್ರಾಮಸ್ಥರು ಮಂಗಳವಾರ   ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ನಗರದಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥ ಶ್ರೀನಿವಾಸ್‌ ಮಾತನಾಡಿ, ‘ಹೂಹಳ್ಳಿ ಗ್ರಾಮದಲ್ಲಿ ಸುಮಾರು ಮಂದಿ ನಿವೇಶನ ಮತ್ತು ಮನೆಯಿಲ್ಲದೆ ಗೂಡಿಸಲಲ್ಲಿ ವಾಸ ಮಾಡುತ್ತಿದ್ದಾರೆ. 

ಗ್ರಾಮದ ಸರ್ವೆ ನಂ.68ರಲ್ಲಿ 4.9 ಎಕರೆ  ಜಮೀನು ಇದ್ದು, ಅದನ್ನು ಭೂ ಪರಿವರ್ತನೆ ಮಾಡಿ ಹೊಸ ಬಡಾವಣೆಯನ್ನು ನಿರ್ಮಿಸಿ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಶಾಲೆಗೆ ಆಟದ ಮೈದಾನ ಸೇರಿದಂತೆ ಇತರೆ ಸಾರ್ವಜನಿಕ ಅನುಕೂಲತೆಗಳಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ರಮೇಶ್‌ ಕುಮಾರ್, ಶೀಘ್ರದಲ್ಲೇ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಕೂಡಲೇ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಮಂಜುನಾಥ್‌ಗೆ ಸೂಚಿಸಿದರು.

ಗ್ರಾಮಸ್ಥರಾದ ಮುನಿವೆಂಕಟಮ್ಮ, ನೀಲಮ್ಮ, ಗಂಗಮ್ಮ, ಮುನಿಯಮ್ಮ, ವೆಂಕಟಮ್ಮ, ರಾಮಕ್ಕ, ಶಶಿಕಲಾ, ಸವಿತಾ, ಮುನಿಲಕ್ಷ್ಮಮ್ಮ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT