ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ಮುಚ್ಚಲು ಆದೇಶ

ನಾಲ್ಕು ವರ್ಷ ಕಳೆದರೂ ನಿವೇಶನ ಕೊಡದ ಜಿಲ್ಲಾ ಆಡಳಿತ, ಆಸಕ್ತಿ ವಹಿಸದ ಉಸ್ತುವಾರಿ ಸಚಿವ
Last Updated 8 ಫೆಬ್ರುವರಿ 2017, 7:33 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವು ಫೆಬ್ರುವರಿ ಅಂತ್ಯದಲ್ಲಿ ಶಾಶ್ವತವಾಗಿ ಬಾಗಿಲು ಮುಚ್ಚಲಿದೆ. ವಿಶ್ವವಿದ್ಯಾಲಯದ ಕುಲಸಚಿವರು ಕೇಂದ್ರವನ್ನು  ರದ್ದುಗೊಳಿಸಿ ಆದೇಶ ಹೊರಡಿಸಿದ್ದು, ಫೆ. 6ರಂದು ಇಲ್ಲಿನ ಕಚೇರಿ ಅಧೀಕ್ಷಕರ ಕೈಸೇರಿದೆ.

ರಾಜ್ಯದ 21 ಜಿಲ್ಲೆಗಳಲ್ಲಿ  ಕರಾಮುವಿವಿ ಪ್ರಾದೇಶಿಕ ಕೇಂದ್ರಗಳಿವೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ನಾಲ್ಕು ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕ ಕೇಂದ್ರಗಳನ್ನು ಮಾತ್ರ ಮುಚ್ಚಲು ಆದೇಶ ಹೊರಡಿಸಲಾಗಿದೆ. ಫೆಬ್ರುವರಿ 28ರೊಳಗೆ  ಬೀದರ್‌ ಕಚೇರಿಯಲ್ಲಿರುವ ಪುಸ್ತಕ ಸಾಮಗ್ರಿ, ಪೀಠೋಪಕರಣ, ಅಲ್ಮೇರಾಗಳನ್ನು ಕಲಬುರ್ಗಿ ಕಚೇರಿಗೆ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ.

ಪ್ರಾದೇಶಿಕ ಕೇಂದ್ರಕ್ಕೆ ನಿವೇಶನ ಮಂಜೂರು ಮಾಡುವಂತೆ ವಿಶ್ವವಿದ್ಯಾಲಯದ ಕುಲಸಚಿವರು 2015ರ ಜನವರಿ 29, ಫೆಬ್ರುವರಿ 26 ಹಾಗೂ ಪ್ರಾದೇಶಿಕ ಕೇಂದ್ರದ ನಿರ್ದೇಶಕರು 2016ರ ಆಗಸ್ಟ್ 16ರಂದು ಜಿಲ್ಲಾ ಆಡಳಿತಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಉಮಾಶ್ರೀ ಹಾಗೂ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೂ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ ಪ್ರಯೋಜನ ಆಗಿಲ್ಲ.

ನಾಲ್ಕು ವರ್ಷ ಕಳೆದರೂ ಜಾಗ ಸಿಗದ ಕಾರಣ ಹಾಗೂ ಬಾಡಿಗೆ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯು ಜನವರಿ 10ರಂದು ಪ್ರಾದೇಶಿಕ ಕೇಂದ್ರವನ್ನು ಮುಚ್ಚಲು ಒಪ್ಪಿಗೆ ಸೂಚಿಸಿದೆ. ಜನವರಿ 20 ರಂದು ಕುಲಪತಿ ಅನುಮೋದನೆ ನೀಡಿದ್ದಾರೆ.

ಬೀದರ್‌ನಲ್ಲಿ ಪ್ರಾದೇಶಿಕ ಕೇಂದ್ರದಲ್ಲಿ ನಿರ್ದೇಶಕರು ಹಾಗೂ ಕಚೇರಿ ಅಧೀಕ್ಷಕರು ಮಾತ್ರ ಇದ್ದರು. ಕಳೆದ ವರ್ಷ ನಿರ್ದೇಶಕರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗ ಮಾಡಲಾಗಿದೆ. ಕಚೇರಿಯಲ್ಲಿ ಅಧೀಕ್ಷಕರು ಬಿಟ್ಟರೆ ಬೇರೆ ಸಿಬ್ಬಂದಿ ಇಲ್ಲ.

ಇಲ್ಲಿ ಪ್ರಾದೇಶಿಕ ಕೇಂದ್ರ ಆರಂಭವಾದ ಮೇಲೆ ಒಟ್ಟು 904 ಅಭ್ಯರ್ಥಿಗಳು ಇಲ್ಲಿ ನೋಂದಣಿ ಮಾಡಿಕೊಂಡು ಬಾಹ್ಯ ಪರೀಕ್ಷೆ ಬರೆದಿದ್ದಾರೆ. 2013–2014ರಲ್ಲಿ 314, 2014–2015 ರಲ್ಲಿ 421 ಹಾಗೂ 2015–2016ರಲ್ಲಿ 173 ಅಭ್ಯರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೂಲಸೌಕರ್ಯಗಳ ಕೊರತೆ,  ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಳಿಸಿರುವುದು, ಹೆಚ್ಚಿದ ನಿರ್ವಹಣಾ ವೆಚ್ಚ ಹಾಗೂ 500ಕ್ಕಿಂತ ಕಡಿಮೆ ಪ್ರವೇಶಾತಿ ಹೊಂದಿರುವುದು ಸಹ ಕೇಂದ್ರ ಮುಚ್ಚಲು ಕಾರಣವಾಗಿದೆ.

ಗಡಿ ಪ್ರದೇಶದ ಬಡ ವಿದ್ಯಾರ್ಥಿಗಳು ಕನ್ನಡದಲ್ಲಿ ಬಾಹ್ಯ ಪರೀಕ್ಷೆ ಬರೆದು ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ಬೀದರ್‌ ಪ್ರಾದೇಶಿಕ ಕೇಂದ್ರ ಅನುಕೂಲವಾಗಿತ್ತು. ಬೀದರ್‌ ನಗರದಲ್ಲಿ ನಿವೇಶನ ಕೊರತೆ ಇಲ್ಲ. 74 ಉದ್ಯಾನಗಳು ಅತಿಕ್ರಮಣಗೊಂಡರೂ ಜಿಲ್ಲಾ ಆಡಳಿತ ಮೌನವಾಗಿದೆ. ಶೈಕ್ಷಣಿಕ ಉದ್ದೇಶಕ್ಕೆ ಜಾಗ ಲಭ್ಯವಿದ್ದರೂ ಮಂಜೂರು ಮಾಡದಿರುವುದು ದುರಂತ.

ರಾಜ್ಯ ಸರ್ಕಾರ, ಕನ್ನಡದ ಅಭಿವೃದ್ಧಿಗೆ ಪೂರಕವಾದ ಅಂಶಗಳಿಗೆ ಮಹತ್ವ ನೀಡುತ್ತಿಲ್ಲ. ಗಡಿ ಕನ್ನಡಿಗರ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಹೇಳುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ.

ಕಾಂಗ್ರೆಸ್‌ ಸರ್ಕಾರ ಬೀದರ್ ಜಿಲ್ಲೆಯನ್ನು ಕಡೆಗಣಿಸುತ್ತ ಬಂದಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಶಿಕ್ಷಣ ಪಡೆಯುವುದು ಗಗನ ಕುಸುಮವಾಗಿದೆ. ಸರ್ಕಾರ ತಕ್ಷಣ ಕೆಎಸ್‌ಯು ಪ್ರಾದೇಶಿಕ ಕೇಂದ್ರಕ್ಕೆ ನಿವೇಶನ ಮಂಜೂರು ಮಾಡಬೇಕು. ಬೀದರ್‌ನಲ್ಲಿ ಪ್ರಾದೇಶಿಕ ಕೇಂದ್ರ ಮುಂದುವರಿಯುವಂತೆ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ ಒತ್ತಾಯಿಸುತ್ತಾರೆ.

ಸೋಮವಾರ ಕುಲಸಚಿವರಿಂದ ಆದೇಶ ಬಂದಿದೆ. ಎರಡು ವಾರಗಳಲ್ಲಿ ಕಚೇರಿ ಸಾಮಗ್ರಿಗಳನ್ನು ಕಲಬುರ್ಗಿ ಪ್ರಾದೇಶಿಕ ಕಚೇರಿಗೆ ಸ್ಥಳಾಂತರಿಸಲಾಗುವುದು. ಇಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ವಿದ್ಯಾರ್ಥಿಗಳ ನೋಂದಣಿ, ಪರೀಕ್ಷಾ ಮಾಹಿತಿ ಪುಸ್ತಕ ವಿತರಣೆ, ಪಠ್ಯ ಸಾಮಗ್ರಿ ವಿತರಣೆ, ಪ್ರಾಯೋಗಿಕ ಪಾಠ ಬೋಧನೆ ಮಾಡಲಾಗುತ್ತಿತ್ತು.

ಕರ್ನಾಟಕ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಇನ್ನು ಬಾಹ್ಯ ಪರೀಕ್ಷೆ ಬರೆಯಲಿಚ್ಛಿಸುವವರು ಕಲಬುರ್ಗಿಗೆ ಹೋಗಬೇಕಾಗಲಿದೆ ಎಂದು ಪ್ರಾದೇಶಿಕ ಕೇಂದ್ರದ ಅಧೀಕ್ಷಕ ಸತೀಶ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಹ್ಯ ಪರೀಕ್ಷೆ  ಬರೆದು ಉತ್ತಮ ಅಂಕ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಶಿಷ್ಯವೇತನ ಮಂಜೂರು ಮಾಡಿದೆ. ವಿಶ್ವವಿದ್ಯಾಲಯ ಶಿಷ್ಯವೇತನ ಮಂಜೂರು ಮಾಡಿದರೂ ಕೆಲವರಿಗೆ ಶಿಷ್ಯ ವೇತನ ಕೊಟ್ಟಿಲ್ಲ. ಪರಿಶಿಷ್ಟ ವಿದ್ಯಾರ್ಥಿಗಳ ಶಿಷ್ಯ ವೇತನದ ಹಣ ಎಲ್ಲಿ ಹೋಗಿದೆ ಎನ್ನುವ ಕುರಿತು ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಕೊಡಿಸಬೇಕು ಎಂದು  ಎಂದು ಹೇಳುತ್ತಾರೆ ಬಹುಜನ ವಿದ್ಯಾರ್ಥಿ ಸಂಘದ ಪ್ರದೀಪ ನಾಟೆಕರ್.

*
ಜಿಲ್ಲಾ ಕೇಂದ್ರಗಳಲ್ಲಿ ಸ್ವಂತ ಕಟ್ಟಡ ಇಲ್ಲದ ಪ್ರಾದೇಶಿಕ ಕೇಂದ್ರಗಳನ್ನು ಮುಚ್ಚಲು ಕರಾಮುವಿವಿ ಆದೇಶ ನೀಡಿದೆ. ಎರಡು ವಾರಗಳಲ್ಲಿ ಬೀದರ್‌ನ ಪ್ರಾದೇಶಿಕ ಕೇಂದ್ರದ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ.
-ಸತೀಶ ಕುಲಕರ್ಣಿ, ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT