ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಸ್ಥಳಾಂತರಕ್ಕೆ ವಿರೋಧ

ಸದಸ್ಯರ ಪರ– ವಿರೋಧ ಅಭಿಪ್ರಾಯ; ನಿರ್ಧಾರಕ್ಕೆ ಬಾರದ ಸಭೆ
Last Updated 8 ಫೆಬ್ರುವರಿ 2017, 7:44 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದಲ್ಲಿರುವ ಪುರಸಭೆ ಕಚೇರಿಯನ್ನು ಹೊರವಲಯದ ಖಾಲಿ ಇರುವ ಸಣ್ಣ ನೀರಾವರಿ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಿಸುವ ಸಂಬಂಧ ಮಂಗಳವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದರೂ ಸದಸ್ಯರ ಪರ ವಿರೋಧ ಅಭಿಪ್ರಾಯದಿಂದ  ನಿರ್ಣಯ ತೆಗೆದುಕೊಳ್ಳಲು ಸಭೆ ವಿಫಲವಾಯಿತು.

ಇಲ್ಲಿನ ಪುರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಉಪಟಳ ಹೆಚ್ಚಾಗಿದೆ. ಸ್ಥಳಾಂತರ ಸೂಕ್ತ. ಆದರೆ ಸಾರ್ವಜನಿಕರ ಅನುಕೂಲಕ್ಕೆ ಕಚೇರಿ ಇರಬೇಕು. ಹೊರವಲಯಕ್ಕೆ ಸ್ಥಳಾಂತರಿಸಿದರೆ ಎರಡು ಕೀಮೀ ದೂರವಾಗುತ್ತದೆ.

ಜನರು ಹೆದ್ದಾರಿಯ ಸಂಚಾರ ದಟ್ಟಣೆಯಲ್ಲಿ ಬಂದು ಹೋಗುವ ಅನಿವಾರ್ಯತೆ ಎದುರಾಗಿ ಕಷ್ಟ ಎದುರಿಸಬೇಕಾಗುತ್ತದೆ. ಸ್ಥಳಾಂತರದಿಂದ ಜನರಿಗೆ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಯಿತು.

ಸದ್ಯ ಇರುವ ಪುರಸಭೆ ಕಚೇರಿ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದರೆ ಒಳ್ಳೆಯದು ಎಂಬ ಸದಸ್ಯರ ಅಭಿಪ್ರಾಯಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧ್ಯಕ್ಷ ಕಲ್ಲೇಶ ತಾಳದ ಅವರು, ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು. ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. ಹಾಗಾಗಿ ಆಲಮಟ್ಟಿ ಜಲಾಶಯದಿಂದ ಬರುವ ನೀರು ಪೋಲಾಗದಂತೆ ಸಮರ್ಪಕ ಪೂರೈಕೆಯತ್ತ ಗಮನಹರಿಸುವಂತೆ ಹೇಳಿದರು.

ಪಟ್ಟಣದಲ್ಲಿ ಅರ್ಧದಷ್ಟು ಅಕ್ರಮ ನಲ್ಲಿ ಸಂಪರ್ಕ ಇದ್ದು ಠೇವಣಿ ಪಡೆದು ಅಕ್ರಮ ನಲ್ಲಿಗಳನ್ನು ಸಕ್ರಮಗೊಳಿಸಲು ಸಭೆ ಸಮ್ಮತಿಸಿತು. ಕುಡಿಯುವ ನೀರಿನ ಕಾಮಗಾರಿಗಾಗಿ ಸದ್ಯ ಕೇವಲ ₨20 ಲಕ್ಷ ಹಣ ಇದೆ.

ಕೆಯುಡಬ್ಲೂಎಸ್‌ಗೆ ₨60 ಲಕ್ಷ ಬಾಕಿ ಪಾವತಿಸಬೇಕಿದೆ ಎಂದು ಮುಖ್ಯಾಧಿಕಾರಿ ಸತೀಶ್‌ ಚೌಡಿ ಸಭೆ ಗಮನಕ್ಕೆ ತಂದರು. 14ನೇ ಹಣಕಾಸು ಯೋಜನೆಯಡಿ ಮೀಸಲಿರುವ ₨21 ಲಕ್ಷ ಹಣ ಬಳಕೆಗೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡುವ ಬಗ್ಗೆ ಸಭೆ ನಿರ್ಧರಿಸಿತು.

ನಗರೋತ್ಥಾನ ಯೋಜನೆಯ 3ನೇ ಹಂತದ ಕಾಮಗಾರಿಗಳಿಗೆ ₨7.50 ಕೋಟಿ ಅನುದಾನ ಬಂದಿದ್ದು ಶೇ85ರಷ್ಟು ಹಣವನ್ನು ನೀರು ಪೂರೈಕೆ ಕೆಲಸಗಳಿಗೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. 1ನೇ ವಾರ್ಡ್‌ ಮತ್ತು 8 ರಿಂದ 23ನೇ ವಾರ್ಡ್‌ಗಳಲ್ಲಿ ವಾರದಲ್ಲಿ ದಿನ 24 ಗಂಟೆ ನೀರು ಪೂರೈಕೆ ಇರುವಂತೆ ನೋಡಿಕೊಳ್ಳಲು ಕ್ರಿಯಾಯೋಜನೆ ತಯಾರಿಸುವ ಸಂಬಂಧ ಕೆಯುಡಬ್ಲೂಎಸ್ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಅಧಿಕಾರಿಗಳಿಗೆ ಸೂಚಿಸಿತು.

ವೈಯಕ್ತಿಕ ಕಾರ್ಯಕ್ರಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವಂತೆ ಕೆಲವು ಸದಸ್ಯರು ಒತ್ತಡ ಹೇರುತ್ತಿದ್ದಾರೆ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾತ್ರ ಟ್ಯಾಂಕರ್‌ ನೀರು ನೀಡಲಾಗುವುದು ಎಂದು ಮುಖ್ಯಾಧಿಕಾರಿ ನೀಡಿದ ಸ್ಪಷ್ಟನೆಗೆ ಅಧ್ಯಕ್ಷ ಕಲ್ಲೇಶ ಸೇರಿ ಅನೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಸಂತೆ ಮೈದಾನದಲ್ಲಿ ಬಯಲು ರಂಗ ಮಂದಿರ ನಿರ್ಮಾಣ, ಮಾರುಕಟ್ಟೆ ಅಭಿವೃದ್ಧಿ, ಸಮರ್ಪಕ ನೈರ್ಮಲ್ಯ ನಿರ್ವಹಣೆಗೆ ದೂಳು ಹೀರುವ ಯಂತ್ರ ಖರೀದಿ ಮತ್ತು ಜೆಸ್ಕಾಂ ಪಕ್ಕದ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಲು ಟೆಂಡರ್‌ ಕರೆಯುವ ಬಗ್ಗೆ ಸಭೆ ನಿರ್ಧರಿಸಿತು. ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT