ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಕ್ಕು’ ಚಿತ್ರಕ್ಕೆ ಪ್ರಶಂಸೆಯ ಮಹಾಪೂರ

ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಹಬ್ಬ; ಪ್ರೇಕ್ಷಕರ ಮನಗೆದ್ದ ಹಲವು ಚಲನಚಿತ್ರ
Last Updated 8 ಫೆಬ್ರುವರಿ 2017, 7:56 IST
ಅಕ್ಷರ ಗಾತ್ರ

ಮೈಸೂರು: ಬೆಕ್ಕಿನ ಮನಸ್ಸಿನಂತೆ ಮನುಷ್ಯನ ಮನಸ್ಸನ್ನು ಅರ್ಥ ಮಾಡಿ ಕೊಳ್ಳುವುದು ಕಷ್ಟ... ಸಂಕೀರ್ಣ, ಗೊಂದಲಮಯ... ಇನ್ನು ಕಾವಿಯುಟ್ಟು ಸನ್ಯಾಸಿಯಾದವ ಲೌಕಿಕ ಜೀವನದ ಎಲ್ಲ ಆಸೆಗಳನ್ನೂ ತ್ಯಜಿಸಿರಬೇಕು; ಸನ್ಯಾಸಿ ಯೊಬ್ಬ ಕಾಮಕ್ಕೆ ಸಿಲುಕಿ, ಅದರಿಂದ ಆಚೆ ಬರಲು ಪರಿತಪಿಸುವ ತಲ್ಲಣ ಹೇಗಿರುತ್ತದೆ...?

ಇದು, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಬೆಕ್ಕು’ ಚಿತ್ರದಲ್ಲಿ ಮೂಡುವ ಪ್ರಶ್ನೆ. ನಗರದ ಮಾಲ್‌ ಆಫ್‌ ಮೈಸೂರಿನ ಐನಾಕ್ಸ್‌ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಐದನೇ ದಿನವಾದ ಮಂಗಳವಾರ ಕನ್ನಡ ಚಿತ್ರಗಳು ಪ್ರದರ್ಶನಗೊಂಡು ಗಮನ ಸೆಳೆದವು. ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರಗಳೆ ರಡೂ  ಪ್ರೇಕ್ಷಕರ ಮನಗೆದ್ದವು.

ಕುಮಾರ ಗೋವಿಂದು ನಿರ್ಮಾಣ ಹಾಗೂ ನಟನೆಯ ‘ಬೆಕ್ಕು’ ಚಿತ್ರ ಪ್ರಮುಖ ವಾಗಿ ಗಮನ ಸೆಳೆಯಿತು. ‘ಆತ್ಮಾನಂದ ಸ್ವಾಮೀಜಿ’ಯ ಪಾತ್ರ ನಿರ್ವಹಿಸಿರುವ ಗೋವಿಂದು ಕಾವಿ ಉಟ್ಟರೂ, ಮನಸ್ಸಿ ನಲ್ಲಿ ಕಾಮ ಹೊಂದಿರುತ್ತಾರೆ. ಹೆಣ್ಣಿಗಾಗಿ ಆಸೆಪಟ್ಟು ನಂತರ ತಪ್ಪಿನ ಅರಿವಾಗಿ ಪರಿತಪಿಸುವ ಕತೆ ಈ ಚಿತ್ರದ್ದು. ಇಬ್ಬರು ಹೆಣ್ಣಿನ ಮಧ್ಯೆ ಸಿಲುಕುವ ಸನ್ಯಾಸಿ (ಶೀಲಾ– ನಟಿ ಭಾವನಾ, ಸುಜಾತಾ– ನಟಿ ವೈಷ್ಣವಿ) ಕಥೆಯಿದು.

ಚಿತ್ರಪ್ರದರ್ಶನ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾ ಡಿದ ಕುಮಾರ ಗೋವಿಂದು, ‘ಕಲಾಚಿತ್ರ ಗಳನ್ನು ನಿರ್ಮಿಸುವುದು ನನ್ನ ಅಚ್ಚು ಮೆಚ್ಚಿನ ಹವ್ಯಾಸ. ಇದರಿಂದ ಲಾಭ–ನಷ್ಟಗಳ ಚಿಂತನೆ ಮಾಡುವುದಿಲ್ಲ. ಲಾಭಕ್ಕಾಗಿ ನನಗೆ ಬೇರೆ ಕ್ಷೇತ್ರಗಳಿವೆ. ಕನ್ನಡಿಗರು ಉತ್ತಮ ಸಂದೇಶ ಇರುವ ಚಿತ್ರ ವೀಕ್ಷಿಸಿ, ಸಮಾಜದ ಬಗ್ಗೆ ಒಳಿತು ಚಿಂತಿಸಿದರಷ್ಟೇ ಸಾಕು’ ಎಂದು ಪ್ರತಿಕ್ರಿಯಿಸಿದರು.

‘ಕಲಾಚಿತ್ರ ನಿರ್ಮಿಸಿದರೆ ಅವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಮುಟ್ಟು ವುದಿಲ್ಲವಲ್ಲ’ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಗೋವಿಂದು, ‘ಬರಗೂರು ರಾಮಚಂದ್ರಪ್ಪ ಅವರು ಚಿತ್ರ ನಿರ್ದೇಶಿ ಸುವುದಾಗಿ ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ವಾಣಿಜ್ಯ ಚಿತ್ರಗಳನ್ನೂ ನಾನು ನಿರ್ಮಿಸಿದ್ದೇನೆ. ಅದರಿಂದ ಲಾಭವನ್ನೂ ಪಡೆದಿದ್ದೇನೆ. ಕಲಾತ್ಮಕ ಚಿತ್ರಗಳು ಪ್ರೇಕ್ಷಕರನ್ನು ಮುಟ್ಟು ವುದಿಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ’ ಎಂದರು.

‘ಬೆಕ್ಕು’ ಚಿತ್ರದ ಬೆನ್ನಲ್ಲೇ ಮತ್ತೊಂದು ಕಲಾತ್ಮಕ ಚಿತ್ರವನ್ನೂ ನಿರ್ಮಿಸಿದ್ದೇನೆ. ‘ಅಲೆಮಾರಿಯ ಆತ್ಮಕತೆ’ ಹೆಸರಿನ ಈ ಚಿತ್ರಕ್ಕೂ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ‘ಕಂದ’ ಚಿತ್ರ ಪ್ರದರ್ಶನ ಕಂಡಿತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಯುವತಿ ಕುರಿತ ಈ ಚಿತ್ರಕ್ಕೂ ಪ್ರಶಂಸೆ ವ್ಯಕ್ತವಾಯಿತು. ನಿರ್ಮಾಪಕ ರಾಜಕುಮಾರ್‌ ಸಂವಾದದಲ್ಲಿ ಭಾಗವಹಿಸಿದ್ದರು. ವಾಣಿಜ್ಯ ಚಿತ್ರಗಳಾದ ದೊಡ್ಮನೆ ಹುಡುಗ, ಜಗ್ಗುದಾದ, ಕೋಟಿಗೊಬ್ಬ 2, ಸಂತೆಯಲ್ಲಿ ನಿಂತ ಕಬೀರ ಚಿತ್ರಗಳು ಪ್ರೇಕ್ಷಕರಿಂದ ತುಂಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT