ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುತ್ವದ ಕೋರೆಗಳ ನಡುವೆ ನರಳುವ ಪ್ರಜೆ

Last Updated 8 ಫೆಬ್ರುವರಿ 2017, 9:19 IST
ಅಕ್ಷರ ಗಾತ್ರ
ADVERTISEMENT

ಸಿನಿಮಾ– ದ ನೆಟ್‌
ನಿರ್ದೇಶಕ– ಕಿಮ್‌ ಕಿ ಡುಕ್‌
ದೇಶ– ದಕ್ಷಿಣ ಕೊರಿಯಾ
ಅವಧಿ– 114 ನಿಮಿಷ

––––––––––
ಬೆಂಗಳೂರು: ಜಗತ್ತಿನಲ್ಲಿನ ಎಲ್ಲ ಬಗೆಯ ಪ್ರಭುತ್ವಗಳೂ ಮನುಷ್ಯನ ಸುರಕ್ಷತೆ ಮತ್ತು ನೆಮ್ಮದಿಯನ್ನು ಉದ್ದೇಶವಾಗಿಟ್ಟುಕೊಂಡೇ ಹುಟ್ಟಿದವು. ಆದರೆ  ಕಾಲಾನಂತರವ ಅವೇ ಪ್ರಭುತ್ವಗಳು ಮನುಷ್ಯನನ್ನು ತನ್ನ ಅಧೀನದಲ್ಲಿರಿಸಿಕೊಳ್ಳಲು ಯಾವ ಕ್ರೌರ್ಯಕ್ಕೂ ಹೇಸದ ಹಾಗೆ ವಿಕಾರಗೊಂಡಿದೆ. ಮನುಷ್ಯನಿಗಾಗಿಯೇ ಹುಟ್ಟಿಕೊಂಡ ಧರ್ಮ, ದೇಶದಂಥ ಘಟಕಗಳು ಅವನನ್ನು ಮೀರಿ ಬೆಳೆದು ಕೊನೆಗೆ ಅವನನ್ನೇ ಬಲಿ ಪಡೆದುಕೊಳ್ಳುವ ವಿಪರ್ಯಾಸದ ಕಾಲದಲ್ಲಿ ನಾವಿದ್ದೇವೆ.

ದೇಶಭಕ್ತಿ, ಯುದ್ಧ, ಭಯೋತ್ಪಾದನೆಗಳು ಬೇರೆ ಬೇರೆ ಮುಖವಾಡಗಳನ್ನು ಧರಿಸಿ ಮಾಡುತ್ತಿರುವುದು ಅದನ್ನೇ. ನಿಸರ್ಗದತ್ತವಾಗಿ ಬಂದ ನೆಲ–ಜಲದ ನಡುವೆ ಗಡಿರೇಖೆ ಹಾಕಿಕೊಂಡು ಅದರ ಆಚೆ ನಿಂತುಕೊಂಡರೆ ದೇಶದ್ರೋಹಿ ಈಚೆ ನಿಂತರೆ ದೇಶಭಕ್ತ, ಆಚೆ ಸತ್ತರೆ ಹತ ಈಚೆ ಸತ್ತರೆ ಹುತಾತ್ಮ ಎಂದೆಲ್ಲ ಉದ್ಘೋಷಿಸುವುದೇ ಮನುಷ್ಯತ್ವದ ಬಹುದೊಡ್ಡ ಕುಚೋದ್ಯ ಅಲ್ಲವೇ? ನಿಜಕ್ಕೂ ಮಾನವರಿಗೆ–ಮಾನವೀಯತೆಗೆ ಗಡಿ ಹಾಕಿ ಬೇರ್ಪಡಿಸಲು ಸಾಧ್ಯವೇ? ಹಾಗೆ ಮಾಡುತ್ತೇವೆಂದು ಹೊರಡುವುದು ಸಾಧುವೇ?

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಂಗಳವಾರ ಪ್ರದರ್ಶನಗೊಂಡ ಕಿಮ್‌ ಕಿ ಡುಕ್‌ ನಿರ್ದೇಶನದ ‘ದ ನೆಟ್‌’ ಸಿನಿಮಾ ಇಂಥ ಹಲವು ಪ್ರಶ್ನೆಗಳ ಅಲೆಯನ್ನು ಮನಸ್ಸಿನಲ್ಲಿ ಎಬ್ಬಿಸುತ್ತದೆ. ಮನಸ್ಸನ್ನು ಕಲಕಿ ಮತ್ತೆ ಮತ್ತೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಒತ್ತಾಯಿಸುತ್ತದೆ.

ದಕ್ಷಿಣ ಕೊರಿಯಾ ದೇಶದ ಕಿಮ್‌ ಕಿ ಡುಕ್‌ ಸಮಕಾಲೀನ ಜಗತ್ತಿನ ಶ್ರೇಷ್ಠ ಸಿನಿಮಾ ನಿರ್ದೇಶಕರಲ್ಲಿ ಒಬ್ಬ. ಅವರಿಗೆ ಸಿನಿಮಾ ಕಥೆ ಹೇಳುವ ಒಂದು  ಮಾಧ್ಯಮವಷ್ಟೇ ಅಲ್ಲ. ಬದುಕಿನ ಶೋಧನೆಯ ಮಾರ್ಗವೂ ಹೌದು. ಈ ಶೋಧನೆಯ ದಾರಿಯಲ್ಲಿ ಸಿನಿಮಾ ಮಾಧ್ಯಮದ ಹಲವು ಭಿನ್ನ ಸಾಧ್ಯತೆಗಳನ್ನು ತೆರೆದಿಟ್ಟ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ತನ್ನದೇ ಸಿನಿಮಾ ಮೀಮಾಂಸೆ ಕಟ್ಟಿಕೊಂಡೂ ಅವನು ಒಂದು ಮಾದರಿಗೆ ಕಟ್ಟುಬೀಳುವವರಲ್ಲ. ಅವರ ಪ್ರತಿಯೊಂದು ಸಿನಿಮಾವೂ ಒಂದಕ್ಕಿಂತ ಇನ್ನೊಂದು ಅಚ್ಚರಿಗೊಳಿಸುವಷ್ಟು ಭಿನ್ನ. ‘3 ಐರನ್‌’, ‘ದ ಐಲ್‌;, ‘ಸ್ಪ್ರಿಂಗ್‌ ಸಮ್ಮರ್‌ ಫಾಲ್‌ ವಿಂಟರ್‌ ಆ್ಯಂಡ್‌ ಸ್ಟ್ರಿಂಗ್‌’, ‘ಸಮರಿಟಾ ಗರ್ಲ್‌’ ಹೀಗೆ ಪ್ರತಿಯೊಂದು ಸಿನಿಮಾದಲ್ಲಿಯೂ ವಸ್ತು, ವಿಷಯ ಮತ್ತು ಅದನ್ನು ಹೇಳುವ ಕ್ರಮ ಎಲ್ಲವೂ ಹೊಸದೇ ಆಗಿರುತ್ತದೆ. ಆದ್ದರಿಂದ ಕಿಮ್‌ ಡಿ ಡುಕ್‌ ಹೊಸ ಸಿನಿಮಾ ಮಾಡಿದ್ದಾರೆ ಎಂದರೆ ಅವರ ಬಗ್ಗೆ ತಿಳಿದಿರುವವರೆಲ್ಲ ಹೊಸತಾಗಿ ಏನು ಹೇಳಿರಬಹುದು ಎಂದು ಕುತೂಹಲದಿಂದ ಕಾಯುತ್ತಾರೆ. 2016ರಲ್ಲಿ ಕಿಮ್‌ ಕಿ ಡುಕ್‌ ನಿರ್ದೇಶಿಸಿದ ಸಿನಿಮಾ ‘ದ ನೆಟ್‌’.

ಈ ಸಲ ಕಿಮ್‌ ಕಿ ಡುಕ್‌ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ವೈಷಮ್ಯದ ರಾಜಕೀಯ ಕಥನವನ್ನು ಆಯ್ದುಕೊಂಡಿದ್ದಾರೆ. ಅವರ ಬಹುತೇಕ ಎಲ್ಲ ಸಿನಿಮಾಗಳಲ್ಲಿ ಇರುವಂತೆ ಇಲ್ಲಿಯೂ ಕಥೆ ಎಂಬುದು ಸಿನಿಮಾದ ಶರೀರ ಅಷ್ಟೆ. ಶರೀರದ ಮೂಲಕವೇ ಅದಕ್ಕೆ ಅತೀತವಾದ ಶಾರೀರವನ್ನು ಪ್ರೇಕ್ಷಕನ ಮನಸಲ್ಲಿ ರಿಂಗಣಿಸುತ್ತಾ ಹೋಗುವುದು ಅವರ ಶೈಲಿ. ಇಲ್ಲಿಯೂ ಅದು ಮುಂದುವರಿದಿದೆ. ಹೇಳುವ ಕಥೆಯು ಕಣ್ಮುಂದೆ ಓಡುತ್ತಿರುವಂತೆ ಹೇಳದ ಕಥನವೊಂದು ಮನಸ್ಸಿನಲ್ಲಿ ಒಂದಕ್ಕೊಂದು ಸೇರಿಕೊಂಡು ‘ಕಾಣ್ಕೆ’ಗೊಳ್ಳುತ್ತಾ ಹೋಗುತ್ತದೆ.
ನಮ್ ಚುಲ್‌ ವೂ ಉತ್ತರ ಕೊರಿಯಾ ದೇಶದ ಬಡ ಮೀನುಗಾರ. ದಿನದಿನ ಮೀನು ಹಿಡಿದು ಮಾರಿ ತನ್ನ ಹೆಂಡತಿ ಮತ್ತು ಮುದ್ದು ಮಗಳನ್ನು ಸಾಕುವವ. ತನ್ನ ದೇಶದ ಬಗೆಗೆ, ಅಲ್ಲಿನ ಪ್ರಭುತ್ವದ ಬಗೆಗೆ ಅಪಾರ ಗೌರವ, ಭಕ್ತಿ ಇರಿಸಿಕೊಂಡಿರುವವ. ಹಾಗೆಯೇ ಉತ್ತರ ಕೊರಿಯಾದ ಎಲ್ಲರಂತೆ ದಕ್ಷಿಣ ಕೊರಿಯಾ ದೇಶದ ಬಗೆಗೆ ದ್ವೇಷವೂ ಅವನಲ್ಲಿದೆ. ಒಂದು ದಿನ ಅವನು ಮೀನು ಹಿಡಿಯಲು ಹೋಗಿದ್ದಾಗ ಬಲೆ ಬೋಟಿನ ಯಂತ್ರಕ್ಕೆ ಸಿಲುಕಿ ಕೆಟ್ಟುಬಿಡುತ್ತದೆ. ಆಕಸ್ಮಿಕವಾಗಿ ಅವನು ದಕ್ಷಿಣ ಕೊರಿಯಾದ ಗಡಿಯೊಳಗೆ ಪ್ರವೇಶಿಸಿಬಿಡುತ್ತಾನೆ. ಅಲ್ಲಿಂದ ಅವನ ಬದುಕಿನ ಗತಿಯೇ ಬದಲಾಗಿಬಿಡುತ್ತದೆ.

ಅಕ್ರಮವಾಗಿ ಗಡಿಪ್ರವೇಶಿಸಿದ ಬೇಹುಗಾರನಿರಬಹುದು ಎಂಬ ಅನುಮಾನದ ಮೇಲೆ ದಕ್ಷಿಣ ಕೊರಿಯಾದ ಸೈನಿಕರು ಅವನನ್ನು ಬಂಧಿಸುತ್ತಾರೆ. ಅಲ್ಲಿ ಅವನು ಅತ್ಯಂತ ಕ್ರೂರ ಹಿಂಸಾತ್ಮಕ ವಿಚಾರಣೆ ಎದುರಿಸಬೇಕಾಗುತ್ತದೆ. ಕೊನೆಗೂ ಅವನು ನಿರಪರಾಧಿ ಎಂದು ಮರಳಿ ತನ್ನ ದೇಶಕ್ಕೆ ಬಂದರೆ ಇಲ್ಲಿಯೂ ಅವನು ತನ್ನದೇ ದೇಶದ ಸೈನಿಕರಿಂದ ಅನುಮಾನಕ್ಕೊಳಗಾಗಿ ಅಷ್ಟೇ ಕ್ರೂರ ವಿಚಾರಣೆ ಎದುರಿಸಬೇಕಾಗುತ್ತದೆ.

ಸಾಮಾನ್ಯ ನಿರಪರಾಧಿಯ ದುರಂತ ಕತೆಯನ್ನು ಹೇಳುತ್ತ ಡುಕ್‌, ಪ್ರಭುತ್ವ, ದೇಶಭಕ್ತಿ, ಸ್ವಾತಂತ್ರ್ಯದ ಅರ್ಥ, ಭೋಗದ ಲಾಲಸೆ ಇಂಥ ಹಲವು ಸಂಗತಿಗಳ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಾರೆ. ಅವರ ಉಳಿದ ಸಿನಿಮಾಗಳಿಗೆ ಹೋಲಿಸಿದರೆ ತುಸು ವಾಚ್ಯವಾಗಿಯೇ ಅವುಗಳನ್ನು ಹೇಳಿದ್ದಾರೆ.

ಪ್ರಜಾಪ್ರಭುತ್ವ, ಸ್ವತಂತ್ರ ದೇಶ ಎಂದು ಹೇಳಿಕೊಳ್ಳುವ ದಕ್ಷಿಣ ಕೊರಿಯಾದಲ್ಲಿ ದೇಹ ಮಾರಿಕೊಂಡು ಬದುಕಬೇಕಾದ ಹೆಣ್ಣುಮಗಳು ಅಲ್ಲಿನ ಸ್ವಾತಂತ್ರ್ಯದ ಪೊಳ್ಳುತನದ ಕುರುಹಾಗಿ ಕಾಣುತ್ತಾಳೆ. ತಾನು ಅಖಂಡವಾಗಿ ದ್ವೇಷಿಸುವ ದೇಶದ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಲಾಗದ ಅವಳ ರಕ್ಷಣೆಗೆ ಹೋಗುವ ನಮ್ ಚುಲ್‌ ವೂ ಗಡಿಮೀರಿದ ಮಾನವೀಯತೆಯ ರೂಪಕವಾಗಿ ನಿಲ್ಲುತ್ತಾನೆ.
ತಾನು ಅತಿಯಾಗಿ ಭಕ್ತಿಯಿಂದ ಕಾಣುವ ತನ್ನ ದೇಶವೇ ತನ್ನನ್ನು ಅನುಮಾನದಿಂದ ಕಾಣುವಾಗ ಅವನಿಗೆ ದೇಶಭಕ್ತಿಯ ಭ್ರಮೆ, ಪ್ರಭುತ್ವದ ಮುಖವಾಡ ಎರಡೂ ಒಟ್ಟಿಗೇ ಪರಿವಿಗೆ ಬರುತ್ತದೆ.

ಎರಡು ಭಿನ್ನ ಪ್ರಭುತ್ವಗಳ ಹರಿತ ಕೋರೆಗಳ ಮಧ್ಯೆ ಸಿಲುಕಿಕೊಳ್ಳುವ ಸಾಮಾನ್ಯ ಮನುಷ್ಯನ ಪಾಡನ್ನು ಕಿಮ್‌ ಕಿ ಡುಕ್‌ ‘ದ ನೆಟ್‌’ನಲ್ಲಿ ಹೇಳಿದ್ದಾರೆ.

‘ಇಷ್ಟು ದಿನ ನನ್ನ ಬಲೆಯಲ್ಲಿ ಸಾಕಷ್ಟು ಮೀನುಗಳು ಸಿಲುಕಿಕೊಳ್ಳುತ್ತಿದ್ದವು. ಆದರೆ ಇಂದು ನನ್ನ ಬಲೆಗೆ ನಾನೇ ಸಿಲುಕಿಕೊಂಡಿದ್ದೇನೆ’ ಎಂಬ ನಮ್‌ ಚುಲ್‌ ವೂ ಮಾತೂ ಇದನ್ನೇ ಧ್ವನಿಸುತ್ತದೆ. ಎರಡೂ ದೇಶಗಳಿಗೆ ತನ್ನ ಘನತೆ ಮತ್ತು ಎದುರಾಳಿ ದೇಶದ ಮೇಲಿನ ದ್ವೇಷವೇ ಮುಖ್ಯವೇ ಹೊರತು ಮನುಷ್ಯ ಅಲ್ಲವೇ ಅಲ್ಲ.

ಇದು ಬರಿ ದಕ್ಷಿಣ– ಉತ್ತರ ಕೊರಿಯಾ ದೇಶಗಳ ದ್ವೇಷದ ಕತೆಯಷ್ಟೇ ಅಲ್ಲ. ಪ್ರಭುತ್ವದ ಕ್ರೌರ್ಯಕ್ಕೆ ಕಾಲ– ದೇಶಗಳ ಹಂಗಿಲ್ಲ. ಅದು ಸರ್ವಕಾಲಿಕ ಮತ್ತು ಸಾರ್ವತ್ರಿಕ. ಈಗ ನಮ್ಮ ದೇಶದಲ್ಲಿ ಬಹುಚರ್ಚೆಯಲ್ಲಿರುವ ದೇಶಭಕ್ತಿಯ ಸಾಬೀತುಗೊಳಿಸುವುದು, ದೇಶದ್ರೋಹದ ನಿರ್ಣಯ ಈ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿಯೂ ಈ ಸಿನಿಮಾ ನಮಗೆ ಸಂಬಂಧಿಸಿಕೊಳ್ಳುತ್ತಾ ಹೋಗುತ್ತದೆ. ಆದ್ದರಿಂದಲೇ ಈ ಸಿನಿಮಾದಲ್ಲಿ ಬರುವ ಗಡಿಯ ಆಚೀಚೆಯ ದೇಶಗಳನ್ನು ಭಾರತ ಮತ್ತು ಪಾಕಿಸ್ತಾನ ಎಂದುಕೊಂಡರೆ ನಮ್ಮನ್ನೇ ನಾವು ಕಾಣಬಹುದು.

ಮರುಪ್ರದರ್ಶನದ ವಿವರಗಳು

‘ದ ನೆಟ್‌’ ಸಿನಿಮಾ ಚಿತ್ರೋತ್ಸವದ ಕೊನೆಯ ದಿನ (ಫೆ.09) ಮರುಪ್ರದರ್ಶನವಾಗಲಿದೆ. ಆಸಕ್ತರು ಒರಾಯನ್‌ ಮಾಲ್‌ನ ನಾಲ್ಕನೇ ಪರದೆಯಲ್ಲಿ ಮಧ್ಯಾಹ್ನ 2.20ಕ್ಕೆ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT