ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಸದಾಶಿವ ವರದಿ ಜಾರಿಗೆ ವಿರೋಧ

ಇಂಡಿ ಪಟ್ಟಣದಲ್ಲಿ ನಡೆದ ಬೃಹತ್‌ ಮೆರವಣಿಗೆ; ಸಚಿವರಿಂದ 101 ಪರಿಶಿಷ್ಟ ಜಾತಿಗಳಿಗೆ ಅನ್ಯಾಯ: ಆರೋಪ
Last Updated 8 ಫೆಬ್ರುವರಿ 2017, 9:12 IST
ಅಕ್ಷರ ಗಾತ್ರ

ಇಂಡಿ: ರಾಜ್ಯದಲ್ಲಿರುವ ಒಂದೇ ಜಾತಿಯ ಸಲುವಾಗಿ 101 ಪರಿಶಿಷ್ಠ ಜಾತಿ ಜನರನ್ನು ನರಕದ ಕೂಪಕ್ಕೆ ತಳ್ಳುತ್ತಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಜಾರಿ ಮಾಡಬಾರದೆಂದು ಆಗ್ರಹಿಸಿ, ಮಂಗಳವಾರ ಇಂಡಿ ಪಟ್ಟಣದಲ್ಲಿ ಬಂಜಾರ, ಕೊರಚ, ಕೊರಮ, ವಡ್ಡರ (ಭೋವಿ) ಸಮುದಾಯದ ಸಾವಿರಾರು ಜನರು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ನಡೆಸಿದರು.

ಮೆರವಣಿಗೆ ಪಟ್ಟಣದ ಬಸವೇಶ್ವರ ವೃತ್ತ, ಡಾ, ಬಿ.ಆರ್. ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತದ ಮುಖಾಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ್ ಎಂ.ಬಿ. ನಾಗಠಾಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸಚಿವ ರೇವೂನಾಯಕ ಬೆಳಮಗಿ ಮಾತನಾಡಿ, ಅಹಿಂದ  ಹೆಸರಿನಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಇಂದು ಪರಿಶಿಷ್ಟ ಜಾತಿಯನ್ನು ಒಡೆಯುವ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ.

ಸಮಾಜ ಕಲ್ಯಾಣ ಮಂತ್ರಿ ಎಚ್, ಆಂಜನೇಯ ಅವರು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಸಮಾಜ ಕಲ್ಯಾಣ ಮಾಡದೇ ಸ್ವಜಾತಿಯ ಪ್ರತಿಷ್ಠೆಗಾಗಿ 101 ಪರಿಶಿಷ್ಟ ಜಾತಿ ಜನಾಂಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.

ಡಾ, ಬಾಬಾಸಾಹೇಬ ಅಂಬೇಡ್ಕರ್ ಅವರು  ತುಳಿತಕ್ಕೆ ಒಳಗಾದ  ಎಲ್ಲ ಸಮಾಜಕ್ಕೂ ಸಮಾನ ಸ್ಥಾನಮಾನ ನೀಡಬೇಕೆಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಹೊರತು ಒಂದೇ ಜಾತಿಗೆ ಸೀಮಿತವಿಲ್ಲ. ಇಂದು ಬಂಜಾರ, ಕೋರಂ, ವಡ್ಡರ ಸಮುದಾಯದ ಬದುಕು ಬಡತನದಲ್ಲಿದ್ದು, ಕನಿಷ್ಠ ಮಟ್ಟದ ಸೂರು ಸಹಿತ ಇಲ್ಲದೇ ಅತಂತ್ರವಾಗಿದ್ದಾರೆ.

ಸಮಾಜ ಕಲ್ಯಾಣ ಸಚಿವ ಸಮಾಜದ ಉದ್ದಾರ ಮಾಡದೇ ವಿಘಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾಶಿವ ಆಯೋಗ ಜಾರಿಮಾಡಬಾರದು ಎಂದು ಆಗ್ರಹಿಸಿದರು.

ಸರ್ಕಾರ ಸಂವಿಧಾನದ ಹಿತಾಸಕ್ತಿ ಕಾಪಾಡದೇ ಎ.ಜೆ. ಸದಾಶಿವ ಆಯೋಗ ಜಾರಿ ಮಾಡಿದರೆ ಜೀವನ್ಮರಣದ ಹಂಗು ತೊರೆದು ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಸವಣ್ಣನ ನಾಡಿನಲ್ಲಿ ಸಮತಾವಾದ ಸಿದ್ದಾಂತ ಭಾರತದ ಸಂವಿಧಾನದಲ್ಲಿದೆ. ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಸಮಾಜಕಲ್ಯಾಣ ಸಚಿವರು ಮಾಡುವುದು ತರವಲ್ಲ. ಅದ್ದರಿಂದ ಸ್ಥಳೀಯ ಶಾಸಕ  ಯಶವಂತರಾಯಗೌಡ ಪಾಟೀಲ ಅಧಿವೇಶನದಲ್ಲಿ ಸದಾಶಿವ ಆಯೋಗ ಜಾರಿ ಮಾಡಕೂಡದು ಎಂದು ಧ್ವನಿ  ಎತ್ತಬೇಕು ಮತ್ತು ಬಹು ಸಂಖ್ಯಾತ ಪರಿಶಿಷ್ಟರಿಗೆ ಅನ್ಯಾಯ ಆಗುತ್ತದೆ ಎಂದು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಮೇಲೆ ಒತ್ತಡ ಹೇರಬೇಕೆಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅರ್ಜುನ ರಾಠೋಡ ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಗುರುಗಳಾದ ಸೋಮಲಿಂಗ ಶ್ರೀಗಳು ಮಾತನಾಡಿ, ಸದಾಶಿವ ಆಯೋಗ ಕೇವಲ ಒಂದು ಐಷಾರಾಮಿ ಕೊಠಡಿಯಲ್ಲಿ ಕುಳಿತು ಮಾಡಿದ ವರದಿಯಾಗಿದ್ದು, ಸುಳ್ಳಿನ ಸರಮಾಲೆಯಾಗಿದೆಯೇ ಹೊರತು ವೈಜ್ಞಾನಿಕ ವರದಿಯಲ್ಲ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ರಾಮು ರಾಠೋಡ, ದೇವಾನಂದ ಚವ್ಹಾಣ, ರವಿ ಚವ್ಹಾಣ, ಲಿಂಬೋಜಿ ರಾಠೋಡ, ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಗಿರಣಿವಡ್ಡರ,  ಬಂಜಾರ ಕ್ರಾಂತಿದಳದ ಗೌರವಾಧ್ಯಕ್ಷ ಸಂಜೀವ ಚವ್ಹಾಣ, ವಿಜಯಕುಮಾರ ರಾಠೋಡ, ಗೋವಿಂದ ರಾಠೋಡ, ಮೋಹನ ರಾಠೋಡ, ವಿಜಯಕುಮಾರ ನಾಯ್ಕ, ಧರ್ಮು ರಾಠೋಡ, ರಂಗು ರಾಠೋಡ, ಕಸ್ತೂರಬಾಯಿ ದೊಡಮನಿ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT