ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

Last Updated 8 ಫೆಬ್ರುವರಿ 2017, 9:15 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಅಪಹರಿಸಿ, ತೀವ್ರ ಹಲ್ಲೆ ನಡೆಸಿದ್ದರಿಂದ ಬಂಕಾಪುರ ಚೌಕದ ಪರಶುರಾಮ ದೊಡ್ಡಮನಿ (40) ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕಿಮ್ಸ್‌ ಎದುರು ಸಂಬಂಧಿಕರು ಮಂಗಳವಾರ ರಾತ್ರಿ ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. 

ಹಣ್ಣಿನ ವ್ಯಾಪಾರಿಯಾಗಿದ್ದ ಪರಶುರಾಮ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದು ಅವರನ್ನು ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್‌ ಶ್ಯಾಮರಾವ್‌ ಸಜ್ಜನ ಅವರನ್ನು ಸುತ್ತುವರಿದರು.

ಈ ವೇಳೆ ಪೊಲೀಸರು ಅವರ ಮನವೊಲಿಸಲು ಯತ್ನಿಸಿದರು. ಮೃತನ ಪತ್ನಿ ಲಕ್ಷ್ಮಿ ಪರಶುರಾಮ ಮತ್ತು ಸಂಬಂಧಿಕರು ನ್ಯಾಯ ಒದಗಿಸಬೇಕು ಎಂದು ಪೊಲೀಸರ ಎದುರು ಚೀರಾಡಿದರು.

‘ಬಡ್ಡಿ ದಂದೆ ನಡೆಸುತ್ತಿರುವ ಕಿರಣ, ಮದನ ಬುಗುಡಿ, ದೊಡ್ಡೇಶ ದೊಡ್ಡಮನಿ ಎಂಬುವರು ಪತಿಯನ್ನು ಫೆ. 2ರಂದು ಅಪಹರಿಸಿ ಕರೆದೊಯ್ದು, ಕೊಠಡಿಯೊಂದರಲ್ಲಿ ಕೂಡಿಹಾಕಿ ಬೆತ್ತಲೆಗೊಳಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಬಳಿಕ ಹಳೆ ಬಸ್‌ ನಿಲ್ದಾಣದ ಬಳಿ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಪತಿ ಮಂಗಳವಾರ ಸಂಜೆ ಮೃತಪಟ್ಟರು. ಅವರ ಸಾವಿಗೆ ಹಲ್ಲೆ ನಡೆಸಿದವರೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಲಕ್ಷ್ಮಿ ಪರಶುರಾಮ ಇನ್ಸ್‌ಪೆಕ್ಟರ್‌ ಎದುರು ಕಣ್ಣೀರಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ಯಾಮರಾವ ಸಜ್ಜನ ‘ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪರಶುರಾಮ ಅವರಿಂದ ನಾವೇ ಖುದ್ದು ವಿವರ ಪಡೆದು ದೂರು ದಾಖಲಿಸಿದ್ದೇವೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಕೂಡಲೇ ಅವರನ್ನು ಬಂಧಿಸಲಾಗುವುದು. ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ’ ಎಂದು ಹೇಳಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT