ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುದ್ಧ, ಬಸವರೇ ಅಂಬೇಡ್ಕರ್‌ ತಳಹದಿ’

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ಜಯಂತ್ಯುತ್ಸವ ನಿಮಿತ್ತ ‘ಜ್ಞಾನ ದರ್ಶನ’ ಕಾರ್ಯಕ್ರಮ
Last Updated 8 ಫೆಬ್ರುವರಿ 2017, 9:31 IST
ಅಕ್ಷರ ಗಾತ್ರ

ಹಾವೇರಿ: ‘ಜಗತ್ತಿಗೆ ಶಾಂತಿ ಬೋಧಿಸಿದ್ದು ಗೌತಮ ಬುದ್ಧ. ಭೂಮಿಯ ಮೇಲೆ ಇರುವುದು ಮಾನವ ಜಾತಿ ಒಂದೇ ಹಾಗೂ ಕಾಯಕವೇ ಕೈಲಾಸ ಎಂದು ಸಾರಿದ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಡಾ.ಬಿ.ಆರ್‌.ಅಂಬೇಡ್ಕರ್ ಅವರು ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದರು’ ಎಂದು ಹಿರಿಯ ಸಾಹಿತಿ ಪ್ರೊ. ವಿರೂಪಾಕ್ಷಪ್ಪ ಕೊರಗಲ್ ನುಡಿದರು.

ಇಲ್ಲಿನ ಎಸ್‌.ಜೆ.ಎಂ ಪದವಿಪೂರ್ವ ಕಾಲೇಜಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ಜಯಂತಿ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್‌ ಅಂಬೇಡ್ಕರ್‌ ಜ್ಞಾನ ದರ್ಶನ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ‘ಡಾ.ಬಿ.ಆರ್‌ ಅಂಬೇಡ್ಕರ್‌ ಜ್ಞಾನ ದರ್ಶನ ಕಾರ್ಯಕ್ರಮ’ವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ಬಿ.ಶ್ರೀನಿವಾಸ್‌ ಮಾತನಾಡಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬರಹಗಳ ಪೈಕಿ ಕೇವಲ ಶೇ 12.8ರಷ್ಟು ಮಾತ್ರ ಈ ವರೆಗೆ ದೊರೆತಿವೆ. ಇನ್ನುಳಿದ ಶೇ 87.2ರಷ್ಟು ಬರಹಗಳು ವಿವಿಧ ಕಾರಣಗಳಿಂದ ನಾಶವಾಗಿದೆ’ ಎಂದರು.

‘ಭೂತ, ಭವಿಷ್ಯ ಹಾಗೂ ವರ್ತಮಾನಕ್ಕೆ ಅಂಬೇಡ್ಕರ್‌ ಬರವಣಿಗೆಗಳು ಅವಶ್ಯಕ. ಲಂಡನಿನ ದೊಡ್ಡ ಗ್ರಂಥಾಲಯದ ಎದುರು ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಆ ಗ್ರಂಥಾಲಯದಲ್ಲಿರುವ ಎಲ್ಲ ಪುಸ್ತಕಗಳನ್ನು ಓದಿರುವ ಏಕೈಕ ವ್ಯಕ್ತಿ ಅಂಬೇಡ್ಕರ್‌ ಎಂಬ ಕಾರಣಕ್ಕೆ ಅದನ್ನು ನಿರ್ಮಿಸಲಾಗಿದೆ’ ಎಂದರು.

‘ಭಾರತದ ಜಾತಿ ವ್ಯವಸ್ಥೆ ಮೆಟ್ಟಿಲುಗಳೇ ಇಲ್ಲದ ಅಂತಸ್ತಿನಂತಾಗಿದೆ.  ಕೆಳ ಜಾತಿಗೂ, ಮೇಲ್ಜಾತಿಗೈ ಸಂಪರ್ಕವಿಲ್ಲದಾಗಿದೆ. ದೇಶದ ಶೇ 28ರಷ್ಟು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಭೂಮಿ ಇಲ್ಲದೇ ಬದುಕುತ್ತಿದ್ದಾರೆ.  ಬ್ರಾಹ್ಮಣ, ಕ್ಷತ್ರೀಯ ಹಾಗೂ ಶೂದ್ರರರು ಸಮಾನ ಜೀವನ ನಡೆಸುವಂತಾಗಬೇಕು’ ಎಂದರು.

ಮಹಾದೇವಿ ಕಣವಿ ಮಾತನಾಡಿ, ‘ಮಹಿಳೆಯರಿಗೆ ಬದುಕಲು ಮುಖ್ಯವಾಗಿ ಬೇಕಿರುವುದು ಆತ್ಮಗೌರವ ಹಾಗೂ ಆಸ್ತಿ. ಅದನ್ನು ಅಂಬೇಡ್ಕರ್‌ ಕೊಡಿಸಲು ಯತ್ನಿಸಿದ್ದರು. ಸ್ತ್ರೀ ಧನದ ಮೇಲೆ ಮಹಿಳೆಯರಿಗೆ ಮಾತ್ರ ಹಕ್ಕಿದೆ ಎಂಬುದು ಅವರ ನಿಲುವಾಗಿತ್ತು’ ಎಂದರು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿದರು.ಮಹಾಂತೇಶ ದೊಡ್ಡಮನಿ, ಪರಮೇ ಶ್ವರಪ್ಪ ಮೆಗಳಮನಿ, ವಕೀಲ ಬಸವ ರಾಜ ಹಾದಿಮನಿ ಮಾತನಾಡಿದರು. ಹೊನ್ನಪ್ಪ ಮರೆಮ್ಮನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT