ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿಯೇ ಮಕ್ಕಳಿಗೆ ಎಂ.ಆರ್‌ ಚುಚ್ಚುಮದ್ದು

ರುಬೆಲ್ಲಾ, ದಡಾರ ಲಸಿಕಾ ಅಭಿಯಾನಕ್ಕೆ ಚಾಲನೆ; ಶತ ಪ್ರತಿಶತ ಗುರಿ ಸಾಧನೆಗೆ ಸಿದ್ಧತೆ; ಮಕ್ಕಳಿಂದ ಜನಜಾಗೃತಿ ಜಾಥಾ
Last Updated 8 ಫೆಬ್ರುವರಿ 2017, 9:48 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಪ್ರೌಢಶಾಲೆಯ ಮಕ್ಕಳಿಗೆ ಎಂ.ಆರ್‌. ಲಸಿಕೆ (ಚುಚ್ಚುಮದ್ದು) ನೀಡುವ ಮೂಲಕ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಈ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ಮಾತನಾಡಿ, ದಡಾರ ಮತ್ತು ರುಬೆಲ್ಲಾ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದರ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ. ಆಗ ಮಾತ್ರ ಸಾರ್ವಜನಿಕರಿಗೆ ಈ ಲಸಿಕೆಯ ಮಹತ್ವ ತಿಳಿಯುತ್ತದೆ.

ಈ ಲಸಿಕಾ ಅಭಿಯಾನವು ಪ್ರತಿಶತ ನೂರು ಮಕ್ಕಳನ್ನು ತಲುಪುವ ಮೂಲಕ ಪಾಶ್ಚಿಮಾತ್ಯ ದೇಶಗಳಂತೆ ಭಾರತವನ್ನು ಕೂಡ ದಡಾರ ಮತ್ತು ರುಬೆಲ್ಲಾ ರೋಗ ಮುಕ್ತ ರಾಷ್ಟ್ರವನ್ನಾಗಿ ಮಾರ್ಪಾಡು ಮಾಡಬೇಕಿದ್ದು, ಇದರ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ ಭಟ್‌ ಮಾತನಾಡಿ,

ಭಾರತವನ್ನು ದಡಾರ ಮತ್ತು ರುಬೆಲ್ಲಾ ರೋಗ ಮುಕ್ತವನ್ನಾಗಿಸಲು ಪಣ ತೊಟ್ಟಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಲ್ಲಿ ಶ್ರಮಿಸಿದೆ. ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳುವ ಜತೆಗೆ ಅದರ ಮಹತ್ವವನ್ನು ಇತರೆ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಅಶೋಕುಕುಮಾರ್ ಮಾತನಾಡಿ, ಈ ಅಭಿಯಾನವು ಇದೇ 28ರವರೆಗೆ ನಡೆಯಲಿದ್ದು, 9 ತಿಂಗಳಿಂದ 15 ವರ್ಷದೊಳಗಿನ ಜಿಲ್ಲೆಯ ಒಟ್ಟು 3,12,642 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಇದರ ಯಶಸ್ವಿಗೆ ಹಾಗೂ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಮಕ್ಕಳ ತೋಳಿಗೆ ಚುಚ್ಚುಮದ್ದು ನೀಡಲಾಗುತ್ತಿದ್ದು, ಲಸಿಕೆ ಹಾಕಿದ ಗುರುತಿಗಾಗಿ ಅವರ ಹೆಬ್ಬೆರಳಿಗೆ ನೀಲಿ ಶಾಹಿ ಹಾಕಲಾಗುತ್ತಿದೆ ಎಂದು ಹೇಳಿದರು. ಡಿಡಿಪಿಐ ರಾಮಕೃಷ್ಣ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ಉಪಸ್ಥಿತರಿದ್ದರು.

‘ಸದೃಢ ಪೀಳಿಗೆಗೆ ಸಹಕಾರಿ’
ದಾಂಡೇಲಿ:
ಸರ್ಕಾರದ ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮ ನಾಡಿನ ಭವಿಷ್ಯತ್ತಿಗಾಗಿ ಸದೃಢ ಯುವ ಪೀಳಿಗೆಯನ್ನು ಕೊಡುವಲ್ಲಿ ನೆರವಾಗಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಪಾಲಕರು ಸಹಕರಿಸಬೇಕಾಗಿ ನಗರಸಭೆಯ ಅಧ್ಯಕ್ಷ ನಾಗೇಶ ಸಾಳೊಂಕೆ ನುಡಿದರು.

ಅವರು ನಗರದ ಇ.ಎಂ.ಎಸ್ ನಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಇದೇ 28ರ ವರೆಗೆ ಹಮ್ಮಿಕೊಳ್ಳಲಾದ ಲಸಿಕಾ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ನಗರ ಸಭೆಯ ಉಪಾಧ್ಯಕ್ಷ ಅಶ್ಪಾಕ್ ಶೇಖ, ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿ, ನಗರಸಭೆ ಮಾಜಿ ಆಧ್ಯಕ್ಷೆ ಯಾಸ್ಮಿನ್ ಕಿತ್ತೂರ, ದೀಪಾ ಮಾರಿಹಾಳ, ಲಯನ್ಸ್ ಅಧ್ಯಕ್ಷ ವಿ.ಆರ್. ಹೆಗಡೆ ಉಪಸ್ಥಿತರಿದ್ದರು.

ಜನತಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಯುಜಿನ್ ಡಿವಾಸ್, ಲಯನ್ಸ್ ಕ್ಲಬ್‌ನ ಯು.ಎಸ್. ಪಾಟೀಲ, ಶಿಕ್ಷಕಿ ಉಷಾ ಗಾಯಕವಾಡ ಕಾರ್ಯಕ್ರಮ ನಡೆಸಿಕೊಟ್ಟರು.

ಚೇತನ್ ಕುಮಾರಮಠ, ಕೃಷ್ಣಾ ಲಕ್ಷ್ಮೇಶ್ವರ, ಸಿಬ್ಬಂದಿ, ಪಾಲಕರು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜನತಾ ವಿದ್ಯಾಲಯದ ಪ್ರಾಥಮಿಕ ಶಾಲೆಯಲ್ಲಿ 9ತಿಂಗಳಿನಿಂದ-5 ವರ್ಷದ ವಿಭಾಗದಲ್ಲಿ 48, 5ರಿಂದ 10 ವರ್ಷದ ವಿಭಾದಲ್ಲಿ 822, 10 ರಿಂದ 15 ವರ್ಷದ ವಿಭಾಗದ 677 ಒಟ್ಟು 1547 ವಿದ್ಯಾರ್ಥಿಗಳು ಲಸಿಕೆಯನ್ನು ಹಾಕಿಕೊಂಡಿದ್ದಾರೆ.

ರೋಗ ತಡೆಗಟ್ಟಿ
ಕುಮಟಾ:
‘ಒಂದು ಲಸಿಕೆ ಪಡೆಯುವ ಮೂಲಕ ಎರಡು ರೋಗ ತಡೆಗಟ್ಟಿ’ ಎನ್ನುವ ಘೋಷ ವಾಕ್ಯದ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಕ್ಲಬ್ ತಾಲ್ಲೂಕಿನ ಹೊಲನಗ್ದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ದಡಾರ ಹಾಗೂ ರುಬೆಲ್ಲಾ  ಲಸಿಕಾ ಕಾರ್ಯಕ್ರಮಕ್ಕೆ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಪಟಗಾರ ಚಾಲನೆ ನೀಡಿದರು.

ಎಸ್‌.ಡಿ.ಎಂ.ಸಿ ಅಧ್ಯಕ್ಷೆ ದೀಪಾ ಹಿಣಿ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಆರೋಗ್ಯ ಕಾರ್ಯಕರ್ತೆ ಜಯಲಕ್ಷ್ಮೀ ನಾಯಕ, ಆಶಾ ಕಾರ್ಯಕರ್ತೆಯರಾದ ಕಲ್ಪನಾ ನಾಯ್ಕ, ಸುಜಾತಾ ನಾಯ್ಕ, ವಿಜಯಾ ಕುಂದಗೋಳ, ಪಂಚಾಯ್ತಿ ಸದಸ್ಯರಾದ ಶಾರದಾ ಪಟಗಾರ, ಸುರೇಶ ಪಟಗಾರ ಇದ್ದರು.

ಲಸಿಕೆ ಹಾಕಿಸಿಕೊಳ್ಳಲು ವಿಶ್ವಾಸ ತುಂಬಿ
ಸಿದ್ದಾಪುರ:
ಶಿಕ್ಷಕರು, ಪಾಲಕರು ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ಲಸಿಕೆ ಹಾಕಿಸಿಕೊಳ್ಳಲು ವಿಶ್ವಾಸ ತುಂಬಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ರವಿ ಹೆಗಡೆ ಹೂವಿನಮನೆ ಹೇಳಿದರು.

ಪಟ್ಟಣದ ಬಾಲಿಕೊಪ್‍ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದ ಉದ್ಘಾಟಿನಾ ಸಮಾರಂಭದಲ್ಲಿ ಮಾತನಾಡಿದರು.

ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಿಸಿಕೊಂಡರೆ ಅಪಾಯವಾಗುವುದಕ್ಕಿಂತ ಹಾಕಿಸಿಕೊಳ್ಳದಿದ್ದರೆ ಅಪಾಯ ಜಾಸ್ತಿ. ಈ ಅಭಿಯಾನದಿಂದ ಆರೋಗ್ಯ ಕಾರ್ಯಕ್ರಮವನ್ನು ಮನೆಬಾಗಿಲಿಗೆ ತರಲಾಗುತ್ತಿದೆ. ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ತನ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ  ಈ ಅಭಿಯಾನವನ್ನು ಕೈಗೆತ್ತಿಕೊಂಡಿದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ತಾಲ್ಲೂಕಿನಲ್ಲಿ 18611 ಮಕ್ಕಳಿಗೆ ಈ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ 64 ದಡಾರ  ಕಾಯಿಲೆಯ ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ ಎಂದರು.

ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಎಂ.ಪಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಐಎಂಎಯ ಸ್ಥಳೀಯ ಘಟಕದ ಅಧ್ಯಕ್ಷ ಡಾ. ಎಸ್‌.ಆರ್‌. ಹೆಗಡೆ,  ಬಿಇಒ ಡಿ.ಆರ್‌. ನಾಯ್ಕ, ಆರೋಗ್ಯ ಇಲಾಖೆಯ ಆರ್‌.ವಿ.ಮಡಿವಾಳ,  ಲಯನ್ಸ್ ಕ್ಲಬ್‌ನ ಪ್ರಶಾಂತ ಶೇಟ್ ಮತ್ತಿತರರು ಉಪಸ್ಥಿತರಿದ್ದರು.ತಾಲ್ಲೂಕು ಪಂಚಾಯ್ತಿ ಇಒ ಎಸ್‌.ವಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ.ಎಸ್‌. ಗೌಡರ್ ಸ್ವಾಗತಿಸಿದರು. ಎಂ.ವಿ.ನಾಯ್ಕ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT