ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಣೆ ತಂಬಿಟ್ಟು, ಅರ್ಕ ಉಪ್ಪಿಟ್ಟು!

ಬಳ್ಳಾರಿಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಅಂಗಳದಲ್ಲಿ ಶುಚಿ–ರುಚಿ ಸ್ಪರ್ಧೆ; ಸಿರಿಧಾನ್ಯದ ಮೆರುಗು
Last Updated 8 ಫೆಬ್ರುವರಿ 2017, 9:55 IST
ಅಕ್ಷರ ಗಾತ್ರ

ಬಳ್ಳಾರಿ: ನವಣೆ ತಂಬಿಟ್ಟು, ಹೋಳಿಗೆ, ಅತ್ರಾಸೆ, ದೋಸೆ, ಅರ್ಕ ಉಪ್ಪಿಟ್ಟು, ಸಜ್ಜೆ ಹಸಿಟ್ಟು, ಬರಗು ಕಜ್ಜಾಯ....
ನಗರದ ನಗರದ ಕಿತ್ತೂರುರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಕಿರುಧಾನ್ಯಗಳಿಂದ ತಯಾರಿಸಿದ ಪಾಕವೈವಿಧ್ಯಗಳಿವು.

ಕೃಷಿ ವಲಯದಿಂದ, ರೈತರ ಮನೆಗಳಿಂದ ಕಿರುಧಾನ್ಯಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಈ ಶಾಲೆಯ ವಿದ್ಯಾರ್ಥಿನಿಯರು ಅವುಗಳನ್ನು ಬಳಸಿ ತಯಾರಿಸಿದ ವಿಶೇಷ ಖಾದ್ಯಗಳ ರುಚಿ ನೋಡಿದ ಗಣ್ಯರು ಬಾಯಿಚಪ್ಪರಿಸಿದರು. ನಮಗೊಂದು, ತಮಗೊಂದು ಎಂದು ಪಡೆದು ಸಂತೃಪ್ತರಾದರು!

ಶಾಲೆಯಲ್ಲಿ ಏರ್ಪಡಿಸಿದ್ದ ‘ಶುಚಿ–ರುಚಿ’ ಸ್ಪರ್ಧೆಯಲ್ಲಿ ತಯಾರಿಸಿದ ಖಾದ್ಯಗಳನ್ನು ಗಣ್ಯರು ಈ ಪರಿ ಮೆಚ್ಚಿ ಆಸ್ವಾದಿಸುತ್ತಾರೆ ಎಂದು ನಿರೀಕ್ಷಿಸಿರದ ವಿದ್ಯಾರ್ಥಿನಿಯರು ಖುಷಿ ಸಂಭ್ರಮದಿಂದ ಬೀಗಿದರು. ಅವರ ಮುಖದಲ್ಲಿ ಹೊಸದೊಂದು ಲಾಸ್ಯ ಮಿಂಚುತ್ತಿತ್ತು.

ದಿನ ಬಳಕೆಯ ಧಾನ್ಯಗಳ ಪಟ್ಟಿಯಲ್ಲಿ ಇಲ್ಲದ ಕಿರುಧಾನ್ಯಗಳಾದ ನವಣೆ, ಅರ್ಕ, ಸಜ್ಜೆ, ಬರಗನ್ನು ಬಳಸಿ ವಿದ್ಯಾರ್ಥಿನಿಯರು ತಮಗೆ ತೋಚಿದ ಸಿಹಿ, ಖಾರ ಪದಾರ್ಥಗಳನ್ನು ತಯಾರಿಸಿದ್ದರು. ಅದರೊಂದಿಗೆ ಸಜ್ಜೆ ಮತ್ತು ರಾಗಿ ಬಳಸಿದ ಪದಾರ್ಥಗಳೂ ಇದ್ದವು. ರಾಗಿಯಿಂದ ಚಕ್ಕುಲಿ, ನಿಪ್ಪಟ್ಟು, ಮಸಾಲ ವಡ, ವಡಪ್ಪಿ, ರಾಗಿ ಹೆಸರುಂಡೆ, ಸಜ್ಜೆ ರೊಟ್ಟಿ,. ಹೀಗೆ ಹತ್ತಾರು ಪದಾರ್ಥಗಳು ತರಗತಿಗಳಲ್ಲಿ ತಯಾರಾಗಿದ್ದವು.

ಸ್ಪರ್ಧೆಗೆಂದೇ ಶಾಲೆಯ ಎಲ್ಲ ಕೊಠಡಿಗಳನ್ನೂ ವಿಶೇಷವಾಗಿ ಸಿದ್ಧಪಡಿಸಲಾಗಿತ್ತು. ಎಲ್ಲ ಸಾಮಗ್ರಿಗಳನ್ನು ಮನೆಯಿಂದ ತಂದಿದ್ದ ವಿದ್ಯಾರ್ಥಿನಿಯರು ಜೋಡಿಸಿಟ್ಟ ಡೆಸ್ಕ್‌ಗಳ ಹಿಂಭಾಗದ ಸ್ಥಳದಲ್ಲೇ ಲಗುಬಗೆಯಿಂದ ಕುಳಿತು ಪದಾರ್ಥಗಳನ್ನು ತಯಾರಿಸಿದರು. ಪಂಚತಾರಾ ಹೋಟೆಲುಗಳಲ್ಲಿರುವಂತೆ ತಲೆಗೆ ಟೊಪ್ಪಿ, ಕೈಗೆ ಪ್ಲಾಸ್ಟಿಕ್‌ ಕವರ್‌ ಧರಿಸಿ ಅವರು ಆಹಾರ ಬಡಿಸಲು ಸಿದ್ಧವಾದಾಗ ಅವರಲ್ಲಿದ್ದ ಬಳಲಿಕೆ ಮಾಯವಾಗಿತ್ತು.

ಮೂರು ವಿಭಾಗ: ಸ್ಪರ್ಧೆಯನ್ನು ಮೂರು ವಿಭಾಗದಲ್ಲಿ ನಡೆಸಲಾಯಿತು. 10ನೇ ತರಗತಿ ವಿದ್ಯಾರ್ಥಿನಿಯರಿಗೆ ಕಿರುಧಾನ್ಯಗಳಿಂದ, 9ನೇ ತರಗತಿಯವರಿಗೆ ಅಕ್ಕಿಯಿಂದ ಪದಾರ್ಥ ತಯಾರಿಸಲು ಹಾಗೂ 8ನೇ ತರಗತಿಯವರಿಗೆ ಬೆಳಗಿನ ಉಪಾಹಾರವನ್ನು ತಯಾರಿಸಲು ಸೂಚಿಸಲಾಗಿತ್ತು. ಕಿರುಧಾನ್ಯಗಳ ಪದಾರ್ಥದ ಪ್ರಯೋಗ ಇದೇ ಮೊದಲು. ಅಪರೂಪವಾಗಿರುವ ಆ ಧಾನ್ಯಗಳ ಕುರಿತು ಅರಿವು ಮೂಡಿಸುವುದು ಉದ್ದೇಶ ಎಂದು ಮುಖ್ಯಶಿಕ್ಷಕಿ ಎ.ಕುಮುದಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿರಿಧಾನ್ಯ ಪದಾರ್ಥಗಳ ರುಚಿ ನೋಡಿ ಕೊಠಡಿಯಿಂದ ಹೊರಬರುವ ವೇಳೆ, ಕಪ್ಪು ಹಲಗೆಯ ಮೇಲೆ ಬರೆದಿದ್ದ ‘ಹಾದಿಯ ಹೊಲ ನೋಡ, ಸಿರಿಧಾನ್ಯ ಬೆಳೆ ನೋಡ, ಅಣ್ಣ ತಮ್ಮರ ನಗೆ ನೋಡ, ಆರಂಭ ನೋಡ ಮನೆಯೊಳಗ’ಎಂಬ ಜನಪದ ಸಾಲು ಹೊಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT