ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚರ್ ನೋಡಿ

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸ್ಪ್ರಿಂಗ್‌, ಸಮ್ಮರ್‌, ಫಾಲ್‌, ವಿಂಟರ್‌... ಆ್ಯಂಡ್ ಸ್ಪ್ರಿಂಗ್‌
ಕಾಲ ಚಲಿಸುತ್ತಿರುತ್ತದೆ. ಕಾಲದೊಟ್ಟಿಗೆ ಪ್ರಕೃತಿಯೂ ಚಲಿಸುತ್ತದೆ. ಮನುಷ್ಯನ ಬದುಕೂ ಇದಕ್ಕೆ ಹೊರತಲ್ಲ. ಈ ಚಲನೆಗೆ ಹಲವು ಹಂತಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಚಲನೆಯಲ್ಲಿನ ಆವರ್ತವನ್ನೂ ಗಮನಿಸಬಹುದು. ಋತುಗಳು ಹೇಗೆ ಪದೇ ಪದೇ ಬದಲಾಗುತ್ತವೆಯೋ ಹಾಗೆಯೇ ಮನುಷ್ಯನ ಬದುಕೂ ಬದಲಾಗುತ್ತದೆ.

ಈ ಎಲ್ಲ ಬದಲಾವಣೆಯ ಹಿಂದಿರುವ ಸೂತ್ರ ಯಾವುದು? ಅದನ್ನು ನಡೆಸುವ ಚೈತನ್ಯ ಯಾವುದು? ಈ ಆವರ್ತನದಲ್ಲಿ ಮತ್ತೆ ಮತ್ತೆ ಅದದೇ ದಾರಿ ತುಳಿಯುವುದು ಯಾಕೆ ಈ ಎಲ್ಲ ಪ್ರಶ್ನೆಗಳನ್ನು ಬೌದ್ಧಧರ್ಮದ ಹಿನ್ನೆಲೆಯಲ್ಲಿ ಇಟ್ಟುಕೊಂಡು ಚಿತ್ರಿಸುವ ಸಿನಿಮಾ ‘ಸ್ಪ್ರಿಂಗ್‌, ಸಮ್ಮರ್‌, ಫಾಲ್‌, ವಿಂಟರ್‌... ಆ್ಯಂಡ್ ಸ್ಪ್ರಿಂಗ್‌’. 2003ರಲ್ಲಿ ಬಿಡುಗಡೆಯಾದ ದಕ್ಷಿಣ ಕೊರಿಯಾದ ಈ ಸಿನಿಮಾದ ನಿರ್ದೇಶಕ ಕಿಮ್‌ ಕಿ ಡುಕ್‌.

ಬೌದ್ಧ ಮಾಂಕ್‌ ಒಬ್ಬನ ಬದುಕನ್ನೂ ಪ್ರಕೃತಿಯಲ್ಲಿನ ಋತುಗಳ ಬದಲಾವಣೆಯನ್ನೂ ಸಮೀಕರಿಸಿ ರೂಪಿಸಿರುವ ರೀತಿಯೇ ತುಂಬ ಚೆನ್ನಾಗಿದೆ. ‘ದ ಐಲ್‌’, ‘ಪಿಯೆಟಾ’ದಂಥ ಕ್ರೌರ್ಯದ ಪರಮಾವಧಿಯನ್ನು ತೋರುವ ಸಿನಿಮಾ ನಿರ್ದೇಶಿಸಿದ ನಿರ್ದೇಶಕನೇ ಈ ಸಿನಿಮಾ ನಿರ್ದೇಶಿಸಿದ್ದಾನೆ ಎನ್ನುವುದನ್ನು ನಂಬುವುದೇ ಕಷ್ಟವಾಗುವಷ್ಟು ಸಂಯಮದಿಂದ ಈ ಸಿನಿಮಾ ಕಟ್ಟಲ್ಪಟ್ಟಿದೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಿರ್ದೇಶಕ ಕಿಮ್‌ ಕಿ ಡುಕ್‌ ಸ್ವತಃ ಅಭಿನಯಿಸಿದ್ದಾರೆ ಎನ್ನುವುದೂ ಇದರ ವಿಶೇಷತೆಗಳಲ್ಲೊಂದು.

ನೀರ ನಡುವಣ ದೇವಾಲಯದಲ್ಲಿ ವಾಸವಾಗಿರುವ ಬೌದ್ಧ ಗುರು ತನ್ನ ಬಳಿ ಒಬ್ಬ ಶಿಷ್ಯನನ್ನು ಇರಿಸಿಕೊಂಡಿರುತ್ತಾನೆ. ಪ್ರಾಯೋಗಿಕತೆಯ ಮೂಲಕವೇ ಬದುಕಿನ ಶಿಕ್ಷಣವನ್ನೂ ತನ್ಮೂಲಕ ಪರದ ದಾರಿಯನ್ನು ಕಾಣಿಸುವ ಗುರು ಅವನು. ಆದರೆ ಹದಿಹರೆಯಕ್ಕೆ ಬಂದ ಶಿಷ್ಯ ತನ್ನ ಆಶ್ರಮಕ್ಕೆ ಬಂದ ಹೆಣ್ಣೊಬ್ಬಳ ಮೋಹಕ್ಕೆ ಒಳಗಾಗಿ ಆಶ್ರಮ ಬಿಟ್ಟು ಹೋಗುತ್ತಾನೆ. ನಂತರ ಲೌಕಿಕ ಜಗತ್ತಿನಿಂದ ಭ್ರಮನಿರಸನ ಹೊಂದಿ ಒಂದು ಕೊಲೆಯನ್ನೂ ಮಾಡಿ ಅವನು ಮತ್ತೆ ಮರಳುವುದು ಆಶ್ರಮಕ್ಕೇ. ಅವನ ಗುರುಗಳು ಮೋಕ್ಷ ಪಡೆದ ಮೇಲೆ ಅವನೇ ಸ್ವಂತ ಸಾಧನೆ ಮಾಡಿ ಆತ್ಮಸಾಕ್ಷಾತ್ಕಾರ ಕಂಡುಕೊಳ್ಳುವ ದಾರಿಯಲ್ಲಿದ್ದಾಗ ಅವನಿಗೆ ಮತ್ತೊಬ್ಬ ಶಿಷ್ಯ ಸಿಗುತ್ತಾನೆ.

ಆ ಶಿಷ್ಯನೂ ಗುರುವು ಚಿಕ್ಕಂದಿನಲ್ಲಿ ಮಾಡಿದ ತಪ್ಪುಗಳನ್ನೇ ಮಾಡುವುದನ್ನು ಕಾಣಿಸುವುದರ ಮೂಲಕ ಸಿನಿಮಾ ಕೊನೆಯಾಗುತ್ತದೆ. ಅರಿವು ಎನ್ನುವುದು ಪ್ರತಿಯೊಬ್ಬನೂ ಸ್ವಂತ ಗಳಿಸಿಕೊಳ್ಳಬೇಕಾದ್ದು. ಅದು ದೈವದತ್ತವಾಗಿದ್ದಾಗಲಿ, ಗುರುಮುಖೇನವಾಗಲಿ ಸಿಗುವುದಲ್ಲ. ಅವರೆಲ್ಲ ದಾರಿ ತೋರಬಹುದಷ್ಟೆ. ಮೇಲಕ್ಕೇರಿದಷ್ಟೂ ಕೆಳಕ್ಕಿಳಿಯುವ ಮನುಷ್ಯನ ಬದುಕಿನ ಆವರ್ತನವನ್ನು ತೋರಿಸುವ ಈ ಸಿನಿಮಾವನ್ನು goo.gl/PDXlW4 ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT