ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

e–ಪುಸ್ತಕ

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಊಟಕ್ಕೊಂದು ಕೈಪಿಡಿ
ಕನ್ನಡಕ್ಕೆ ಅಗತ್ಯವಿರುವ ಮಾಹಿತಿ ಸಾಹಿತ್ಯ ಯಾವುದು? ಯಾವುದನ್ನು ಹೇಗೆ ಬರೆಯಬೇಕು ಎಂಬುದರ ಕುರಿತಂತೆ ಈಗಲೂ ನಾವು ಚರ್ಚಿಸುತ್ತಲೇ ಇದ್ದೇವೆ. ಆದರೆ ಏಳೆಂಟು ದಶಕಗಳ ಹಿಂದೆ ಕನ್ನಡದಲ್ಲಿ ಬರೆಯಬೇಕೆಂದುಕೊಂಡವರು ಈ ಬಗೆಯ ಚರ್ಚೆಗಳಲ್ಲಿ ಸಮಯ ಕಳೆಯದೆ ತಮ್ಮ ಜ್ಞಾನವನ್ನು ಜನರೊಂದಿಗೆ ಹಂಚಿಕೊಳ್ಳಲು ಬೇಕಿರುವ ಕೆಲಸ ಮಾಡಿದರು ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

ಇಂಥದ್ದರಲ್ಲಿ ಒಂದು ದ.ಕೃ,ಭಾರದ್ವಾಜ ಅವರು ಬರೆದಿರುವ ‘ಆಹಾರ ವಿಜ್ಞಾನ’ ಎಂಬ ಪುಸ್ತಕ. ರೋಗ ನಿಧಾನ, ರೋಗ ನಿವಾರಣೆ ಮತ್ತು ರೋಗ ನಿರೋಧನವೆಂಬ ಮೂರೂ ಅಂಶಗಳನ್ನಿಟ್ಟುಕೊಂಡು ಈ ಕೃತಿ ರಚಿತವಾಗಿದೆ. ಮುನ್ನೂರಕ್ಕೂ ಹೆಚ್ಚು ಪುಟಗಳುಳ್ಳ ಈ ಪುಸ್ತಕ ನಿತ್ಯ ಸೇವಿಸುವ ಆಹಾರವನ್ನು ರೋಗ ನಿಯಂತ್ರಣ ಮತ್ತು ರೋಗ ನಿವಾರಣೆಗೆ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ವಿವರಿಸುತ್ತದೆ.

ಪಂಡಿತ ತಾರಾನಾಥರ ಶಿಷ್ಯರಾಗಿದ್ದ ದ.ಕೃ. ಭಾರದ್ವಾಜರು ಗುರುಪ್ರೀತಿಯೊಂದಿಗೆ ರಚಿಸಿರುವ ಈ ಕೃತಿಯ ಉದ್ದೇಶ ಸಾಮಾನ್ಯ ಜನರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಜಾಗೃತಿಯನ್ನು ಮೂಡಿಸುವುದು. ಆಯುರ್ವೇದವನ್ನೇ ಗ್ರಂಥ ಆಧಾರವನ್ನಾಗಿ ಇಟ್ಟುಕೊಂಡಿದ್ದರೂ ಪಾಶ್ಚಾತ್ಯ ವೈದ್ಯ ವಿಜ್ಞಾನದ ಹೊಳಹುಗಳನ್ನು ಕಡೆಗಣಿಸಿಲ್ಲ. ಇದರ ಜೊತೆಗೆ ಜನ ಸಾಮಾನ್ಯರ ನಾಲಿಗೆಯ ರುಚಿಯನ್ನೂ ಕಡೆಗಣಿಸದೆ ಈ ಗ್ರಂಥವನ್ನು ರಚಿಸಿದ್ದಾರೆ.

ಹಾಗೆಯೇ ಇದರಲ್ಲಿ ಚರ್ಚಿಸಲಾಗಿರುವ ವಾತ, ಪಿತ್ತ ಮತ್ತು ಕಫಾದಿ ದೋಷಗಳ ಅನ್ವಯವನ್ನು ಸಾಮಾನ್ಯರು ಮಾಡಿಕೊಳ್ಳಬಾರದೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಪಥ್ಯ ಮತ್ತು ಅಪಥ್ಯಗಳ ನಡುವಣ ಸಂಬಂಧವನ್ನು ಬಹಳ ಸೂಕ್ಷ್ಮ ಮಟ್ಟದಲ್ಲಿ ವಿಶ್ಲೇಷಿಸಿದ್ದರೂ ಅದು ಸಾಮಾನ್ಯ ಜನರಿಗೂ ತಿಳಿಯಬೇಕೆಂಬ ಕಾಳಜಿ ಲೇಖಕರದ್ದು. ಆಹಾರವಾಗಿ ಬಳಕೆಯಾಗುವ ಪ್ರತಿಯೊಂದಕ್ಕೂ ಕನ್ನಡದ್ದೇ ಹೆಸರುಗಳನ್ನು ಇಲ್ಲಿ ಬಳಸಲಾಗಿದೆ.

ತೀರಾ ಅನಿವಾರ್ಯ ಸಂದರ್ಭದಲ್ಲಷ್ಟೇ ಸಂಸ್ಕೃತ ಪ್ರಯೋಗಗಳಿವೆ. ಈ ಪುಸ್ತಕವನ್ನು ಈಗ ಒಂದು ಪಥ್ಯದ ಮಾರ್ಗದರ್ಶಕ ಗ್ರಂಥವನ್ನಾಗಿ ಬಳಸಬಹುದೇ ಇಲ್ಲವೇ ಎಂಬುದನ್ನು ವೈದ್ಯ ವಿಜ್ಞಾನವನ್ನು ಅರಿತವರಷ್ಟೇ ಹೇಳಬೇಕು. ಆದರೆ ವಿಜ್ಞಾನ ಸಾಹಿತ್ಯದ ವಿದ್ಯಾರ್ಥಿಗಳ ಮಟ್ಟಿಗೆ ಇದೊಂದು ಅಪರೂಪದ ಪುಸ್ತಕವೆಂಬುದಂತೂ ಖಚಿತ. ಹಾಗೆಯೇ ನಾವು ಮರೆತಿರುವ ಅನೇಕ ಕನ್ನಡ ಪದಗಳನ್ನು ನೆನಪಿಸಿಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತದೆ. 1933ರಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ ಬಳಸಲಾದ ಪಾರಿಭಾಷಿಕಗಳ ಮೂಲವಾದ ಇಂಗ್ಲಿಷ್ ಶಬ್ದಗಳೂ ಇವೆ. ಕಾಯಿಲೆಗಳ ಒಂದು ಸೂಚಿಯನ್ನು ರೂಪಿಸಲಾಗಿದ್ದು ಅದರ ಪ್ರಸ್ತಾಪ ಯಾವ ಪುಟದಲ್ಲಿದೆ ಎಂಬ ವಿವರಗಳೂ ಇದರಲ್ಲಿವೆ. ಇದು ಆರ್ಕೈವ್ ತಾಣದಲ್ಲಿ ಲಭ್ಯ. ಆಸಕ್ತರು ಇಲ್ಲಿರುವ ಲಿಂಕ್ ಬಳಸಿ ಡೌನ್ ಲೋಡಿಕೊಳ್ಳಬಹುದು: http://bit.ly/2kiSfXb

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT