ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದ ಹಾಟ್‌ ಹ್ಯಾಚ್ ಪೋಲೊ ಜಿಟಿಐ

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಫೋಕ್ಸ್‌ವ್ಯಾಗನ್ ಇಂಡಿಯಾ ಸಂಸ್ಥೆ ಈಚೆಗೆ ಪೋಲೊ ಹ್ಯಾಚ್‌ ಬ್ಯಾಕ್‌ನ ಜಿಟಿಐ ಮಾದರಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಕಂಪೆನಿ ಬಿಡುಗಡೆ ಮಾಡಿರುವ ಪೋಲೊ ಜಿಟಿಐನಲ್ಲಿರುವುದು 1.8 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌. ಜೆಟ್ಟಾ ಸೆಡಾನ್‌ನಲ್ಲಿದ್ದ ಈ ಎಂಜಿನ್‌ ಅನ್ನು ಪೋಲೊ ಒಳಗೆ ಕಂಪೆನಿ ಕೂರಿಸಿದೆ.

ಈ ಎಂಜಿನ್‌ (1.8 ಜಿಟಿ ಟಿಎಸ್‌ಐ) ಬರೋಬ್ಬರಿ 192 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಇದರ ಜತೆಯಲ್ಲೇ ತೀರಾ ಬಾಯ್ಬಿಡುವಂತಹ ಸಂಗತಿ ಎಂದರೆ ದೊಡ್ಡ ಡೀಸೆಲ್‌ ಎಂಜಿನ್‌ನಂತಹ ಟಾರ್ಕ್‌ ಅನ್ನೂ ಈ ಎಂಜಿನ್‌ ಉತ್ಪಾದಿಸುತ್ತದೆ ಎಂಬುದು. 1,250 ಆರ್‌ಪಿಎಂನಿಂದ 5,300 ಆರ್‌ಪಿಎಂ ನಡುವೆ ಈ ಎಂಜಿನ್‌ ಬರೋಬ್ಬರಿ 250 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ. ತಾಂತ್ರಿಕ ವಿವರಗಳ ಬಗ್ಗೆ ಆಸಕ್ತಿ ಇಲ್ಲದವರಿಗೆ ಈ ವಿವರಣೆಯೆಲ್ಲಾ ತೀರಾ ಬೇಸರ ಎನಿಸಬಹುದು. ಆದರೆ ಕಾರ್‌ನ ಚಾಲನೆಯ ಅನುಭವ ತುಸು ರೋಚಕವಾದದ್ದು.

ಈ ಕಾರ್‌ ಅನ್ನು ಬೆಂಗಳೂರಿನ ರೇಸ್‌ ಟ್ರ್ಯಾಕ್‌ ಒಂದರಲ್ಲಿ ಓಡಿಸಲು ಕಂಪೆನಿ ಈಚೆಗೆ ಕಾರ್ಯಕ್ರಮ ಒಂದನ್ನು ಆಯೋಜಿಸಿತ್ತು. ಕಂಪೆನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಅಂದಹಾಗೆ ಆ ಟ್ರ್ಯಾಕ್‌ ‘ಗೋ–ಕಾರ್ಟಿಂಗ್‌’ ವಾಹನಗಳ ಚಾಲನೆಗೆಂದು ರೂಪಿಸಿದ್ದ ಟ್ರ್ಯಾಕ್‌. ಹೀಗಾಗಿ ಅದು ತೀರಾ ಉದ್ದದ ಟ್ರ್ಯಾಕ್‌ ಏನಲ್ಲ. ಎಂಟು ಕಠಿಣ ತಿರುವುಗಳಿದ್ದ ಈ ಟ್ರ್ಯಾಕ್‌ನ ಉದ್ದ ಕೇವಲ 1.1 ಕಿ.ಮೀ.

ಈ ಕಾರ್‌ ಕೇವಲ 7.2 ಸೆಕೆಂಡುಗಳಲ್ಲಿ 0–100 ಕಿ.ಮೀ/ಗಂಟೆ ವೇಗ ಮುಟ್ಟುತ್ತದೆ. ಸ್ಟಾರ್ಟ್‌ ಲೈನ್‌ನಿಂದ ಮೊದಲ ತಿರುವಿಗೆ ಇದ್ದ ಅಂತರ ಕೇವಲ 100 ಮೀಟರ್‌. ಈ ಅಂತರವನ್ನು  ಮುಟ್ಟಲು ಕಾರ್‌ ಕೇವಲ 4–5 ಸೆಕೆಂಡು ತೆಗೆದುಕೊಂಡಿತ್ತು. ವೇಗ 80 ಕಿ.ಮೀ/ಗಂಟೆ ಮುಟ್ಟವಷ್ಟರಲ್ಲೇ  ತಿರುವು ಎದುರಾಗಿತ್ತು. ವೇಗವನ್ನು ತುಸುವೇ ಕಡಿಮೆ ಮಾಡಿ ಕಾರಿನ ದಿಕ್ಕು ಬದಲಿಸಿದಾಕ್ಷಣ ಟೈರ್‌ಗಳು ರಸ್ತೆಗೆ ಉಜ್ಜುತ್ತಾ ಯುಟರ್ನ್‌ ತೆಗೆದುಕೊಂಡು ಮುಂದುವರೆಯಲಾಯಿತು. ಒಂದಿನಿತೂ ಭಯವಾಗದಂತೆ ಜಿಟಿಐ ವರ್ತಿಸಿತು. 180, 90 ಕೋನದಷ್ಟು ಕಡಿದಾಗಿದ್ದ ಎಂಟೂ ತಿರುವುಗಳನ್ನು ವೇಗದಲ್ಲೇ ಎದುರಿಸುವಷ್ಟು ಕಾರ್ ಸಮರ್ಥವಾಗಿದೆ.

ಈ ತಿರುವುಗಳಲ್ಲಿ ಕಾರ್‌ ಹೆಚ್ಚು ವಾಲುತ್ತಿರಲಿಲ್ಲ. ಇದರಲ್ಲಿ ಹೆಚ್ಚು ಗಡುಸಾದ ಸಸ್ಪೆನ್ಷನ್‌ ಇದೆ. ಆದರೆ ಟಿಡಿಐ ಮತ್ತು ಜಿಟಿ ಟಿಎಸ್‌ಐ ಪೋಲೊಗಳನ್ನು ಅಷ್ಟು ವೇಗದಲ್ಲಿ ತಿರುವು ಪಡೆಯಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಜಿಟಿಐ ಸಂಪೂರ್ಣ ಭಿನ್ನವಾಗಿದೆ ಮತ್ತು ಚಾಲಕರಿಗೆ ಹೆಚ್ಚು ಆತ್ಮವಿಶ್ವಾಸ ನೀಡುತ್ತದೆ.
ಇನ್ನು ಕಾರ್‌ನಲ್ಲಿ ಟ್ರ್ಯಾಕ್ಷನ್‌ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌, ಎಲೆಕ್ಟ್ರಿಕಲ್ ಡಿಫರೆನ್ಷಿಯಲ್ ಲಾಕ್ ಮತ್ತು ಎಂಜಿನ್‌ ಡ್ರ್ಯಾಗ್‌ ಟಾರ್ಕ್‌ ಕಂಟ್ರೋಲ್ ಸವಲತ್ತುಗಳಿವೆ. ಪರ್ಫಾರ್ಮೆನ್ಸ್‌ ಕಾರ್‌ಗಳಲ್ಲಿ ಈ ಸವಲತ್ತುಗಳೆಲ್ಲಾ ಇರುತ್ತವೆ. ಆದರೆ ಡಿಫರೆನ್ಷಿಯಲ್ ಲಾಕ್‌ಗಳ ಸವಲತ್ತು ಸಾಮಾನ್ಯವಾಗಿ ಎಸ್‌ಯುವಿಗಳಲ್ಲಷ್ಟೇ ಇರುತ್ತದೆ. ಆದರೆ ಜಿಟಿಐನಲ್ಲಿ ಎಲೆಕ್ಟ್ರಿಕಲ್‌ ಡಿಫರೆನ್ಷಿಯಲ್ ಲಾಕ್‌ ಇದೆ. ಈ ಎಲ್ಲಾ ಸವಲತ್ತುಗಳು ಚಾಲಕನ ಮಧ್ಯಪ್ರವೇಶ ಇಲ್ಲದೆ, ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತವೆ. ಇವೆಲ್ಲಾ ಉಪಯೋಗಕ್ಕೆ ಬರುವುದು ಕಾರ್‌ ಚಾಲಕನ ನಿಯಂತ್ರಣ ಕಳೆದುಕೊಳ್ಳುವಾಗ. ಇವೆಲ್ಲವನ್ನೂ ಟ್ರ್ಯಾಕ್‌ನಲ್ಲಿ ಪರೀಕ್ಷಿಸಲಾಯಿತು. ಟ್ರ್ಯಾಕ್‌ ರೇಸ್‌ನ ಸೊಬಗು ಇರುವುದು ತಿರುವುಗಳಲ್ಲಿ ಕಾರ್‌ಗಳನ್ನು ಡ್ರಿಫ್ಟ್‌ ಮಾಡುವುದರಲ್ಲಿ. ಡ್ರಿಫ್ಟ್‌ ಅಂದರೆ ತಿರುವುಗಳಲ್ಲಿ ಹ್ಯಾಂಡ್‌ ಬ್ರೇಕ್‌ ಮೂಲಕ ನಿಯಂತ್ರಿಸಿ ಹಿಂದಿನ ಚಕ್ರಗಳು ಜಾರುವಂತೆ ಮಾಡುವುದು. ಹೀಗೆ ಮಾಡುವಾಗ ವೇಗವನ್ನು ಕಡಿಮೆ ಮಾಡದೆಯೇ ತಿರುವು ಪಡೆಯಬಹುದು.

ಪೋಲೊ ಜಿಟಿಐನಲ್ಲೂ ಡ್ರಿಫ್ಟ್‌ ಮಾಡಲಾಯಿತು. ಮೇಲೆ ಹೇಳಲಾದ ಎಲ್ಲಾ ಸವಲತ್ತುಗಳು ಇದ್ದುದ್ದರಿಂದ ಕಾರ್‌ ತೀರಾ ವೇಗದಲ್ಲೂ ರಸ್ತೆ ಬಿಟ್ಟು ಹೊರಕ್ಕೆ ಜಾರುತ್ತಿರಲಿಲ್ಲ. ಜತೆಗೆ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಇರುವುದರಿಂದ ಚಾಲನೆ ಮತ್ತಷ್ಟು ಸುಲಭ.

ಮೂರು ಡೋರ್‌ಗಳ ಈ ಕಾರ್‌ ಅನ್ನು ರೇಸಿಂಗ್‌ ಉದ್ದೇಶಕ್ಕೆ ಬಳಸಬಹುದು. ಸ್ಪೇನ್‌ನಲ್ಲಿನ ಕಂಪೆನಿಯ ಘಟಕದಲ್ಲಿ ತಯಾರಾಗುವ ಈ ಕಾರ್‌ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಇದರ ಬೆಲೆ ₹35 ಲಕ್ಷ ದಾಟುತ್ತದೆ (ಆನ್‌ರೋಡ್‌ ಬೆಲೆ). ಇದರಿಂದ ಇದು ರೇಸಿಂಗ್‌ ಪ್ರಿಯರ ಕಾರ್‌ ಆಗೇ ಉಳಿಯುವ ಸಾಧ್ಯತೆ ಇದೆ. ಭಾರತದಲ್ಲೇ ತಯಾರಾಗುವುದಾದರೆ ಬೆಲೆಯಲ್ಲಿ ಭಾರಿ ಇಳಿಕೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT