ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಂತ ಪ್ರೇಮಪತ್ರದೊಂದಿಗೆ ಒಂದು ಮುಸ್ಸಂಜೆ...

Last Updated 13 ಫೆಬ್ರುವರಿ 2017, 4:10 IST
ಅಕ್ಷರ ಗಾತ್ರ

ಯಶ್‌ ಅವರ ಕಚೇರಿಯೊಳಗೆ ‘ಕಾಮನಬಿಲ್ಲು’ ತಂಡ ಕಾಲಿಟ್ಟಾಗ ಹೊರಗೆ ಸುರಿಯುತ್ತಿದ್ದ ಮಧ್ಯಾಹ್ನ ಮೂರರ ಚುರುಕು ಬಿಸಿಲು ಟಾರು ರಸ್ತೆಯ ಮೇಲೆ ಕಾವೆಬ್ಬಿಸುತ್ತಿತ್ತು. ಬೀಸುವ ಗಾಳಿಗೆ ಮರಗಳು ಮೈಮುರಿದಾಗ ಉದುರಿದ ಒಣ ಎಲೆಗಳು ನಮಿಸಲೆಂಬಂತೆ ಪದತಲಕ್ಕೆ ಬಿದ್ದು ಸರ್ರನೇ ಅತ್ತಿತ್ತ ಸರಿಯುತ್ತಿದ್ದವು.

ಹೊರಗಿನ ಬಿಸಿಲಿನ ಪರಾಕ್ರಮವನ್ನು ನಿವಾಳಿಸಿ ಒಗೆದಂಥ ತಂಪು ಕಚೇರಿಯ ಒಳಗಿತ್ತು. ತಮ್ಮೆದುರಿನ ಟಿಪಾಯಿ ಮೇಲೆ (ಎರಡು ದಿನಗಳ ಹಿಂದೆಯೇ ಕಾಮನಬಿಲ್ಲು ಪ್ರೇಮಪತ್ರ ಸ್ಪರ್ಧೆಯ ಪತ್ರಗಳನ್ನು ಅವರಿಗೆ ತಲುಪಿಸಲಾಗಿತ್ತು) ಒಂದಿಷ್ಟು ಪತ್ರಗಳನ್ನು ಹರವಿಕೊಂಡು ಕೂತ ಯಶ್‌ ಅವರ ಮುಖದಲ್ಲಿ ಪರೀಕ್ಷೆ ಪತ್ರಿಕೆ ಕೈಯಲ್ಲಿ ಹಿಡಿದುಕೊಂಡ ಎಸ್ಸೆಸ್ಸೆಲ್ಸಿ ಹುಡುಗನ ಟೆನ್ಶನ್‌ ಎದ್ದು ಕಾಣುತ್ತಿತ್ತು. ಪೊದೆಪೊದೆಯಾಗಿ ಬೆಳೆದಿದ್ದ ಗಡ್ಡದ ನಡುವೆ ಅವರು ನಾಜೂಕಿನಿಂದ ಮೀಸೆಯನ್ನಷ್ಟೇ ಆರಿಸಿ ಹಿಡಿದು ಪದೇ ಪದೇ ತಿರುವುತ್ತಿದ್ದರು. ಅವರ ಪಕ್ಕದಲ್ಲಿಯೇ ಕೂತಿದ್ದ ‘ಮಿಸೆಸ್‌ ರಾಮಾಚಾರಿ’ ರಾಧಿಕಾ ಪಂಡಿತ್‌ ಮುಖದಲ್ಲಿ ಮಾತ್ರ ಎಂದಿನ ನಿರಾಳಭಾವ. ದುಂಡುಮುಖಕ್ಕೆ ಕಳೆ ನೀಡುವಂಥ ಕಿರುಮಂದಹಾಸ.

‘ಒಳ್ಳೆ ಶಿಕ್ಷೆನೇ ಕೊಟ್ಟಿದೀರಾ ಬಿಡಿ’ ಎಂದು ಹುಸಿ ಆಕ್ಷೇಪದ ಜತೆಗೇ ಮಾತಿಗೆ ಕೂತರು ಯಶ್‌. ‘ಜಡ್ಜ್‌ ಮಾಡುವ ಕೆಲಸ ಅಂದ್ರೆ ನಾನು ದೂರ ಓಡಿಬಿಡ್ತೀನಿ. ಯಾಕಂದ್ರೆ ಎಲ್ಲ ವ್ಯಕ್ತಿ–ವಸ್ತುಗಳಿಗೂ ಅವುಗಳದ್ದೇ ಆದ ವಿಶಿಷ್ಟತೆಯಿರುತ್ತದೆ. ಅವುಗಳಲ್ಲಿ ಯಾವುದೋ ಒಂದಿಷ್ಟನ್ನೇ ಆರಿಸುವುದೆಂದರೆ ಉಳಿದವರಿಗೆ ಅನ್ಯಾಯ ಮಾಡಿದ ಹಾಗಾಗುತ್ತದಲ್ಲ. ಆದರೆ ಇದು ಸ್ಪರ್ಧೆಯಾದ್ದರಿಂದ ನಮ್ಮ ವೈಯಕ್ತಿಕ ಅನಿಸಿಕೆಗಳ ಆಧಾರದ ಮೇಲೆ ಕೆಲವು ಪತ್ರಗಳನ್ನು ಆರಿಸಿದ್ದೇವೆ’ ಎಂಬ ಸಮಜಾಯಿಷಿ ಕೊಟ್ಟುಕೊಂಡೇ ಅವರು ಮುಂದುವರಿದರು. ರಾಧಿಕಾ ಅವರದ್ದು ಮಾತ್ರ ಅದೇ ಹೂವರಳಿಸುವ ಮುಗುಳುನಗೆ.

ಅಷ್ಟೊಂದು ಪ್ರೇಮಪತ್ರಗಳ ಮಧ್ಯ ಆಯ್ಕೆಯ ತನ್ಮಯತೆಯಲ್ಲಿದ್ದ ಅವರಿಬ್ಬರೂ ಒಲವ ಸರೋವರದಲ್ಲಿ ಜೋಡಿಯಾಗಿ ತೇಲುತ್ತ ಧ್ಯಾನಿಸುವ ಹಂಸಗಳಂತೆ ಕಾಣುತ್ತಿದ್ದರು. ಪ್ರತಿಯೊಂದು ಪತ್ರದ ಸಾಲುಸಾಲುಗಳಲ್ಲಿಯೂ ಹೊಮ್ಮುತ್ತಿದ್ದ ಒಲವಗಂಧ ಅವರ ಮನಸನ್ನೂ ಸದ್ದಿಲ್ಲದೇ ಆವರಿಸಿದಂತಿತ್ತು.

ಅಂತಿಮ ಹಂತದ ಪ್ರತಿಯೊಂದು ಪತ್ರಗಳನ್ನು ಕೂಲಂಕಷವಾಗಿ ಓದಿ ಅವುಗಳ ಗುಣ–ಮಿತಿಗಳ ಕುರಿತು ಚರ್ಚಿಸುತ್ತಿದ್ದರು. ಯಾವುದೋ ಪತ್ರದ ತುಂಟ ಸಾಲೊಂದನ್ನು ಯಶ್‌ ಓದಿ ಹೇಳಿದಾಗ ರಾಧಿಕಾ ಬೆಳ್ಗೆನ್ನೆಗಳಲ್ಲಿ ನಾಚಿಕೆಯ ರಂಗೋಲಿ. ರೇಷ್ಮೆ ನೂಲುಗಳು ಜಾರಿದಂತೆ ಕೆನ್ನೆಗಿಳಿದು ಕಣ್ಣಿಗೆ ಮುತ್ತಿಕ್ಕುವ ಗುಲಾಬಿ ದಳದಂಥ ನಯ ಮುಂಗುರುಳನ್ನು ರಾಧಿಕಾ ಮೆಲ್ಲ ಹಿಂದೆ ನೂಕಿದಾಗ ಯಶ್‌ ಕಣ್ಣಲ್ಲಿ ಸಣ್ಣ ಸಂಚಲನ. ಅರ್ಧ ದಶಕದ ಅವರ ಪ್ರೇಮ, ದಾಂಪತ್ಯದ ಮೂಸೆಯಲ್ಲಿ ಇನ್ನಷ್ಟು ಪಕ್ವಗೊಂಡಿರುವುದು ಮೇಲು ನೋಟಕ್ಕೆ ಕಾಣುತ್ತಿತ್ತು. ಅವರ ಈ ಪ್ರಬುದ್ಧತೆ ಪತ್ರಗಳ ಆಯ್ಕೆಯಲ್ಲಿಯೂ ಸಾಬೀತಾಯಿತು.
ಈ ನಡುವೆ ಕೆಲವು ಪತ್ರಗಳು ಅವರನ್ನು ತಮ್ಮ ಪ್ರೇಮದ ಆರಂಭದ ದಿನಗಳಿಗೂ ಕರೆದೊಯ್ದವು.

ಮೊಗೆದಷ್ಟೂ ಉಕ್ಕಿಬರುವ ನೆನಪಿನ ಝರಿಯಲ್ಲಿ ಕೆಲಕಾಲ ಕಳೆದುಹೋದರು. ಮತ್ತೆ ವಾಸ್ತವಕ್ಕೆ ಬಂದು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು.
ಯಾವುದೋ ಒಂದನ್ನು ಆಯ್ದರಾಯ್ತು ಎಂಬ ಉಡಾಫೆಗಾಗಲಿ, ಎಲ್ಲವನ್ನೂ ನಿರ್ಣಯಿಸಿಬಿಡಬಲ್ಲೆ ಎಂಬ ಅಹಂಕಾರಕ್ಕಾಗಲಿ ಅಲ್ಲಿ ಜಾಗ ಇರಲಿಲ್ಲ. ‘ಪ್ರತಿಭಾವಂತರಿಗೆ ಅನ್ಯಾಯವಾಗಬಾರದು’ ಎಂಬ ಕಾಳಜಿಯ ನಡುವೆಯೇ ಅವರು ಯಾವುದೋ ಪತ್ರದಲ್ಲಿನ ಸುಂದರ ಸಾಲುಗಳನ್ನು ಚಪ್ಪರಿಸಿದರು. ನೋವಿನಲ್ಲಿ ಅದ್ದಿ ಬರೆದಿದ್ದ ಅಕ್ಷರಗಳನ್ನು ಓದಿ ಮರುಗಿದರು. ಇನ್ಯಾವುದೋ ಹಾಸ್ಯಾತ್ಮಕ ಪತ್ರ ಓದಿ ಮನಃಪೂರ್ತಿ ನಕ್ಕರು. ಕಾವ್ಯದ ಸಾಲುಗಳನ್ನು ಆಸ್ವಾದಿಸಿದರು. ಇಷ್ಟವಾಗದ ಸಾಲುಗಳನ್ನು ಹೇಳಿಕೊಂಡು ‘ಹೀಗೆ ಬರ್ದಿದ್ರೆ ಚೆನ್ನಾಗಿರ್ತಿತ್ತು’ ಎಂದು ವಿಶ್ಲೇಷಿಸಿದರು.

‘ಇಷ್ಟೊಂದು ಜನ ಚೆನ್ನಾಗಿ ಬರ್ದಿದಾರೆ, ಅವ್ರಲ್ಲಿ ಕೆಲವರನ್ನೇ ಆಯ್ಕೆ ಮಾಡೋದು ಹೇಗೆ. ಪಾಪ ಉಳಿದವರಿಗೆ ಬೇಜಾರಾಗಲ್ವಾ?’ ಎಂದು ಪೇಚಾಡಿಕೊಂಡರು. ಅಂತೂ ಎಲ್ಲ ಪತ್ರಗಳ ಆಯ್ಕೆ ಮುಗಿದ ಮೇಲೆ ಇಬ್ಬರ ಮುಖದಲ್ಲಿಯೂ ಜವಾಬ್ದಾರಿಯುತ ಕೆಲಸವೊಂದನ್ನು ಪ್ರಾಮಾಣಿಕವಾಗಿ ಪೂರೈಸಿದ ನೆಮ್ಮದಿ ಮೂಡಿತ್ತು.

ಕೊನೆಯಲ್ಲಿ ಇಬ್ಬರಿಂದಲೂ ಆತ್ಮೀಯವಾಗಿ ಬೀಳ್ಕೊಂಡು ಕಚೇರಿಯಿಂದ ಹೊರಬಂದಾಗ ಚುರುಕು ಕಳೆದುಕೊಂಡು  ಹೊಂಬಣ್ಣಕ್ಕೆ ತಿರುಗಿದ ಬಿಸಿಲಲ್ಲಿ ಇಡೀ ಜಗವೇ ಹೊಳೆಯುತ್ತಿತ್ತು. ತುಸು ದೂರ ಬಂದು ತಿರುಗಿ ನೋಡಿದರೆ ಇನ್ನೂ ಬರೆಸಿಕೊಳ್ಳುತ್ತಲೇ ಇರುವ ಭಾಷೆಮೀರಿದ ಜೀವಂತ ಪ್ರೇಮಪತ್ರವೊಂದು ಯಶ್‌ ಮತ್ತು ರಾಧಿಕಾ ರೂಪದಲ್ಲಿ ಕೈ ಕೈ ಬೆಸೆದುಕೊಂಡು ಬಾಗಿಲಲ್ಲಿ ನಿಂತಿತ್ತು.

ಪತ್ರ ಪ್ರಪಂಚದಲ್ಲಿ ರಾಧಿಕಾ ಯಶೋಗಾಥೆ
ಎದುರಿನ ರಾಶಿಯ ನಡುವೆ ಬಣ್ಣದ ಕಾಗದದಲ್ಲಿ ಚಿತ್ರವತ್ತಾಗಿ ಕುಸುರಿ ಬಿಡಿಸಿದ್ದ ಪತ್ರವೊಂದು ಕಣ್ಣಗೆ ಬಿದ್ದಿದ್ದೇ ಯಶ್‌ ಕಣ್ಣುಗಳು ಒಮ್ಮೆಲೇ ಅರಳಿದವು. ಆ ಪತ್ರವನ್ನು ಕೈಗೆತ್ತಿಕೊಂಡು ‘ನಿಮ್ಗೊತ್ತಾ? ರಾಧಿಕಾ ಇಂಥವೆಲ್ಲ ಪತ್ರಗಳನ್ನು ತುಂಬ ಚೆನ್ನಾಗಿ ಮಾಡ್ತಾಳೆ’ ಎಂದು ಮನಸಿನ ಖಜಾನೆಯಲ್ಲಿದ್ದ ಪ್ರೇಮದ ನವಿರು ನೆನಪಿನ ನವಿಲುಗರಿಗಳನ್ನು ಒಂದೊಂದಾಗಿ ಹೆಕ್ಕತೊಡಗಿದರು.

‘ನನ್ನ ಬಳಿ ಅವಳು ಕಳಿಸಿದ ಇಂಥ ಪ್ರೇಮಪತ್ರಗಳ ದೊಡ್ಡ ಸಂಗ್ರಹವೇ ಇದೆ. ಯಾವುದೋ ಚಿತ್ರೀಕರಣಕ್ಕೆ ಒಂದು ತಿಂಗಳ ಮಟ್ಟಿಗೆ ಸ್ವೀಡನ್‌ಗೆ ಹೋಗಿದ್ದಳು. ಅಷ್ಟು ದಿನ ಪರಸ್ಪರ ದೂರವಿದ್ದದ್ದು ಅದೇ ಮೊದಲು. ಅಲ್ಲಿಂದ ಪ್ರತಿದಿನವೂ ಒಂದೊಂದು ಪತ್ರ ಬರೆಯುತ್ತಿದ್ದಳು. ಪ್ರತಿದಿನ ಬೆಳಿಗ್ಗೆ ಎದ್ದಾಗ ನನ್ನ ಪಕ್ಕ ಒಂದು ಪತ್ರ ಇರುತ್ತಿತ್ತು. ನನ್ನ ಸಹಾಯಕ, ಇಲ್ಲವೇ ಡ್ಯಾಡಿ ಅಥವಾ ನಾನು ಚಿತ್ರೀಕರಣದಲ್ಲಿದ್ದಾಗ ಅಲ್ಯಾರೋ ತಂದುಕೊಡುತ್ತಿದ್ದರು. ದಿನವೂ ಫೋನ್‌ನಲ್ಲಿ ಮಾತಾಡ್ತಾ ಇದ್ವಿ. ಆದರೂ ಅವಳು ಬರೆಯುತ್ತಿದ್ದ ಆ ಪತ್ರಗಳು ಕೊಡುವ ಅನುಭವವೇ ತುಂಬ ವಿಶೇಷವಾಗಿತ್ತು. ಯಾವಾಗಲಾದರೂ ನಮ್ಮ ನಡುವೆ ಸಣ್ಣ ಜಗಳವಾದಾಗ, ಬೇಸರವಾದಾಗ ಪತ್ರದಲ್ಲಿ ಏನೇನೋ ಪೇಂಟಿಂಗ್‌ ಎಲ್ಲ ಮಾಡಿ ನನ್ನ ಮುಂದಿಟ್ಟುಬಿಡ್ತಾಳೆ.

ಆ ಚಿತ್ರಗಳನ್ನು ನೋಡಿದರೆ ಕೋಪವೆಲ್ಲ ಮಾಯವಾಗಿಬಿಡುತ್ತದೆ. ಸಂಬಂಧದಲ್ಲಿ ಇಂಥ ಚಿಕ್ಕ ಚಿಕ್ಕ ವಿಷಯಗಳನ್ನು ಅಭಿವ್ಯಕ್ತಿ ಮಾಡುವುದು ತುಂಬ ಮಹತ್ವದ್ದಾಗಿರುತ್ತದೆ. ಹಾಗೆ ನೋಡಿದರೆ ನಾನು ಎಕ್ಸ್‌ಪ್ರೆಸ್‌ ಮಾಡುವುದು ಸ್ವಲ್ಪ ಕಡಿಮೆಯೇ. ಆದರೆ ರಾಧಿಕಾ ಸಣ್ಣಪುಟ್ಟ ಸಂಗತಿಗಳನ್ನೂ ತುಂಬ ಸುಂದರವಾಗಿ ಎಕ್ಸ್‌ಪ್ರೆಸ್‌ ಮಾಡುತ್ತಾಳೆ. ಅದು ಅವಳಲ್ಲಿ ನಾನು ಕಂಡಿರುವ ಮತ್ತು ಅವಳಿಂದ ಕಲಿತಿರುವ ವಿಶೇಷ ಗುಣ.

ನಾನೂ ಪತ್ರಗಳನ್ನು ಬರೆಯಲು ಕೆಲವು ಸಲ ಪ್ರಯತ್ನಿಸಿದ್ದಿದೆ. ಆದರೆ  ಅದರಲ್ಲಿ ಹೀನಾಯವಾಗಿ ಸೋತಿದೀನಿ’ ಎಂದು ಜೋರಾಗಿ ನಕ್ಕರು ಯಶ್‌.
‘ನಿಮಗೆ ಪತ್ರಗಳು ಯಾಕಿಷ್ಟು ಮುಖ್ಯ ಅನಿಸುತ್ತವೆ?’ ಎಂದು ರಾಧಿಕಾ ಅವರನ್ನು ಪ್ರಶ್ನಿಸಿದರೆ, ‘ಅವಳು ಸ್ವಲ್ಪ ಹಳೆ ಕಾಲದವಳು... ಅದಕ್ಕೆ’ ಎಂದು ಯಶ್‌ ಕಾಲೆಳೆದರು.

‘ಹಳೆ ಕಾಲದವಳು ನಿಜ. ಆದರೆ ಪಾರಿವಾಳಗಳ ಮೂಲಕ ಸಂದೇಶ ಕಳಿಸುವಷ್ಟು ಹಳೆ ಕಾಲದವಳಲ್ಲ’ ಎಂಬ ರಾಧಿಕಾ ಉತ್ತರಕ್ಕೆ ಯಶ್‌, ‘ನಿಮ್ಮನೆ ಪಕ್ಕ ಹಾರುತ್ತಿರುವ ಪಾರಿವಾಳಗಳನ್ನು ನಾನೇ ಕಳಿಸುತ್ತಿದ್ದುದು’ ಎಂದಾಗ ಮುಕ್ತವಾಗಿ ನಗುತ್ತಲೇ ರಾಧಿಕಾ ಪತ್ರಗಳ ಮಹತ್ವವನ್ನು ವಿವರಿಸಿದ್ದು ಹೀಗೆ:
‘ಇಂದು ನಾವು ಎಷ್ಟೊಂದು ಬ್ಯುಸಿಯಾಗಿಬಿಟ್ಟಿದ್ದೀವಿ. ಫೋನಲ್ಲಿ ಒಂದು ಸೆಕೆಂಡ್‌ಗೆ ಒಂದು ಮೆಸೇಜ್‌ ಟೈಪ್‌ ಮಾಡಿ ಕಳಿಸಬಹುದು. ಅದು ಎಲ್ಲಿ ಬೇಕಾದರೂ ತಲುಪುತ್ತದೆ.

ಆದರೆ ಒಂದು ಪತ್ರ ಬರೆಯುವ ಶ್ರಮ ಇದ್ಯಲ್ಲ– ಏನನ್ನು ಬರೆಯಬೇಕು, ಹೇಗೆ ಬರೆಯಬೇಕು, ಕೊನೆಯಲ್ಲಿ ಹಸ್ತಾಕ್ಷರ ಹೇಗಿರುತ್ತದೆ, ಅದನ್ನು ತಲುಪಿಸುವುದು ಹೇಗೆ ಎಂಬುದೆಲ್ಲ ಅಲ್ಲಿ ಮುಖ್ಯವಾಗುತ್ತದೆ. ಮಧ್ಯದಲ್ಲಿ ಒಂದು ತಪ್ಪಾದರೆ ಮತ್ತೆ ಪ್ರಾರಂಭದಿಂದಲೇ ಬರೆಯಬೇಕು. ಅಷ್ಟು ಸಮಯವನ್ನು ಮಾಡಿಕೊಳ್ಳಬೇಕಲ್ಲ. ನಮ್ಮ ಬ್ಯುಸಿ ಬದುಕಿನಲ್ಲಿ ಒಂದಿಷ್ಟು ಸಮಯವನ್ನು ಹೀಗೆ ಪತ್ರ ಬರೆಯುವುದಕ್ಕೆ ಮೀಸಲಿಡುತ್ತೇವಲ್ಲ, ಅದೇ ಪ್ರೇಮದ ಸಮರ್ಥ ಅಭಿವ್ಯಕ್ತಿ’.

**

ಪತ್ರ ಬರೆಯುವುದು ಎಂದರೆ ಔಟ್‌ಡೇಟೆಡ್‌ ಎಂಬ ಭಾವನೆ ಹಲವರಲ್ಲಿದೆ. ಆದರೆ ಒಮ್ಮೆ ಆ ಪತ್ರದ ಖುಷಿಯನ್ನು ಅನುಭವಿಸಿದರೆ ಅದನ್ನೇ ನಿರೀಕ್ಷಿಸುವಷ್ಟು ನಮ್ಮನ್ನು ಆವರಿಸಿಕೊಳ್ಳುವ ಶಕ್ತಿ ಪತ್ರಗಳಿಗಿದೆ
– ರಾಧಿಕಾ

ಈ ಮೇಸೇಜು, ಫೋನು, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಕಾಲದಲ್ಲಿ, ಹುಟ್ಟಿದಹಬ್ಬಕ್ಕೆ ನಿಮಗೊಂದು ಗ್ರೀಟಿಂಗ್‌ ಕಾರ್ಡ್‌ ಬಂದರೆ ಆಗುವ ಖುಷಿಯೇ ಬೇರೆ ಅಲ್ವಾ? ಆ ಖುಷಿಯಲ್ಲಿಯೇ ಪತ್ರದ ಮಾಂತ್ರಿಕತೆ ಇರುವುದು
– ಯಶ್‌

***

‘ಪ್ರೇಮಿಗಳ ದಿನ’ವಷ್ಟೇ ಪ್ರೀತಿಯನ್ನು ಆಚರಿಸುವುದಲ್ಲ. ದಿನವೂ ಆಚರಿಸಿ. ಬದುಕಲ್ಲಿ ಪ್ರೀತಿ ತುಂಬ ಮುಖ್ಯವಾದದ್ದು. ಪ್ರೀತಿ ಒಂದಿದ್ರೆ ಎಲ್ಲಾನೂ ಸಾಧಿಸಬಹುದು ಎಂಬುದು ಜಗತ್ತಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತ ಬಂದಿದೆ. ಹುಡುಗ ಹುಡುಗಿಯ ಪ್ರೀತಿ ಅಷ್ಟೇ ಅಲ್ಲ. ಅಮ್ಮ ಅಮ್ಮ, ಅಣ್ಣ ತಮ್ಮ, ಸ್ನೇಹಿತರು... ಒಟ್ಟಿನಲ್ಲಿ ಪ್ರೀತಿ ಒಂದಿದ್ದರೆ ನಾವು ಬಂಗಲೆಯಲ್ಲಿರಲಿ, ಗುಡಿಸಲಿನಲ್ಲಿರಲಿ ಬದುಕು ಸುಂದರವಾಗಿರುತ್ತದೆ.
–ಯಶ್‌, ರಾಧಿಕಾ ಪಂಡಿತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT