ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜಾ ತಾಜಾ ರೋಜಾ

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾನು ಗ್ಲ್ಯಾಮರ್‌ ಪಾತ್ರಗಳಲ್ಲಿ ನಟಿಸುವುದಿಲ್ಲ’ – ಹೀಗೆ ಖಡಾಖಂಡಿತವಾಗಿ ಹೇಳಿ ಗುಲಾಬಿ ದಳಗಳ ಮಳೆಯಾದಂತೆ ನಕ್ಕುಬಿಟ್ಟರು ರೋಜಾ.
ಇದೇನಿದು, ಗಂಭೀರವಾಗಿ ಹೇಳಬೇಕಾದ ವಿಷಯದ ಜೊತೆಗೆ ಜೋಕು ಕೇಳಿದವರಂತೆ ನಗುತ್ತಿದ್ದಾರಲ್ಲಾ ಎನಿಸಿತು. ಆದರೆ ಮಾತು ಮುಂದುವರಿದಂತೆಲ್ಲ ಮಾತು ಮಾತಿಗೂ ನಗುವುದು ಅವರ ಸ್ವಭಾವ ಎನ್ನುವುದು ತಿಳಿಯಿತು. ಹೆಸರಿನ ಅನ್ವರ್ಥದಂತಿರುವ ಅವರ ಮುಖಕ್ಕೂ ಆ ನಗು ಚೆನ್ನಾಗಿ ಹೊಂದುತ್ತಿದ್ದುದರಿಂದ ಆಕ್ಷೇಪಿಸಲು ಕಾರಣಗಳಿರಲಿಲ್ಲ.

ಹಾಸನ ಮೂಲದ ರೋಜಾ ಶಿಕ್ಷಣ ಮುಗಿಸಿದ್ದೆಲ್ಲ ಕೋಲಾರದಲ್ಲಿ. ನಟನೆಯ ಬಗ್ಗೆ ಆಸಕ್ತಿಯಾಗಲಿ, ನಟಿಯಾಗುವ ಅಭಿಲಾಷೆಯಾಗಲೀ ಅವರಿಗೆ ಇರಲಿಲ್ಲ. ಕಾಲೇಜು ದಿನಗಳಲ್ಲಿ ಕಾರ್ಯಕ್ರಮದ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದುದೂ ಪಾಕೆಟ್‌ ಮನಿ ಗಳಿಸಿಕೊಳ್ಳುವುದಕ್ಕಾಗಿ.

‘ಕಾಲೇಜು ದಿನಗಳಲ್ಲಿ ನನ್ನ ನಿರೂಪಣೆಯ ಕೌಶಲ ಗಮನಿಸಿದ್ದ ಸ್ನೇಹಿತರು – ‘ಬೆಂಗಳೂರಿಗೆ ಹೋಗು ಅಲ್ಲಿ ಟೀವಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಸೇರಿಸಿಕೊಳ್ಳಬಹುದು’ ಎಂದು ಸಲಹೆ ಮಾಡಿದರು. ಬೆಂಗಳೂರಿಗೆ ಬಂದು ಒಂದು ವಾಹಿನಿಗೆ ಹೋದಾಗ ಅವರು, ‘ನೀನು ನಿರೂಪಕಿಯಾಗುವುದಕ್ಕಿಂತ ಸಿನಿಮಾ ಕ್ಷೇತ್ರಕ್ಕೆ ಹೋಗುವುದೇ ಒಳ್ಳೆಯದು’ ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲ, ಅವಶ್ಯಕ ಸಂಪರ್ಕವನ್ನೂ ಒದಗಿಸಿಕೊಟ್ಟರು. ಹೀಗೆ ನಾನು ಸಿನಿಮಾ ಕ್ಷೇತ್ರಕ್ಕೆ ಅಡಿಯಿಟ್ಟೆ’ ಎಂದು ರೋಜಾ ನೆನಪಿಸಿಕೊಳ್ಳುತ್ತಾರೆ. ಅವರ ಮೊದಲ ಸಿನಿಮಾ ಓಂ ಸಾಯಿಪ್ರಕಾಶ್‌ ನಿರ್ದೇಶನದ ‘ಮನ ಮೆಚ್ಚಿದ ಬಂಗಾರು’.

ಈ ವಾರ ಬಿಡುಗಡೆಯಾಗುತ್ತಿರುವ, ತಾವು ನಾಯಕಿಯಾಗಿ ನಟಿಸಿರುವ ‘ಏನೆಂದು ಹೆಸರಿಡಲಿ’ ಸಿನಿಮಾ ಬಗ್ಗೆ ರೋಜಾಗೆ ಸಾಕಷ್ಟು ನಿರೀಕ್ಷೆಗಳಿವೆ.
‘ಇದೊಂದು ವಿಭಿನ್ನ ಕಥೆ ಇರುವ ಸಿನಿಮಾ. ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಹೇಳಲು ಹೊರಟಿದ್ದೇವೆ’ ಎನ್ನುವ ಅವರಿಗೆ ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೋ ಎಂಬ ಆತಂಕ ಇದೆ. ಅವರ ಆತಂಕಕ್ಕೆ ಕಾರಣವೂ ಇದೆ. ಈ ಚಿತ್ರದ ಹೆಣಿಗೆಯೇ ಸಂಕೀರ್ಣವಾಗಿದೆ. ‘ಪ್ರಾರಂಭದಲ್ಲಿ ಏನೂ ಪೂರ್ತಿ ಅರ್ಥವಾಗುವುದಿಲ್ಲ. ನಾವು ಏನು ಹೇಳಹೊರಟಿದ್ದೇವೆ ಎನ್ನುವುದು ಪೂರ್ತಿ ಅರ್ಥವಾಗುವುದು ಕೊನೆಯಲ್ಲಿಯೇ. ಚಿತ್ರಕಥೆಯೂ ತುಂಬ ಗಟ್ಟಿಯಾಗಿದೆ’ ಎಂದು ಅವರು ವಿವರಿಸುತ್ತಾರೆ.

‘‘ನಾವು ಪ್ರತಿಯೊಂದು ಸಂಬಂಧಗಳಿಗೂ ಹೆಸರಿಟ್ಟುಕೊಂಡು ಸಮಾಧಾನ ಮಾಡಿಕೊಳ್ಳುತ್ತಿರುತ್ತೇವೆ. ಆ ಹೆಸರಿನ ಚೌಕಟ್ಟಿನಲ್ಲಿಯೇ ಕಂಫರ್ಟಬಲ್‌ ಆಗಿರುತ್ತೇವೆ. ಆದರೆ ಹಾಗೆ ಹೆಸರಿಲ್ಲದ, ಹೆಸರಿಡಲು ಸಾಧ್ಯವಿಲ್ಲದ ಹಲವು ಸಂಬಂಧಗಳೂ ನಮ್ಮ ಬದುಕಿನ ಭಾಗವಾಗುತ್ತವೆ. ಹೀಗೆ ಹೆಸರಿಡಲು ಸಾಧ್ಯವಿಲ್ಲದ ಸಂಬಂಧಗಳ ಹೆಣಿಗೆಯೇ ‘ಏನೆಂದು ಹೆಸರಿಡಲಿ’’ ಎಂದು ವ್ಯಾಖ್ಯಾನಿಸುತ್ತಾರೆ ರೋಜಾ. ಅವರಿಗೆ ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆಯೂ ತುಂಬ ಖುಷಿಯಿಂದಲೇ ಮಾತನಾಡುತ್ತಾರೆ.

‘ಇಡೀ ಸಿನಿಮಾದಲ್ಲಿ ನಾನು ನಾಯಕಿ ಎಂಬ ವಿಶೇಷಣದಲ್ಲಿ ಬಿಂಬಿತವಾಗುವುದೇ ಇಲ್ಲ. ಮನೆಯಲ್ಲಿ ಹೇಗಿರುತ್ತೇನೆಯೋ ಅಷ್ಟೇ ಸರಳವಾಗಿರುತ್ತೇನೆ. ನನ್ನ ಕೇಶವಿನ್ಯಾಸ ಕೂಡ ಬದಲಾಯಿಸಿಕೊಂಡಿಲ್ಲ. ಸಾಮಾನ್ಯವಾಗಿ ಚಿಕ್ಕಂದಿನಲ್ಲಿ ಅಪ್ಪ–ಅಮ್ಮ ಅಂದ್ರೆ ತುಂಬ ಇಷ್ಟಪಡುವವರು ಅನೇಕ ಜನ ಕಾಲೇಜಿಗೆ ಬಂದ ಮೇಲೆ ಪ್ರೇಮದಲ್ಲಿ ಬಿದ್ದು ತಂದೆ ತಾಯಿಯನ್ನು ಮರೆತುಬಿಡುತ್ತಾರೆ. ಗೆಳೆಯನ ಒಲವು ಮತ್ತು ಅಮ್ಮನ ಅಕ್ಕರೆ ಎರಡನ್ನೂ ಕಾಪಾಡಿಕೊಳ್ಳುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದಲ್ಲೊಂದು ಒಳ್ಳೆಯ ಸಂದೇಶ ವಿದೆ’ ಎಂದು ರೋಜಾ ಮತ್ತೊಮ್ಮೆ ಮುಖ ಅರಳಿಸಿ ನಕ್ಕರು.

ಸಾಮಾನ್ಯವಾಗಿ ನಟಿಯರಿಗೆ ನಾವು ಸಿನಿಮಾದಲ್ಲಿ ತುಂಬ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಆದರೆ ನೀವು ಸರಳ ಪಾತ್ರಗಳಲ್ಲಿಯೇ ಹೆಚ್ಚು ಆಸಕ್ತರಾಗಿರುವಂತಿದೆಯಲ್ಲ ಎಂದು ಪ್ರಶ್ನಿಸಿದರೆ ಮತ್ತೊಮ್ಮೆ ನಗುವುಕ್ಕಿಸಿಯೇ ಉತ್ತರಿಸತೊಡಗಿದರು.

‘ನಿಮ್ಮ ಮಾತು ನಿಜ. ಆದರೆ ನಾವು ಒಂದು ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿರ್ಧರಿಸುವುದು ನಾವಲ್ಲ.  ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಳ್ಳಬೇಕಷ್ಟೆ. ನನಗೂ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಹಾಗಂತ ಗ್ಲ್ಯಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲ. ಪಕ್ಕದ್ಮನೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದೇ ನನಗಿಷ್ಟ.  ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಪಾತ್ರ ಮುಖ್ಯ, ಲುಕ್‌ ಅಲ್ಲ’ ಎನ್ನುವ ಅವರಿಗೆ ಹೀಗೆ ಬಂದು ಹಾಗೆ ಹೋಗುವ ನಾಮಕಾವಸ್ಥೆ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. ‘ಸಿನಿಮಾ ಮುಗಿದ ಮೇಲೂ ಪ್ರೇಕ್ಷಕರ ನೆನಪಿನಲ್ಲಿ ಉಳಿದುಕೊಳ್ಳುವಂಥ ಪಾತ್ರಗಳನ್ನು ನಿರ್ವಹಿಸಬೇಕು’ ಎನ್ನುವುದು ಅವರ ಇಂಗಿತ.

ನಗುವಿನ ಬತ್ತದ ಚಿಲುಮೆಯನ್ನು ಮೊಗದಲ್ಲಿಯೇ ಇರಿಸಿಕೊಂಡಿರುವ ರೋಜಾ ಅವರಿಗೆ ಇನ್ನೊಂದು ವಿಚಿತ್ರ ಆಸೆಯೂ ಇದೆ. ಅದು ಸೈಕೋ ಪಾತ್ರದಲ್ಲಿ ನಟಿಸಬೇಕು ಎಂಬುದು!

‘ಸೈಕೋ ಅಂದರೆ ಸ್ಪ್ಲಿಟ್‌ ಪರ್ಸನಾಲಿಟಿಯ ಪಾತ್ರದಲ್ಲಿ ನಟಿಸಬೇಕು. ಇದಕ್ಕೆ ಪ್ರೇರಣೆ ಸೌಂದರ್ಯಾ. ನಾನು ಸೌಂದರ್ಯಾ ಅವರ ದೊಡ್ಡ ಅಭಿಮಾನಿ ಗೊತ್ತಾ?’ ಎಂದು ತಮ್ಮ ಕನಸಿನ ಪಾತ್ರದ ಕುರಿತು ಅವರು ವಿವರಿಸುತ್ತಾರೆ.

‘ನಟಿಯಾಗಲು ಅರ್ಹತೆಗಿಂತ ಬದ್ಧತೆ ಮುಖ್ಯ’ ಎನ್ನುವ ಅವರು – ‘ನಾಯಕಿಯಾಗುವುದು ಕಷ್ಟದ ಕೆಲಸ. ಅದರಲ್ಲಿಯೂ ನಾಯಕಿಯಾದ ಮೇಲೆ ಅದೇ ಸ್ಥಾನದಲ್ಲಿ ವೃತ್ತಿಬದುಕನ್ನು ಕಟ್ಟಿಕೊಳ್ಳುವುದು ಇನ್ನಷ್ಟು ಕಷ್ಟ. ಏನೇ ಬಂದರೂ ಧೈರ್ಯದಿಂದ ಎದುರಿಸುವ ಸತ್ವ ಇರಬೇಕು. ಯಾರೋ ಏನೋ ಅಂದ್ರು ಅಂತ ತಲೆಕೆಡಿಸಿಕೊಂಡು ಕೂತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜನ ನೂರಾರು ಮಾತನಾಡುತ್ತಾರೆ. ನನ್ನ ಪ್ರತಿಭೆಯನ್ನು ಸಾಬೀತುಗೊಳಿಸುವ ಅವಕಾಶ ಇಂದಲ್ಲ ನಾಳೆ ಬಂದೇ ಬರುತ್ತದೆ ಎಂಬ ನಂಬಿಕೆ ಮತ್ತು ಅದನ್ನು  ಸಾಧಿಸಲು ಬೇಕಾದ ಪರಿಶ್ರಮ ಎರಡೂ ಇರಬೇಕು’ ಎನ್ನುವಾಗ ಮಾತ್ರ ಅವರ ಮುಖದಲ್ಲಿನ ಮಂದಹಾಸ ಮಾಯವಾಗಿ ಧ್ವನಿ ಕೊಂಚ ಗಂಭೀರವಾಯಿತು.

ತಮ್ಮ ಮಾತಿಗೆ ತಕ್ಕ ಹಾಗೆ ರೋಜಾ ಸಂಪೂರ್ಣ ಸಿದ್ಧರಾಗಿಯೇ ಸೆಟ್‌ಗೆ ಹೋಗುತ್ತಾರೆ. ನಾಳಿನ ಚಿತ್ರೀಕರಣಕ್ಕೆ ಹಿಂದಿನ ದಿನವೇ ಮಾನಸಿಕವಾಗಿ ಸಿದ್ಧರಾಗುತ್ತಾರೆ.

ರೋಜಾ ಅವರ ಬದ್ಧತೆಗೆ ತಕ್ಕ ಹಾಗೆ ಅವರಿಗೆ ಅವಕಾಶದ ಬಾಗಿಲುಗಳೂ ತೆರೆದುಕೊಳ್ಳುತ್ತಿವೆ. ಸದ್ಯಕ್ಕೆ ಶ್ರೀನಿವಾಸ್‌ ನಿರ್ದೇಶನದ ‘ಬಿಲ್‌ ಗೆಟ್ಸ್‌’ ಚಿತ್ರೀಕರಣ ನಡೆಯುತ್ತಿದೆ. ಫೆಬ್ರುವರಿ ಮಧ್ಯದಲ್ಲಿ ‘ಮೊದಲ ಮಿಡಿತ’ ಎಂಬ ಇನ್ನೊಂದು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
 
ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿನಟಿಸುವ ಅವಕಾಶಗಳೂ ಅವರನ್ನು ಅರಸಿ ಬಂದಿದ್ದವು. ‘ಆದರೆ ಬೇರೆ ಭಾಷೆಗಳಲ್ಲಿ ನಟಿಸುವಷ್ಟು ವಿಶ್ವಾಸ ನನಗಿನ್ನೂ ಬಂದಿಲ್ಲ. ಕನ್ನಡದಲ್ಲಿಯೇ ನನ್ನ ಪ್ರತಿಭೆಯನ್ನು ಸಾಬೀತುಪಡಿಸಿ ನಂತರ ಬೇರೆ ಭಾಷೆಗಳಲ್ಲಿ ನಟಿಸುತ್ತೇನೆ’ ಎಂದು ಕನ್ನಡದ ನೆಲದಲ್ಲಿಯೇ ಅರಳುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT