ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತವೈದ್ಯೆಯ ಸಿನಿಮಾ ಪ್ರೀತಿ

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಡೆಂಟಿಸ್ಟ್ರಿಯೂ ಒಂದು ಕಲೆ. ಇಲ್ಲಿ ಕುಶಲತೆ ಬೇಕು. ಹಾಳಾದ ಹಲ್ಲುಗಳನ್ನು ಚೆನ್ನಾಗಿ ಕಾಣಿಸುವಂತೆ ಮಾಡಬೇಕು. ಹೊಸ ಆಕಾರ, ಸ್ವರೂಪ ನೀಡಬೇಕು’ – ನಟಿ ಜಾಹ್ನವಿ ಜ್ಯೋತಿ ತಮ್ಮ ವೃತ್ತಿ ಮತ್ತು ಪ್ರವೃತ್ತಿ ಎರಡನ್ನೂ ಸಮೀಕರಿಸಿದ್ದು ಹೀಗೆ.

ಚಿತ್ರರಂಗದಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸುವ ಉತ್ಸಾಹದಲ್ಲಿರುವ ಜಾಹ್ನವಿ, ವೃತ್ತಿಯಲ್ಲಿ ದಂತವೈದ್ಯೆ. ‘ಡಾ. ಜಾಹ್ನವಿ ಜ್ಯೋತಿ’ ಎಂದು ತಮ್ಮನ್ನು ಕರೆದುಕೊಳ್ಳುವ ಹೆಮ್ಮೆ ಅವರದು. ಅದರೊಟ್ಟಿಗೆ ನಟಿ ಎಂದು ಗುರ್ತಿಸಿಕೊಳ್ಳುವ ಪುಲಕವೂ ಸೇರಿಕೊಂಡಿದೆ.

ಕುತೂಹಲ ಮೂಡಿಸಿರುವ ‘ಉರ್ವಿ’ ಚಿತ್ರದಲ್ಲಿ ಪ್ರಮುಖ ಮಹಿಳಾ ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ಜಾಹ್ನವಿ, ಅದರ ಬೆನ್ನಲ್ಲೇ ಒಂದಷ್ಟು ಅವಕಾಶಗಳನ್ನೂ ಗಿಟ್ಟಿಸಿಕೊಂಡಿದ್ದಾರೆ. ‘ಕಾಣದ ಕಡಲಿಗೆ’ ಬಿಡುಗಡೆಗೆ ಸಿದ್ಧವಾಗುತ್ತಿರುವ ಅವರ ನಟನೆಯ ಇನ್ನೊಂದು ಸಿನಿಮಾ. ‘ಕುಹೂ’ ಮತ್ತು ‘ಅವನಲ್ಲಿ, ಇವಳಿಲ್ಲಿ’ ಚಿತ್ರಗಳು ಈ ತಿಂಗಳ ಅಂತ್ಯಕ್ಕೆ ಸೆಟ್ಟೇರಲಿವೆ.

‘ಜಾತ್ರೆ’ ಮತ್ತು ‘ಮಿ. ಮೊಮ್ಮಗ’ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ ಅವರನ್ನು ಬಣ್ಣದ ಲೋಕಕ್ಕೆ ಕರೆತಂದವರು ‘ಸಾಗರ ಸಂಗಮ’ ಧಾರಾವಾಹಿಯ ನಿರ್ದೇಶಕ ಪ್ರದೀಪ್ ವರ್ಮಾ. ಧಾರಾ ವಾಹಿಯ ಶೀರ್ಷಿಕೆ ಗೀತೆಗೆ ಶಾಸ್ತ್ರೀಯ ನೃತ್ಯಪಟುಗಳ ಅಗತ್ಯವಿತ್ತು. ಜಾಹ್ನವಿ ಅವರಿ ಗೆ ಕ್ಯಾಮೆರಾ ಎದುರಿ ಸಲು ದೊರೆತ ಈ ಅವಕಾಶ, ಅವರಲ್ಲಿ ನಟನೆಯ ಆಸಕ್ತಿ ಚಿಗುರಿಸಿತು.

ಬಳಿಕ ಪ್ರದೀಪ್ ತಮ್ಮ ‘ಉರ್ವಿ’ ಚಿತ್ರದಲ್ಲಿಯೂ ಅವಕಾಶ ನೀಡಿದರು. ‘ಸಂಚಾರಿ’ ವಿಜಯ್‌ ಜತೆ ಇತ್ತೀಚೆಗೆ ‘ಅವ್ಯಕ್ತ’ ಎಂಬ ಕಿರುಚಿತ್ರದಲ್ಲಿ ಜಾಹ್ನವಿ ನಟಿಸಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಜಾಹ್ನವಿ ಮೂಲತಃ ಶಾಸ್ತ್ರೀಯ ನೃತ್ಯಪಟು. ಕಾಲೇಜು ಮೆಟ್ಟಿಲೇರಿದ ಬಳಿಕ ‘ಶ್ಯಾಡೋಸ್‌ಒನ್‌’ ಎಂಬ ವೃತ್ತಿಪರ ನೃತ್ಯತಂಡ ಸೇರಿಕೊಂಡರು. ಇಷ್ಟಪಟ್ಟು ಸೇರಿದ ದಂತವೈದ್ಯಕೀಯ ಪದವಿ ತೀರಾ ತುಟ್ಟಿ. ಹೀಗಾಗಿ ತಮ್ಮ ವೈಯಕ್ತಿಕ ಖರ್ಚುಗಳಿಗೆ ಮನೆಯವರನ್ನು ಅವಲಂಬಿಸಬಾರದು ಎಂದು ತಮ್ಮ ಪಾಕೆಟ್‌ ಮನಿಯನ್ನು ತಾವೇ ಸಂಪಾದಿಸುವ ಮಾರ್ಗವನ್ನು ನೃತ್ಯದ ಮೂಲಕ ಕಂಡುಕೊಂಡರು. ರಾತ್ರಿ ಡಾನ್ಸ್‌ಷೋ ನೀಡಿ ತಡವಾಗಿ ಮನೆಗೆ ಬಂದರೂ, ಬೆಳಿಗ್ಗೆ ಬೇಗನೆ ಕಾಲೇಜಿಗೆ ಹೋಗುವ ಬದ್ಧತೆ ಅವರದು.

ಧಾರಾವಾಹಿ ಶೀರ್ಷಿಕೆ ಗೀತೆ ನರ್ತಿಸಿದ್ದು, ತಾನೇಕೆ ನಟಿಸಬಾರದು ಎಂಬ ಪ್ರಶ್ನೆಯನ್ನು ಅವರಲ್ಲಿ ಹುಟ್ಟುಹಾಕಿತು. ಅನೇಕರೂ ಇದೇ ಪ್ರಶ್ನೆಯನ್ನು ಅವರ ಮುಂದಿಟ್ಟರು. ಮುಂದೆ ಬಣ್ಣ ಹಚ್ಚಲು ಈ ಪ್ರಶ್ನೆಗಳೇ ಪ್ರೇರಣೆಯಾದವು. ಅತ್ತ ವೃತ್ತಿಯನ್ನು ಬಿಡದೆ, ನಟನೆಯನ್ನೂ ಅಪ್ಪಿಕೊಳ್ಳುವ ಉದ್ದೇಶ ಅವರದು. ಪ್ರೊಫೆಷನ್ ಮತ್ತು ಪ್ಯಾಷನ್ ಎರಡನ್ನೂ ಸಂಭಾಳಿಸಿಕೊಂಡು ಹೋಗುವುದು ತಮಗೆ ಕಷ್ಟವೇನಲ್ಲ ಎನ್ನುತ್ತಾರೆ. ಸಮಯ ಸಿಕ್ಕಾಗ ಸೇಹಿತರ ಕ್ಲಿನಿಕ್‌ಗೆ ಹೋಗಿ ವೃತ್ತಿಯಲ್ಲಿ ತೊಡಗಿಕೊಳ್ಳುವ ಅವರು, ಉಳಿದ ಸಮಯವನ್ನು ನಟನೆ, ನೃತ್ಯ ಮತ್ತು ಓದಿಗೆ ಮೀಸಲಿಡುತ್ತಿದ್ದಾರೆ.

ಸಿನಿಮಾ ಆಸಕ್ತಿಯಾದರೂ, ನಟನೆಗೆ ಸಾಣೆ ಹಿಡಿಯಲು ರಂಗಭೂಮಿಯೇ ಸೂಕ್ತ ಜಾಗ ಎಂದು ‘ರಂಗಪ್ರತಿಭಾ’ ತಂಡದೊಂದಿಗೆ ಸೇರಿಕೊಂಡರು. ನಿರ್ದೇಶಕ ಮಂಜು ನಾರಾಯಣ್‌ ಬಳಿ ಹಂತ ಹಂತವಾಗಿ ನಟನೆಯ ಪಟ್ಟುಗಳನ್ನು ಕಲಿತರು. ರಂಗಭೂಮಿ ಕಲಿಕೆ ಬರಿ ನಟನೆಯಲ್ಲ, ನಮ್ಮ ವ್ಯಕ್ತಿತ್ವ, ಮಾನವೀಯ ಗುಣಗಳನ್ನು ತಿದ್ದುವ ಶಾಲೆ ಎನ್ನುವುದು ಜಾಹ್ನವಿ ಅವರ ಅನುಭವ. ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಜನರಿರುತ್ತಾರೆ.

ಆದರೆ ರಂಗಭೂಮಿಯಲ್ಲಿ ನಿರ್ಮಾಣ ಕಾರ್ಯ, ನಟನೆಯಿಂದ ರಂಗಮಂಟಪವನ್ನು ಸ್ವಚ್ಛಗೊಳಿಸುವ ಎಲ್ಲ ಕೆಲಸವನ್ನೂ ಮಾಡಬೇಕು. ಇವು ನಟನೆಯ ಕಲಿಕೆಯಾಚೆಗೆ ನಮ್ಮತನವನ್ನು, ಮಾನವೀಯ ಮೌಲ್ಯಗಳನ್ನು ಬೆಳೆಸಿತು ಎನ್ನುತ್ತಾರೆ ಅವರು.

‘ನಟನೆ ಎನ್ನುವುದು ನಟಿಸುವುದಲ್ಲ. ಸಹಜವಾಗಿರುವುದು’ ಎಂಬ ನಾಟಕದ ಗುರುಗಳ ಮಾತನ್ನು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಅವರು. ‘ಆಸ್ಕ್‌ ಮಿಸ್ಟರ್‌ ವೈಎನ್ಕೆ’ ನಾಟಕ ಕಲಾವಿದೆಯಾಗಿ ಅವರಲ್ಲಿ ಅಭಿನಯದಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಬಾಲ್ಯದಿಂದಲೂ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದರಿಂದ ಕನ್ನಡದ ಕುರಿತು ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಹೀಗಾಗಿ ಭಾಷೆಯಲ್ಲಿ ಸಂಪೂರ್ಣ ಹಿಡಿತ ಇರಲಿಲ್ಲ. ‘ಎಷ್ಟು ಕನ್ನಡ ಓದುತ್ತೀರೋ, ಅಷ್ಟು ಚೆನ್ನಾಗಿ ಭಾಷೆ ಸುಧಾರಣೆಯಾಗುತ್ತದೆ’ ಎಂಬ ಗುರುಗಳ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಾಹ್ನವಿ ಪ್ರಸ್ತುತ ಕನ್ನಡದ ಕಾದಂಬರಿಗಳನ್ನು ಓದುವ ಸುಖ ಅನುಭವಿಸುತ್ತಿದ್ದಾರೆ. ಸಿನಿಮಾದ ಜೊತೆಜೊತೆಗೆ ತಮ್ಮ ನೆಚ್ಚಿನ ದಂತ ವೈದ್ಯ ವೃತ್ತಿಯನ್ನು ಬಿಡಬಾರದು ಎಂಬ ಎಚ್ಚರಿಕೆಯೂ ಅವರಲ್ಲಿದೆ. ಎರಡು ಮೂರು ವರ್ಷದಲ್ಲಿ ತಮ್ಮದೇ ಕ್ಲಿನಿಕ್‌ ಆರಂಭಿಸುವ ಉದ್ದೇಶ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT