ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜರ್ ಆಟದ ಗುಲಾಬಿ

ಸಾಧಕ
Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕೆಲವು ತಿಂಗಳ ಹಿಂದೆ ಸ್ಪೇನ್‌ನ ಮಲ್ಲೊರ್ಕಾದಲ್ಲಿ ಟೆನಿಸ್ ಅಕಾಡೆಮಿಯೊಂದು ಪ್ರಾರಂಭವಾಯಿತು. ಅದರ ಉದ್ಘಾಟನೆಗೆ ರಫೆಲ್ ನಡಾಲ್ ಕರೆದದ್ದು ತಮ್ಮ ಕಡುಸ್ಪರ್ಧಿ ರೋಜರ್ ಫೆಡರರ್ ಅವರನ್ನು. ಬದುಕಿನಲ್ಲಿ ಮೊದಲ ಬಾರಿಗೆ ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ರೋಜರ್ ಕುಂಟುತ್ತಿದ್ದರು. ಮುಂಗೈ ನೋವಿನಿಂದ ನರಳುತ್ತಿದ್ದ ರಫೆಲ್ ಇದ್ದುದೂ ಲೀಲಾಜಾಲವಾಗಿ ಆಡದ ಸ್ಥಿತಿಯಲ್ಲಿ. ಇಬ್ಬರೂ ಒಂದಿಷ್ಟು ಹೊತ್ತು ಟೆನಿಸ್ ಅಂಗಳದಲ್ಲಿ ನಗುನಗುತ್ತಾ ಸ್ನೇಹಮಯಿಗಳಾಗಿ ಆಡಿದರು. ‘ಈ ತರಹ ಆಡುವುದರಲ್ಲೂ ಏನೋ ಮಜವಿದೆ’ ಎಂದು ರೋಜರ್ ಮಂದಹಾಸ ಬೀರಿದ್ದರು. 
 
ಮೊನ್ನೆ  ಆಸ್ಟ್ರೇಲಿಯಾ ಓಪನ್ ಟೆನಿಸ್ ಪುರುಷರ ಸಿಂಗಲ್ಸ್‌ನ ಫೈನಲ್ಸ್ ಆಡಲು ಇದೇ ಇಬ್ಬರೂ ಎದುರಾದಾಗ ಅವರ ಆಪ್ತೇಷ್ಟರಿಗೆ ಕೆಲವು ತಿಂಗಳುಗಳ ಹಿಂದಿನ ಆ ಸ್ನೇಹದಾಟ ನೆನಪಾಯಿತು. ರೋಜರ್ ಕಳೆದ ವರ್ಷ ಮಂಡಿನೋವಿನಿಂದ ನರಳಿದ್ದರು. ಆಗಸ್ಟ್‌ನಲ್ಲಿ ಅವರಿಗೆ 35 ವಯಸ್ಸಾದ ಮೇಲೆ, ‘ಇನ್ನು ಮೊದಲಿನಂತೆ ರೋಜರ್ ಆಡುವುದು ಕಷ್ಟ’ ಎಂದು ಟೆನಿಸ್ ಪಂಡಿತರು ವಿಶ್ಲೇಷಿಸಿದ್ದರು. 
 
ಆಸ್ಟ್ರೇಲಿಯಾ ಓಪನ್ ಶುರುವಾದಾಗ ಮೊದಲ ಸುತ್ತಿನ ಪಂದ್ಯದ ಎರಡು ಸೆಟ್‌ಗಳಲ್ಲಿ ರೋಜರ್ ಆಟದಲ್ಲಿ ಹಳೆಯ ಲಯವಿರಲಿಲ್ಲ. ಕ್ರಮೇಣ ಅವರು ಆಟಕ್ಕೆ ಕುದುರಿಕೊಂಡರು. ಒಂದೊಂದೇ ಸುತ್ತು ಮುಗಿಯುತ್ತಾ ಹೋದಂತೆ ಎದುರಾಳಿ ಹುಡುಗರಿಗೆ ಸ್ವಿಟ್ಜರ್ಲೆಂಡ್‌ನ ಆಟಗಾರನ ಪ್ರತಿಭೆ ಹಾಗೂ ಅನುಭವದ ವಿಶ್ವರೂಪ ದರ್ಶನ ಆಗುತ್ತಾ ಹೋಯಿತು. 
 
ಸೆಮಿಫೈನಲ್ಸ್‌ನಲ್ಲಿ ತಮ್ಮದೇ ದೇಶದ ಹುಡುಗ ವಾವ್ರಿಂಕ ಎದುರು ರೋಜರ್ ಆಡಿದ್ದು ಇನ್ನೊಂದು ರೋಚಕ ಪಂದ್ಯ. ಮೂರು ಗಂಟೆ ಐದು ನಿಮಿಷ ನಡೆದ ಆ ಪಂದ್ಯ ನೋಡಿದವರಲ್ಲಿ ಸುದ್ದಿಗೆ ಪಕ್ಕಾದದ್ದು ಫೆಡರರ್ ಪತ್ನಿ ಮಿರ್ಕಾ. ಗುಲಾಬಿ ಬಣ್ಣ ಫೆಡರರ್‌ಗೆ ಇಷ್ಟ. ತಮ್ಮ ಪತ್ನಿಗೆ ಅವರು ಗುಸ್ಸಿ ಕಂಪೆನಿಯ ಅಪರೂಪದ ವಿನ್ಯಾಸದ ಸ್ವೆಟರ್ ಕೊಡಿಸಿದ್ದರು. ಅದರ ಬಣ್ಣವೂ ಗುಲಾಬಿ. ಸೆಮಿಫೈನಲ್ ಪಂದ್ಯ ನೋಡಲು ಅವರು ಆ ಸ್ವೆಟರ್ ತೊಟ್ಟೇ ಕ್ರೀಡಾಂಗಣಕ್ಕೆ ಬಂದಿದ್ದರು. ಅವರನ್ನು ನೋಡಿದೊಡನೆ ಫೆಡರರ್ ಮುಖವೂ ಗುಲಾಬಿ ಬಣ್ಣಕ್ಕೆ ತಿರುಗಿತು. ಅಂದಾಜು ಒಂದು ಲಕ್ಷ ರೂಪಾಯಿ ಬೆಲೆಯ ಆ ಅದೃಷ್ಟದ ಸ್ವೆಟರ್, ಆ ಸೆಮಿಫೈನಲ್ ಪಂದ್ಯ ಮುಗಿದ ಮೇಲೆ ಸುದ್ದಿಯಾಯಿತೆನ್ನುವುದು ಬೇರೆ ಮಾತು. 
 
ರೋಜರ್ ಹಾಗೂ ನಡಾಲ್ ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ಸ್‌ನಲ್ಲಿ ಮುಖಾಮುಖಿಯಾಗಿ ಆಡಿ ಆರು ವರ್ಷಗಳಾಗುತ್ತಾ ಬಂದಿತ್ತು. ಗತವೈಭವ ಮರಳುವಂತೆ ಇಬ್ಬರೂ ಎದುರು ಬದಿರಾದರು. ಐದನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಗೆದ್ದು, ಫೆಡರರ್ ಗೆಲುವಿನ ನಗೆ ಬೀರಿದಾಗ ಎದ್ದುನಿಂತು ಕರತಾಡನ ಮಾಡಿದವರ ಸಂಖ್ಯೆ ದೊಡ್ಡದು. ಟೆನಿಸ್, ಹರೆಯದ ಕಾಲುಗಳ ಆಟ. ರೋಜರ್ ಅವರ ಚಿಗರೆ ಕಾಲುಗಳನ್ನು  ಕಂಡು ಪೀಟ್ ಸಾಂಪ್ರಾಸ್ ದಂಗಾಗಿದ್ದರು. ನಡಾಲ್ ಭುಜಭಲ ಪರಾಕ್ರಮ ನೋಡಿ ರೋಜರ್ ಬೇರೆಯದೇ ಸವಾಲುಗಳಿಗೆ ಎದೆಗೊಟ್ಟರು. ಈಗ ವಾವ್ರಿಕ, ಡಿಮಿಟ್ರೊವ್ ತರಹದ ಬಿಸಿರಕ್ತದ ಸಂಚಲನ ಟೆನಿಸ್‌ನಲ್ಲಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಹರೆಯದ ಲಯದ ಮರು ಅನ್ವೇಷಣೆಯಲ್ಲಿ ಇರುವ ಕಾಲುಗಳು ಆಡುವುದು ಕ್ರೀಡಾರಾಧಕರಿಗೆ ರೋಮಾಂಚನದ ಅನುಭವವೇ ಸರಿ. 
 
‘ರಫೆಲ್ ನನಗೆ ವರ್ಷಗಟ್ಟಲೆ ಸವಾಲುಗಳನ್ನು ಹಾಕಿದ್ದಾನೆ. ಬಹುಶಃ ಅವನ ಮೊದಲ ಅಭಿಮಾನಿ ನಾನು. ನಾನೇ ಅವನನ್ನು ಸೋಲಿಸಿದಾಗ ಅಥವಾ ಅವನಿಂದ ಸೋತಾಗ ಆಗುವ ಜ್ಞಾನೋದಯ ಅಷ್ಟಿಷ್ಟಲ್ಲ’- ರೋಜರ್‌ನ ಈ ಮಾತಿನ ಅರ್ಥ ವಿಸ್ತಾರ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT