ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಡಿನಲ್ಲಿ ರಕ್ತಸ್ರಾವ

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಳಿಗ್ಗೆ ಎದ್ದು ಮುಖ ತೊಳೆದು ಹಲ್ಲುಜ್ಜುವುದು ದಿನಚರಿಯ ಮುಖ್ಯ ಭಾಗ. ನಿದ್ದೆಗಣ್ಣಲ್ಲಿ ಬ್ರಶ್‌ಗೆ ಪೇಸ್ಟ್ ಹಾಕಿ ಹಲ್ಲು ತಿಕ್ಕಿ ಬಾಯಿ ಮುಕ್ಕಳಿಸುವಾಗ ರಕ್ತ ಕಂಡರೆ? ಕೆಲವರು ‘ಅಯ್ಯೋ ರಕ್ತ’ ಎಂದು ಹೆದರಿ ಕಂಗಾಲಾದರೆ, ಮತ್ತೆ ಹಲವರು ’ಸ್ವಲ್ಪ ತಾನೇ, ಏನೀಗ?’ ಎಂದು ಗಮನ ನೀಡುವುದಿಲ್ಲ. ಅತ್ಯಂತ ಸಾಮಾನ್ಯವಾಗಿ ಕಂಡುಬರುವ ವಸಡಿನ ರಕ್ತಸ್ರಾವ ಹೆಚ್ಚಿನ ಸಂದರ್ಭಗಳಲ್ಲಿ ಗಂಭೀರ ಸಮಸ್ಯೆಯಲ್ಲ. ಹಾಗೆಂದು ನಿರ್ಲಕ್ಷಿಸುವಂತೆಯೂ ಇಲ್ಲ! ಏಕೆಂದರೆ ಹಲ್ಲು ಮತ್ತು ಅದರ ಬೇರನ್ನು ಬಲವಾಗಿ ಹಿಡಿದಿಡುವ, ದವಡೆ ಮೂಳೆಯ ಮೇಲಿನ ಪದರ ವಸಡು. ಆರೋಗ್ಯಕರ ಹಲ್ಲಿಗೆ, ಸ್ವಸ್ಥ  ವಸಡು-ಮೂಳೆಯ ಅವಶ್ಯವಿರುತ್ತದೆ.
 
ಪಚನಕ್ರಿಯೆಯಲ್ಲಿ ಆಹಾರವನ್ನು ಜಗಿಯುವ ಕೆಲಸ ಹಲ್ಲಿನದ್ದು. ಆಗ ಉಂಟಾಗುವ ಒತ್ತಡವನ್ನು ಹೀರುವುದು ವಸಡಿನ ಭಾಗ. ವಸಡಿನ ರೋಗದ ಮೊದಲ ಲಕ್ಷಣವೇ ವಸಡಿನ ರಕ್ತಸ್ರಾವ. ಈ ಹಂತದಲ್ಲಿ ತೊಂದರೆಯನ್ನು ಗುರುತಿಸಿ ವಸಡಿನ ತೊಂದರೆಯನ್ನು ಗುಣಪಡಿಸಬಹುದು. ಹಾಗೇ ಬಿಟ್ಟಲ್ಲಿ, ವಸಡಿನಲ್ಲಿ ಆಗಾಗ್ಗೆ ರಕ್ತ ಬರುವುದರ ಜೊತೆ, ಊತ, ನೋವು, ಚುಚ್ಚುವ ಅನುಭವಗಳು  ಕಾಣಿಸಿಕೊಳ್ಳಬಹುದು. ಇಲ್ಲಿಂದ ಮುಂದೆ ಸೋಂಕು ಹೆಚ್ಚಾಗಿ, ಒಳಪದರಗಳಿಗೆ ಹರಡುತ್ತದೆ. ದವಡೆಯ ಮೂಳೆಯ ಸವೆತ ಶುರುವಾಗುತ್ತದೆ. ಅದು ತೀವ್ರವಾದಾಗ ನಿಧಾನವಾಗಿ ಹಲ್ಲುಗಳು ಅಲುಗಾಡಲು ಪ್ರಾರಂಭಿಸುತ್ತವೆ. ಹೀಗೆ ಹಲ್ಲಿನಷ್ಟೇ ವಸಡಿನ ಆರೋಗ್ಯವೂ ಮುಖ್ಯವಾದುದರಿಂದ ಅದರತ್ತ ಗಮನ ನೀಡಲೇಬೇಕು. 
 
ಕಾರಣಗಳು
ವಸಡಿನ ಉರಿಯೂತ: ನಾವು ತಿನ್ನುವ ಆಹಾರದ ಸಣ್ಣ ಕಣಗಳು ನಮ್ಮ ಹಲ್ಲುಗಳ ಸಂದಿಗಳಲ್ಲಿ ಸಿಕ್ಕಿಕೊಂಡಿರುತ್ತದೆ. ಈ ಉಳಿದ ಕಣಗಳು ಸೂಕ್ಷ್ಮಾಣುಜೀವಿಗಳ ನೆಚ್ಚಿನ ಆಹಾರ. ಹಾಗೆಯೇ ಆಹಾರದ ಅಂಟು ಪದಾರ್ಥ, ಮತ್ತು ಸೂಕ್ಷ್ಮಾಣುಜೀವಿಗಳು ನಮ್ಮ ಹಲ್ಲಿನ ಹೊರಕವಚವಾದ ಎನಾಮೆಲ್ ಮೇಲೆ ಜಿಗುಟಾದ ತೆಳು ಪೊರೆಯನ್ನು ನಿರ್ಮಾಣ ಮಾಡುತ್ತವೆ. ಇದು ಹಲ್ಲಿನ ಕಸ ಅಥವಾ ಪ್ಲಾಕ್. ಇದಲ್ಲಿರುವ ಸಕ್ಕರೆ, ಪಿಷ್ಟ – ಇವುಗಳನ್ನು ಬಳಸಿ ಸೂಕ್ಷ್ಮಾಣುಜೀವಿಗಳು ತೀಕ್ಷ್ಣ ಆಮ್ಲಗಳನ್ನು ಉತ್ಪಾದಿಸುತ್ತವೆ. ಈ ಆಮ್ಲ ಹಲ್ಲಿನ ಎನಾಮೆಲ್ ಮೇಲೆ ದಾಳಿ ನಡೆಸುತ್ತವೆ. ಈ ಪೊರೆಯನ್ನು ದಿನವೂ ತೆಗೆದು ಸ್ವಚ್ಛಗೊಳಿಸದಿದ್ದರೆ ಅದು ವಸಡುಗಳ ಊತ ಮತ್ತು ಸೋಂಕಿಗೆ ಕಾರಣವಾಗುತ್ತದೆ. ಹಾಗಾಗಿಯೇ ವಸಡುಗಳಿಂದ ರಕ್ತಸ್ರಾವವನ್ನು ವಸಡಿನ ಉರಿಯೂತದ ಪ್ರಥಮ ಲಕ್ಷಣ ಎಂದು ಗುರುತಿಸಲಾಗುತ್ತದೆ. ಇದು ವಸಡಿನ ಊತ ಮತ್ತು ರಕ್ತಸ್ರಾವಕ್ಕೆ ಪ್ರಮುಖ ಕಾರಣ.
 
ಹೊಸ ಬ್ರಶ್: ಅನೇಕ ಬಾರಿ ಹಳೆಯ ಬ್ರಶ್ ಬಿಟ್ಟು ಹೊಸತನ್ನು ಉಪಯೋಗಿಸುವಾಗ ವಸಡಿನಲ್ಲಿ ರಕ್ತ ಕಾಣಬಹುದು. ಬ್ರಶ್‌ನ ಎಳೆಗಳು ಗಡುಸಾಗಿದ್ದಲ್ಲಿ, ಅಥವಾ ಅನಗತ್ಯವಾಗಿ ರಭಸದಿಂದ ಉಜ್ಜುವಾಗ ರಕ್ತಸ್ರಾವ ಕಾಣಿಸಬಹುದು.
 
ದಂತದಾರದ ಬಳಕೆ: ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಳ್ಳುವ ಆಹಾರಕಣಗಳನ್ನು ತೆಗೆದು ಸ್ವಚ್ಛವಾಗಿಡಲು ದಂತದಾರ ಅಥವಾ ‘ಡೆಂಟಲ್ ಫ್ಲಾಸ್’ ಬಳಕೆ ಉತ್ತಮ. ಆದರೆ  ದಂತದಾರ ಬಳಸುವ ಆರಂಭಿಕ ಹಂತದಲ್ಲಿ ಮೃದುವಾದ ವಸಡಿಗೆ ಜೋರಾಗಿ ತಾಗಿ ಅಲ್ಲಲ್ಲಿ ರಕ್ತ ಕಾಣಿಸಬಹುದು. ಸರಿಯಾದ ವಿಧಾನ ಮತ್ತು ಬಳಕೆ ಅಭ್ಯಾಸವಾದಂತೆ ಅಂದರೆ ವಾರದಲ್ಲಿ ಈ ರಕ್ತಸ್ರಾವ ತಾನಾಗಿ ನಿಲ್ಲುತ್ತದೆ.
 
ಹಾರ್ಮೋನಲ್ ಏರುಪೇರು: ಗರ್ಭಿಣಿಯಾದಾಗ ಮಹಿಳೆಯರಲ್ಲಿ ಹೆಚ್ಚಾಗಿ ವಸಡಿನ ರಕ್ತಸ್ರಾವ ಕಂಡುಬರುವುದಕ್ಕೆ ‘ಪ್ರೆಗ್ನೆನ್ಸಿ ಜಿಂಜವೈಟಿಸ್’ ಎಂದೇ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಹಾರ್ಮೋನುಗಳ ಏರು-ಪೇರು, ವಸಡಿನ ಮೇಲೆ ಪರಿಣಾಮ ಬೀರುವುದೇ ಇದಕ್ಕೆ ಕಾರಣ. ಶೇ. 50ಕ್ಕೂ ಹೆಚ್ಚು ಗರ್ಭಿಣಿಯರಲ್ಲಿ ವಸಡಿನ ರಕ್ತಸ್ರಾವವಿರುತ್ತದೆ. ಮಗುವಿನ ಜನನದ ನಂತರ ಹಾರ್ಮೋನುಗಳ ಮಟ್ಟ ಸಹಜವಾದಾಗ ಈ ರಕ್ತಸ್ರಾವ ತಾನಾಗಿ ನಿಲ್ಲುತ್ತದೆ.
 
ಔಷಧಿ, ಮಾತ್ರೆಗಳ ಸೇವನೆ: ರಕ್ತವನ್ನು ತೆಳುವಾಗಿಸುವ ಔಷಧಿಗಳಾದ ಆಸ್ಪಿರಿನ್‌, ಹೆಪಾರಿನ್ ಮತ್ತು ವಾರ್ಫಾರಿನ್‌ಗಳನ್ನು ಸೇವಿಸುವಾಗ ರಕ್ತಸ್ರಾವದ ಬಗ್ಗೆ ಎಚ್ಚರಿಕೆ ವಹಿಸಬೇಕು.
 
ವಿಟಮಿನ್ ಕೊರತೆ: ಸಿ ಮತ್ತು ಕೆ ವಿಟಮಿನ್‌ಗಳ ಪ್ರಮಾಣ ದೇಹದಲ್ಲಿ ಕಡಿಮೆ ಇದ್ದಾಗ ವಸಡಿನಲ್ಲಿ ರಕ್ತಸ್ರಾವ ಕಾಣುವ ಸಾಧ್ಯತೆ ಇದೆ.
 
ಇದಲ್ಲದೆ ರಕ್ತ ಸಂಬಂಧಿ ತೊಂದರೆಗಳಾದ ಹೀಮೋಫೀಲಿಯಾ ಮತ್ತು ಲ್ಯುಕೀಮೀಯಾಗಳಲ್ಲಿ, ದೀರ್ಘಕಾಲದ ಧೂಮಪಾನಿಗಳು, ಮಧುಮೇಹಿಗಳಲ್ಲಿ ಹೀಗಾಗುವ ಸಂಭವವಿದೆ.
 
ಪರಿಹಾರ
* ದಿನಕ್ಕೆರಡು ಬಾರಿ ಮೆದು/ಮಧ್ಯಮ ಎಳೆಗಳುಳ್ಳ ಬ್ರಶ್‌ನಿಂದ ಸರಿಯಾದ ವಿಧಾನದಲ್ಲಿ ಹಲ್ಲುಜ್ಜುವುದು.
 
* ಪೋಷಕಾಂಶಗಳುಳ್ಳ ಸಮತೋಲನ ಆಹಾರ ಮತ್ತು ನೀರಿನ ಸೇವನೆ.
 
* ಬ್ರಶ್ ಮಾಡಿದ ನಂತರ ದಿನವೂ ಬೆರಳಿನಿಂದ ನಯವಾಗಿ, ಆದರೆ ದೃಢವಾಗಿ ಮಸಾಜ್ ಮಾಡುವುದು ಮತ್ತು ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ಬಾಯನ್ನು ಮುಕ್ಕಳಿಸುವುದು.
 
* ಧೂಮಪಾನದಿಂದ ದೂರವಿರುವುದು.
 
* ಮಾತ್ರೆ ಸೇವನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಬದಲಾವಣೆ.
 
* ಇವೆಲ್ಲವನ್ನು ಮಾಡಿದ ನಂತರ ಒಂದೆರಡು ವಾರಗಳಲ್ಲಿ ವಸಡಿನ ರಕ್ತಸ್ರಾವ ಕಡಿಮೆಯಾಗದಿದ್ದರೆ ಆಗ ಕೂಡಲೇ ದಂತವೈದ್ಯರನ್ನು ಕಾಣಬೇಕು. ಅವರು ಬಾಯಿಪರೀಕ್ಷೆ ನಡೆಸಿ ಅಗತ್ಯವಿದ್ದಲ್ಲಿ ಮೂಳೆಯ ಎಕ್ಸ್‌–ರೇ ತೆಗೆಯಬಹುದು. ಅವರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT