ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಸಂದೇಶ

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕರಾವಳಿ ಪ್ರದೇಶದಲ್ಲಿ ಹಿಂದೂ ದೇವಸ್ಥಾನಗಳ ಜಾತ್ರೆ ನಡೆಯುವ ಸ್ಥಳಗಳಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ಹರಾಜಿನಲ್ಲಿ ಕೊಡಬಾರದು ಎಂದು ಕೆಲವರು ತರಲೆ ಎಬ್ಬಿಸುವುದು ನಡೆಯುತ್ತಲೇ ಇದೆ. ಆದರೆ ಒಂದು ಕಾರಣಿಕದ ಹಿಂದೂ ಕ್ಷೇತ್ರದಲ್ಲಿ ದೈವೀ ಶಕ್ತಿಯೇ ಜಾತಿವಾದಿಗಳಿಗೆ ಬುದ್ಧಿವಾದ ಹೇಳಿದ ಉದಾಹರಣೆಯಿದೆ.

ಉಡುಪಿ ಜಿಲ್ಲೆಯ ಪಡುಬಿದ್ರಿ ಎಂಬಲ್ಲಿ ತುಳುವರು ಪೂಜಿಸುವ ಉಳ್ಳಾಯ ಎಂಬ ಕಾರಣಿಕ ದೈವದ ಬ್ರಹ್ಮಸ್ಥಾನ ಇದೆ. ಇಲ್ಲಿ ದೇವಸ್ಥಾನ ಕಟ್ಟುವುದು ನಿಷಿದ್ಧವಾಗಿದ್ದರಿಂದ ಪ್ರಕೃತಿ ಮಾತೆಯ ಪ್ರತೀಕವಾಗಿರುವ ಬನವೇ ಇಲ್ಲಿ ದೇವಾಲಯವಾಗಿದೆ. ಇಲ್ಲಿ ಎರಡು ವರ್ಷಕ್ಕೊಮ್ಮೆ 50 ದಿನಗಳ ಜಾತ್ರೆ ನಡೆಯುತ್ತದೆ ಹಾಗೂ ದಿನಾಲೂ ರಾತ್ರಿ ಪೂಜೆ ಇರುತ್ತದೆ. ಆದರೆ ಈ 50 ದಿನಗಳ ಪೂಜೆಗೆ ವಾದ್ಯ ಊದುವವರು ಈಗಲೂ ಮುಸ್ಲಿಮರು.

ಒಂದೂವರೆ ದಶಕದ ಹಿಂದಿನವರೆಗೂ ಇಲ್ಲಿ ಮೊಯಿಲಿ ಜಾತಿಯ ಹಿಂದೂಗಳು ವಾದ್ಯ ಊದುತ್ತಿದ್ದರು. ಆದರೆ ಕೆಲವು ಅನನುಕೂಲಗಳಿಂದ ಅವರು ಆ ಕೆಲಸ ಮುಂದುವರಿಸಲಿಲ್ಲ. ಹೀಗಾಗಿ ಮುಸ್ಲಿಂ ವಾದ್ಯಗಾರರ ತಂಡವನ್ನು ನೇಮಿಸಲಾಯಿತು. ಅವರು  ಶ್ರದ್ಧೆಯಿಂದ 50 ದಿನವೂ ವಾದ್ಯ ಸೇವೆ ಮಾಡುತ್ತಾರೆ.

ಆದರೆ ಆರು ವರ್ಷಗಳ ಹಿಂದೆ ಕೆಲವರ ಚಿತಾವಣೆಯಿಂದ ಮುಸ್ಲಿಮರ ಬದಲು ಹಿಂದೂಗಳನ್ನೇ ವಾದ್ಯ ಬಾರಿಸಲು ಮತ್ತೆ ನೇಮಿಸಬೇಕೆಂಬ ಬೇಡಿಕೆ ಎದ್ದಿತು. ಅದಕ್ಕಾಗಿ ಕ್ಷೇತ್ರದ ಆಡಳಿತದವರು ನಿಶ್ಚಯಿಸಿದಂತೆ ರಾತ್ರಿ ದೈವ ಪಾತ್ರಿಯಿಂದ ಈ ವಿಷಯದಲ್ಲಿ ಆದೇಶ ಕೇಳಲಾಯಿತು.

ದೇವರು ಮೈಯಲ್ಲಿ ಬಂದು ದರ್ಶನದಲ್ಲಿರುವ ಪಾತ್ರಿ ಹೇಳಿದ್ದು ಒಂದೇ ಮಾತು- ‘ಈ ಪವಿತ್ರ ಕ್ಷೇತ್ರದಲ್ಲಿ ಮಾನವ ಮಾನವರ ನಡುವೆ ಜಾತಿ-ಧರ್ಮದ ಭೇದ ತರಬಾರದು. ಹಾಗಾಗಿ ಈವರೆಗೆ ಶ್ರದ್ಧೆ ಭಕ್ತಿಯಿಂದ ವಾದ್ಯ ಸೇವೆ ಮಾಡುತ್ತಿರುವ ಮುಸ್ಲಿಮರೇ ಮುಂದುವರಿಯಬೇಕು’!

ಹಾಗಾಗಿ ಈಗ ಹಾಲಿ ನಡೆಯುತ್ತಿರುವ ಢಕ್ಕೆ ಬಲಿ ಜಾತ್ರೆಯಲ್ಲಿಯೂ ಅದೇ ಮುಸ್ಲಿಮರ ತಂಡದಿಂದ ವಾದ್ಯ ಸೇವೆ ದಿನಾಲೂ ನಡೆಯುತ್ತಿದೆ. ಈ ಕ್ಷೇತ್ರದ ಪ್ರಬಲ ದೈವೀ ಶಕ್ತಿಯೇ ಸ್ವತಃ ಕೊಟ್ಟಿರುವ ಧಾರ್ಮಿಕ ಸಾಮರಸ್ಯದ ಆದೇಶವನ್ನು ಸಮಸ್ತ ಕರಾವಳಿಯ ಎಲ್ಲಾ ಸಮುದಾಯದವರು ಅರ್ಥ ಮಾಡಿಕೊಂಡರೆ ಸಮಾಜಕ್ಕೆ ಒಳಿತು. 
–ಜಿ. ರವಿಕಿರಣ ರೈ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT