ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿಕೊಂಡವರ ತಿಳಿವಳಿಕೆ, ತಳಮಳ

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಎಂ.ಟೆಕ್. ಓದಿರುವ ಸ್ನೇಹಿತ ಮೊನ್ನೆ ಕರೆ ಮಾಡಿ, ‘ಹಾಸನದಲ್ಲೇ ಸೆಟ್ಲ್ ಆಗ್ಬೇಕು ಅಂತ ಡಿಸೈಡ್ ಮಾಡಿದ್ದೀನಿ. ತಿಂಗಳಿಗೆ ಹತ್ತು ಸಾವಿರ ಸಂಬಳ ಸಿಗೋವಂಥ ಕೆಲ್ಸ ಆದ್ರೂ ಪರ್ವಾಗಿಲ್ಲ, ಎಲ್ಲಾದ್ರೂ ಸಿಗುವ ಹಾಗಿದ್ರೆ ಹೇಳು’ ಅಂತಂದ. ಎಂ.ಟೆಕ್. ಪೂರೈಸಿದ ನಂತರ ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದವನು, ತಾನಿದ್ದ ಕಾಲೇಜಿಗೆ ಎನ್‌ಬಿಎ (ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್) ತಂಡ ಬಂದು ಪರಿಶೀಲಿಸಿ ಹೋದ ನಂತರ ಕಾಲೇಜು ಆಡಳಿತ ಮಂಡಳಿ ‘ಅಡ್ಮಿಷನ್ ಕಡಿಮೆಯಾಗಿದೆ’ ಎಂಬ ನೆಪ ಮುಂದೊಡ್ಡಿ ಕೆಲಸದಿಂದ ತೆಗೆದ ಮೇಲೆ ಮತ್ತೆ ನಿರುದ್ಯೋಗಿಯಾಗಿದ್ದಾನೆ.

ಇದೀಗ ತನ್ನ ತಂದೆ–ತಾಯಿಯೊಂದಿಗೆ ನೆಲೆಸಿರಬೇಕೆಂಬ ಕಾರಣಕ್ಕೆ ಹಾಸನದಲ್ಲೇ ನೆಲೆ ನಿಲ್ಲಲು ನಿರ್ಧರಿಸಿದ್ದಾನೆ. ಹಾಸನದಂತಹ ಊರಿನಲ್ಲಿ ಸೀಮಿತ ಸಂಖ್ಯೆಯಲ್ಲಷ್ಟೆ ಸೃಷ್ಟಿಯಾಗುವ ತನ್ನ ಓದಿಗೆ ತಕ್ಕ ಕೆಲಸಗಳೆಲ್ಲವೂ ತನ್ನ ಪಾಲಿಗೆ ಮರೀಚಿಕೆ ಎಂಬುದು ಅವನಿಗೆ ಮನದಟ್ಟಾಗಿರುವ ಕಾರಣ, ತನ್ನ ಓದಿಗೆ ಸಂಬಂಧವಿರದ ಯಾವುದೇ ಕೆಲಸವನ್ನಾದರೂ ತಾನು ಮಾಡಲು ಸಿದ್ಧವಿರುವುದಾಗಿ ಹೇಳಲಾರಂಭಿಸಿದ್ದಾನೆ.

‘ಅಲ್ಲ ಮಾರಾಯ, ಯಾವ ಕೆಲ್ಸ ಸಿಕ್ಕರೂ ನಿನ್ನ ಕೈಯಲ್ಲಿ ಮಾಡೋಕಾಗುತ್ತಾ?  ಕೊರಿಯರ್ ಸಂಸ್ಥೆಗಳಲ್ಲಿ ಡೆಲಿವರಿ ಬಾಯ್ ಕೆಲ್ಸ ಸಿಗ್ಬಹುದು, ಹೋಗ್ತೀಯ? ಹಾಸನದಲ್ಲೇ ಇರಬೇಕು ಅನ್ನೋ ಕಾರಣಕ್ಕೆ ಯಾವ ಕೆಲ್ಸನಾದ್ರೂ ನಿನ್ ಕೈಯಲ್ಲಿ ಮಾಡೋಕಾಗುತ್ತಾ? ಹಾಗೊಂದು ವೇಳೆ ನೀನು ಮಾಡ್ತೀನಿ ಅಂದ್ರೂ, ನಿನ್ನ ಓದಿನ ಹಿನ್ನೆಲೆ ತಿಳಿದಿರುವ ಯಾರಾದರೂ ಅಂತಹ ಕೆಲಸ ನಿನಗೆ ಕೊಡ್ತಾರ?

ನೀನು ಅಂಥ ಕೆಲ್ಸನೆಲ್ಲ ಮಾಡಲು ಮುಂದಾದ್ರೆ ಜನ ಸುಮ್ನೆ ಇರ್ತಾರ? ಆಡ್ಕೊಳಲ್ವಾ? ಅದನ್ನೆಲ್ಲ ಸಹಿಸಿಕೊಳ್ಳೋಕೆ ತಯಾರಿದ್ದೀಯ? ಹತ್ತು ಸಾವಿರ ಸಂಬಳ ತಗೊಂಡು ಬದ್ಕೋಕಾಗುತ್ತಾ?’ ಅಂತೆಲ್ಲ ಆ ಕ್ಷಣಕ್ಕೆ ನನಗನಿಸಿದ್ದನ್ನೆಲ್ಲ ಅವನಿಗೆ ಹೇಳಿದೆ. ಅವನು ಬೇಸರಗೊಂಡವನಂತೆ ದನಿ ತಗ್ಗಿಸಿ, ‘ಸರಿ ಬಿಡು, ಯೋಚ್ನೆ ಮಾಡ್ತೀನಿ’ ಅಂತಂದು ಕರೆ ತುಂಡರಿಸಿದ.

ಹತ್ತನೇ ತರಗತಿ ವಿದ್ಯಾರ್ಹತೆ ಬೇಡುವ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವವರ ಯಾದಿಯಲ್ಲಿ ಸ್ನಾತಕೋತ್ತರ ಪದವೀಧರರೂ, ಪಿಎಚ್‌.ಡಿ. ಪೂರೈಸಿದವರೂ ಇರುವುದು ಇದೀಗ ಹುಬ್ಬೇರಿಸುವ ವಿಷಯವಂತೂ ಅಲ್ಲ. ಓದು ಮತ್ತು ಕೆಲಸದ ನಡುವಿನ ನಂಟು ತೀವ್ರಗತಿಯಲ್ಲಿ ಸಡಿಲವಾಗುತ್ತಿರುವ ಕಾಲಘಟ್ಟದತ್ತ ನಾವು ದಾಪುಗಾಲಿಡುತ್ತಿರುವುದು ಸ್ಪಷ್ಟವಾಗುತ್ತಿದೆ.

‘ಓದಿದ್ದಕ್ಕೂ ಮಾಡ್ತಿರೋ ಕೆಲಸಕ್ಕೂ ಸಂಬಂಧವೇ ಇಲ್ಲ’ ಎಂದು ಹೇಳುವವರೇ ಇನ್ನು ಮುಂದೆ ಬಹುಸಂಖ್ಯಾತರಾದರೆ ಅಚ್ಚರಿಪಡಬೇಕಿಲ್ಲ. ತಾಂತ್ರಿಕ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿದ ವೇಗದಲ್ಲಿಯೇ, ಅವರಿಗೆ ತಕ್ಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆಯೇ ಎಂದು ಪರಿಶೀಲಿಸುವ ಅಗತ್ಯವಿದೆ.

‘ವೃತ್ತಿಪರ ಶಿಕ್ಷಣ’ವೆಂಬ ಹಣೆಪಟ್ಟಿ ಹೊಂದಿರುವ ಪದವಿ ಮತ್ತು ಕೋರ್ಸುಗಳೆಡೆಗೆ ಮೂಡಿರುವ ಅತಿ ಅನಿಸುವಷ್ಟು ವ್ಯಾಮೋಹ ಇನ್ನು ಮುಂದಾದರೂ ಸಡಿಲಗೊಳ್ಳುವುದೇ? ವೃತ್ತಿಪರ ಶಿಕ್ಷಣ ಪಡೆದೂ ಅದಕ್ಕೆ ಪೂರಕವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗದ ಕಾರಣ ಹಲವರು ಓದಿಗೆ ಸಂಬಂಧವಿರದ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತಾದರೆ ವೃತ್ತಿಪರ ಶಿಕ್ಷಣದ ಬದಲಿಗೆ ಸಮಾಜಮುಖಿ ಶಿಕ್ಷಣ ನೀಡುವುದು ಸೂಕ್ತವೆನಿಸುವುದಿಲ್ಲವೇ?

ಹಳ್ಳಿಗಳು ‘ವೃದ್ಧಾಶ್ರಮಗಳಾಗುತ್ತಿವೆ’ ಎನ್ನುವ ಬದಲಿಗೆ ‘ವೃದ್ಧಾಶ್ರಮವೇ ಆಗಿವೆ’ ಎನ್ನಬೇಕಿರುವ ವರ್ತಮಾನದಲ್ಲಿ ನಾವಿದ್ದೇವೆ. ಮನುಷ್ಯ ಬಾವಿಯಲ್ಲಿರುವ ಕಪ್ಪೆಯಂತಾಗಬಾರದು, ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಂತಾಗಬೇಕು ಅನ್ನುವುದೆಲ್ಲವೂ ಸರಿಯೇ. ಆದರೆ, ವೃತ್ತಿಪರ ಶಿಕ್ಷಣ ಪಡೆದವರಲ್ಲಿ ಬಹುತೇಕರನ್ನು ಬೆಂಗಳೂರು, ಪುಣೆ, ಚೆನ್ನೈ, ಮುಂಬೈನಂತಹ ಬೆರಳೆಣಿಕೆಯಷ್ಟು ನಗರಗಳು ಮಾತ್ರ ಸಲಹಬೇಕಿರುವ ಪರಿಸ್ಥಿತಿ ನಿರ್ಮಿಸಿದವರು ಯಾರು?

ಈ ನಗರಗಳು ತಮ್ಮ ಧಾರಣಾಶಕ್ತಿಗೂ ಮೀರಿ ಜನರನ್ನು ಬರಸೆಳೆದುಕೊಂಡು ಅಸಹನೀಯ ಕೂಪಗಳಾಗುವತ್ತ ಸಾಗುತ್ತಿದ್ದರೂ, ನಮ್ಮ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಯ ಮಾದರಿಯಲ್ಲಿ ಗಮನಾರ್ಹ ಬದಲಾವಣೆಯಾದಂತೆ ತೋರುತ್ತಿಲ್ಲ.

ಹಾಸನದಂತಹ ಊರುಗಳಲ್ಲಿ ನೆಲೆ ನಿಂತು ಇಲ್ಲಿನ ‘ವೃತ್ತಿಪರ’ ಶಿಕ್ಷಿತರಿಗೆ ಉದ್ಯೋಗ ಒದಗಿಸುವ ಸಣ್ಣ ಕೈಗಾರಿಕೆಗಳತ್ತ ಉದಾಸೀನ ತೋರಿ, ಬಹುರಾಷ್ಟ್ರೀಯ ಕಂಪೆನಿಗಳನ್ನು ಸೆಳೆಯಲು ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿಕೊಂಡು ಬೀಗುವುದು ಇನ್ನೂ ಮುಂದುವರೆಯಬೇಕೇ?

‘ಸ್ಟಾರ್ಟ್ ಅಪ್‌’ಗಳೆಂಬ ಭರವಸೆಯ ಸಸಿಗಳು ಬೆಳೆದು ನಿಲ್ಲಲು ನೀರು ಗೊಬ್ಬರ ಒದಗಿಸುವ ಆಶ್ವಾಸನೆ ನೀಡಿದವರೆ, ನೋಟು ರದ್ದತಿ ಮತ್ತು ಡಿಜಿಟಲ್ ಇಂಡಿಯಾದ ಮೂಲಕ ಸಣ್ಣ ಉದ್ದಿಮೆಗಳ ಬೆನ್ನು ಮೂಳೆ ಮುರಿದದ್ದು ವರ್ತಮಾನದ ವಿಪರ್ಯಾಸವಲ್ಲದೆ ಮತ್ತಿನ್ನೇನು?

ಕೈಗಾರಿಕೀಕರಣವು ನಿರುದ್ಯೋಗ ಸಮಸ್ಯೆಗೆ ಎಷ್ಟರಮಟ್ಟಿಗೆ ಪರಿಹಾರ ಒದಗಿಸಬಲ್ಲದು ಎಂಬುದನ್ನು ಸದ್ಯದ ‘ಸ್ವಯಂಚಾಲಿತ’ ಭೂತಗನ್ನಡಿ ಹಿಡಿದು ನೋಡಬೇಕಿದೆ. ನಾವು ಜೀವಿಸುತ್ತಿರುವ ಕಾಲಘಟ್ಟದ ಸಮಾಜ ಚಲನಶೀಲವಾಗುವ ಜೊತೆಗೆ ವಿವೇಚನೆಯನ್ನೂ ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಮೌಲ್ಯಗಳನ್ನು ಬಿತ್ತುವ ಉಸಾಬರಿಯನ್ನು ಶಿಕ್ಷಣದ ಹೆಗಲಿಗೆ ಹೊರಿಸಬಾರದೇಕೆ?

ವೃತ್ತಿಪರ ಶಿಕ್ಷಣವೆಂಬುದು ನಿರುದ್ಯೋಗಿಗಳ ತಯಾರಿಕಾ ಕಾರ್ಖಾನೆಯಾಗುವುದಾದರೆ, ಅದರ ವ್ಯಾಪ್ತಿಯನ್ನು ಅಗತ್ಯಕ್ಕನುಗುಣವಾಗಿ ಕಿರಿದಾಗಿಸಿ, ಆರೋಗ್ಯವಂತ ಸಮಾಜ ರೂಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ವೈವಿಧ್ಯಮಯ ತಿಳಿವಳಿಕೆಯ ತೊರೆಗಳೆಲ್ಲವೂ ಶಿಕ್ಷಣದ ಮೂಲಕವೇ ಮುಂದಿನ ಪೀಳಿಗೆಯ ಒಳಗಿಳಿದು ಹರಿದು ನೆಮ್ಮದಿಯ ನಾಳೆ ಎಂಬ ಸಾಗರದ ಒಡಲು ಸೇರುವುದು ಒಳಿತಲ್ಲವೇ?

‘ಕಟ್ಟುವ ಕ್ರಿಯೆ’ಗೆ ಸಂಬಂಧಿಸಿದ ತಾಂತ್ರಿಕ ಜ್ಞಾನವನ್ನು ತಮ್ಮ ಓದಿನ ಮೂಲಕ ಪಡೆದುಕೊಂಡ ಎಷ್ಟೋ ಸಿವಿಲ್ ಎಂಜಿನಿಯರ್‌ಗಳು, ಸರ್ಕಾರಿ ಸೇವೆಗೆ ಸೇರಿದ ನಂತರ ‘ಪರ್ಸೆಂಟೇಜು’ಗಳ ಗೋಡೆ ಕಟ್ಟುವುದಕ್ಕಷ್ಟೆ ಮುತುವರ್ಜಿ ತೋರುವುದು ಸಮಾಜಮುಖಿ ವ್ಯಕ್ತಿತ್ವ ರೂಪಿಸಲು ಸೋಲುವ ತಾಂತ್ರಿಕ ಶಿಕ್ಷಣದ ಮಿತಿಯತ್ತ ಬೊಟ್ಟು ಮಾಡುವುದಿಲ್ಲವೇ?

ಹಣ ಮಾಡುವ ಉದ್ಯಮವೇ ಆಗಿರುವ ವೈದ್ಯಕೀಯ ಕ್ಷೇತ್ರವನ್ನು ಮತ್ತೆ ಜನಪರ ಕಾಳಜಿಯುಳ್ಳವರ ತೆಕ್ಕೆಗೆ ತರಲು ಬೇಕಿರುವ ತಿಳಿವಳಿಕೆಯನ್ನು ಎಂಬಿಬಿಎಸ್ ಪದವೀಧರರಿಗೆ ಅವರು ಓದಿರುವ, ಓದಲಿರುವ ಪಠ್ಯಪುಸ್ತಕಗಳು ದಯಪಾಲಿಸುವವೇ? ಸಮಾಜಮುಖಿ ವ್ಯಕ್ತಿತ್ವ ರೂಪಿಸಲು ಸೋಲುವ ಶಿಕ್ಷಣದತ್ತ ಯಾರೂ ಬೊಟ್ಟು ಮಾಡಲು ಸಾಧ್ಯವಾಗದಂತೆ ತಕ್ಕಮಟ್ಟಿಗೆ ತಡೆಹಿಡಿದಿದ್ದ ‘ಉದ್ಯೋಗಾಧಾರಿತ’, ‘ವೃತ್ತಿಪರ’ವೆಂಬ ತಡೆಗೋಡೆ ಕುಸಿದು ಬೀಳುತ್ತಿರುವ ಸೂಚನೆ ಸಿಗಲಾರಂಭಿಸಿದೆ.

‘ಓದಿಕೊಂಡವನು’ ಎಂದರೆ ‘ತಿಳಿದುಕೊಂಡವನು’ ಅಥವಾ ‘ತಿಳಿವಳಿಕೆಯುಳ್ಳವನು’ ಅಂತೇನು ಅಲ್ಲವೆಂಬ ಅರಿವು ಸಮಾಜವನ್ನು ಆವರಿಸಿದ ನಂತರ ಬಹುಶಃ  ‘ಇಷ್ಟೆಲ್ಲ ಓದಿ ಈ ಕೆಲ್ಸ ಮಾಡ್ಬೇಕಾ!’ ಅಂತ ಹುಬ್ಬೇರಿಸುವ ಮನಸ್ಥಿತಿ ಇಲ್ಲವಾಗಬಹುದೇನೊ? ಅಲ್ಲಿಯವರೆಗೂ ತಾನು ‘ಓದಿಕೊಂಡವನು’ ಎಂಬ ಒಂದೇ ಕಾರಣಕ್ಕೆ ತನ್ನೊಳಗೆ ಅಹಂನ ಗೋಡೆ ಕಟ್ಟಿಕೊಂಡು ಸುತ್ತಲಿನವರೊಂದಿಗೂ ಏಗಲಾಗದೆ ಚಡಪಡಿಸುವುದು ಹಲವರ ಪಾಲಿಗೆ ಅನಿವಾರ್ಯವೇನೊ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT