ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯ– ಧಾರ್ಮಿಕತೆಯ ತಿಕ್ಕಾಟ

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಸ್ತ್ರಸಂಹಿತೆ (ಡ್ರೆಸ್‌ ಕೋಡ್‌) ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಲಿಖಿತ ನಿಯಮಾವಳಿಗಳ ಚೌಕಟ್ಟಿನಲ್ಲಿ ಇಲ್ಲದೇ ಇದ್ದರೂ, ವ್ಯಕ್ತಿ ಸ್ವಾತಂತ್ರ್ಯ– ಸ್ವೇಚ್ಛಾಚಾರದ ಪರಿಧಿಯೊಳಗಿನ ಚರ್ಚಾಸ್ಪದ, ಗಂಭೀರ ವಿಚಾರವಿದು.

ಸಮಾನ ವಸ್ತ್ರಸಂಹಿತೆ ವಿಷಯದಲ್ಲಿ ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಶಾಲೆ, ಕಾಲೇಜುಗಳ ಆವರಣದಲ್ಲಿ ಸ್ಕಾರ್ಫ್‌, ಬುರ್ಖಾ, ಕೇಸರಿ ಶಾಲು ವಿಚಾರದಲ್ಲಿ ಪರ-ವಿರೋಧದ ಅಭಿಪ್ರಾಯ, ವಾಗ್ವಾದ ತಾರಕಕ್ಕೆ ಏರಿದೆ. ಸಂಪ್ರದಾಯ, ಧಾರ್ಮಿಕತೆಯ ತಿಕ್ಕಾಟಗಳ ಮಧ್ಯೆ ಈ ವಿಷಯ ಸಾಮಾಜಿಕ ಮತ್ತು ರಾಜಕೀಯವಾಗಿ ಬೇರೆ ಬೇರೆ ಆಯಾಮ ಪಡೆದುಕೊಂಡಿದೆ.

ಈ ಮಧ್ಯೆ, ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ  ಸಿಬ್ಬಂದಿಯ ವಸ್ತ್ರಸಂಹಿತೆ ಹೇಗಿರಬೇಕು ಎಂಬುದರ ಕುರಿತು ವಿದ್ಯಾರ್ಥಿ ವರ್ಗದಿಂದ ಅಭಿಪ್ರಾಯ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದ್ದುದು ಚರ್ಚೆಗೆ ಹೊಸ ವಸ್ತು ಸಿಕ್ಕಂತಾಗಿದೆ.

ಈ ಸಿಬ್ಬಂದಿಗೆ ಹೆಸರು, ಹುದ್ದೆಯ ಬ್ಯಾಡ್ಜ್ ಸಹಿತ ವಸ್ತ್ರಸಂಹಿತೆ ಜಾರಿಗೆ ನಿರ್ಧರಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯು ಸಿಬ್ಬಂದಿ ವರ್ಗ ಶಿಸ್ತುಬದ್ಧ, ವೃತ್ತಿ ಗೌರವಕ್ಕೆ ತಕ್ಕಂತೆ ಬಟ್ಟೆ ಧರಿಸುತ್ತಿದೆಯೇ?, ಅವರ ವಸ್ತ್ರಸಂಹಿತೆ ಹೇಗಿರಬೇಕು ಎಂಬ ಕುರಿತು ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿ, ಸಲಹೆ ಕೊಡಿ ಎಂದು ಪ್ರಾಂಶುಪಾಲರಿಗೆ ಸೂಚಿಸಿತ್ತು.

ವಸ್ತ್ರಸಂಹಿತೆ ಜಾರಿ ಸೂಕ್ತ. ಜೀನ್ಸ್‌ ಪ್ಯಾಂಟು, ಟೈಟ್‌ ಟೀ–ಶರ್ಟ್‌, ದೇಹವನ್ನು ಬಿಗಿಯಾಗಿ ಆವರಿಸಿದ ಉಡುಗೆ, ತೋಳಿಲ್ಲದ ರವಿಕೆ, ಶ್ರೀಮಂತಿಕೆ ಪ್ರದರ್ಶನದ ತರಹೇವಾರಿ ಉಡುಗೆ ತೊಟ್ಟು ಬರುವ ಬದಲು ಅದಕ್ಕೊಂದು ಶಿಸ್ತು ತರುವ ಉದ್ದೇಶದಿಂದ ಈ ಕ್ರಮ ಒಳ್ಳೆಯದು. ಕೆಲವು ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಗಳು ಇಂತಹ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತಂದಿವೆ. ಆದರೆ, ಇಲಾಖೆ ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆಯಲು ಮುಂದಾಗಿದ್ದುದು ಮಾತ್ರ ಪ್ರಶ್ನಾರ್ಹ ಎಂಬುದು ಕೆಲವರ ಅಭಿಪ್ರಾಯ.

ಕಾಲೇಜುಗಳಿಗೆ ಸಿಬ್ಬಂದಿಯು ಕಿವಿಯಲ್ಲಿ ಇಯರ್‌ಫೋನ್‌, ಕೈಯಲ್ಲಿ ಸ್ಮಾರ್ಟ್‌ಫೋನ್‌, ಪೂರ್ಣ ಎದೆ ಕಾಣಿಸುವಂಥ ಟೀ ಶರ್ಟ್‌, ಶಾರ್ಟ್ಸ್ (ಚಡ್ಡಿ) ಧರಿಸಿ ಬರುವುದು ಎಷ್ಟು ಸರಿ ಎನ್ನುವ ಪ್ರಶ್ನೆಯ ಮಧ್ಯೆ, ‘ನಾನು ಯಾವ ಬಟ್ಟೆ ಬೇಕಾದರೂ ಧರಿಸುತ್ತೇನೆ, ಪ್ರಶ್ನಿಸಲು ನೀವು ಯಾರು’ ಎಂಬ ಮನಸ್ಥಿತಿ ಹೊಸ ತಲೆಮಾರಿನದ್ದು.

ಇದು ಶಿಸ್ತು, ಸಂಸ್ಕೃತಿ, ಪರಂಪರೆ, ನೈತಿಕತೆಗಿಂತ ಮುಖ್ಯವಾಗಿ ಸ್ವಾತಂತ್ರ್ಯ, ಸ್ವೇಚ್ಛಾಚಾರದ ನಡೆಯಾಗಿ ಈ ವರ್ತನೆ ಕೆಲವರಿಗೆ ಕಾಣಿಸಿದರೆ, ಇನ್ನು ಕೆಲವರಿಗೆ ಹಠಮಾರಿತನ, ಉದ್ಧಟತನದ ದ್ಯೋತಕವಾಗಿಯೂ ಬಿಂಬಿತವಾಗುತ್ತದೆ. ಎಲ್ಲೆ ಮೀರಿದ, ಅತಿಯಾದ ಈ ರೀತಿಯ ನಡವಳಿಕೆ ಸಂಪ್ರದಾಯಸ್ಥರಿಗೆ ರುಚಿಸದು. ಹಾಗೆಂದು, ಈ ವಿಷಯ ಸಂವಿಧಾನ ನೀಡಿದ ಸ್ವಾತಂತ್ರ್ಯದ ದುರುಪಯೋಗವೇ? ಅತಿರೇಕವೇ ಎನ್ನುವ ಚರ್ಚೆ ತುರ್ತಾಗಿ ಆಗಬೇಕಿದೆ.

‘ಬೋಧಕ– ಬೋಧಕೇತರ ಸಿಬ್ಬಂದಿಗೆ ವಸ್ತ್ರಸಂಹಿತೆ ಜಾರಿ ಚಿಂತನೆಯ ಹಿಂದೆ ಸದುದ್ದೇಶ ಇತ್ತು. ವಿದ್ಯಾರ್ಥಿಗಳ ಎದುರು ನಿಲ್ಲುವ ಶಿಕ್ಷಕ ವರ್ಗ ಘನತೆ, ಗೌರವ ಕಾಪಾಡಿಕೊಳ್ಳಬೇಕು. ಸ್ವಯಂ ಶಿಸ್ತು ಪಾಲಿಸುವ ವ್ಯವಸ್ಥೆ ಒಪ್ಪಿಕೊಳ್ಳಬೇಕು ಎನ್ನುವುದು ಇದರ ಹಿಂದಿನ ಭಾವನೆಯಾಗಿತ್ತು. ಆದರೆ, ಇಂಥದ್ದೊಂದು ಸಕಾರಾತ್ಮಕ ಯೋಚನೆ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸಿದೆ’ ಎಂದು ಒಪ್ಪಿಕೊಳ್ಳುತ್ತಾರೆ ಇಲಾಖೆಯ ನಿರ್ದೇಶಕಿ ಪ್ರೊ. ಎಚ್‌.ಕುಸುಮಾ.
‘ಕಾಲೇಜೊಂದರ ಪ್ರಾಂಶುಪಾಲರು ಸರ್ಕಾರಕ್ಕೆ ಪತ್ರ ಬರೆದು ಇಂಥದ್ದೊಂದು ಸಲಹೆ ನೀಡಿದ್ದರು.

ಕೆಲವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ವೃತ್ತಿಗೆ ತಕ್ಕಂತೆ ಶಿಸ್ತುಬದ್ಧ ಹಾಗೂ ವಿದ್ಯಾರ್ಥಿಗಳಲ್ಲಿ ಗೌರವ ಭಾವ ಮೂಡಿಸುವಂತೆ ಉಡುಪು ಧರಿಸಿ ಕಾಲೇಜಿಗೆ ಬಾರದೆ, ತಮಗಿಷ್ಟ ಬಂದಂತೆ ವಸ್ತ್ರಗಳನ್ನು ಧರಿಸುತ್ತಿದ್ದಾರೆ ಎನ್ನುವ ಆರೋಪ ಅದಾಗಿತ್ತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ತಮಗೂ ಯಾವುದೇ ವ್ಯತ್ಯಾಸ ಇಲ್ಲದಂತೆ ಪ್ರಾಧ್ಯಾಪಕರು ಬಟ್ಟೆ ಧರಿಸಿ ಬರುತ್ತಿದ್ದಾರೆ. ಹೀಗಾಗಿ ಸೂಕ್ತ ವಸ್ತ್ರಸಂಹಿತೆ ಜಾರಿಯ ಅಗತ್ಯವಿದೆ ಎಂದೂ ಆ ಪತ್ರದಲ್ಲಿ ಅವರು ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವಾಲಯದಿಂದ ಇಲಾಖೆಗೆ ಪತ್ರ ಬಂದಿದೆ.

ಅಧಿಕಾರಿಗಳ ಸಭೆಯಲ್ಲಿ ವಿಷಯ ಚರ್ಚೆಯಾಗಿದೆ. ವಿಶಾಲ ಮನೋಭಾವ ಮತ್ತು ಸಾರ್ವಜನಿಕ ದೃಷ್ಟಿಕೋನದಿಂದ ನೋಡಿದರೆ ಈ ಸಲಹೆ ಸೂಕ್ತವಾಗಿ ಅಧಿಕಾರಿ ವಲಯಕ್ಕೆ ಕಂಡಿದೆ. ಹಾಗೆಂದು, ಸಿಬ್ಬಂದಿಯ ವಸ್ತ್ರ ಸ್ವಾತಂತ್ರ್ಯದ ಮೇಲೆ ಮೂಗುದಾರ ಹಾಕುವುದು ಗುರಿ ಆಗಿರಲಿಲ್ಲ’ ಎಂದೂ ಅವರು ಸಮರ್ಥಿಸಿಕೊಂಡರು.

ಈ ಕಾರಣಕ್ಕೆ ಇಲಾಖೆಯ ಎಲ್ಲಾ ವಿಭಾಗಗಳ ಜಂಟಿ ನಿರ್ದೇಶಕರ ಮೂಲಕ ರಾಜ್ಯದ ಎಲ್ಲ 412 ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಜ. 17ರಂದು ಈ ಸುತ್ತೋಲೆ ಕಳುಹಿಸಲಾಗಿತ್ತು. ಪ್ರಾಂಶುಪಾಲರ ಪೈಕಿ ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆಯುವುದು ಸೂಕ್ತವೇ ಎಂಬ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ. ತಪ್ಪೇನು ಎಂಬ ಮಾತೂ ಬಂದಿದೆ. ವಿದ್ಯಾರ್ಥಿಗಳ ಮುಂದೆ ಹೋಗಿ ನಿಲ್ಲುವವರು ಬೋಧಕರು.

ಹೀಗಾಗಿ ವಿದ್ಯಾರ್ಥಿಯ ಮನಸ್ಸಿನಲ್ಲಿರುವುದನ್ನು ಅರ್ಥ ಮಾಡಿಕೊಳ್ಳುವ ಉದ್ದೇಶ ಇಲಾಖೆಯದ್ದಾಗಿತ್ತೇ ಹೊರತು ಇದರಲ್ಲಿ ತಪ್ಪು ಕಂಡುಕೊಳ್ಳುವುದು ಸರಿಯಲ್ಲ. ಗೊಂದಲ ಸೃಷ್ಟಿಯಾದ ಕಾರಣಕ್ಕೆ ಸುತ್ತೋಲೆಯನ್ನೇ ಹಿಂತೆಗೆದುಕೊಂಡಿದ್ದೇವೆ’ ಎಂದೂ ಕುಸುಮಾ ವಿಷಾದ ವ್ಯಕ್ತಪಡಿಸುತ್ತಾರೆ.

‘ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಗುಣಮಟ್ಟದ ಮೌಲ್ಯಮಾಪನ ಮಾಡಿಸುವ ವ್ಯವಸ್ಥೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಳವಡಿಸಿಕೊಂಡಿದೆ. ಸಂಸ್ಥೆಗಳಿಗೆ ಶ್ರೇಣಿ ನೀಡುವ ಸಂದರ್ಭದಲ್ಲಿ ಅಲ್ಲಿನ ಮೂಲಸೌಲಭ್ಯ, ಪಾಠ–ಪ್ರವಚನ ಹೇಗಿದೆ ಎಂದು ತಿಳಿದುಕೊಳ್ಳುವ ವ್ಯವಸ್ಥೆ ಇದೆ. ನ್ಯಾಕ್‌ಗೆ (ಎನ್‌ಎಎಸಿ) ಗುರುತಿಸಿಕೊಳ್ಳಲು 5 ವರ್ಷದ ಸಾಧನೆಗಳ ದಾಖಲೀಕರಣ ಅಗತ್ಯ. ರಾಜ್ಯದ ಪ್ರಥಮ ದರ್ಜೆ ಸರ್ಕಾರಿ ಕಾಲೇಜುಗಳ ಪೈಕಿ 7 ಕಾಲೇಜುಗಳು ‘ಎ’ ಗ್ರೇಡ್‌, 127 ಕಾಲೇಜುಗಳು ‘ಬಿ’ ಗ್ರೇಡ್‌ ಪಡೆದಿವೆ.

ಖಾಸಗಿ ಕಾಲೇಜುಗಳ ಜೊತೆ ಪೈಪೋಟಿ ನಡೆಸಿ ಸ್ಥಾನಮಾನ ಗಳಿಸಲು ಶಿಸ್ತು, ವ್ಯವಸ್ಥೆ ಕಾಪಾಡಿಕೊಂಡು ಹೋಗುವುದು ಮುಖ್ಯ. ಸರ್ಕಾರ ಸೌಲಭ್ಯಗಳನ್ನು ಒದಗಿಸಿದಾಗ ಅದನ್ನು ಬಳಸಿಕೊಳ್ಳಬೇಕು. ಒಳ್ಳೆಯ ದೃಷ್ಟಿಯಿಂದ ನೋಡಿದರೆ ವಸ್ತ್ರಸಂಹಿತೆ ಜಾರಿ ತಪ್ಪೇನೂ ಆಗುತ್ತಿರಲಿಲ್ಲ. ಇಂತಹ ಪ್ರಸ್ತಾವವೊಂದನ್ನು ಸರ್ಕಾರದ ಮುಂದಿಟ್ಟರೆ ನಿರ್ಧಾರ ವಿಳಂಬವಾಗುತ್ತದೆ. ಆದರೆ. ಸರ್ಕಾರದಿಂದಲೇ ಪತ್ರ ಬಂದುದರಿಂದ ಈ ನಿರ್ಧಾರಕ್ಕೆ ಬರಲಾಗಿತ್ತು’ ಎಂದು  ಸಂದರ್ಭವನ್ನು ವಿವರಿಸಿದರು.

‘ವಿದ್ಯಾರ್ಥಿಗಳ ಎದುರು ಘನತೆ– ಗೌರವದಿಂದ ನಡೆದುಕೊಳ್ಳಬೇಕಾದುದು ಸಿಬ್ಬಂದಿಯ ಹೊಣೆಗಾರಿಕೆ. ಆದರೆ ಶಿಸ್ತು ಕಾಪಾಡಿಕೊಂಡು ಬರುವುದು ಹೆಚ್ಚು ಮಹತ್ವದ್ದು. ಇಂಥ ವಿಷಯಗಳಲ್ಲಿ ಸಾಮೂಹಿಕ ಅಭಿಪ್ರಾಯಕ್ಕೆ ಹೆಚ್ಚು ಒತ್ತು ನೀಡಬೇಕು’ ಎನ್ನುತ್ತಾರೆ ಸರ್ಕಾರಿ ಪ್ರಥಮ ದರ್ಜೆ  ಕಾಲೇಜೊಂದರ ಪ್ರಾಂಶುಪಾಲೆ.

‘ವಸ್ತ್ರಸಂಹಿತೆ ಜಾರಿ ಚಿಂತನೆ ಸ್ವಾಗತಾರ್ಹ. ಆದರೆ, ಈ ವಿಷಯದಲ್ಲಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಪಡೆಯುವ ನಿರ್ಧಾರ ಮಾತ್ರ ಒಪ್ಪುವಂಥದ್ದಲ್ಲ’ ಎನ್ನುವುದು ರಾಜ್ಯ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಎಚ್‌.ಪ್ರಕಾಶ್‌ ಅವರ ಅಭಿಪ್ರಾಯ.

‘ವಸ್ತ್ರಸಂಹಿತೆ ಜಾರಿಗೆ ನಮ್ಮ ತಕರಾರಿಲ್ಲ. ಆದರೆ, ಸಮವಸ್ತ್ರ ಬೇಡ. ಸಭ್ಯವಾಗಿ ವಸ್ತ್ರ ಧರಿಸುವಂತೆ ಸೂಚನೆ ನೀಡುವುದು ತಪ್ಪಲ್ಲ. ವಿದ್ಯಾರ್ಥಿಗಳನ್ನು ಉದ್ರೇಕಿಸುವ ರೀತಿಯಲ್ಲಿ ವಸ್ತ್ರ ತೊಡುವುದು ಸರಿಯಲ್ಲ. ಅದರಿಂದ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಗೌರವದಿಂದ ಕಾಣುವಂತೆ ಉಡುಪು ಧರಿಸಿ ಬರುವುದು ಒಳ್ಳೆಯದು. ಹಾಗೆಂದು ಕಾಲೇಜು ವಿದ್ಯಾರ್ಥಿಗಳಿಗೂ ಸಮವಸ್ತ್ರ ಜಾರಿಗೆ ತರುವುದು ಸರಿಯಲ್ಲ.

ಅದು ಶಾಲಾ ಮಟ್ಟಕ್ಕಷ್ಟೇ ಸೀಮಿತವಾಗಿರಲಿ. ಜಾತಿ, ಧರ್ಮ, ಲಿಂಗ ತಾರತಮ್ಯ ಭಾವನೆ  ಇತ್ತೀಚಿನ ವಿದ್ಯಾರ್ಥಿ ಸಮುದಾಯದಲ್ಲಿ ಎಲ್ಲಿದೆ ಹೇಳಿ? ಬೆಳೆದಂತೆ ಬಿಂದಾಸ್‌ ಆಗಿ ಇರುವ ಜೊತೆಗೇ ಜವಾಬ್ದಾರಿಯ ಬಗ್ಗೆಯೂ ಅರಿವು ಇದೆ. ಹೀಗಾಗಿ ಸಭ್ಯತೆಯ ಸಮವಸ್ತ್ರ ಧಾರಣೆಗೆ ಅವಕಾಶ ನೀಡಬೇಕು’ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಬೋಧಕ– ಬೋಧಕೇತರ ಸಿಬ್ಬಂದಿ ತಮ್ಮ ಘನತೆ, ಗೌರವಕ್ಕೆ ಪೂರಕವಾಗಿ ವಸ್ತ್ರಸಂಹಿತೆ ಪಾಲಿಸದಿರಬಹುದು. ಅಂಥವುಗಳನ್ನು ತಡೆಯಲು ವಸ್ತ್ರಸಂಹಿತೆ ಸಹಕಾರಿಯಾಗಬಲ್ಲದು. ಆದರೆ ಅದಕ್ಕೂ ಮೊದಲು ಸಿಬ್ಬಂದಿಗೆ ಅವರ ನಡವಳಿಕೆ, ದೈಹಿಕ ವರ್ತನೆ, ಇನ್ನೊಬ್ಬರ ಮುಂದೆ ಕಾಣಿಸಿಕೊಳ್ಳುವ ಪರಿ ಹೇಗಿರಬೇಕು ಎನ್ನುವ ತರಬೇತಿ ನೀಡುವ ಕಾರ್ಯಕ್ಕೆ ಇಲಾಖೆ ಮುಂದಾಗಬೇಕು. ಇದರಿಂದ ಶಿಸ್ತು ಕಾಪಾಡಲು ಸಾಧ್ಯ.

ಈ ಬಗ್ಗೆ ಉಪನ್ಯಾಸಕರು, ಸಾರ್ವಜನಿಕರು, ಪೋಷಕರಿಂದ ಸಲಹೆ ಪಡೆಯಬಹುದಿತ್ತು. ವಿದ್ಯಾರ್ಥಿಗಳಿಂದ ಸಲಹೆ ಪಡೆಯುವ ತೀರ್ಮಾನ ಸಮರ್ಥನೀಯ ಅಲ್ಲ’ ಎಂದೂ ಅವರು ಹೇಳುತ್ತಾರೆ.

ಕರಾವಳಿ ಭಾಗದಲ್ಲಿ ಪೂರ್ವ ಪ್ರಾಥಮಿಕದಿಂದ ವಿಶ್ವವಿದ್ಯಾಲಯದವರೆಗಿನ ವಿದ್ಯಾರ್ಥಿ ಸಮುದಾಯದಲ್ಲಿ ಸಮವಸ್ತ್ರ ಪರಂಪರೆ ಗಮನಿಸಬಹುದು. ವಿದ್ಯಾರ್ಥಿ ವರ್ಗದ ಮಧ್ಯೆ ಯಾವುದೇ ತಾರತಮ್ಯ ಸಲ್ಲ ಎನ್ನುವುದು ಇದರ ಹಿಂದಿನ ಉದ್ದೇಶ. ಒಂದೇ ರೀತಿ ಇದ್ದರೆ ಒಳ್ಳೆಯದು ಎನ್ನುವುದು ಸಹಮತದ ತೀರ್ಮಾನ.

ಈ ವಿಷಯದಲ್ಲಿ ಸರ್ಕಾರ ಒತ್ತಡ ಹಾಕಿಲ್ಲ. ಆದರೆ, ಈ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಕಾರ್ಫ್ ಧಾರಣೆ, ಕೇಸರಿ ಶಾಲಿನ ವಿಷಯದಲ್ಲಿ ಎದ್ದಿರುವ ಆನಾರೋಗ್ಯಕರ ಬೆಳವಣಿಗೆಯನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ’ ಎಂದು ವಾದಿಸುತ್ತಾರೆ ಮಂಗಳೂರಿನ ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಎನ್‌.ಇಸ್ಮಾಯಿಲ್‌.

‘ಆದರೆ ಇತ್ತೀಚೆಗೆ ಹಸಿರು ಮತ್ತು ಕೇಸರಿಯ ಮೇಲಾಟದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿನೆರಳು ಬಿದ್ದಿದೆ. ಈ ವಿಷಯವನ್ನು ವಿದ್ಯಾರ್ಥಿಗಳು– ಪೋಷಕರಿಗಿಂತಲೂ ಕೆಲ ಸಂಘಟನೆಗಳು, ಹೊರಗಿನ ಶಕ್ತಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡ ಪರಿಣಾಮ ವಿವಾದ ಬೆಳೆದಿದೆ. ಇದು ವಿದ್ಯಾರ್ಥಿಗಳ ಸಮಸ್ಯೆ ಅಲ್ಲ.

ಖಾಸಗಿ, ವೈಯಕ್ತಿಕ ಸಿದ್ಧಾಂತಗಳನ್ನು ಸಾರ್ವಜನಿಕವಾಗಿ ಹೇರಲು ಮುಂದಾದರೆ ಏನಾಗುತ್ತದೆ ಎನ್ನುವುದಕ್ಕೆ ನಿದರ್ಶನ. ಹೀಗಾಗಿ, ವಿದ್ಯಾರ್ಥಿಗಳೇ ಇರಲಿ ಬೋಧಕ ವರ್ಗವೇ ಇರಲಿ ವಸ್ತ್ರಸಂಹಿತೆ ವಿಚಾರದಲ್ಲಿ ಈ ಭಾಗದಲ್ಲಿ ಸಹಮತದ ವಾತಾವರಣ ಸೃಷ್ಟಿಸುವುದು ಸುಲಭವಲ್ಲ’ ಎನ್ನುವ ಅಭಿಪ್ರಾಯ ಇಸ್ಮಾಯಿಲ್‌ ಅವರದ್ದು.

‘ತಾನು ಹೇಗಿರಬೇಕು ಎಂಬುದನ್ನು  ವಿದ್ಯಾರ್ಥಿಗಳು, ಶಿಕ್ಷಕರು ಅರ್ಥ ಮಾಡಿಕೊಂಡರೆ ಚಂದ. ತೊಡುವ ಉಡುಪು ಪ್ರಚೋದನಕಾರಿಯಾಗಿ ಇರದಂತೆ ನೋಡಿಕೊಂಡರೆ ಸಾಕು. ಈ ವಿಚಾರವಾಗಿ ಎಲ್ಲರೂ ಒಂದಷ್ಟು ಎಚ್ಚರಿಕೆ ವಹಿಸುವುದು ಅವಶ್ಯ’ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿನಿ ಗೋಪಿಕಾ ಕುಲಕರ್ಣಿ.
‘ಹೆಣ್ಣು ಮಕ್ಕಳು ಹೀಗಿದ್ದರೇ ಚೆನ್ನ ಎಂದು ಹಿಂದೆ ಕೆಲವು ಕಟ್ಟುಪಾಡುಗಳು, ನಿಯಮಗಳಿದ್ದವು.

ಗೌರವ ತರುವ ಇಂತಹ ನಿಯಮಗಳಿಗೆ ಈಗ ಆ ಚೌಕಟ್ಟು ಇಲ್ಲ. ಸಂಭ್ರಮಿಸಲಿ, ಆದರೆ ಅದರ ಜೊತೆಗೇ ಸ್ವ ಸುರಕ್ಷತೆ ಗಮನದಲ್ಲಿರಬೇಕು. ಇನ್ನೊಬ್ಬರಿಗೆ ಅಸಹ್ಯ, ಅಪಥ್ಯ ಎನಿಸದ ಉಡುಪು ತೊಡುವುದು ಬಹಳ ಮುಖ್ಯ. ಗೌರವಯುತವಾಗಿ ಬಟ್ಟೆ ಹಾಕಿಕೊಳ್ಳುವುದನ್ನು ಎಲ್ಲರೂ ರೂಢಿ ಮಾಡಿಕೊಳ್ಳಬೇಕು. ಎಲ್ಲೆ ಮೀರಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಕೆಲವು ಘಟನೆಗಳೂ ಸಾರಿವೆ’ ಎನ್ನುತ್ತಾರೆ ನಾಡಿನ ಹಿರಿಯ ಮಹಿಳೆಯೊಬ್ಬರು.

‘ಈ ಎಲ್ಲ ಘಟನೆಗಳನ್ನು ಬಿಡಿಬಿಡಿಯಾದ ಘಟನೆಗಳು ಎಂದು ನೋಡದೆ ಇವೆಲ್ಲವುಗಳಲ್ಲಿರುವ ಒಂದು ಏಕಸೂತ್ರವನ್ನು ನಾವು ಮನಗಾಣಬೇಕಿದೆ. ಈ ಏಕಸೂತ್ರ ಯಾವುದು ಮತ್ತು ಅದರ ಬೀಜ ಎಲ್ಲಿದೆ ಎಂಬ ಹುಡುಕಾಟ ನಡೆಸದೆ, ಎಲ್ಲರಿಗೂ ಸಮವಸ್ತ್ರ ತೊಡಿಸುವ ಮೂಲಕವೋ, ನಿರ್ದಿಷ್ಟ ವಸ್ತ್ರಸಂಹಿತೆ ಜಾರಿಗೆ ತರುವ ಮೂಲಕವೋ ಇದನ್ನು ನಿಯಂತ್ರಿಸುವುದು ಅಸಾಧ್ಯ. ದೇಹಕ್ಕೆ  ಕ್ಯಾನ್ಸರ್ ಬಂದರೆ ತಲೆಗೂದಲು ಉದುರುತ್ತದೆ.

ಕೂದಲು ಉದುರುತ್ತದೆ ಎಂದು ನಾವು ಸೂಕ್ತ ‘ಹೇರ್ ಆಯಿಲ್’ ಬಳಸಬೇಕೋ ಅಥವಾ ಇಡಿಯ ದೇಹವನ್ನೇ ಸಮಗ್ರವಾದ ಪರೀಕ್ಷೆಗೆ ಒಡ್ಡಬೇಕೋ’ ಎನ್ನುವ ಪ್ರಶ್ನೆ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಾಪಕ ನಿತ್ಯಾನಂದ ಬಿ. ಶೆಟ್ಟಿ ಅವರದ್ದು!

ಒಪ್ಪದ ನೌಕರರು!
ಸರ್ಕಾರಿ ನೌಕರರು ಸಭ್ಯ ಉಡುಗೆ ಧರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಹಿಂದೆ ಸುತ್ತೋಲೆ ಹೊರಡಿಸಿತ್ತು. ಕಾರ್ಯದರ್ಶಿಗಳು, ನೌಕರ ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ವಸ್ತ್ರಸಂಹಿತೆ ಜಾರಿಗೊಳಿಸಲಾಗಿತ್ತು, ಈ ನಿಯಮ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಮ್ಮತಿಸಿದ್ದರು. ಶಿಸ್ತು ತರುವ ಉದ್ದೇಶಕ್ಕಾಗಿ ವಸ್ತ್ರಸಂಹಿತೆ ಜಾರಿಗೆ ತರುವ ವಿಷಯದಲ್ಲಿ ಸಹಮತ ವ್ಯಕ್ತವಾಗಿತ್ತು.

ಪುರುಷರು ಪ್ಯಾಂಟ್, ಶರ್ಟ್, ಕುರ್ತಾ, ಪೈಜಾಮ, ಮಹಿಳೆಯರು ಸೀರೆ, ಚೂಡಿದಾರ ಧರಿಸಿ ಬರಬೇಕು. ಪುರುಷರು ಟೀ ಶರ್ಟ್ ಧರಿಸುವಂತಿಲ್ಲ. ಮಹಿಳೆಯರು ಸ್ಕರ್ಟ್, ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್, ಸ್ಲೀವ್‌ಲೆಸ್ ಶರ್ಟ್ ಧರಿಸುವಂತಿಲ್ಲ ಎಂದು ವಸ್ತ್ರಸಂಹಿತೆ ನಿಯಮದಲ್ಲಿ ತಿಳಿಸಲಾಗಿತ್ತು. ಆದರೆ, ಈ ನಿಯಮಕ್ಕೆ ಸರ್ಕಾರಿ ನೌಕರರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಆದೇಶ ವಾಪಸ್ ಪಡೆಯಲಾಗಿತ್ತು. ಸರ್ಕಾರದ ಹಾಲಿ ನಿಯಮದಂತೆ ವಾಹನ ಚಾಲಕರು, ಗ್ರೂಪ್ ‘ಡಿ’ ಸಿಬ್ಬಂದಿಗಷ್ಟೇ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.

ಕ್ಲಬ್‌ಗಳಿಗೆ ಪ್ರವೇಶ
‘ಪ್ರತಿಷ್ಠಿತ ಕ್ಲಬ್‌ಗಳಲ್ಲಿರುವ ವಸ್ತ್ರಸಂಹಿತೆ ತೆರವುಗೊಳಿಸಬೇಕು. ಜುಬ್ಬಾ, ಪೈಜಾಮ, ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವವರಿಗೂ ಕ್ಲಬ್‌ಗಳಿಗೆ ಪ್ರವೇಶ ಅವಕಾಶ ಕೊಡಬೇಕು’ ಎನ್ನುವ ವಾದವನ್ನು ಜನಪ್ರತಿನಿಧಿಗಳು ಮುಂದಿಟ್ಟಿದ್ದಾರೆ. ಈ ವಿಷಯವೂ ಈಗ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT