ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಯುವಕನ ಕೊಲೆ

ವಿಕೋಪಕ್ಕೆ ತಿರುಗಿದ ಮುಸ್ಲಿಂ ಒಳಪಂಗಡಗಳ ಮಧ್ಯದ ಜಗಳ
Last Updated 11 ಫೆಬ್ರುವರಿ 2017, 5:43 IST
ಅಕ್ಷರ ಗಾತ್ರ

ಪಾಂಡವಪುರ: ಹಾಡಹಗಲೇ ಯುವಕನೊಬ್ಬನನ್ನು ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ. ಮುಸ್ಲಿಂ ಒಳಪಂಗಡದ ಎರಡು ಗುಂಪುಗಳ ಮಧ್ಯೆ ನಡೆದ ಜಗಳವೇ ಕೊಲೆಗೆ ಕಾರಣ ಎನ್ನಲಾಗಿದೆ.

ಪಟ್ಟಣದ ಮುನವರ್‌ ಪಾಷಾ ಅಲಿಯಾಸ್‌ ಪೆಟ್ರೋಲ್‌ ಮುನ್ನ ಎಂಬುವವರ ಪುತ್ರ ಲುಕ್ಮಾನ್‌ (19) ಹತ್ಯೆಗೀಡಾದ ಯುವಕ. ಆರೋಪಿ ಸುಹೇಲ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಾದ ವಸೀಂ, ಕೋಂಡಾಪಾಷಾ ಮತ್ತು ಖಲೀಲ್‌ ಪರಾರಿಯಾಗಿದ್ದಾರೆ.

ಘಟನೆ ವಿವರ: ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಇಲ್ಲಿನ ಬೀರಶೆಟ್ಟಹಳ್ಳಿ ಬಳಿಯ ಕೆಎಸ್ಆರ್‌ಟಿಸಿ ಡಿಪೊ ಮುಂಭಾಗದ ದರ್ಗಾ ಬಳಿ ದುಷ್ಕರ್ಮಿಗಳು ಲುಕ್ಮಾನ್‌ನನ್ನು ಅಡ್ಡಗಟ್ಟಿದರು. ವಸೀಂ ಎಂಬಾತ ಲುಕ್ಮಾನ್‌ನನ್ನು ಬಿಗಿಯಾಗಿ ಹಿಡಿದುಕೊಂಡರೆ, ಸುಹೇಲ್‌ ಆತನನ್ನು ಚಾಕುವಿನಿಂದ ಇರಿದ ಎನ್ನಲಾಗಿದೆ.

ಲುಕ್ಮಾನ್‌ನನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸ­ಲಾಯಿತು. ತೀವ್ರ ರಕ್ತಸ್ರಾವ­ದಿಂದ ನರಳುತ್ತಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಪ್ರಯೋಜನ­ವಾಗಲಿಲ್ಲ.

ಲುಕ್ಮಾನ್‌ ಸುನ್ನಿ ಪಂಗಡದವರಾಗಿದ್ದು, ಆರೋಪಿಗಳು ತಬ್ಲಿಕ್‌ ಪಂಗಡದವರು. ಇವರೆಲ್ಲ ಸೇರಿಕೊಂಡು ಲುಕ್ಮಾನ್‌ ಮತ್ತು ಆತನ ಗೆಳೆಯರನ್ನು ತಬ್ಲಿಕ್‌ ಪಂಗಡಕ್ಕೆ ಸೇರಬೇಕು ಎಂದು ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪಂದ ಲುಕ್ಮಾನ್‌ನನ್ನು ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಧರ್ಮಗುರು ಮೇಲೆ ಹಲ್ಲೆ: ಸುಹೇಲ್‌ ಮತ್ತು ಗೆಳೆಯರಿಗೆ ಮಹಮ್ಮದಿಯಾ ಮಸೀದಿಯ ಧರ್ಮಗುರು ಆಸೀಫ್‌ ಅವರೇ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಕೆಲವು ಯುವಕರು ಧರ್ಮಗುರು ಆಸೀಫ್ ಮೇಲೆ ಹಲ್ಲೆ ಕೂಡ ನಡೆಸಿದರು.

‘ಗುರುವಾರ ರಾತ್ರಿಯೇ ಸುಹೇಲ್‌ ಮತ್ತು ವಸೀಂ ಸೇರಿದಂತೆ ಐದಾರು ಯುವಕರ ಗುಂಪು ಲುಕ್ಮಾನ್‌ ಮತ್ತು ಆತನ ಗೆಳೆಯರ ಮೇಲೆ ಹಲ್ಲೆ ನಡೆಸಿತ್ತು. ಈ ಸಂಬಂಧ ಲುಕ್ಮಾನ್‌ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಠಾಣೆಯಲ್ಲಿದ್ದ ಎಎಸ್‌ಐ ದೂರು ಸ್ವೀಕರಿಸದೆ ಉದಾಶೀನ ತೋರಿದರು’ ಎಂದು ಲುಕ್ಮಾನ್‌ ತಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರಿದ್ದಾರೆ.

ಶಾಸಕ ಪುಟ್ಟಣ್ಣಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್‌  ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸವಿತಾ, ಡಿವೈಎಸ್‌ಪಿ ವಿಶ್ವನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸದ್ಯ ಪಟ್ಟಣದ ಮುಸ್ಲಿಂ ಕಾಲೊನಿಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಪೊಲೀಸ್ ಕಾವಲು ನಿಯೋಜಿಸಲಾಗಿದೆ.

ವ್ಯಕ್ತಿ ಆತ್ಮಹತ್ಯೆ

ಮಳವಳ್ಳಿ: ಹೊಟ್ಟೆ ನೋವು ತಾಳಲಾರದೆ ವ್ಯಕ್ತಿಯೊಬ್ಬ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ನೆಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಸಣ್ಣೇಗೌಡ ಅವರ ಪುತ್ರ ಪುಟ್ಟರಾಜು (28) ಎಂಬುವರೆ ಆತ್ಮಹತ್ಯೆಗೆ ಶರಣಾದವರು. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೆಟ್ಟಿಗೆ ಅಂಗಡಿಗೆ ಬೆಂಕಿ: ₹ 2 ಲಕ್ಷ ನಷ್ಟ
ಮದ್ದೂರು:
ಆಕಸ್ಮಿಕ ಬೆಂಕಿ ಅವಘಡ­ದಿಂದ ಪೆಟ್ಟಿಗೆ ಅಂಗಡಿಯೊಂದು ಸಂಪೂರ್ಣ ಭಸ್ಮವಾದ ಘಟನೆ ಸಮೀಪದ ಯರಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಪಟೇಲ್ ಅಪ್ಪಾಜಿ ಅವರಿಗೆ ಸೇರಿದ ಪೆಟ್ಟಿ ಅಂಗಡಿಗಳಿಗೆ ಮಧ್ಯರಾತ್ರಿ ಬೆಂಕಿ ಬಿದ್ದಿದೆ. ಅಂಗಡಿಯಲ್ಲಿದ್ದ ದಿನಸಿ ಸೇರಿದಂತೆ ಇನ್ನಿತರ ಪದಾರ್ಥಗಳು ಬೆಂಕಿಗೆ ಆಹುತಿಯಾಗಿವೆ. ₹ 2 ಲಕ್ಷ ನಷ್ಟ ಸಂಭವಿಸಿದೆ ಎಂದು ಅಪ್ಪಾಜಿ ಅವರ ಪುತ್ರ ಸತೀಶ್‌ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ; ಚಾಲಕ ಸಾವು

ಮಳವಳ್ಳಿ: ಮರ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ಗುಳಘಟ್ಟ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಶಿವರಾಜು (35) ಮೃತಪಟ್ಟವರು. ಇವರು ಟ್ರ್ಯಾಕ್ಟರ್‌ಗೆ ಮರ ತುಂಬಿಕೊಂಡು ಮನೆಗೆ ತೆರಳುವಾಗ ವಾಹನ ಪಲ್ಟಿಯಾಗಿದೆ. ಎಂಜಿನ್‌ ಅಡಿಗೆ ಸಿಲುಗಿದ ಚಾಲಕ ಸ್ಥಳದಲ್ಲೇ ಮೃತಪಟ್ಟರು.

ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT