ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ಮರಗಳಿಗೆ ತಿಮ್ಮಕ್ಕಳೇ ತಾಯಿ

ಪ್ರೇಕ್ಷಕರ ಮನಗೆದ್ದ ಕವಿತೆ l 10 ಸಾವಿರ ಪುಟಗಳ ಬರವಣಿಗೆ ಮಾಡಿದಲ್ಲಿ ಮಾತ್ರ ಬರವಣಿಗೆ ಮೇಲೆ ಹಿಡಿತ
Last Updated 11 ಫೆಬ್ರುವರಿ 2017, 6:55 IST
ಅಕ್ಷರ ಗಾತ್ರ

ಹಾಸನ: ‘ಓ ನಮ್ಮ ವೀರ ಯೋಧರೆ ನಿಮಗೆ ಹೇಗೆ ನಮನ ಸಲ್ಲಿಸಲಿ. ದೇಶದ ರಕ್ಷಣೆಗೆ ಹಗಲಿರುಳು ದುಡಿದು ಕೋಟ್ಯಂತರ ಜನರ ನೆಮ್ಮದಿಗೆ ಕಾರಣ ನೀನಾದೆ. ಭಾರತ ದೇಶದ ಶಾಂತಿ ಕದಡುವ ಉಗ್ರರ ಸೊಕ್ಕನ್ನು ಅಡಗಿಸಿದೆ. ಹೆಂಡತಿ, ಮಕ್ಕಳು, ಅಂಬೆಗಾಲಿಡುವ ಮಕ್ಕಳನ್ನು ನೋಡದೆ, ತಾನೆ ಅಂಬೆಗಾಲಿಡುತ್ತ ಶತ್ರುಗಳನ್ನು ಸದೆ ಬಡಿದೆ. ನಿಮ್ಮಂತೆ ನಾನು ಯೋಧನಾಗಿ ಸೇವೆ ಸಲ್ಲಿಸಲೆ..’

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಅಖಿಲ ಕರ್ನಾಟಕ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಕವಯತ್ರಿ  ಎಚ್‌.ಸಿ.ಅನನ್ಯಾ ‘ಓ ನನ್ನ ಯೋಧರೆ’ ಎಂದು ವಾಚಿಸಿದ ಕವಿತೆ ಗಮನ ಸೆಳೆಯಿತು. ಅನೇಕ ಮಕ್ಕಳ ಕವನಗಳ ಕೇಂದ್ರ ಬಿಂದು ಅಮ್ಮ, ಪ್ರಕೃತಿ, ಅನ್ನದಾತರೇ ಆಗಿದ್ದರು.

ದೇಶದ ರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಯೋಧರು, ಮಲೆನಾಡಿನ ಪ್ರಕೃತಿ ಸೌಂದರ್ಯ, ಸಾವಯವ ಕೃಷಿ,  ಮಕ್ಕಳನ್ನು ಸಂತೈಸುವಲ್ಲಿ ‘ಅಮ್ಮ’ ಮತ್ತು ‘ಅಪ್ಪ’ ನಿರ್ವಹಿಸುವ ಜವಾಬ್ದಾರಿ, ವಿವಿಧ ಹೂಗಳ ವರ್ಣನೆ, ಪರಿಸರ ಸಂರಕ್ಷಣೆಯಲ್ಲಿ ಸಾಲುಮರದ ತಿಮ್ಮಕ್ಕ ಅವರ ಸಾಧನೆ, ಸರ್ಕಾರದ ಕೋಟಿ ವೃಕ್ಷ ಆಂದೋಲನ, ಜೀವನದ ಪಯಣದಲ್ಲಿ ಎದುರಾಗುವ ಸಂಕಷ್ಟ ಹೀಗೆ ಹಲವು ಸಾಮಾಜಿಕ ಸಂದೇಶ ಹಾಗೂ ನವಿರಾದ ಹಾಸ್ಯ ಸಾಹಿತ್ಯ ಉಣಬಡಿಸಿ ಕವಿಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.

ಜೀವನವೆಂಬ ಬೆಂಗಾಡಿನಲ್ಲಿ ದೇವರು ಸೃಷ್ಟಿಸಿರುವ ಮಹತ್ವದ ತಂಗಾಳಿಯೇ ಗೆಳೆತನ. ಆ ಗೆಳೆತನದ ಬಗ್ಗೆ ಬೆಳಗಾವಿಯ ಶ್ವೇತಾ ಆರ್‌.ಪಟೇಲ್‌ ವಾಚಿಸಿದ ‘ಗೆಳತಿ ನೀ ನನ್ನ ನೆರಳಿದ್ದಾಂಗ. ನನ್ನ ಬಾಳಿಗೆ ನೀ ಬೆಳಕಿದ್ದಾಂಗ. ನನ್ನ ದೇಹಕ ನೀ ಜೀವವಿದ್ದಾಂಗ. ನಾ ಗಿಡ ಆದ್ರ ನೀ ಹೂವಿದ್ದಾಂಗ. ನೀ ಇಲ್ಲದೆ ಉದುರಿದ ಎಲೆ ಇದ್ದಾಂಗ. ನೀ ಕಣ್ಣಾದ್ರ ನೀ ಕಣ್ಣಿನ ರೆಪ್ಪೆ ಇದ್ದಾಂಗ, ನಾ ತೂಗೊ ಗಾಳಿಯಲ್ಲಿ ನೀ ಉಸಿರಿದ್ದಾಂಗ’ ಎಂಬ ಕವನ ಅಪೂರ್ವ ಸ್ನೇಹಕ್ಕೆ ಸಾಕ್ಷಿಯಾಗಿತ್ತು.  ಎ.ಬಿ.ವಿವೇಕ್‌ ಅವರು ‘ತಾಯಿಯಾದರು ತಿಮ್ಮಕ್ಕ ಸಾಲು ಸಾಲು ಮರಕ್ಕೆ’ ಎಂದು ಕವಿತೆ ಓದಿದರು. 

ಸಾಹಿತಿ ಭಾನು ಮುಷ್ತಾಕ್‌ ಮಾತನಾಡಿ, ಸೃಜನಶೀಲತೆ ವ್ಯಕ್ತಿಗೆ ಮೂಲ ಘಟಕವಿದ್ದಂತೆ. ಮಕ್ಕಳೇ ನಮ್ಮ ಗುರುಗಳು. ಅವರಲ್ಲಿ ಸಾಹಿತ್ಯ ಪ್ರವಾಹದಂತೆ ಹರಿಯಬೇಕು. ಅಂತಃಕರಣದ ಸಾಹಿತ್ಯ ಅಭಿವ್ಯಕ್ತಗೊಳಿಸಬೇಕು. ಸಂಶೋಧಕರೊಬ್ಬರು ಹೇಳಿರುವಂತೆ ಸಾಹಿತ್ಯ ಕ್ಷೇತ್ರದಲ್ಲಿ ತೃಪ್ತಿ ಕಂಡುಕೊಳ್ಳಲು ಆತ 10 ಸಾವಿರ ಪುಟಗಳ ಬರವಣಿಗೆ ಮಾಡಿದಲ್ಲಿ ಮಾತ್ರ ಬರವಣಿಗೆ ಮೇಲೆ ಹಿಡಿತ ಸಾಧ್ಯ ಎಂದರು. 

ಮಕ್ಕಳು ಮಹಾನ್‌ ಸಾಧಕರ ಜೀವನ ಕೃತಿಗಳನ್ನು ಅಧ್ಯಯನ ಮಾಡಬೇಕು.  ದಿನಚರಿ ಬರೆಯುವುದನ್ನು ಮೈಗೂಡಿಸಿಕೊಳ್ಳಬೇಕು. ಅವುಗಳೇ ಮುಂದೊಂದು ದಿನ ಉತ್ತಮ ವೈಯಕ್ತಿಕ, ರಾಜಕೀಯ ಕೃತಿಗಳಾಗುತ್ತವೆ ಎಂದರು. 

ಪತ್ರಕರ್ತ ಶಿವಾನಂದ ತಗಡೂರು ಮಾತನಾಡಿದರು. ಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ 40 ಮಕ್ಕಳು ಕವನಗಳನ್ನು ವಾಚಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮಕಳ ಸಾಹಿತ್ಯ ಪರಿಷತ್‌  ಅಧ್ಯಕ್ಷ ಚ.ನಾ.ಅಶೋಕ್‌, ಮಕ್ಕಳ ಸಾಹಿತಿ ಸುಕನ್ಯಾ ಮುಕುಂದ, ಹೊಳೆನರಸೀಪುರ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್‌, ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್‌, ಯುವ ಮುಖಂಡ ಅಗಿಲೆ ಯೋಗೇಶ್‌ ಇದ್ದರು.

2ನೇ ದರ್ಜೆಯವರಂತೆ ನೋಡಬೇಡಿ

ಪೋಷಕರು ಮಕ್ಕಳನ್ನು 2ನೇ ದರ್ಜೆಯವರಂತೆ ನೋಡುವುದನ್ನು ನಿಲ್ಲಿಸಬೇಕು. ಕೇವಲ ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತಗೊಳಿಸಬಾರದು. ಧನಾತ್ಮಕ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು. ಕುವೆಂಪು ಅವರು ಶಾಲಾ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದರು. ಮಕ್ಕಳಿಗೆ ಚಿಕ್ಕಂದಿನಲ್ಲೆ ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಜನಪದ ಕಲಾವಿದ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ಅಕ್ಷರ ಜಾತ್ರೆಗೆ ವರ್ಣರಂಜಿತ ತೆರೆ

ಪ್ರಥಮ ಬಾರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನ ಆಯೋಜಿಸಿದ್ದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ತೆರೆ ಬಿತ್ತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಕ್ಕಳು ವಿಚಾರ ಗೋಷ್ಠಿ, ಚರ್ಚಾಗೋಷ್ಠಿಯಲ್ಲಿ ವಿಚಾರಗಳನ್ನು ಮಂಡಿಸಿದರು. ಸ್ವರಚಿತ ಕವನಗಳನ್ನು ವಾಚಿಸಿ ಪ್ರೇಕ್ಷಕರ ಮನಗೆದ್ದರು.

* ನಾವು ಸುತ್ತಲಿನ ಬದಲಾವಣೆಗಳನ್ನು ಗ್ರಹಿಸುವಾಗ ಅರಳುಗಣ್ಣಿನ ಮುಗ್ಧ ನೋಟದಿಂದ ಇತರರಿಗಿಂತ ವಿಭಿನ್ನವಾಗಿ ಗಮನಿಸಬೇಕು
-ಭಾನುಮುಷ್ತಾಕ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT