ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳದವರೆಗೆ ರೈಲು ಮಾರ್ಗ ಪರಿಶೀಲನೆ

ರೈಲ್ವೆ ಇಲಾಖೆಯ 80 ಅಧಿಕಾರಿಗಳು ಮತ್ತು ತಜ್ಞರ ತಂಡ, 7 ಟ್ರ್ಯಾಲಿಗಳಲ್ಲಿ ಕುಳಿತು ಹಳಿಯ ಪರಿಶೀಲನೆ
Last Updated 11 ಫೆಬ್ರುವರಿ 2017, 7:08 IST
ಅಕ್ಷರ ಗಾತ್ರ

ಹಿರೀಸಾವೆ: ಹಾಸನ–ಬೆಂಗಳೂರು ರೈಲ್ವೆ ಮಾರ್ಗದ ನೆಲಮಂಗಲ–ಶ್ರವಣಬೆಳಗೊಳ ವಿಭಾಗದ ಕೊನೆಯ ದಿನದ ರೈಲ್ವೆ ಮಾರ್ಗದ ಸುರಕ್ಷತಾ ಪರಿಶೀಲನೆ ಕಾರ್ಯವು ಶುಕ್ರವಾರ ಹಿರೀಸಾವೆಯಿಂದ ಆರಂಭವಾಗಿ ಶ್ರವಣಬೆಳಗೊಳದವರೆಗೆ ನಡೆಯಿತು.

ಬೆಳಿಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಬಂದ ಅಧಿಕಾರಿಗಳು ಹಿರೀಸಾವೆ ರೈಲ್ವೆ ನಿಲ್ದಾಣದಲ್ಲಿ ಇಳಿದರು. ಇಲ್ಲಿ ಅಳವಡಿಸಿರುವ ಸಿಗ್ನಲ್, ಟಿಕೆಟ್ ಕೌಂಟರ್‌ಗಳು, ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ನಿಲ್ದಾಣದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಿಲ್ದಾಣದ ಪರಿಶೀಲನೆ ನೆನಪಿಗಾಗಿ ಅಧಿಕಾರಿಗಳು 5 ಗಿಡಗಳನ್ನು ನೆಟ್ಟು, ನೀರು ಹಾಕಿದರು. ನಂತರ ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತ ಕೆ.ಎ.ಮನೋಹರ್ ನೇತೃತ್ವದ ವಿವಿಧ ವಿಭಾಗದ 80ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ತಜ್ಞರ ತಂಡವು 7 ಟ್ರ್ಯಾಲಿಗಳಲ್ಲಿ ಹಳಿಯ ಪರಿಶೀಲನೆ ಆರಂಭಿಸಿತು.

ಹಳಿಯ ಜೋಡಣೆ, ಮಾರ್ಗದಲ್ಲಿ ನಿರ್ಮಿಸಿರುವ ಸೇತುವೆಗಳು ಹಾಗೂ ಮಾರ್ಗದ ತಿರುವುಗಳಲ್ಲಿ ಅಧಿಕಾರಿಗಳು ಟ್ರ್ಯಾಲಿಯಿಂದ ಇಳಿದು, ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು. ಅಲ್ಲಲ್ಲಿ ಇದ್ದ ಸಣ್ಣ–ಪುಟ್ಟ ದೋಷಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿ ಸರಿಪಡಿಸುವಂತೆ ಸೂಚನೆ ಸಹ ನೀಡಿದರು.

ಮಾರ್ಗದ ಸುರಕ್ಷತಾ ಪರಿಶೀಲನೆಯೂ ಶ್ರವಣಬೆಳಗೊಳದವರೆಗೆ ಪೂರ್ಣಗೊಂಡ ನಂತರ 110 ಕಿ.ಮೀ. ವೇಗದಲ್ಲಿ ರೈಲು ಇಲ್ಲಿಂದ ನೆಲಮಂಗಲದವರೆಗೆ ಸಂಚರಿಸಿತು. ಹಾಸನದಿಂದ ಬೆಂಗಳೂರಿಗೆ 183 ಕಿ.ಮೀ. ರೈಲು ಮಾರ್ಗ ನಿರ್ಮಾಣಕ್ಕೆ 1996ರಲ್ಲಿ ಚಾಲನೆ ಸಿಕ್ಕಿತ್ತು. 2006 ಮಹಾಮಸ್ತಕಾಭಿಷೇಕಕ್ಕೆ ಹಾಸನದಿಂದ ಶ್ರವಣಬೆಳಗೊಳದವರೆಗೆ ಮಾರ್ಗ ಪೂರ್ಣಗೊಂಡು ರೈಲು ಸಂಚಾರ ಮಾಡಿತ್ತು. 2018ರ ಮಹಾಮಸ್ತಕಾಭಿಷೇಕಕ್ಕೆ ಒಂದು ವರ್ಷ ಇರುವಾಗಲೇ ಬೆಂಗಳೂರಿನವರೆಗೆ ಪೂರ್ಣವಾಗಿದೆ.

ಇದೇ ಸೋಮವಾರ ನೆಲಮಂಗಲದಿಂದ ರೈಲ್ವೆ ಮಾರ್ಗದ ಸುರಕ್ಷತಾ ಪರಿಶೀಲನೆ ಪ್ರಾರಂಭಿಸಿ, ತಿಪ್ಪಸಂದ್ರ,  ಸೋಲೂರು, ಕುಣಿಗಲ್, ಯಡಿಯೂರು, ಆದಿಚುಂಚನಗಿರಿ, ಬೆಳ್ಳೂರು ಕ್ರಾಸ್, ಹಿರೀಸಾವೆ, ಶ್ರವಣಬೆಳಗೊಳದಲ್ಲಿ ಮುಕ್ತಾಯವಾಯಿತು.

ಶ್ರವಣಬೆಳಗೊಳ-ನೆಲಮಂಗಲ ಮಾರ್ಗ: ರೈಲು ಸಂಚಾರಕ್ಕೆ ಅನುಮತಿ

ಶ್ರವಣಬೆಳಗೊಳ: ನೆಲಮಂಗಲದಿಂದ ಹಿಡಿದು ಶ್ರವಣಬೆಳಗೊಳದ ರೈಲ್ವೆ ನಿಲ್ದಾಣದವರೆಗಿನ ಮಾರ್ಗ ಕಾಮಗಾರಿಯು ಪೂರ್ಣಗೊಂಡಿದ್ದು, ರೈಲು ಸಂಚರಿಸಲು ಯೋಗ್ಯವಾಗಿದೆ ಎಂದು ರೈಲ್ವೆ ಸುರಕ್ಷತಾ ಮುಖ್ಯ ಅಧಿಕಾರಿಗಳಾದ ಅಶೋಕ್‌ ಗುಪ್ತ, ಮನೋಹರನ್‌ ತಿಳಿಸಿದರು.

ಶ್ರವಣಬೆಳಗೊಳದ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೆಲಮಂಗಲದಿಂದ ಹಿಡಿದು ಶ್ರವಣಬೆಳಗೊಳದವರೆಗೆ 120 ಕಿ.ಮೀ. ಕಾಮಗಾರಿಯನ್ನು ಫೆ. 6ರಿಂದ 10ರವರೆಗೆ ವೀಕ್ಷಣೆ ಮಾಡಿ ಸುರಕ್ಷತೆಯ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಮಾರ್ಗ ಮಧ್ಯದಲ್ಲಿ ಬರುವ ದೊಡ್ಡ –ಸಣ್ಣ ಸೇತುವೆಗಳು, ರೈಲ್ವೆ ಹಳಿಗಳ ಜೋಡಣೆ, ಸಿಗ್ನಲ್‌ ಲೈಟ್‌ಗಳ ಕೇಬಲ್‌ ಜೋಡಣೆ ಹಾಗೂ ನಿಲ್ದಾಣಗಳ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಆಗಿದೆ ಎಂದು ಖಚಿತ ಪಡಿಸಿದರು. ಇಂದಿನಿಂದ ಜೋಡಿ ಎಂಜಿನ್‌ನೊಂದಿಗೆ 9 ಬೋಗಿಗಳ ಗಾಡಿಗೆ ಅನುಮತಿ ನೀಡಲಾಗಿದೆ' ಎಂದು ತಿಳಿಸಿದರು.

ರೈಲ್ವೆ ವಿಭಾಗೀಯ ಮುಖ್ಯ ಅಧಿಕಾರಿಗಳಾದ ಸಂಜಯ್‌ ಅಗರ್‌ವಾಲ್‌ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT