ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ತನಿಖೆಗೆ ಆಗ್ರಹ

ಅಭಿವೃದ್ಧಿ ನೆಪದಲ್ಲಿ ಹಣಪೋಲು l ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಿ
Last Updated 11 ಫೆಬ್ರುವರಿ 2017, 8:25 IST
ಅಕ್ಷರ ಗಾತ್ರ

ಮಡಿಕೇರಿ: ನಗರಸಭೆ ವ್ಯಾಪ್ತಿಯ ಎವಿ ಶಾಲೆ ಬಳಿಯಿಂದ ಇಂದಿರಾಗಾಂಧಿ ವೃತ್ತದವರೆಗೆ ಇತ್ತೀಚೆಗಷ್ಟೇ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದು, ಈಗಲೇ ರಸ್ತೆಯ ಕಾಂಕ್ರೀಟ್‌ ಕಿತ್ತು ಬರುತ್ತಿದೆ ಎಂದು ಆರೋಪಿಸಿ, ಪೀಪಲ್ಸ್‌ ಮೂವ್‌ಮೆಂಟ್‌್ ಫಾರ್‌ ಹ್ಯೂಮನ್‌ ರೈಟ್ಸ್‌ ಹಾಗೂ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಂಡು ಕೆಲವೇ ತಿಂಗಳಾಗಿದ್ದರೂ ನೂತನ ರಸ್ತೆಯಲ್ಲಿನ ಕಲ್ಲು, ಮರಳು, ಸಿಮೆಂಟ್ ಕಿತ್ತು ಬರುತ್ತಿದೆ. ಇದೊಂದು ಕಳಪೆ ಕಾಮಗಾರಿ; ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಸ್ತೆ ಅಭಿವೃದ್ಧಿಯ ನೆಪದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿರುವುದು ಸ್ಪಷ್ಟವಾಗಿದೆ. ಬೆಂಗಳೂರು, ಮಂಗಳೂರರು ಮಹಾನಗರಗಳಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್‌ ರಸ್ತೆಗಳು ಹಲವು ವರ್ಷಗಳ ಕಾಲ ಗುಣಮಟ್ಟ ಕಾಯ್ದುಕೊಳ್ಳುತ್ತಿವೆ. ಆದರೆ, ಮಡಿಕೇರಿ ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕಳಪೆ ಗುಣಮಟ್ಟದಿಂದಲೇ ಕೂಡಿದೆ ಎಂದು ಸದಸ್ಯರು ಆರೋಪಿಸಿದರು.

ರಸ್ತೆಯ ಗುಣಮಟ್ಟದ ಬಗ್ಗೆ ನಗರಸಭೆಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿದಿದ್ದರೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕಳಪೆ ಕಾಮಗಾರಿ ಆಗಿರುವ ಬಗ್ಗೆ ಸಾಕ್ಷ್ಯಗಳಿದ್ದರೂ ಕಾಮಗಾರಿಯನ್ನು ಪರಿಶೀಲಿಸದೇ ಬಿಲ್ ಪಾವತಿಸಿರುವ ಅಧಿಕಾರಿಗಳ ವಿರುದ್ಧ ಹಾಗೂ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಿಕೊಂಡು ಕಪ್ಪುಪಟ್ಟಿಗೆ ಸೇರಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲೂ ಆತನಿಗೆ ಕಾಮಗಾರಿ ನಡೆಸಲು ಅವಕಾಶ ಮಾಡಬಾರದು. ನಗರದ ಒಳ ಚರಂಡಿ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆಯುತ್ತಿದೆ. ರಸ್ತೆ ಸಂಪೂರ್ಣವಾಗಿ ಹದಗೆಡುತ್ತಿದೆ. ಮಳೆಗಾಲದ ಮೊದಲು ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮತ್ತು ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪೀಪಲ್ಸ್‌ ಮೂವ್‌ಮೆಂಟ್‌ನ ಅಧ್ಯಕ್ಷ ಹರೀಶ್‌ ಜಿ.ಆಚಾರ್ಯ ಸೇರಿದಂತೆ ಹಲವರು ಇದ್ದರು.

ಪ್ರವಾಸಿಗರಿಗೆ ಬಾಡಿಗೆಗೆ ಬೈಕ್‌: ವಿರೋಧ

ಮಡಿಕೇರಿ: ಜಿಲ್ಲೆಯಲ್ಲಿ ಬಾಡಿಗೆಗೆ ಬೈಕ್‌ ನೀಡುವ ಸಂಸ್ಥೆಗಳಿಗೆ ಅನುಮತಿ ನೀಡಬಾರದು ಎಂದು ಆಟೊ ಮಾಲೀಕರ ಸಂಘ, ಕಾವೇರಿ ಡ್ರೈವರ್‍ಸ್ ಅಸೋಸಿಯೇಷನ್ ಪ್ರತಿನಿಧಿಗಳು ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆಟೊ ಮಾಲೀಕರು, ಚಾಲಕರ ಸಂಘದ ಅಧ್ಯಕ್ಷ ಡಿ.ಎಚ್.ಮೇದಪ್ಪ ಮಾತನಾಡಿ, ‘ರಾಹುಲ್ ಗ್ರೂಪ್ ಎಂಬ ಹೊರನಾಡಿನ ಸಂಸ್ಥೆಯೊಂದು ಪ್ರವಾಸಿಗರಿಗೆ ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ಬೈಕ್‌ ಕೊಡಲು ಮುಂದಾಗಿದೆ. ಇದರಿಂದ ಬಾಡಿಗೆಗೆ ವಾಹನ ಚಲಾಯಿಸುವ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

ಈ ಬಗ್ಗೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.

ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸದಸ್ಯ ಸತ್ಯಂ ಮಾತನಾಡಿ, ಪ್ರವಾಸಿಗರನ್ನು ನಂಬಿ ಜಿಲ್ಲೆಯಲ್ಲಿ ಕಾರು, ಜೀಪುಗಳನ್ನು ಬಾಡಿಗೆಗೆ ಓಡಿಸಲಾಗುತ್ತಿದೆ ಎಂದು ತಿಳಿಸಿದರು.

ಹಲವು ಕಾರಣಗಳಿಂದ ಬಾಡಿಗೆ ಕಡಿಮೆಯಾಗಿದೆ. ಪ್ರವಾಸಿಗರು ವಾರಾಂತ್ಯದಲ್ಲಿ ಮಡಿಕೇರಿಗೆ ಬರುತ್ತಾರೆ. ಆಟೊ, ಜೀಪು ಚಾಲಕರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಬಾಡಿಗೆಗೆ ಬೈಕ್ ನೀಡುವ ಪರಿಪಾಠ ಜಿಲ್ಲೆಗೆ ಬಂದರೆ ಇಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಲಿದೆ; ಬಳಿಕ ಹೋಂಸ್ಟೆಗಳೇ ಬೈಕ್‌ಗಳು ನೀಡಿದರೆ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆಯಿದೆ. ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೂ ತಂದಿದ್ದೇವೆ. ಬಾಡಿಗೆಗೆ ಬೈಕ್‌ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಮಡಿಕೇರಿ ಆಟೊ ಮಾಲೀಕರ ಸಂಘದ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಟಿ.ಎಂ. ಪ್ರಸನ್ನ, ನಗರ ಪ್ರವಾಸಿ ಟ್ಯಾಕ್ಸಿ ಅಧ್ಯಕ್ಷ ಲೋಕೇಶ್, ಜೈಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT