ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಲ್ಲಿ ಹಿಂದುಳಿದ ಪೊಲೀಸರು

ನಗರ ವ್ಯಾಪ್ತಿಯಲ್ಲಿ ದ್ವಿಗುಣಗೊಂಡ ದರೋಡೆ, ಡಕಾಯಿತಿ ಪ್ರಕರಣಗಳು
Last Updated 11 ಫೆಬ್ರುವರಿ 2017, 8:48 IST
ಅಕ್ಷರ ಗಾತ್ರ

ಮೈಸೂರು: ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚುವ ದರೋಡೆ ಮತ್ತು ಡಕಾಯಿತಿ ಪ್ರಕರಣ ಗಳನ್ನು ಭೇದಿಸುವಲ್ಲಿ ಕಮಿಷನರೇಟ್‌ ಪೊಲೀಸರು ಹಿಂದೆ ಬಿದ್ದಿದ್ದಾರೆ. 2016ರಲ್ಲಿ ನಡೆದ 52 ದರೋಡೆಯಲ್ಲಿ 23 ಹಾಗೂ 13 ಡಕಾಯತಿಗಳ ಪೈಕಿ 8 ಪ್ರಕರಣಗಳು ಮಾತ್ರ ಪತ್ತೆಯಾಗಿವೆ.

ಎರಡು ವರ್ಷಗಳಿಂದ ನಿಯಂತ್ರಣಕ್ಕೆ ಬಂದಿದ್ದ ಈ ಪ್ರಕರಣಗಳು ಇತ್ತೀಚೆಗೆ ದ್ವಿಗುಣಗೊಂಡಿವೆ. 2014ರಲ್ಲಿ 39 ಪ್ರಕರಣಗಳ ಪೈಕಿ 30 ಹಾಗೂ 2015 ರಲ್ಲಿ ದಾಖಲಾದ 35 ದೂರುಗಳಲ್ಲಿ 34 ಪ್ರಕರಣಗಳನ್ನು ಪೊಲೀಸರು ಭೇದಿಸಿ ದ್ದರು. ಕಳೆದ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಿದರೂ, ಪತ್ತೆಯಾಗಿದ್ದು ಕಡಿಮೆ.
ನಗರದ ಹೊರವಲಯದಲ್ಲಿಯೇ ಇಂತಹ ಕೃತ್ಯಗಳು ಹೆಚ್ಚಾಗಿ ನಡೆದಿವೆ. ರಾತ್ರಿ ವೇಳೆ ಸಂಚರಿಸುವವರು ನಗದು ಹಾಗೂ ಬೆಲೆಬಾಳುವ ಸ್ವತ್ತುಗಳನ್ನು ಕಳೆದುಕೊಂಡಿದ್ದಾರೆ. ವಿರಳ ಜನವಸತಿ ಇರುವ ಬಡಾವಣೆಯ ಒಂಟಿ ಮನೆಗಳಲ್ಲಿಯೂ ಈ ಕೃತ್ಯ ನಡೆದಿದೆ. ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಗ್ಯಾಂಗ್‌ಗಳು ನಗರ ಅಪರಾಧ ದಳದ (ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿವೆ.

ಕೇರಳಿಗರ ಮೇಲೆ ಕಣ್ಣು: ಬಹುತೇಕ ದರೋಡೆಕೋರರು ಹಾಗೂ ಡಕಾಯಿ ತರಿಗೆ ಕೇರಳ ನೋಂದಣಿ ವಾಹನದ ಮೇಲೆಯೇ ಕಣ್ಣು. ಬೆಂಗಳೂರಿನಿಂದ ಮೈಸೂರು ಮೂಲಕ ಕೇರಳಕ್ಕೆ ಸಾಗುವ ವಾಹನಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಕೇರಳ, ಬೆಂಗ ಳೂರು, ದುಬೈ ಸಂಪರ್ಕ ಇರುವುದು ಕೂಡ ರಹಸ್ಯವಾಗಿ ಉಳಿದಿಲ್ಲ. ಕೊಲ್ಲಿ ರಾಷ್ಟ್ರಗಳಿಂದ ಬೆಂಗಳೂರಿನ ದೇವನ ಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಮೈಸೂರು ಮೂಲಕ ಕೇರಳಕ್ಕೆ ತೆರಳುವವರ ಮೇಲೆ ಈ ಜಾಲ ಹದ್ದಿನಕಣ್ಣಿಡುತ್ತದೆ.

ವಿದೇಶದಿಂದ ಮರಳುವ ಕೇರಳಿಗರ ಬಳಿ ಕಪ್ಪುಹಣ ಹಾಗೂ ಚಿನ್ನಾಭರಣ ಇರುತ್ತದೆ ಎಂಬ ಬಲವಾದ ನಂಬಿಕೆ ದುಷ್ಕರ್ಮಿಗಳಿಗೆ ಇದೆ. ಹವಾಲ ಹಣ ದೋಚಿದರೆ ಠಾಣೆಯಲ್ಲಿ ದೂರು ದಾಖ ಲಾಗುವುದಿಲ್ಲ ಎಂಬ ತಂತ್ರಗಾರಿಕೆಯೂ ಇದರಲ್ಲಿ ಅಡಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರು, ರಾಮನಗರ, ಮಂಡ್ಯ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ ದರೋಡೆ, ಡಕಾಯಿತಿ ನಡೆಸಿದರೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಮೈಸೂರು ಹೊರವಲಯದವರೆಗೆ ಹಿಂಬಾಲಿಸಿ ಕೃತ್ಯ ಎಸಗಲಾಗುತ್ತದೆ. ಬಳಿಕ ಕೇರಳ ಹಾಗೂ ತಮಿಳುನಾಡಿಗೆ ಪರಾರಿಯಾಗುವುದು ಸುಲಭ.

ಸಿದ್ದಲಿಂಗಪುರದ ಬಳಿ ಕೇರಳದ ವೈನಾಡು ಜಿಲ್ಲೆಯ ಅಬೂಬ್ಕರ್‌ ಸಿದ್ದಿಕಿ ಯನ್ನು ದರೋಡೆ ಮಾಡಿದ ಬೆಂಗ ಳೂರಿನ ಗ್ಯಾಂಗ್‌ವೊಂದು ಮೇಟಗಳ್ಳಿ ಠಾಣೆಯ ಪೊಲೀಸರಿಗೆ ಸಿಕ್ಕಿಬಿದ್ದಿದೆ. ರಿಂಗ್‌ ರಸ್ತೆಯಲ್ಲಿ ಡ್ರಾಪ್‌ ಕೇಳುವ ನೆಪದಲ್ಲಿ ಡಕಾಯಿತಿಗೆ ಹೊಂಚು ಹಾಕಿದ್ದ ಪ್ರಕರಣದಲ್ಲಿ ಬಾಂಗ್ಲಾ ದೇಶದ ಪ್ರಜೆ ಹಾಗೂ ಇಬ್ಬರು ಹೊರರಾಜ್ಯದ ಮಹಿಳೆಯರು ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾಗ್ಯ ಗ್ಯಾಂಗ್‌ ಬಂಧನ: ರಿಂಗ್‌ ರಸ್ತೆಯಲ್ಲಿ ಹೊಂಚು ಹಾಕಿ ಕಾರುಗಳನ್ನು ಅಡ್ಡಹಾಕಿ ಡಕಾಯಿತಿ, ದರೋಡೆ ನಡೆಸುವ ಪ್ರಕರಣಗಳು ವರ್ಷವಿಡೀ ನಡೆದಿವೆ. ಉದ್ಯಮಿಗಳನ್ನು ಹೊಂಚು ಹಾಕಿ ಡಕಾಯಿತಿ ಮಾಡಿದ್ದ ಕ್ಯಾತಮಾರನಹಳ್ಳಿಯ ಭಾಗ್ಯ ಗ್ಯಾಂಗ್ ಇತ್ತೀಚೆಗೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ.

18ರಿಂದ 35 ವರ್ಷದ ಒಳಗಿನ ನಿರುದ್ಯೋಗಿ ಯುವಕರನ್ನು ಸೇರಿಸಿ ಗ್ಯಾಂಗ್ ಕಟ್ಟಿಕೊಂಡಿದ್ದ ಭಾಗ್ಯ, ರಿಂಗ್‌ ರಸ್ತೆಯ ಆಸುಪಾಸಿನಲ್ಲಿ ಇಂತಹ ಕೃತ್ಯ ಎಸಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಹದೇವಪುರದ ದ್ವಾರಕೀಶ ಎಂಬುವರನ್ನು ಡಿ. 22ರಂದು ಈ ಗ್ಯಾಂಗ್‌ ಡಕಾಯಿತಿ ಮಾಡಿ ₹ 16.50 ಲಕ್ಷ ನಗದು ದೋಚಿ ಪರಾರಿಯಾಗಿತ್ತು.

ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಬೆಂಗಳೂರು ಮೂಲದ ಗ್ಯಾಂಗ್‌ ವೊಂದು ನಜರಬಾದ್‌ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ಸೆರೆಯಾಗಿದೆ.
ಇನ್ನೂ ಹಲವು ಗ್ಯಾಂಗ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ರಿಂಗ್‌ ರಸ್ತೆ ಸೇರಿದಂತೆ ನಗರದ ಹೊರ ವಲಯದಲ್ಲಿ ರಾತ್ರಿವೇಳೆ ಸಂಚಾರಿಸಲು ಸಾರ್ವಜನಿಕರು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
(ಮುಂದುವರಿಯುವುದು)

ದರೋಡೆ ಮತ್ತು ಡಕಾಯಿತಿ

ವರ್ಷ         ಪ್ರಕರಣ
2011          68
2012          57
2013          58
2014          39
2015          35
2016          65

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT