ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೌವನದ ಹೊಳೆಯಲ್ಲಿ ರಂಗಭೂಮಿ?

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಯಲ್ಲಿ ಹಿಂದೆಂದೂ ಕಾಣದಷ್ಟು ದೊಡ್ಡ ಸಂಖ್ಯೆಯಲ್ಲಿ ತರುಣ–ತರುಣಿಯರು ತೊಡಗಿಕೊಂಡಿದ್ದಾರೆ. ಯುವಜನರ ಪಾಲ್ಗೊಳ್ಳುವಿಕೆಯಿಂದ ರಂಗಭೂಮಿ ಕಂಗೊಳಿಸುತ್ತಿದೆ. ಆದರೆ, ಈ ಉತ್ಸಾಹ ಸಂಖ್ಯೆಗಷ್ಟೇ ಸೀಮಿತವಾಗಿದೆಯೇ? ಹೊಸ ಹುಡುಕಾಟಗಳು ನಡೆಯುತ್ತಿಲ್ಲವೇ? ಈ ಪ್ರಶ್ನೆಗಳ ಜೊತೆಗೇ ವ್ಯಾಪಾರಿ ಲೆಕ್ಕಾಚಾರಗಳು ಅತಿ ಕಡಿಮೆ ಇರುವ ಮಾಧ್ಯಮದಲ್ಲಿ ಯುವಪೀಳಿಗೆ ಆಸಕ್ತಿ ವ್ಯಕ್ತಪಡಿಸುತ್ತಿರುವ ಕುತೂಹಲಕರ ವಿದ್ಯಮಾನಕ್ಕೆ ಈ ಹೊತ್ತಿನ ಕನ್ನಡ ರಂಗಭೂಮಿ ಸಾಕ್ಷಿಯಾಗಿದೆ.

**
‘ರಂಗಭೂಮಿ ಒಂದು ಬಾಸ್ಟರ್ಡ್‌ ಆರ್ಟ್‌’.
ಹೀಗೆಂದು ಹೇಳಿದವರು ಯಾರೋ ರಂಗದ್ವೇಷಿಯಲ್ಲ. ಅದು ರಂಗಭೂಮಿಯನ್ನು ತೆಗಳಲು ಬಳಸಿದ ಬೈಗುಳವೂ ಅಲ್ಲ. ಕನ್ನಡದ ಖ್ಯಾತ ರಂಗಕರ್ಮಿ ಬಿ.ವಿ. ಕಾರಂತರು ರಂಗಭೂಮಿಯನ್ನು ಹೀಗೆ ವ್ಯಾಖ್ಯಾನಿಸಿದ್ದರು. ಅವರ ಈ ವ್ಯಾಖ್ಯಾನಕ್ಕೆ ತಕ್ಕ ಸಮರ್ಥನೆಯೂ ಇತ್ತು.
 
ಜಗತ್ತಿನ ಎಲ್ಲ ನಾಗರಿಕತೆಗಳಿಗೂ ಅವುಗಳದ್ದೇ ಆದ ಸಂಗೀತ, ನಾಟ್ಯ, ವೇಷಾಲಂಕಾರ ಕಲೆಗಳ ಸುದೀರ್ಘ ಪರಂಪರೆಯೇ ಇರುತ್ತದೆ. ನಾಗರಿಕತೆಯ ಜೊತೆಜೊತೆಗೆ ಅವೂ ಬದಲಾಗುತ್ತ ಬೆಳೆಯುತ್ತ ಭಿನ್ನ ರೂಪ ತಾಳುತ್ತ ಬಂದಿರುತ್ತವೆ. ಆದರೆ, ಇಂಥ ಹಲವು ಕಲೆಗಳ ಅನೈತಿಕ (ರೂಢಿಬದ್ಧವಲ್ಲದ ಎಂಬ ಅರ್ಥದಲ್ಲಿ) ಸಂಯೋಗದಿಂದ ಹುಟ್ಟಿದ ಪ್ರದರ್ಶನ ಕಲೆ ನಾಟಕ. ಹೀಗೆ ಹಲವು ಕಲೆಗಳು ಸೇರಿ ರೂಪುಗೊಂಡಿರುವ – ಎಲ್ಲವನ್ನೂ ಒಳಗೊಳ್ಳುವ ಮುಕ್ತಛಂದದ ಸ್ವಭಾವದಿಂದಲೇ ಅದು ಎಂಥ ಸಂದಿಗ್ಧಗಳನ್ನೆಲ್ಲ ಹಾದು ಇಂದಿಗೂ ಜೀವಂತ ಮತ್ತು ಜನಪ್ರಿಯವಾಗಿಯೇ ಉಳಿದುಕೊಂಡು ಬಂದಿದೆ. ರೇಡಿಯೊ, ಸಿನಿಮಾ, ಟೀವಿ, ಅಂತರ್ಜಾಲ ಹೀಗೆ ಹೊಸ ಹೊಸ ಆಕರ್ಷಕ ಮಾಧ್ಯಮಗಳು ಬಂದ ಮೇಲೂ ರಂಗಭೂಮಿ ನಶಿಸಿಹೋಗಲಿಲ್ಲ. ಹಿನ್ನೆಲೆಗೆ ಸರಿಯಲಿಲ್ಲ. ಬದಲಿಗೆ ಆ ಮಾಧ್ಯಮಗಳನ್ನೇ ತನ್ನ ವಿಸ್ತಾರಕ್ಕೆ ವೇದಿಕೆಯಾಗಿ ಬಳಸಿಕೊಂಡು ಬೆಳೆದು ಇನ್ನಷ್ಟು ಸಮೃದ್ಧವಾಗಿದೆ.
 
ಕಾರಂತರು ರಂಗಭೂಮಿಯನ್ನು ‘ಬಾಸ್ಟರ್ಡ್‌ ಆರ್ಟ್’ ಎಂದು ಹೇಳಿದ್ದು ಇದೇ ಅರ್ಥದಲ್ಲಿ. ಆದರೆ ಇದಕ್ಕೆ ಇನ್ನೊಂದು ಆಯಾಮವೂ ಇದೆ. ಆ ಶಬ್ದದಲ್ಲಿನ ಆಶ್ಲೀಲತೆಗೂ ಜನರು ನಾಟಕ ಮತ್ತು ನಾಟಕದ ಜನರನ್ನು ನೋಡುವ ದೃಷ್ಟಿಕೋನಕ್ಕೂ ಇರುವ ಸಂಬಂಧವನ್ನು ಗಮನಿಸಿದರೆ ಅದರ ಇನ್ನೊಂದು ಆಯಾಮ  ತೆರೆದುಕೊಳ್ಳುತ್ತದೆ. 
 
ಕೆಲವು ದಶಕಗಳ ಹಿಂದೆ ನಾಟಕ ಮಾಡುವುದು ಎಂದರೆ ಹಳ್ಳಿಗಳಲ್ಲಿ ಜೂಜು, ಮದ್ಯಸೇವನೆಯಂಥದ್ದೇ ಇನ್ನೊಂದು ವ್ಯಸನ ಎಂಬಂತೆ ನೋಡಲಾಗುತ್ತಿತ್ತು. ಹಳ್ಳಿ ನಾಟಕಗಳಲ್ಲಿಯಂತೂ ದೂರದೂರುಗಳಿಂದ ನಟಿಯರನ್ನು ಕರೆಸುವುದೇ ಪಡ್ಡೆ ಹುಡುಗರನ್ನು ಆಕರ್ಷಿಸುವುದಕ್ಕಾಗಿ ಮತ್ತು ಪಾತ್ರಧಾರಿಗಳ ಸಂತೃಪ್ತಿಗಾಗಿ. ರಂಗಭೂಮಿಯಲ್ಲಿರುವ ಹೆಣ್ಣುಮಕ್ಕಳನ್ನಂತೂ ಶೀಲಗೆಟ್ಟವರು ಎಂದೇ ನೋಡುತ್ತಿದ್ದರು. ‘ನಾಟಕ ಮಾಡ್ತಾನೆ’ ಎಂದರೆ ಇರುವ ವ್ಯಂಗ್ಯಾರ್ಥಕ್ಕಿಂತ ತುಚ್ಛವಾಗಿ ನಾಟಕ ಮಾಡುವವರನ್ನು ನೋಡುತ್ತಿದ್ದರು. 
 
ತಮ್ಮ ಮಗ/ಮಗಳು ರಂಗಭೂಮಿ ನಟನಾಗಲಿ ಎಂದು ತಂದೆ ತಾಯಿ ಬಯಸುವ ವಾತಾವರಣವೇ ಇರಲಿಲ್ಲ. ಅದು ಈಗಲೂ ಇಲ್ಲ. ಇದಕ್ಕೆ ಇನ್ನೊಂದು ಆರ್ಥಿಕ ಆಯಾಮವೂ ಇದೆ.
 
ರಂಗಭೂಮಿ ಹಣಗಳಿಕೆಯ ಮಾಧ್ಯಮವಲ್ಲ. ಅದು ಯಾವತ್ತಿಗೂ ಅರೆಹೊಟ್ಟೆಯ ಕ್ಷೇತ್ರವೇ. ಸಿನಿಮಾ, ಕಿರುತೆರೆಗಳಿಗೆ ಹೋಲಿಸಿದರೆ ಅಲ್ಲಿ ಸಿಗುವ ಜನಪ್ರಿಯತೆಯೂ ಸೀಮಿತವಾದದ್ದು. ಜತೆಗೆ ಅದು ಅಪಾರ ಪರಿಶ್ರಮವನ್ನೂ ತಾಲೀಮನ್ನೂ ಶ್ರದ್ಧೆಯನ್ನೂ ಬೇಡುವ ಕಲೆ. ಸುಲಭಕ್ಕೆ ಒಲಿಯುವಂಥದ್ದಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ವ್ಯಾವಹಾರಿಕವಾಗಿ ಸಾಗರದಷ್ಟು ಶ್ರಮ ಬೇಡಿ ಸಾಸಿವೆಯಷ್ಟು ಗಳಿಕೆ ನೀಡುವ ಬಡ ಮಾಧ್ಯಮ. ರಂಗಭೂಮಿಯ ಜೀವಂತಿಕೆಯ ಶಕ್ತಿ–ಮಿತಿ ಮತ್ತು ಗುಟ್ಟು ಇರುವುದು ಇಲ್ಲಿಯೇ.
 
ಈ ವ್ಯಾವಹಾರಿಕ ಮಿತಿಗಳನ್ನೇ ಮುಂದಿಟ್ಟುಕೊಂಡು ‘ರಂಗಭೂಮಿ ನಶಿಸಿಹೋಗುತ್ತಿದೆ. ಹೊಸತನ ಕಾಣುತ್ತಿಲ್ಲ. ಅದು ಕಿರುತೆರೆ ಮತ್ತು ಹಿರಿತೆರೆಗಳಿಗೆ ಹೋಗಲು ಇರುವ ಚಿಮ್ಮುಹಲಗೆಯಾಗಿ ಮಾತ್ರ ಅಸ್ತಿತ್ವದಲ್ಲಿದೆ’ ಎಂದೆಲ್ಲ ಹುಯಿಲೆಬ್ಬಿಸುತ್ತಿರುವವರ ಸಂಖ್ಯೆ ಕಮ್ಮಿಯೇನೂ ಇಲ್ಲ. ಆದರೆ ಇಂದಿನ ಕನ್ನಡ ರಂಗಭೂಮಿಯತ್ತ ಸುಮ್ಮನೇ ಒಮ್ಮೆ ಕಣ್ಣಾಡಿಸಿದರೂ ಸಾಕು, ಇಂಥ ಅನಿಸಿಕೆ ಎಷ್ಟು ಸುಳ್ಳು ಎಂಬುದು ಮನವರಿಕೆಯಾಗುತ್ತದೆ. 
 
ಹಿಂದೆಂದಿಗಿಂತಲೂ ಈಗ ಹೊಸಬರು ರಂಗಭೂಮಿಯ ತೆಕ್ಕೆಯನ್ನರಸಿ ಬರುತ್ತಿದ್ದಾರೆ. ಕರ್ನಾಟಕ ರಂಗಭೂಮಿಯ ಹೊಸಅಲೆಯ ಸುವರ್ಣಯುಗ ಎಂದು ಗುರ್ತಿಸುವ ಕಾಲದಲ್ಲಿ ತಯಾರಾದ ನಾಟಕಗಳಿಗಿಂತ ಹಲವು ಪಟ್ಟು ಹೆಚ್ಚು ನಾಟಕಗಳು ಈಗ ತಯಾರಾಗುತ್ತಿವೆ. 
 
ಪ್ರದರ್ಶನದ ವಿಷಯದಲ್ಲಿಯೂ ಅಷ್ಟೆ. ಹೊಸ ಅಲೆಯ ನಾಟಕ ಮರುಪ್ರದರ್ಶನಗೊಳ್ಳುವುದೇ ದೊಡ್ಡ ಸಾಹಸವಾಗಿತ್ತು. ಆದರೀಗ ನಾಟಕವೊಂದು ನೂರು ಪ್ರಯೋಗ ಕಾಣುವುದು ದೊಡ್ಡ ವಿಷಯವೇ ಅಲ್ಲ. ಅದರರ್ಥ, ರಂಗಭೂಮಿಗೆ ಪ್ರೇಕ್ಷಕರೂ ಹೆಚ್ಚಿದ್ದಾರೆ ಅಂತಲೇ ಅಲ್ಲವೇ?
 
ಇಂದಿನ ರಂಗಭೂಮಿಯಲ್ಲಿ ‘ಮಾಸ್ಟರ್‌ ಪೀಸ್‌’ಗಳು ನಿರ್ಮಾಣವಾಗುತ್ತಿಲ್ಲ ಎಂಬ ಆರೋಪವೂ ಇದೆ. ಹೀಗೆ ಹೇಳುವವರ ಮನಸಲ್ಲಿ ‘ಗೋಕುಲ ನಿರ್ಗಮನ’, ‘ತುಘಲಕ್‌’, ‘ಸಂಕ್ರಾಂತಿ’ಯಂಥ ಕೆಲವು ರಂಗಕೃತಿಗಳು ಮನಸ್ಸಿನಲ್ಲಿರುತ್ತವೆ. ಇದು ಕೆಲಮಟ್ಟಿಗೆ ನಿಜವೂ ಹೌದು. ಬಿ.ವಿ. ಕಾರಂತರವನ್ನು ಸರಿಗಟ್ಟಬಲ್ಲ ಇನ್ನೊಬ್ಬ ರಂಗನಿರ್ದೇಶಕ; ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರರನ್ನು ಹಿಂದಿಕ್ಕಬಲ್ಲ ಮತ್ತೊಬ್ಬ ನಾಟಕ ರಚನೆಕಾರ ನಮ್ಮ ನಡುವೆ ಹುಟ್ಟಿಕೊಳ್ಳುತ್ತಿಲ್ಲ. ಆದರೆ ಈ ‘ಮಾಸ್ಟರ್‌ ಪೀಸ್‌’ ಮಹತ್ವಾಕಾಂಕ್ಷೆ ಬಿಟ್ಟು ನೋಡಿದರೆ ಆ ಮಹಾವೃಕ್ಷದ ಅಡಿಯಲ್ಲಿಯೇ ಚಿಗುರಿ ನಿಂತಿರುವ ನೂರಾರು ಸಸಿಗಳು ರಂಗನೆಲವನ್ನು ವಿಸ್ತರಿಸಿ ಹಸಿರುಗೊಳಿಸಿರುವುದು ಕಣ್ಣಿಗೆ ರಾಚುತ್ತದೆ. ಇದೇನು ಕಡಿಮೆ ಮಹತ್ವದ್ದಲ್ಲ. 
 
ಇಂದಿನ ಕನ್ನಡ ರಂಗಭೂಮಿಯಲ್ಲಿ ಹೊಸ ನೀರು ಹರಿಯುತ್ತಿರುವುದಂತೂ ನಿಜ. ಮತ್ತು ಆ ಹರಿವಿನ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದೂ ಅಷ್ಟೇ ನಿಜ. ಆ ದೃಷ್ಟಿಕೋನದಿಂದ ನೋಡಿದರೆ ಇದೊಂದು ರೀತಿಯಲ್ಲಿ ರಂಗ ಜಾತ್ರೆಯ ಕಾಲ ಎಂದು ಹೇಳಬಹುದು.
 
ಈ ಜಾತ್ರೆಯಲ್ಲಿ ಹೊಳೆಯುತ್ತ ಆಕರ್ಷಿಸುವ ಎಲ್ಲವೂ ಅಸಲಿಗಳಲ್ಲ, ಹಾಗಿರಬೇಕು ಎಂದು ಬಯಸುವುದೂ ಸರಿಯಲ್ಲವೇನೋ. ಹೊಲದ ಪೈರಂತೂ ದಟ್ಟವಾಗಿ ಬೆಳೆದಿದೆ. ಅದರಲ್ಲಿ ಕೊಂಚ ಜೊಳ್ಳಿರಬಹುದು. ಆ ಜೊಳ್ಳುತನದ ಕಾರಣಗಳನ್ನು ಹುಡುಕಿಕೊಳ್ಳಬೇಕಾದದ್ದೂ ಅವಶ್ಯವೇ. ಆದರೆ ಅದರ ಜತೆಗೇ ಇಂದಿನ ಈ ಹೊಸತನದ ಹುರುಪಿನ ಮೂಲ ಸೆಳೆಗಳನ್ನು ಕಂಡುಕೊಳ್ಳಲು ಯತ್ನಿಸುವುದು ಹೆಚ್ಚು ಸಮಂಜಸವವಾದೀತು.
 
(ಜಯತೀರ್ಥ)
 
ಹುರುಪಿನ ಮೂಲ ಎಲ್ಲಿಯದು?
ಮೈಸೂರಿನ ‘ರಂಗಾಯಣ’, ಹೆಗ್ಗೋಡಿನ ‘ನೀನಾಸಮ್‌’, ಹುಬ್ಬಳ್ಳಿಯ ‘ಸಂಸ್ಕೃತಿ’, ಸಾಣೇಹಳ್ಳಿಯ ‘ಶಿವ ಸಂಚಾರ’, ಬೆಂಗಳೂರಿನ ‘ಅಭಿನಯ ತರಂಗ’ – ಇವು ಕನ್ನಡ ರಂಗಭೂಮಿಯ ಪ್ರಮುಖ ರೆಪರ್ಟರಿಗಳು. ಈ ಎಲ್ಲ ರೆಪರ್ಟರಿಗಳೂ ರಂಗಭೂಮಿಯನ್ನು ತುಂಬ ಗಂಭೀರವಾಗಿ ಪರಿಗಣಿಸುವ ವಿದ್ಯಾರ್ಥಿಗಳಿಗೆ ನಿರಂತರವಾಗಿ ತರಬೇತಿ ನೀಡುತ್ತಲೇ ಬಂದಿವೆ. ಹೀಗೆ ರಂಗಭೂಮಿಯನ್ನು ಶಾಸ್ತ್ರೋಕ್ತವಾಗಿ ಕಲಿತವರ ದೊಡ್ಡ ಸಮುದಾಯವೇ ಕನ್ನಡ ರಂಗಭೂಮಿಯಲ್ಲಿದೆ. ಇದಕ್ಕೆ ಪೂರಕವಾಗಿ ಇನ್ನೂ ಹಲವು ಮಹತ್ವದ ರಂಗತಂಡಗಳು ರಂಗಚಳವಳಿಯನ್ನು ಕಟ್ಟಿ ಬೆಳೆಸಿವೆ.
 
ಆದರೆ, ಇಂದು ಮೇಲೆದ್ದು ಕಾಣುತ್ತಿರುವ ಹೊಸ ಹುರುಪು ಕೇವಲ ರೆಪರ್ಟರಿಯಲ್ಲಿ ತರಬೇತಿ ಪಡೆದ, ರಂಗಭೂಮಿಯನ್ನು ಶಾಸ್ತ್ರೋಕ್ತವಾಗಿ ಅಭ್ಯಸಿಸಿದವರಿಂದ ಮಾತ್ರ ರೂಪುಗೊಂಡಿದ್ದಲ್ಲ. ಬದಲಿಗೆ ಶಾಸ್ತ್ರೋಕ್ತವಾಗಿ ರಂಗತರಬೇತಿ ಪಡೆಯದ, ಸಣ್ಣಪುಟ್ಟ ತರಬೇತಿ ಶಿಬಿರ, ಹವ್ಯಾಸಿ ರಂಗತಂಡಗಳಲ್ಲಿ ಕೆಲಸ ಮಾಡುತ್ತ ಕಲಿತ ಅನುಭವಗಳಿಂದಲೇ ನಾಟಕದ ರುಚಿ ಹತ್ತಿಸಿಕೊಂಡು ಈ ಕ್ಷೇತ್ರದಲ್ಲಿ ಚಟುವಟಿಕೆಯ ಅಲೆ ಎಬ್ಬಿಸಿರುವ ತರುಣ/ತರುಣಿಯರ ಸಂಖ್ಯೆ ದೊಡ್ಡದು. ಇಂದು ಕಾಣುತ್ತಿರುವ ಸಂಭ್ರಮದ ಮೂಲ ಇರುವುದೂ ಅವರಲ್ಲಿಯೇ. 
 
ಪ್ರತಿವರ್ಷವೂ ನೂರಾರು ಯುವಕ–ಯುವತಿಯರು ಕನ್ನಡ ರಂಗಭೂಮಿ ವಾಹಿನಿಯೊಳಗೆ ಸೇರುತ್ತಿದ್ದಾರೆ ಎನ್ನುವ ಅಂದಾಜಿದೆ. ಇವರೆಲ್ಲರೂ ವೃತ್ತಿಪರ ರಂಗಕರ್ಮಿಗಳಲ್ಲ. ರಂಗಭೂಮಿಯನ್ನು ತಮ್ಮ ಜೀವನೋಪಾಯದ ಮೂಲವನ್ನಾಗಿಸಿಕೊಂಡವರಲ್ಲ. ಸಾಕಷ್ಟು ಸಂಬಳ ತರುವ ಕೆಲಸದಲ್ಲಿದ್ದುಕೊಂಡು, ತಮ್ಮ ವೃತ್ತಿ ಒತ್ತಡದ ನಡುವೆಯೇ ಬಿಡುವು ಮಾಡಿಕೊಂಡು ರಂಗಭೂಮಿಯಲ್ಲಿ ತೊಡಗಿಕೊಂಡಿರುವವರೇ ಹೆಚ್ಚಾಗಿ ಸಿಗುತ್ತಾರೆ. ಇವರಿಗೆ ಜೀವನೋಪಾಯಕ್ಕಾಗಿ ರಾಜಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಹಾಗೆಯೇ ರಂಗಭೂಮಿಯ ಆದರ್ಶದ ಭಾರವಾಗಲೀ, ಕಲೆಯ ಸೈದ್ಧಾಂತಿಕ ಹೊಣೆಗಾರಿಕೆಗಾಗಲಿ ಕಟ್ಟುಬೀಳುವ ಅಗತ್ಯವೂ ಇವರಿಗಿಲ್ಲ. ಇದು ಇಂದಿನ ರಂಗಭೂಮಿಯಲ್ಲಿನ ತರುಣ ಪೀಳಿಗೆಯ ಮಿತಿಯೂ ಹೌದು ಎನ್ನುತ್ತಾರೆ ನಿರ್ದೇಶಕ ಮಂಜುನಾಥ ಬಡಿಗೇರ್‌.
 
‘ಕನ್ನಡ ರಂಗಭೂಮಿಯಲ್ಲಿ ನಾಟಕಗಳ ಸಂಖ್ಯೆ ಹೆಚ್ಚಾಗಿದ್ದರೂ ಹೊಸ ಪ್ರಯೋಗಗಳು ಕಡಿಮೆ ಆಗುತ್ತಿವೆ’ ಎನ್ನುವುದು ಬಡಿಗೇರ್ ಅವರ ಅಭಿಪ್ರಾಯ.
‘‘ಯುವ ಸಮುದಾಯ ಇಂದಿನ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ನಾಟಕಗಳನ್ನು ಪ್ರಯೋಗಿಸುತ್ತಿದ್ದರೂ ‘ಘನತೆ’ ಎನ್ನುವ ವಿಷಯ–ವಸ್ತು ಕಡಿಮೆ ಇದೆ. ‘ಘನತೆ’ ಎಂದರೆ ಮನುಷ್ಯತ್ವ, ಮಾನವತ್ವಕ್ಕೆ ಸ್ಪಂದಿಸುವ ವಿಷಯಗಳು. ಒಟ್ಟಾರೆ ನಾಟಕಗಳ ಸಂಖ್ಯೆ ಹೆಚ್ಚುತ್ತಿದ್ದರೂ ‘ಹುಡುಕಾಟ’ ವಿರಳವಾಗುತ್ತಿದೆ’’ ಎನ್ನುತ್ತಾರೆ ಅವರು.
 
ಕರ್ನಾಟಕದ ಬಹುತೇಕ ರಂಗಶಾಲೆಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಮಂಜುನಾಥ್‌ ಅವರ ಪ್ರಕಾರ, ಯುವ ಸಮುದಾಯ ರಂಗಭೂಮಿಯ ಸಿದ್ಧ ಮಾದರಿಗಳನ್ನು ಮುರಿದು ಕಟ್ಟಿರುವ ಉದಾಹರಣೆ ಬೆರಳೆಣಿಕೆಯಷ್ಟು. ‘ಈ ಮುರಿದು ಕಟ್ಟುವ ಪ್ರಕ್ರಿಯೆ ನಡೆಯುವುದು ರಂಗಶಾಲೆಗಳಲ್ಲಿ ಮಾತ್ರ’ ಎನ್ನುತ್ತಾರೆ ಅವರು. ಇದಕ್ಕೆ ಕಾರಣವನ್ನೂ ಅವರು ವಿವರಿಸುತ್ತಾರೆ. 
 
‘ಹವ್ಯಾಸಿ ತಂಡಗಳಲ್ಲಿ ಇರುವ ಬಹುತೇಕರು ಆರ್ಥಿಕವಾಗಿ ಒಂದು ಮಟ್ಟದಲ್ಲಿರುವವರು. ಇವರಿಗೆ ರಂಗಭೂಮಿ ಅನಿವಾರ್ಯ ಆಗಿರುವುದಿಲ್ಲ. ಹವ್ಯಾಸಿ ತಂಡಗಳಲ್ಲಿಯಂತೂ ಇದು ಕಷ್ಟ ಸಾಧ್ಯ’ ಎನ್ನುವ ಮಂಜುನಾಥ್‌ – ‘ಒಂದು ವೇಳೆ ಹೊಸ ರೀತಿಯ ಪ್ರಯೋಗಗಳನ್ನು ಮಾಡಿದರೂ ಅದನ್ನು ಗುರುತಿಸುವ ಪ್ರಕ್ರಿಯೆ ಕಡಿಮೆಯಾಗುತ್ತಿದೆ. ಹವ್ಯಾಸಿ ರಂಗ ತಂಡದಲ್ಲಿರುವ ಯುವ ಸಮುದಾಯ ಎರಡು ದೋಣಿಯಲ್ಲಿ ಕಾಲಿಟ್ಟಿರುತ್ತದೆ. ಸಿನಿಮಾ–ಧಾರಾವಾಹಿಗೆ ಸಾಗಲು ರಂಗಭೂಮಿ ಒಂದು ವೇದಿಕೆಯಾಗಿದೆ. ಒಮ್ಮೆ ಜನಪ್ರಿಯತೆ ಮತ್ತು ಹಣ ದೊರೆತರೆ ಮುಗಿಯಿತು. ಆದರ್ಶ, ಜಿಜ್ಞಾಸೆಗಳ ರೂಪಗಳಲ್ಲಿ ಪ್ರಯೋಗಗಳನ್ನು ನೋಡುವ ಸಂಖ್ಯೆ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ. 
 
ಐಟಿ ಕ್ಷೇತ್ರದಲ್ಲಿರುವ ತರುಣ/ತರುಣಿಯರು ರಂಗಭೂಮಿಗೆ ಬರುವುದರಿಂದ ಆಗುವ ಅನುಕೂಲದ ಕುರಿತೂ ಅವರಿಗೆ ಅರಿವಿದೆ. ‘ಐಟಿ, ಬಿಟಿ ವಲಯದವರ ಪ್ರವೇಶದಿಂದ ರಂಗಭೂಮಿಯಲ್ಲಿ ನಾನು ಸಕಾರಾತ್ಮಕವಾಗಿ ಗುರುತಿಸಿರುವುದು ಎಂದರೆ ಆರ್ಥಿಕವಾಗಿ ಒಂದಿಷ್ಟು ಅನುಕೂಲಗಳಾಗುತ್ತವೆ. ರಂಗಭೂಮಿಯಲ್ಲಿ ಉಳಿದವರಿಗೆ ಆರ್ಥಿಕವಾಗಿ ಬಲಗೊಳ್ಳುವ ಅಂಶಗಳು ಅಗತ್ಯ’ ಎಂದು ಅವರು ಪ್ರತಿಪಾದಿಸುತ್ತಾರೆ. 
 
ಹೊಸತಿನ ಹುಡುಕಾಟ
ಕನ್ನಡ ಮತ್ತು ಇಂಗ್ಲಿಷ್‌ ಎರಡೂ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಶರಣ್ಯಾ ರಾಮ್‌ಪ್ರಕಾಶ್‌ ಅವರ ಪ್ರಕಾರ, ಇಂದಿನ ತರುಣ/ತರುಣಿಯರಿಂದ ರಂಗಭೂಮಿಯ ಹೊಸ ಸಾಧ್ಯತೆಗಳ ಶೋಧನೆಯ ಪ್ರಯತ್ನ ನಡೆಯುತ್ತಿದೆ. 
 
‘‘ನಮ್ಮಲ್ಲಿ ಬಹುಮಂದಿ ಹೊಸಸಾಧ್ಯತೆಗಳ ಗಂಭೀರ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಆ ಹುಡುಕಾಟದಿಂದ ಖಂಡಿತಾ ಒಳ್ಳೆಯದಾಗುತ್ತಿದೆ’ ಎನ್ನುವ ಶರಣ್ಯಾ, ತಮ್ಮ ಮಾತಿಗೆ ತಮ್ಮದೇ ನಿರ್ದೇಶನದ ‘ಅಕ್ಷಯಾಂಬರ’ ಮತ್ತು ಅಭಿಷೇಕ್ ಮುಜುಂದಾರ್ ಅವರ ‘ಮುಕ್ತಿಧಾಮ್’ ನಾಟಕಗಳನ್ನು ನಿದರ್ಶನವಾಗಿ ನೀಡುತ್ತಾರೆ. 
 
(ಮಂಜುನಾಥ ಬಡಿಗೇರ್‌)
 
ಹೊಸ ನಿರ್ದೇಶಕರು ಹಳೆಯ ನಾಟಕ ಮಾಡಿದರೂ ಅದರ ಅಭಿವ್ಯಕ್ತಿ ಹೊಸದಾಗಿಯೇ ಇರುತ್ತದೆ ಎನ್ನುವ ಅನಿಸಿಕೆ ಅವರದು. ‘ಐದಾರು ವರ್ಷಗಳ ಹಿಂದಿನ ಪ್ರಯೋಗಗಳಿಗೂ ಅದೇ ನಾಟಕದ ಈಗಿನ ಮರು ಪ್ರಯೋಗಕ್ಕೂ ಹೊಂದಾಣಿಕೆ ಇರುವುದು ಬಹಳ ಕಡಿಮೆ. ಸಿ.ಆರ್. ಸಿಂಹ ಅವರ ‘ತುಘಲಕ್’ ನಾಟಕವನ್ನು ನಾವು ಈಗ ಮಾಡಿದರೆ ಬೇರೆಯದ್ದೇ ರೀತಿ ನಿರೂಪಿಸುತ್ತೇವೆ. ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು, ಇಸ್ಲಾಂ ಪೋಬಿಯಾ, ಎಡ–ಬಲದ ವಿಷಯ ತರಬಹುದು’ ಎಂದು ರಂಗಭೂಮಿಯ ಸಾಧ್ಯತೆಗಳ ಕುರಿತೂ ಅವರು ಗಮನ ಸೆಳೆಯುತ್ತಾರೆ. ಹಾಗೆಯೇ ಆರ್ಥಿಕ ಸಬಲೀಕರಣಕ್ಕೂ ಈಗ ಹೊಸ ದಾರಿಗಳು ತೆರೆದುಕೊಂಡಿರುವ ಕುರಿತೂ ಅವರು ಮಾತನಾಡುತ್ತಾರೆ.
 
‘ಇತ್ತೀಚಿನ ವರ್ಷಗಳಲ್ಲಿ ರಂಗಭೂಮಿಗೆ ಆರ್ಥಿಕ ಅವಕಾಶಗಳು ಬೇರೆ ಬೇರೆ ಹಾದಿಯಲ್ಲಿವೆ. ರಂಗಭೂಮಿಗೆ ಬರುತ್ತಿರುವ ಕೆಲವರು ಇದನ್ನೇ ಒಂದು ವೃತ್ತಿಯನ್ನಾಗಿ ತೆಗೆದುಕೊಂಡಿದ್ದಾರೆ. ಇಲ್ಲಿ ಹಣಗಳಿಕೆ ಹೇಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಹಿಂದೆ ಗುಬ್ಬಿ ಕಂಪನಿಯಂಥ ನಾಟಕ ಕಂಪನಿಗಳು ಇದ್ದವು. ಪ್ರದರ್ಶನಗಳಿಂದ ನಿತ್ಯ ಹಣ ಗಳಿಕೆ ಆಗುತ್ತಿತ್ತು. ಆದರೆ ಈಗ ಕಾರ್ಪೊರೇಟ್ ವಲಯದವರಿಗೆ, ಶಾಲೆಗಳಲ್ಲಿ ನಾಟಕ ತರಬೇತಿ–ಶಿಬಿರ ಸಂಘಟಿಸುವ ಮೂಲಕ ಹಣ ಗಳಿಕೆ ಸಾಧ್ಯ. ಈ ಮಾದರಿಗಳನ್ನು ಕಟ್ಟಿಕೊಂಡರೆ ರಂಗಭೂಮಿಯಲ್ಲಿಯೂ ಗಳಿಕೆ ಇದೆ ಎನ್ನುವುದು ಅರ್ಥವಾಗುತ್ತದೆ. ಆಗ ಹೆಚ್ಚು ಜನರು ಇಲ್ಲಿಯೇ ತೊಡಗುವರು’ ಎನ್ನುತ್ತಾರೆ ಶರಣ್ಯಾ.
 
ಉತ್ಸವದ ವೇದಿಕೆಗಳು
ಯವಮನಸ್ಸುಗಳಲ್ಲಿ ರಂಗಭೂಮಿಯ ಅಭಿರುಚಿ ಹುಟ್ಟಿಸುವಲ್ಲಿ ಕಾಲೇಜು ರಂಗಸ್ಪರ್ಧೆಗಳು, ರಂಗೋತ್ಸವಗಳ ಪಾಲು ಹಿರಿದಿದೆ. ವಿದ್ಯಾರ್ಥಿಗಳು ರಂಗಭೂಮಿ ಪ್ರವೇಶಿಸಲು ಇವು ವೇದಿಕೆಯನ್ನೊದಗಿಸಿಕೊಡುತ್ತವೆ. ಮೈಸೂರಿನ ‘ರಂಗಾಯಣ’ವು ರಂಗ ಚಳವಳಿ ಕಟ್ಟಲು ಕಾಲೇಜಿನ ಅಂಗಳ ಬಳಸಿಕೊಳ್ಳುತ್ತಿದೆ. ವಿಶೇಷವಾಗಿ ‘ಕಾಲೇಜು ರಂಗೋತ್ಸವ’ವನ್ನು ಪ್ರತಿ ವರ್ಷ ಸಂಘಟಿಸುತ್ತಿದೆ. ರಂಗೋತ್ಸವದ ಅಂಗವಾಗಿ ರಂಗಾಯಣದ ಒಬ್ಬ ನಿರ್ದೇಶಕ ಕಾಲೇಜುಗಳಿಗೆ ತೆರಳಿ ತರಬೇತಿ ಶಿಬಿರ ನಡೆಸುತ್ತಾರೆ. ಈ ಉತ್ಸವದಲ್ಲಿ ಸರಾಸರಿ 50 ಮಂದಿ ವೇದಿಕೆಯಲ್ಲಿ ಪಾಲ್ಗೊಂಡರೆ, ಪರೋಕ್ಷವಾಗಿ ನೂರಾರು ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು.  
 
‘ಇಂಥ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಆರಂಭದಲ್ಲಿ ಕ್ರೇಜ್‌ ರೀತಿ ತೊಡಗಿಕೊಳ್ಳುತ್ತಾರೆ. ಆದರೆ ಈ ಹಾದಿಯಲ್ಲಿ ಮುಂದುವರಿದವರಿಗೆ ರಂಗಭೂಮಿಯಲ್ಲಿ ಏನೋ ಮಹತ್ವದ್ದು ಇದೆ ಎನ್ನುವ ಅರಿವಾಗುತ್ತದೆ. ಕೆಲವರು ನಾನು ಸೂಪರ್ ಸ್ಟಾರ್ ಆಗಬೇಕು ಎನ್ನುತ್ತಲೇ ನಾಟಕಕ್ಕೆ ಬರುತ್ತಾರೆ. ಇಲ್ಲಿನ ಕ್ರಿಯೆಗಳಲ್ಲಿ ಭಾಗಿಯಾಗುತ್ತಲೇ ಆ ಸೂಪರ್ ಸ್ಟಾರ್ ಎನ್ನುವ ಆಲೋಚನೆ ಕೈ ಬಿಟ್ಟಿರುವ ಹಲವು ನಿದರ್ಶನಗಳನ್ನು ಕಂಡಿದ್ದೇನೆ. ಕ್ರೇಜ್‌ಗೆ ಕ್ರಿಯಾತ್ಮಕ ಸ್ಪರ್ಶ ಸಿಕ್ಕುತ್ತದೆ’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಜನಾರ್ದನ್ (ಜನ್ನಿ). 
 
‘ಕಾಲೇಜು ಮತ್ತು ಅಂತರಕಾಲೇಜು ನಾಟಕೋತ್ಸವಗಳು ಹಲವು ವಿದ್ಯಾರ್ಥಿಗಳು ರಂಗಭೂಮಿ ಚಟಿವಟಿಕೆಗಳಿಗೆ ಬರಲು ಪ್ರೇರಣೆಯಾಗುತ್ತವೆ. ಯುವಕರೇ ಹೊಸತನಗಳನ್ನು ನೀಡಲು ಸಮರ್ಥರಿರುವರು’ ಎನ್ನುತ್ತಾರೆ ‘ಎನ್‌ಎಸ್‌ಡಿ’ ಪದವೀಧರೆ ಸವಿತಾ. ‘ಒಮ್ಮೆ ರಂಗಭೂಮಿ ಆಸಕ್ತಿ ಬೆಳೆಸಿಕೊಂಡ ಮೇಲೆ ಪ್ರತಿಯೊಬ್ಬರೂ ನಟನೆಯಲ್ಲಿ ತಮ್ಮದೇ ಹಾದಿ ಕಂಡುಕೊಳ್ಳುವರು. ಯುವ ಸಮುದಾಯಕ್ಕೆ ರಂಗಭೂಮಿಯ ಅರಿವು ಆಗುತ್ತಲೇ ಅವರ ಆಲೋಚನಾ ಕ್ರಮಗಳು ಬದಲಾಗುತ್ತವೆ’ ಎನ್ನುತ್ತಾರೆ. 
‘ಈ ಹಿಂದೆ ಆರ್‌. ನಾಗೇಶ್, ಸಿಜಿಕೆ ಅವರಂಥ ಶಿಕ್ಷಕರು ರಂಗಪಾಠ ಹೇಳುತ್ತಿದ್ದರು. ಆದರೆ ಈಗ ಅಂಥ ಪರಂಪರೆ ಇಲ್ಲ. ರಂಗಭೂಮಿಯಲ್ಲಿ ಉತ್ಸವಗಳು ನಡೆಯಲಿ. ರಂಗಭೂಮಿಯೂ ಒಂದು ಉತ್ಸವವೇ ಆಗಲಿ. ಆದರೆ ಆ ಉತ್ಸವ ಮೀರಿದ ಒಂದು ಹುಡುಕಾಟವೂ ಯುವ ಸಮುದಾಯಕ್ಕೆ ಅಗತ್ಯವಾಗಿ ಇರಬೇಕು’ ಎಂದು ಹೊಸತನದ ದಾರಿಯಲ್ಲಿ ಗುರುಬಲದ ಕೊರತೆಯ ಕುರಿತು ನಿರ್ದೇಶಕ ಜಯತೀರ್ಥ ಹೇಳುತ್ತಾರೆ.
 
ಇದಕ್ಕೆ ಪೂರಕವಾಗಿಯೇ ಅಭಿಪ್ರಾಯ ವ್ಯಕ್ತಪಡಿಸುವ ಶರಣ್ಯಾ, ‘ನಾಟಕಗಳು ಕಲೆಗಾಗಿ ಮಾತ್ರವೇ ಅಥವಾ ಮನರಂಜನೆಯೇ ಅದರ ಉದ್ದೇಶವೇ ಎನ್ನುವ ಪ್ರಶ್ನೆ ಹಿಂದಿನಿಂದಲೂ ಇದೆ. ಮನರಂಜನೆಯ ನಾಟಕಗಳು ಅಗತ್ಯ. ಎಲ್ಲ ರೀತಿಯ ಪ್ರೇಕ್ಷಕರು ಇದ್ದಾರೆ. ಮನರಂಜನೆಯ ಕೆಲವು ನಾಟಕಗಳಲ್ಲಿಯೂ ಕಲಾತ್ಮಕ ಪರಿಣಾಮವೂ ಇದೆ. ಉದಾಹರಣೆಗೆ ‘ಲಂಚಾವತಾರ’. ಹಾಸ್ಯಮಯ ಈ ನಾಟಕ ರಾಜಕೀಯ ವಿಷಯಗಳನ್ನೂ ಗಂಭೀರವಾಗಿ ಮುಟ್ಟಿಸುತ್ತದೆ. ರಂಜನೆ ನಾಟಕಗಳು ಎನ್ನುವ ಕಾರಣದಿಂದ ನಾವು ಹೇಳಬೇಕು ಎಂದುಕೊಂಡಿದ್ದ ರಾಜಕೀಯ, ಸಾಮಾಜಿಕ ಅಭಿಪ್ರಾಯಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮವಲ್ಲ. ಈ ವಿಚಾರವಾಗಿ ಜಾಗೃತಿ ವಹಿಸಬೇಕು’ ಎನ್ನುವುದು ಅವರ ನಿಲುವು. 
 
ಹೊಸಬರ ಈ ಹುರುಪಿಗೆ ಹಿರಿಯರ ವಿವೇಕವೂ ಜತೆಯಾಗಬೇಕಾದ ಅಗತ್ಯವನ್ನು ಹಿರಿಯ ರಂಗಕರ್ಮಿ ಗೋಪಾಲ ಕೃಷ್ಣ ನಾಯರಿ ವ್ಯಕ್ತಪಡಿಸುತ್ತಾರೆ.
‘ನಾವು ಹಿರಿಯರಾಗಿದ್ದರೂ ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಟಕ ಮಾಡಿಸಬೇಕಾಗಿದೆ. ನಾವು ಈಗ ತೊಡಗಬೇಕಾಗಿರುವುದೂ ಯುವ ಜನರ ಜೊತೆ. ರಂಗಭೂಮಿಯಲ್ಲಿ ಹಿರಿಯ ಮನಸ್ಸುಗಳೂ ಕ್ರಿಯಾಶೀಲವಾಗಿರಬೇಕು’ ಎನ್ನುವುದು ಅವರ ಅನಿಸಿಕೆ.
 
ಸ್ತ್ರೀಶಕ್ತಿಯ ಬಲ
ನಾಟಕ ಮಾಡುವುದೆಂದರೆ ಚಾರಿತ್ರ್ಯವನ್ನು ಕೆಡಿಸಿಕೊಂಡಂತೆ ಎಂಬ ಪೂರ್ವಗ್ರಹ ಮನಸ್ಥಿತಿಯನ್ನು ಮೀರಿ ಇಂದು ಅಪಾರ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರಂಗಭೂಮಿಯಲ್ಲಿ ತೊಡಗಿಕೊಂಡವರನ್ನು ನೋಡುವ ದೃಷ್ಟಿಕೋನದ ಜತೆಗೇ ರಂಗಭೂಮಿಯೊಳಗೇ ಮಹಿಳೆಯರನ್ನು ನೋಡುವ ಕ್ರಮವನ್ನೂ ಅವರು ಬದಲಿಸುತ್ತಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಇದರಿಂದ ಹೊಸತದ ಅಲೆಗೆ ಸ್ತ್ರೀ ಸಂವೇದನೆಯ ಬಲವೂ ದೊರಕಿದೆ.
 
(ಶರಣ್ಯಾ ರಾಮ್‌ಪ್ರಕಾಶ್‌)
 
‘ಹೆಣ್ಣುಮಕ್ಕಳು ನಿರ್ದೇಶಕರಾಗಿ, ಕಥೆ, ಸಂಭಾಷಣೆ, ತಂತ್ರಜ್ಞರಾಗಿಯೂ ತೊಡಗುತ್ತಿದ್ದಾರೆ. ಇದು ಖಂಡಿತ ತುಂಬ ಒಳ್ಳೆಯ ಬೆಳವಣಿಗೆ’ ಎಂದು ಶರಣ್ಯಾ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. 
 
‘ಹವ್ಯಾಸಿ ತಂಡಗಳಲ್ಲಿ ಹೆಣ್ಣುಮಕ್ಕಳು ಹೆಚ್ಚು. ಸಂಜೆ ನಾಟಕಗಳಲ್ಲಿ ನಟಿಸಬಹುದು ಎನ್ನುವ ಕಾರಣಕ್ಕೆ ಇಲ್ಲಿ ತೊಡಗುವರು. ಧಾರಾವಾಹಿ ಮತ್ತು ಸಿನಿಮಾಕ್ಕೆ ಹೋಗಬೇಕು ಎನ್ನುವುದು ಅವರ ಪ್ರಮುಖ ಉದ್ದೇಶ. ಹವ್ಯಾಸಿ ತಂಡಗಳಲ್ಲಿ ಕೆಲಸ ಮಾಡುವ ಬಹುತೇಕರು ರಂಗಭೂಮಿಯನ್ನು ವೇದಿಕೆ ಮಾಡಿಕೊಂಡು ಧಾರಾವಾಹಿಗಳಿಗೆ ತೆರಳುವರು’ ಎಂದು ಈ ಬೆಳವಣಿಗೆಯ ಅಗತ್ಯದ ಜತೆಗೆ ಮಿತಿಯನ್ನೂ ಗುರ್ತಿಸುತ್ತಾರೆ ಮಂಜುನಾಥ ಬಡಿಗೇರ್‌. 
 
ಬಣ್ಣದ ಲೋಕಕ್ಕೆ ಚಿಮ್ಮುಹಲಗೆ
ರಂಗಭೂಮಿ ಪ್ರವೇಶಿಸುವ ಯುವ ಸಮುದಾಯದಲ್ಲಿ ಕೆಲವರಿಗೆ ಇದನ್ನೇ ಕರ್ಮಭೂಮಿ ಮಾಡಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದರೆ, ಸಿನಿಮಾ ಮತ್ತು ಧಾರಾವಾಹಿ ಪ್ರವೇಶಿಸಲು ‘ಕೋರ್ಸ್’ ಎನ್ನುವಂತೆ ರಂಗಭೂಮಿಗೆ ಬರುವವರೂ ಇದ್ದಾರೆ. ರಂಗಭೂಮಿಯಲ್ಲಿ ಕೆಲಸ ಸಿಕ್ಕರೂ ಗಳಿಕೆ ಕಷ್ಟಸಾಧ್ಯ. ಕಿರಿತೆರೆ–ಹಿರಿತೆರೆ ಪ್ರವೇಶಕ್ಕೆ ಇದೂ ಒಂದು ಪ್ರಮುಖ ಕಾರಣ. ಆಕರ್ಷಣೆ, ಜನಪ್ರಿಯತೆಯೂ ಈ ಕಾರಣಗಳ ಪಟ್ಟಿಯಲ್ಲಿವೆ. 
 
ರಂಗಭೂಮಿಯಲ್ಲಿ ಅನುಭವ ಇರುವ ಕಲಾವಿದರಿಗೆ ಅಭಿನಯದ ಪ್ರಾಥಮಿಕ ಪಾಠಗಳು ಆಗುವುದರಿಂದ ಅಂಥವರಿಗೆ ಕಿರುತೆರೆ, ಸಿನಿಮಾಗಳಲ್ಲಿ ಆದ್ಯತೆಯೂ ಸಿಗುತ್ತದೆ. 
 
ಸ್ವತಃ ರಂಗಭೂಮಿ ಹಿನ್ನೆಲೆಯಿರುವ ಜಯತೀರ್ಥ, ಬಿ.ಎಂ. ಗಿರಿರಾಜ್‌ ಅವರಂಥ ಸಿನಿಮಾ ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ರಂಗಭೂಮಿ ಕಲಾವಿದರಿಗೇ ಹೆಚ್ಚಿನ ಅವಕಾಶ ನೀಡುತ್ತಾರೆ.
(ಗೋಪಾಲಕೃಷ್ಣ ನಾಯರಿ)
 
‘ರಂಗಭೂಮಿ ಕಲಾವಿದರಲ್ಲಿ ಒಂದು ರಿದಂ ಇರುತ್ತದೆ. ಪಾತ್ರಗಳಿಗೆ ಹೊಂದಿಕೊಳ್ಳುವುದು, ಸಭಾಕಂಪನ ಮೀರುವುದು, ಮಾತುಗಳ ನಿರರ್ಗಳತೆ – ಇದೆಲ್ಲವನ್ನು ರಂಗಭೂಮಿ ಒಂದು ಹಂತಕ್ಕೆ ಕಲಿಸಿರುತ್ತದೆ. ಆದ್ದರಿಂದ ಅವರಿಂದ ನಟನೆ ತೆಗೆಸುವುದು ಸುಲಭ. ಆದ್ದರಿಂದಲೇ ನನ್ನ ಸಿನಿಮಾಗಳಲ್ಲಿ ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ರಂಗ ಕಲಾವಿದರಿಗೆ ಪಾತ್ರ ದೊರಕಿಸಿಕೊಡುವೆ’ ಎನ್ನುತ್ತಾರೆ ಜಯತೀರ್ಥ.
 
ಆದರೆ ನಾಟಕ ಪ್ರದರ್ಶನದಲ್ಲಿರುವ ಈ ಉತ್ಸಾಹ ರಚನೆಯಲ್ಲಿ ಕಾಣಿಸುವುದಿಲ್ಲ. ಅಲ್ಲಿಲ್ಲಿ ಹೊಸ ನಾಟಕಗಳು ಬರುತ್ತಿದ್ದರೂ ಗಮನಾರ್ಹವೆನಿಸುವ ಪ್ರಯತ್ನಗಳು ವಿರಳ. ಆದರೆ ನಿರ್ದೇಶಕನಿಗೆ ನಾಟಕ ಸಾಹಿತ್ಯದ ಈ ಕೊರತೆಯನ್ನು ನೀಗಿಕೊಳ್ಳುವುದ ಕಷ್ಟವೇನಲ್ಲ. ಈ ಕೊರತೆಯ ಉತ್ತರರೂಪದಲ್ಲಿಯೇ ಕನ್ನಡದ ಹಲವಾರು ಕಥೆ, ಕಾದಂಬರಿಗಳು ನಾಟಕಗಳಾಗಿ ಪ್ರದರ್ಶನ ಕಾಣುತ್ತಿವೆ. ಕಾವ್ಯಗುಚ್ಛಗಳನ್ನೇ ರಂಗರೂಪಕ್ಕೆ ಅಳವಡಿಸಿ ಯಶಸ್ವಿಯಾಗಿರುವ ಉದಾಹರಣೆಗೂ ಸಾಕಷ್ಟಿವೆ. 
 
ಇವುಗಳ ಜತೆಗೆ ತಂತ್ರಜ್ಞಾನದ ಆವಿಷ್ಕಾರ ರಂಗಭೂಮಿಯ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ. ಬೆಳಕು, ಧ್ವನಿ, ರಂಗಪರಿಕರಗಳು – ಹೀಗೆ ರಂಗಭೂಮಿಯ ಹಲವು ಆಯಾಮಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. 
 
ಇಂದು ರಂಗಭೂಮಿಯಲ್ಲಿ ಕಾಣುತ್ತಿರುವ ಚಟುವಟಿಕೆಗಳಿಗೆ ಹಲವು ಮಿತಿಗಳಿವೆ. ಆದರೆ ಅವುಗಳನ್ನು ಇಟ್ಟುಕೊಂಡೇ ನೋಡಿದರೂ ಈ ಪೀಳಿಗೆಯ ತರುಣ ಮನಸ್ಸುಗಳು ಇಷ್ಟೊಂದು ಸಂಖ್ಯೆಯಲ್ಲಿ ಒಂದು ಸೃಜನಶೀಲ ಕಲಾಪ್ರಕಾರದಲ್ಲಿ ಕೃಷಿ ಮಾಡುತ್ತಿರುವುದೇ ಒಟ್ಟಾರೆ ಸಮಾಜದ ಮಟ್ಟಿಗೆ ಆರೋಗ್ಯಕರವಷ್ಟೇ ಅಲ್ಲ, ಭವಿಷ್ಯದ ಕುರಿತಾದ ಶುಭ ಸೂಚನೆಯೂ ಹೌದು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
 
(ಜನಾರ್ದನ್‌)
 
**
ಉತ್ಸಾಹಕ್ಕೆ ಉಪೇಕ್ಷೆಯ ಕಡಿವಾಣ
ಈ ಮೊದಲಿಗೆ ಹೋಲಿಸಿದರೆ ರಂಗಭೂಮಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಈ ಹೆಚ್ಚಾಗುತ್ತಿದೆ. ನಮ್ಮ ತಂಡಕ್ಕೆ ‘ಸುಮ್ಮನೆ’ ಎಂದು ಬಂದ ನಾಲ್ಕು ಮಂದಿ ಹೆಣ್ಣುಮಕ್ಕಳು ಈಗ ಸಕ್ರಿಯವಾಗಿ ತೊಡಗಿದ್ದಾರೆ. ರಂಗಭೂಮಿ ಹೆಚ್ಚು ಹೆಚ್ಚು ಅರ್ಥವಾದಂತೆ ಯುವ ಸಮುದಾಯ ನೆಲೆ ನಿಲ್ಲುತ್ತದೆ. ಆದರೆ ಹೆಣ್ಣುಮಕ್ಕಳು ರಂಗಭೂಮಿಗೆ ಬರುತ್ತಿರುವುದರ ನಡುವೆಯೇ ಅವರನ್ನು ಅವಕಾಶಗಳಿಂದ ವಂಚಿಸಲಾಗುತ್ತಿದೆ. ದಶಕಗಳ ಹಿಂದೆ ಹೆಣ್ಣುಮಕ್ಕಳು ರಂಗಭೂಮಿಗೆ ಬರಬೇಕು ಎನ್ನುವ ಮಾತುಗಳು ತೀವ್ರವಾಗಿದ್ದವು. ಈಗ  ಹೆಣ್ಣುಮಕ್ಕಳು ನಾಟಕ ಮಾಡುವುದರ ಬಗ್ಗೆ ಅಸಮಾಧಾನ, ಕೊಂಕು ಇಲ್ಲ. ಆದರೆ ಹೆಣ್ಣುಮಕ್ಕಳು ಬಂದರೂ ಅವಕಾಶಗಳು ಸಿಕ್ಕುತ್ತಿಲ್ಲ. ಅವಕಾಶಗಳನ್ನು ಕೊಡದೆಯೇ ಸೂಕ್ಷ್ಮವಾಗಿ ಜಾಡಿಸುವ ಕೆಲಸವಾಗುತ್ತಿದೆ.   
 
‘ನಾವು ನುಗ್ಗುತ್ತೇವೆ’ ಎಂದರೂ ಉಪೇಕ್ಷಿಸುವ ಮನಸ್ಥಿತಿ ಹೇರಳವಾಗಿದೆ. ಎಲ್ಲ ಮಹಿಳೆಯರು ಒಟ್ಟು ಸೇರಿ ಕೆಲಸ ಮಾಡಿದ್ದನ್ನು ನಾನು ನೋಡಿಯೇ ಇಲ್ಲ. ರಂಗಭೂಮಿ ಕಟ್ಟುವ ಕ್ರಿಯೆ. ಆದರೆ ಆ ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಆಧುನಿಕ ರಂಗಭೂಮಿಯಲ್ಲಿ ಹೆಣ್ಣುಮಕ್ಕಳು ಬೇರೆಯದ್ದೇ ಆದ ಸವಾಲುಗಳನ್ನು ಎದುರಿಸಬೇಕಾಗಿದೆ.  
 
ಅವರ ತುಡಿತಗಳೂ ಬದಲಾಗುತ್ತಿವೆ. ರಂಗಭೂಮಿ ಮೂಲಕ ಸಿನಿಮಾ ಮತ್ತು ಧಾರಾವಾಹಿಗಳಿಗೆ ತೆರಳಬೇಕು ಎನ್ನುವವರೇ ಹೆಚ್ಚು. ರಂಗಭೂಮಿಯಲ್ಲೇ ಕೆಲಸ ಮಾಡಬೇಕು ಎನ್ನುವ ಸಂಖ್ಯೆ ಕಡಿಮೆ.  ನನಗೆ ತುಂಬಾ ಜನರು ಕರೆ ಮಾಡಿ ಮೊದಲು ಕೇಳುವುದು  ‘ಧಾರಾವಾಹಿ–ಸಿನಿಮಾಗಳಿಗೆ ಅವಕಾಶ ಕೊಡಿಸುತ್ತೀರಾ’ ಎಂದೇ.
 
ನಮ್ಮ ತಂಡದಲ್ಲಿಯೇ ಮೊದಲು ನಾಲ್ಕು–ಐದು ವರುಷ ಉಳಿಯುತ್ತಿದ್ದವರು ಈಗ ಒಂದು ವರ್ಷಕ್ಕೆ ತೆರಳುತ್ತಿದ್ದಾರೆ.  
-ದಾಕ್ಷಾಯಿಣಿ ಭಟ್, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT