ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಮೊರೆಯಿಟ್ಟ ಗ್ರಾಮೀಣರು

ಜಿಲ್ಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಪರಿಶೀಲನೆ; ಸಮಸ್ಯೆ ಆಲಿಕೆ
Last Updated 11 ಫೆಬ್ರುವರಿ 2017, 9:26 IST
ಅಕ್ಷರ ಗಾತ್ರ

ಚಾಮರಾಜನಗರ:  ‘ಪ್ರತಿವರ್ಷವೂ ನಾವು ಕುಡಿಯುವ ನೀರಿಗೆ ಪರದಾಡುತ್ತಿದ್ದೇವೆ. ಈಗ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಇಲ್ಲಿನ ಜನಸಂಖ್ಯೆಗೆ ಈ ನೀರು ಸಾಕಾಗುವುದಿಲ್ಲ. ನಮಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು...’–ಇದು ತಾಲ್ಲೂಕಿನ ಉತ್ತುವಳ್ಳಿ ಗ್ರಾಮದ ಜನರು ಶುಕ್ರವಾರ ಕೇಂದ್ರ ಬರ ಅಧ್ಯಯನ ಸಮಿತಿ ಮುಂದೆ ಗೋಳಿಟ್ಟ ಪರಿ.

‘ನಾವು ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿದ್ದೇವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಇಂದಿಗೂ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ. ನೀರು ಮಾತ್ರ ಲಭಿಸುತ್ತಿಲ್ಲ’ ಎಂದು ತಂಡದ ಸದಸ್ಯರ ಮುಂದೆ ಸಮಸ್ಯೆ ಬಿಡಿಸಿಟ್ಟರು.

ಸತತ ಬರಗಾಲದಿಂದ ತತ್ತರಿಸಿ ದ್ದೇವೆ. ಈ ವರ್ಷವೂ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇನ್ನೂ ಬೆಳೆ ನಷ್ಟ ಪರಿಹಾರದ ಹಣ ನೀಡಿಲ್ಲ. ವೈಜ್ಞಾನಿಕವಾಗಿ ಬೆಳೆ ನಷ್ಟದ ಪರಿಹಾರ ನೀಡಬೇಕು. ತ್ವರಿತವಾಗಿ ಹಣ ವಿತರಿಸ ಬೇಕು ಎಂದು ರೈತರು ಮನವಿ ಮಾಡಿದರು.

ಉತ್ತುವಳ್ಳಿ ಗ್ರಾಮಕ್ಕೆ ಭೇಟಿ ನೀಡುವ ಮೊದಲು ಕೇಂದ್ರ ಬರ ಅಧ್ಯಯನ ಸಮಿತಿಯ ಸದಸ್ಯರಾದ ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್‌ ಶ್ರೀವಾಸ್ತವ, ನವದೆಹಲಿಯ ನೀತಿ ಆಯೋಗದ ಸಂಶೋಧನಾ ಅಧಿಕಾರಿ ಬಿ.ಅನುರಾಧಾ, ಬೆಂಗಳೂರಿನ ಕೇಂದ್ರ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ವಿ. ಮೋಹನ್‌ ಮುರುಳಿ ನೇತೃತ್ವದ ತಂಡವು ಮಳವಳ್ಳಿ ಮಾರ್ಗ ವಾಗಿ ಜಿಲ್ಲೆಗೆ ಆಗಮಿಸಿತು.

ಕೊಳ್ಳೇಗಾಲ ಪಟ್ಟಣದಲ್ಲಿ ಜಿಲ್ಲಾಧಿ ಕಾರಿ ಬಿ.ರಾಮು ನೇತೃತ್ವದ ಜಿಲ್ಲಾಮಟ್ಟದ ಅಧಿಕಾರಿಗಳ ತಂಡವು ಕೇಂದ್ರದ ಅಧಿಕಾರಿಗಳನ್ನು ಸ್ವಾಗತಿಸಿದರು.

ಕೊಳ್ಳೇಗಾಲದ ವ್ಯಾಪ್ತಿ ಪರಿಶೀಲನೆ ನಡೆಸಿದ ಬರ ಅಧ್ಯಯನ ತಂಡವು ಯಳಂದೂರು, ಸಂತೇಮರಹಳ್ಳಿ ಮಾರ್ಗವಾಗಿ ಚಾಮರಾಜನಗರ ತಾಲ್ಲೂಕಿನ ಮಂಗಲ ಸಮೀಪದ ಕುಡಿಯುವ ನೀರು ಪೂರೈಕೆ ಘಟಕದ ಬಳಿ ತೆರೆದಿರುವ ಗೋಶಾಲೆಗೆ ಭೇಟಿ ನೀಡಿತು.

ಗೋಶಾಲೆಯಲ್ಲಿರುವ ಜಾನುವಾರು, ಮೇವು, ಕುಡಿಯುವ ನೀರು ಪೂರೈಕೆ ಬಗ್ಗೆ ಮಾಹಿತಿ ಪಡೆಯಿತು. ಬಳಿಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಹಿಂಗಾರು ಅವಧಿಯಲ್ಲಿನ ಬೆಳೆ ನಷ್ಟ, ಕುಡಿಯುವ ನೀರು, ಮೇವು ಅಭಾವದ ಪರಿಸ್ಥಿತಿ ಬಗ್ಗೆ ಪರಾಮರ್ಶಿಸಿತು.

ಜಿಲ್ಲಾಧಿಕಾರಿ ರಾಮು ಅವರು, ‘ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಡಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದ ಬೆಳೆ ನಷ್ಟವಾಗಿದೆ’ ಎಂದು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಬಳಿಕ ಜಿಲ್ಲೆಯಲ್ಲಿ ತೆರೆದಿರುವ ಗೋಶಾಲೆ, ಮೇವು ಬ್ಯಾಂಕ್‌ ಬಗ್ಗೆ ತಿಳಿಸಿದರು. ಬಳಿಕ ತಂಡವು ಉತ್ತುವಳ್ಳಿ, ಕಟ್ನವಾಡಿ ಗ್ರಾಮಕ್ಕೆ ತೆರಳಿ ರೈತರ ಸಮಸ್ಯೆ ಆಲಿಸಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್‌ ಆರ್‌. ಜೈನ್, ಉಪ ವಿಭಾಗಾಧಿಕಾರಿ ನಳಿನಿ ಅತುಲ್‌, ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲೇಶ ಹಾಜರಿದ್ದರು.

* ರಾಜ್ಯದಲ್ಲಿ 3 ದಿನದವರೆಗೆ ಬರ ಅಧ್ಯಯನದ ಪ್ರವಾಸ ಮಾಡಲಿವೆ. ಹಿರಿಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು
ಜಲಜ್‌ ಶ್ರೀವಾಸ್ತವ, ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT