ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಅಧ್ಯಯನ; ಅನುದಾನದ ವಾಗ್ದಾನ

ಕೇಂದ್ರ ತಂಡದಿಂದ ಬರ ಕಾಮಗಾರಿ ವೀಕ್ಷಣೆ, ₹157 ಕೋಟಿ ಬರ ಪರಿಹಾರಕ್ಕೆ ಬೇಡಿಕೆ
Last Updated 11 ಫೆಬ್ರುವರಿ 2017, 11:13 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯದಲ್ಲಿ ತಲೆದೋರಿರುದ ಬರ ಪರಿಸ್ಥಿತಿ ಕುರಿತು ಶೀಘ್ರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಯ ಬೆಳೆ ವಿಜ್ಞಾನಿ ವಿಜಯ ಠಾಕ್ರೆ ತಿಳಿಸಿದರು.

ಕೊರಟಗೆರೆ ಖಾಸಗಿ ಕಾಲೇಜಿನಲ್ಲಿ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಂಗಳೂರು ಗ್ರಾಮೀಣ, ಬೆಂಗಳೂರು, ತುಮಕೂರು, ಕೊಪ್ಪಳ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ವಸ್ತುಸ್ಥಿತಿ ಅಧ್ಯಯನ ನಡೆಸಿದ್ದು, ಕೇಂದ್ರದಿಂದ ಸೂಕ್ತ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದರು.

ಜಿಲ್ಲೆಯಲ್ಲಿ ಮಳೆಯ ಕೊರತೆ, ಕೃಷಿ, ತೋಟಗಾರಿಕಾ ಬೆಳೆ ನಷ್ಟದ ಬಗ್ಗೆ ಹಾಗೂ ಕುಡಿಯುವ ನೀರು, ಜಾನುವಾರು ಮೇವು ಪೂರೈಕೆಗೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್‌ ಕೇಂದ್ರ ತಂಡದ ಅಧಿಕಾರಿಗಳಿಗೆ ವಿವರಿಸಿದರು.

ಕಳೆದ ಸೆಪ್ಟೆಂಬರ್‌ನಿಂದ 2017 ಜನವರಿಗೆ ಮುಂಗಾರು ಮಳೆ ಆಗಿಲ್ಲ. 8444 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ ಕೇವಲ 523 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಯಿತು. ಎನ್‌ಡಿಆರ್‌ಎಫ್‌ ಮಾನದಂಡ(ಶೇ 33) ಮೀರಿ ಬೆಳೆ ನಷ್ಟ ಸಂಭವಿಸಿದೆ ಎಂದು ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಕೇಂದ್ರ ತಂಡದ ಅಧಿಕಾರಿಗಳು ಬೆಳೆ ನಷ್ಟದ ಅಂಕಿ ಅಂಶ ಒದಗಿಸಲು ಸೂಚಿಸಿದರು.

₹67 ಕೋಟಿ ನೆರವು ಅಗತ್ಯ: ‘ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಲು ₹67 ಕೋಟಿ ಅನುದಾನ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಂ ಹೇಳಿದರು.

‘ನೀರಿನ ಅಭಾವ ಎದುರಿಸುತ್ತಿರುವ 22 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ. 2017 ಜನವರಿವರೆಗೆ 532 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಈ ಪೈಕಿ 400 ಕೊಳವೆಬಾವಿಗಳು ಯಶಸ್ವಿಯಾಗಿದ್ದು, 132 ವಿಫಲವಾಗಿವೆ. ಇದಕ್ಕಾಗಿ ₹10 ಕೋಟಿ ಖರ್ಚು ಮಾಡಲಾಗಿದೆ’ ಎಂದು ವಿವರಿಸಿದರು.

‘ಜನವಸತಿ ಇರುವ 5362 ಸ್ಥಳಗಳಲ್ಲಿ 805 ಕಡೆ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ಅದಕ್ಕಾಗಿ ಬ್ಲಾಕ್‌ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. 200–300 ಜನವಸತಿಗಳಿಗೆ ಮುಂದಿನ ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕಾಗುತ್ತದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಕೋಳಾಲ ಹೋಬಳಿ ಕಾಟೇನಹಳ್ಳಿ ಕ್ರಾಸ್‌ನಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿ, ಚಿನ್ನಯ್ಯಕಟ್ಟೆಯ ಜಲ ಮರು ಪೂರಣ ಕಾಮಗಾರಿ ವೀಕ್ಷಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ, ಮಧುಗಿರಿ ಉಪ ವಿಭಾಗಾಧಿಕಾರಿ ಅನಿತಾಲಕ್ಷ್ಮಿ, ಜಿ.ಪಂ. ಉಪ ಕಾರ್ಯದರ್ಶಿ ಕರಿಯಣ್ಣ ಇದ್ದರು.

ಕಾಟಾಚಾರದ ವೀಕ್ಷಣೆ:  ಮಧುಗಿರಿ ತಾಲ್ಲೂಕಿನ ಬಿಜವರ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ತಂಡ ತರಾತುರಿಯಲ್ಲಿ ಅಧ್ಯಯನ ನಡೆಸಿ ಹೊರಟು ಹೋಯಿತು. ಸಂಜೆ 5.15ಕ್ಕೆ ಬಂದ ಕೇಂದ್ರ ತಂಡ, ನರೇಗಾ ಯೋಜನೆಯಲ್ಲಿ ಕೈಗೊಂಡ ಬಿಜವರ ಮುಖ್ಯ ರಸ್ತೆಯಿಂದ ಶ್ರೀರಾಮಪ್ಪ ಜಮೀನಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ತೆರಳಿದರು. ಸ್ಥಳದಲ್ಲಿದ್ದ ಕಾರ್ಮಿಕರು, ರೈತರನ್ನು ಮಾತನಾಡಿಸುವ ಗೋಜಿಗೂ ಹೋಗಲಿಲ್ಲ. ತಹಶೀಲ್ದಾರ್ ಶ್ರೀನಿವಾಸ್, ತಾ.ಪಂ.ಇಒ ಎಚ್.ಡಿ.ಮಹಾಲಿಂಗಯ್ಯ, ಜಿ.ಪಂ.ಎಇಇ ಸುರೇಶ್‌ರೆಡ್ಡಿ ಇದ್ದರು.

ಪಾವಗಡದ ವೆಂಕಟಾಪುರ ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಗೋಶಾಲೆಯಲ್ಲಿ ಜಾನುವಾರು ಕುಡಿಯುವ ನೀರಿನ ಮತ್ತೊಂದು ತೊಟ್ಟಿ ನಿರ್ಮಿಸಬೇಕು. ಜಾನುವಾರುಗಳಿಗೆ ಮೂರು ರೀತಿಯ ಮೇವು ವಿತರಿಸಬೇಕು ಎಂದು ಸೂಚನೆ ನೀಡಿದರು. ಜಾನುವಾರುಗಳಿಗೆ ಹೆಚ್ಚುವರಿ ಮೇವು, ಊಟದ ವ್ಯವಸ್ಥೆ ಮಾಡುವಂತೆ ಗೋಪಾಲಕರು ಮನವಿ ಮಾಡಿದರು.

ಅಧಿಕಾರಿಗಳ ಪೋಸು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ಪ್ರಧಾನ ವ್ಯವಸ್ಥಾಪಕ ಎಲ್‌. ಚಾತ್ರುನಾಯ್ಕ್‌ ರಾಸುಗಳ ಮುಂದೆ ನಿಂತು ಫೋಟೊ ತೆಗೆಸಿಕೊಂಡರು. ‘ಇಷ್ಟೊಂದು ಪ್ರಮಾಣದ ರಾಸುಗಳನ್ನು ನೋಡಿದ್ದು ಇದೇ ಮೊದಲು’ ಎಂದು ಹೇಳಿದರು.

‘ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸುವುದು ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ 50 ಗೋಶಾಲೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, 21 ಮಾತ್ರ ಆರಂಭವಾಗಿವೆ. ಮೇವಿನ ದಾಸ್ತಾನು ಕಡಿಮೆ ಇದ್ದು, ಪರಿಸ್ಥಿತಿ ಗಂಭೀರವಾಗಿದೆ’ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹೇಳಿದರು.

ಅಗತ್ಯ ನೆರವಿಗೆ ಸಂಸದ ಕೋರಿಕೆ: ‘ಕಳೆದ ಬಾರಿಯೂ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಆದರೆ, ಸಮರ್ಪಕ ಅನುದಾನ ಬಿಡುಗಡೆ ಆಗಿಲ್ಲ. ಕುಡಿಯುವ ನೀರು ಹಾಗೂ ಜಾನುವಾರು ಮೇವಿಗೆ ಅಗತ್ಯ ನೆರವು ಬಿಡುಗಡೆ ಮಾಡಬೇಕು’ ಎಂದು ಕೋರಿದರು.

ಬರ ಪರಿಹಾರದ ಬೇಡಿಕೆ

₹112 ಕೋಟಿ – ಕುಡಿಯುವ ನೀರು ಯೋಜನೆಗಳಿಗೆ ಬೇಕಾದ ಹಣ

21 – ಜಿಲ್ಲೆಯಲ್ಲಿ ಗೋಶಾಲೆಗಳ ಆರಂಭ

₹10ಕೋಟಿ – 532 ಕೊಳವೆ ಬಾವಿಗಳಿಗೆ ಖರ್ಚಾದ ಅನುದಾನ

₹45 ಕೋಟಿ – ಬೆಳೆನಷ್ಟ, ಮೇವು ಖರೀದಿಗೆ

₹9 ಕೋಟಿ – ಸಿಆರ್‌ಎಫ್‌ ನಿಧಿಯಡಿ ಬಿಡುಗಡೆಯಾದ ಬೆಳೆಪರಿಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT