ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ದೇವರೇ ಕಾಪಾಡಲಿ: ಸಚಿವ

ಹೊಗಳಗೆರೆಯಲ್ಲಿ ತೋಟಗಾರಿಕಾ ಕ್ಷೇತ್ರ ನಾಮಕರಣ ಕಾರ್ಯಕ್ರಮ ಮತ್ತು ಕಾರ್ಯಾಗಾರ
Last Updated 11 ಫೆಬ್ರುವರಿ 2017, 11:26 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ರೈತರನ್ನು ಯಾರೂ ಕಾಪಾಡಲು ಆಗಲ್ಲ. ಅವರನ್ನು ದೇವರೇ ಕಾಪಾಡಬೇಕು’ ಎಂದು  ಸಚಿವ ಕೆ.ಆರ್.ರಮೇಶ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯಲ್ಲಿ ಶುಕ್ರವಾರ ನಡೆದ ತೋಟಗಾರಿಕಾ ಕ್ಷೇತ್ರದ ನಾಮಕರಣ ಕಾರ್ಯಕ್ರಮ, ಮಾವು ಮತ್ತು ಗೋಡಂಬಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಮಾರುಕಟ್ಟೆ ಕುರಿತ ತಾಂತ್ರಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಂಜಿನಿಯರ್‌ಗಳಿಗೆ ಇರುವ ಕೌಶಲ ಮತ್ತು ಜ್ಞಾನ ರೈತರಿಗೂ ಇದೆ. ಆದರೆ, ರೈತರಿಗೆ ಪ್ರಾಯೋಗಿಕ ಕೌಶಲ ಆಧಾರಿತ ತರಬೇತಿಯ ಅಗತ್ಯವಿದೆ. ವ್ಯವಸಾಯ ಮಾಡದೆ ಲಾಭ ಗಳಿಸಬೇಕೆಂಬ ಮಾನೋಭಾವದಿಂದ ರೈತರು ಹೊರ ಬರಬೇಕು ಎಂದು ಸಲಹೆ ನೀಡಿದರು.

ರೈತರು ಬೆಳೆಯುವ ಬೆಳೆಗಳು ಗುಣಮಟ್ಟದಿಂದ ಕೂಡಿರುತ್ತವೆ. ಬೆಳೆಗಳನ್ನು ಹೇಗೆ ಮಾರಾಟ ಮಾಡಬೇಕೆಂಬ ಬಗ್ಗೆ ರೈತರಿಗೆ ತರಬೇತಿ ನೀಡಬೇಕು. ವಿಜ್ಞಾನಿಗಳು ತಂತ್ರಜ್ಞಾನದ ಜತೆಗೆ ಮಾರುಕಟ್ಟೆಯ ಅರಿವು ಮೂಡಿಸಿದರೆ ಅನುಕೂಲವಾಗುತ್ತದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಪೈಕಿ ರೈತರು ಮಾತ್ರ ಪ್ರಾಮಾಣಿಕವಾಗಿ ಸಾಲ ಮರು ಪಾವತಿಸುತ್ತಾರೆ. ರೈತರು ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡಿ ಎಂದು ಕೇಳಬೇಕೆ ಹೊರತು ಸಾಲ ಮನ್ನಾ ಮಾಡಿ ಎಂದು ಕೇಳಬಾರದು ಎಂದರು.

ಸಾಲ ಮನ್ನಾ: ಅತಿ ದೊಡ್ಡ ದೇಶ ಪ್ರೇಮಿಗಳಾದ ಅಂಬಾನಿ, ವಿಜಯ ಮಲ್ಯ ಅಂತಹವರಿಗೆ ಬ್ಯಾಂಕ್‌ಗಳು ಕೋಟಿಗಟ್ಟಲೆ ಸಾಲ ಕೊಡುತ್ತವೆ. ಅವರು ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡ ತಕ್ಷಣ ಬ್ಯಾಂಕ್‌ಗಳು ಸಾಲ ಮನ್ನಾ ಮಾಡುತ್ತವೆ. ಸ್ವಾಭಿಮಾನಿಗಳಾದ ರೈತರು ದುಡ್ಡು ಮುಳುಗಿಸುವ ಕೆಲಸ ಮಾಡಲ್ಲ ಎಂಬ ಸಂಗತಿ ಬ್ಯಾಂಕ್‌ಗಳಿಗೆ ಗೊತ್ತಿದೆ. ಆದರೂ ರೈತರ ಸಾಲ ಮನ್ನಾ ಮಾಡುವ ಯೋಚನೆ ಬ್ಯಾಂಕ್‌ಗಳಿಗೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಜನ ಸೇವೆ ಮಾಡಲು ಮುಂದಾಗುತ್ತಿದ್ದರು. ಆದರೆ, ಈಗ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್‌ವರೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳು ಎಷ್ಟು ಆಸ್ತಿ ಮಾಡಬೇಕೆಂದು ಆಲೋಚಿಸುತ್ತಾರೆ. ಈಗಿನ ಜನಪ್ರತಿನಿಧಿಗಳಿಗೆ ಜನರ ಸೇವೆ ಮಾಡುವ ಕಾಳಜಿ ಇಲ್ಲ ಎಂದು ವಿಷಾದಿಸಿದರು.

ಬಿ.ಸಿ.ನಾರಾಯಣಗೌಡ ಮತ್ತು ಜಿ.ನಾರಾಯಣಗೌಡ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ನಡೆಸಿದ ಮಹನೀಯರು. ಜಿ.ನಾರಾಯಣಗೌಡರು ರಾಜಕೀಯ ಪ್ರವೇಶಿಸಿ 5 ಬಾರಿ ಸಚಿವರಾಗಿ ಮತ್ತು 10 ವರ್ಷ ಶಾಸಕರಾಗಿ ಕೆಲಸ ಮಾಡಿದ್ದಾರೆ. ಈಗಿನ ಜನ ನಾಯಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ದಿವಂಗತ ಜಿ.ನಾರಾಯಣಗೌಡರು ತೋಟಗಾರಿಕಾ ಸಚಿವರಾಗಿದ್ದಾಗ ಹೊಗಳೆಗೆರೆಯಲ್ಲಿ 635 ಎಕರೆ ಜಾಗದಲ್ಲಿ ತೋಟಕಾರಿಕೆ ಕ್ಷೇತ್ರ ಸ್ಥಾಪಿಸಿ ಮುಂದಿನ ಪೀಳಿಗೆಗೆ ಸಮರ್ಪಿಸಿದರು. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬಾರದಿರುವುದು ನಾಚಿಕೆಗೇಡು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಲಕ್ಷ್ಯವೇ ಕಾರಣ: ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ‘ಜಿ.ನಾರಾಯಣಗೌಡರು ಸಚಿವರಾಗಿದ್ದಾರೆ ತೋಟಗಾರಿಕೆ ಕ್ಷೇತ್ರಕ್ಕೆ ಜಾಗ ಮೀಸಲಿಟ್ಟರು. ಆದರೆ, ಈಗ ಯಾರಾದರೂ ಗ್ರಾಮ ಪಂಚಾಯಿತಿ ಸದಸ್ಯರಾಗುತ್ತಿದ್ದಂತೆ ಕೂಡಲೇ ಖಾಲಿ ಜಾಗ ಗುರುತಿಸಿ ಬೇಲಿ ಹಾಕಿ ಒತ್ತುವರಿ ಮಾಡಲು ನೋಡುತ್ತಾರೆ’ ಎಂದು ಹೇಳಿದರು.

ಹೊಗಳಗೆರೆಯಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪಿಸುವಂತೆ 2006ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಯಿತು. ನಂತರ ವಿಧಾನ ಪರಿಷತ್ ಮತ್ತು ವಿಧಾನಸಭೆಯಲ್ಲಿ ಸತತ ಹೋರಾಟ ನಡೆಸಿ ಕಾಲೇಜು ಮಂಜೂರು ಮಾಡಿಸಲಾಯಿತು. ಆದರೆ, ಹೊಗಳಗೆರೆ ಬೆಂಗಳೂರಿಗೆ ದೂರವೆಂಬ ಕಾರಣಕ್ಕೆ ಕೋಲಾರದ ಬಳಿ ಕಾಲೇಜು ಆರಂಭಿಸಲಾಯಿತು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ತೋಟಗಾರಿಕಾ ಕ್ಷೇತ್ರಕ್ಕೆ ಜಿ.ನಾರಾಯಣಗೌಡ ತೋಟಗಾರಿಕಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಜಿ.ನಾರಾಯಣಗೌಡರ ಜೀವನ ಚರಿತ್ರೆ ಆಧರಿಸಿದ ಪುಸ್ತಕ. ಮಾವು ಬೆಳೆಯ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋಧಾ, ಸದಸ್ಯ ಗೋವಿಂದಸ್ವಾಮಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ, ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಗುಣ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT