ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್‌ ಸೀರೆ ಸೊಬಗು, ಬಗೆಬಗೆ ಚಟ್ನಿ ಘಮಲು

ನಗರದಲ್ಲಿ ಫೆ.19ರ ವರೆಗೆ ಖಾದಿ ಉತ್ಸವ, ಪ್ರದರ್ಶನ ಹಾಗೂ ಮಾರಾಟ
Last Updated 11 ಫೆಬ್ರುವರಿ 2017, 11:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯುವ ಇಳಕಲ್‌ ಸೀರೆಗಳು, ರುಚಿಮೊಗ್ಗುಗಳನ್ನು ಅರಳಿಸಿ ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ಬಗೆಬಗೆ ಚಟ್ನಿಪುಡಿಗಳು, ಜಿಹ್ವಾ ಚಾಪಲ್ಯ ಹೆಚ್ಚಿಸುವ ಅಮಿನಗಡ ಕರದಂಟು, ಮೂಲೆ ಮೂಲೆಗಳಲ್ಲಿ ಚನ್ನಪಟ್ಟಣದ ಬೊಂಬೆ–ಆಟಿಕೆಗಳ ಸದ್ದು, ಇಡೀ ಪರಿಸರವನ್ನು ಆವರಿಸಿಕೊಂಡ ಖಾದಿ ಘಮಲು...

ಇದು ನಗರದ ಪಿಎಲ್‌ಡಿ ಬ್ಯಾಂಕ್‌ ಆವರಣದಲ್ಲಿ ಶುಕ್ರವಾರ ಆರಂಭಗೊಂಡ ಖಾದಿ ಉತ್ಸವದಲ್ಲಿ ಆದ ಅನುಭೂತಿ. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಈ ಉತ್ಸವ ಫೆಬ್ರುವರಿ 19ರ ವರೆಗೆ ಇರಲಿದೆ.
ಖಾದಿ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಉದ್ದೇಶದಿಂದ ಆಯೋಜಿಸಿರುವ ಈ ಉತ್ಸವದಲ್ಲಿ ವಿವಿಧ ಜಿಲ್ಲೆ ಮತ್ತು ರಾಜ್ಯಗಳ 66 ಉದ್ದಿಮೆದಾರರು ಮಳಿಗೆ ತೆರೆದಿದ್ದಾರೆ.

ಜೇನುತುಪ್ಪ, ಉಪ್ಪಿನಕಾಯಿ, ಗೋಡಂಬಿ, ಆರ್ಯುವೇದ ಔಷಧಿಗಳು, ಮರದ ಗೊಂಬೆಗಳು, ಚಪ್ಪಲಿಗಳು, ವಿವಿಧ ಬಗೆಯ ಖಾದಿ ಬಟ್ಟೆ ಮತ್ತು ಉಡುಪುಗಳು ಇಲ್ಲಿ ಮಾರಾಟಕ್ಕೆ ಲಭ್ಯ ಇವೆ. ಖಾದಿ ವಸ್ತ್ರಗಳ ಮೇಲೆ ಶೇ 20ರಿಂದ 35ರ ವರೆಗೆ ರಿಯಾಯಿತಿ ಕೂಡ ಇದೆ. ನಿತ್ಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9ರ ವರೆಗೆ ಮಳಿಗೆಗಳು ಬಾಗಿಲು ತೆರೆದಿರುತ್ತವೆ. ಈ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಈ ಭಾಗದವರಿಗೆ ಪ್ರಾಶ್ಯಸ್ತ ನೀಡಿ: ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ಕೆ.ಸುಧಾಕರ್‌, ‘ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶದ ಜನರಲ್ಲಿದ್ದ ಸ್ವದೇಶಿ ವಸ್ತುಗಳ ಬಗೆಗಿನ ಅಭಿಮಾನ, ಗೌರವ ಇದೀಗ ಕಡಿಮೆಯಾಗಿದೆ.

ಇವತ್ತು ಭಾರತಕ್ಕಿಂತಲೂ ವಿದೇಶಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿರುತ್ತದೆ ಎಂಬ ಭಾವನೆ ನಮ್ಮಲ್ಲಿ ಬೇರೂರಿಬಿಟ್ಟಿದೆ. ಇದನ್ನು ತೊಡೆದು ಹಾಕಬೇಕಾದರೆ ನಾವು ಕೂಡ ಖಾದಿ ಉತ್ಪನ್ನಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು.

‘ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ನಮ್ಮವರೇ ಆದ ರಮೇಶ್ ಅವರು ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರ. ಈ ಮಂಡಳಿಯಿಂದ 116 ಬಗೆಯ ಗುಡಿಕೈಗಾರಿಕೆಗಳಿಗೆ ಸಾಲ ಸೌಲಭ್ಯವಿದೆ. ಮಂಡಳಿ ಸಾಲದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ35ರಷ್ಟು ಸಬ್ಸಿಡಿ, ಸಾಮಾನ್ಯ ವರ್ಗಕ್ಕೆ ಶೇ25ರಷ್ಟು ಸಬ್ಸಿಡಿ ನೀಡುತ್ತದೆ’ ಎಂದು ಹೇಳಿದರು. 

‘ವಿಶೇಷವಾಗಿ ಈ ಜಿಲ್ಲೆಯ ಯುವಜನರು ಕೃಷಿ, ಹೈನುಗಾರಿಕೆ, ರೇಷ್ಮೆ ಸಂಬಂಧಿತ ಗುಡಿ ಕೈಗಾರಿಕೆಗಳನ್ನು ಆರಂಭಿಸಿದರೆ ಅನುಕೂಲವಾಗುತ್ತದೆ. ಅದಕ್ಕಾಗಿ ರಮೇಶ್‌ ಅವರು ಈ ಭಾಗದ ಯುವಕರಿಗೆ ಪ್ರಾಶಸ್ತ್ಯ ನೀಡಬೇಕು. ಜತೆಗೆ ಯುವಜನರಿಗೆ ಸಾಲ ಸೌಲಭ್ಯ ಮತ್ತು ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಶಿಬಿರ ಆಯೋಜಿಸಬೇಕು’ ಎಂದು ತಿಳಿಸಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ‘ಮಂಡಳಿಯಿಂದ ನಾವು ನೇರವಾಗಿ ಸಾಲ ಕೊಡುವ ಅಧಿಕಾರವಿಲ್ಲ. ನಾವು ಏನಿದ್ದರೂ ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಸಬ್ಸಿಡಿ ಮಾತ್ರ ಒದಗಿಸಿಕೊಡಬಹುದು. ಮಂಡಳಿಯ ಸಾಲ ಸೌಲಭ್ಯಕ್ಕಾಗಿ ಮಂಡಳಿಯ ಜಾಲತಾಣದ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಜಿಲ್ಲಾಮಟ್ಟದಲ್ಲಿರುವ ಟಾಸ್ಕ್‌ಫೋರ್ಸ್‌ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಾರೆ’ ಎಂದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್, ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ನವೀನ್‌ ಕುಮಾರ್ ರಾಜು, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಅಭಿವೃದ್ಧಿ) ಎಂ.ಟಿ.ಹರಿಶ್ಚಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

* ಖಾದಿ ಉತ್ಪನ್ನಗಳ ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಉದ್ದೇಶ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಿದ್ದೇವೆ.
ಯಲುವಹಳ್ಳಿ ಎನ್.ರಮೇಶ್,  ಅಧ್ಯಕ್ಷ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT