ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧತೆಯಲ್ಲಿ ಏಕತೆಗೆ ಕೊಂಕಣಿ ಭಾಷಿಕರು ಮಾದರಿ

ಕೊಂಕಣಿ ಲೋಕೋತ್ಸವ– 2017 ಉದ್ಘಾಟನೆಯಲ್ಲಿ ಮೇಯರ್ ಹರಿನಾಥ್‌
Last Updated 11 ಫೆಬ್ರುವರಿ 2017, 12:42 IST
ಅಕ್ಷರ ಗಾತ್ರ

ಮಂಗಳೂರು: ಹಲವು ಧರ್ಮಗಳಿಗೆ ಸೇರಿದ 41 ಜಾತಿಯ ಜನರು ಕೊಂಕಣಿ ಭಾಷೆಗಾಗಿ ಒಗ್ಗೂಡಿರುವುದು ವಿವಿಧ ತೆಯಲ್ಲಿ ಏಕತೆಗೆ ಒಂದು ಶ್ರೇಷ್ಠ ಮಾದರಿ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಕೆ.ಹರಿನಾಥ್‌ ಹೇಳಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿರುವ ಮೂರು ದಿನಗಳ ಕೊಂಕಣಿ ಲೋಕೋತ್ಸವ್‌– 2017 ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕೊಂಕಣಿ ಭಾಷಿಕರು ಧರ್ಮ, ಜಾತಿ, ಪಂಥ, ರಾಜ್ಯಗಳ ಎಲ್ಲೆಗಳನ್ನು ಮೀರಿ ಕೊಂಕಣಿ ಭಾಷೆಗಾಗಿ ಸದಾಕಾಲ ಒಗ್ಗಟ್ಟಾಗಿ ಇರು ತ್ತಾರೆ. ಕೊಂಕಣಿಯ ವಿಚಾರ ಬಂದಾಗ ಉಳಿದ ಎಲ್ಲವನ್ನೂ ಬದಿಗಿರಿಸಿ ಒಂದೇ ದೃಷ್ಟಿಕೋನದಿಂದ ಯೋಚಿಸುತ್ತಾರೆ. ಇದು ಕೊಂಕಣಿ ಭಾಷೆಗೆ ಇರುವ ಶಕ್ತಿಯನ್ನು ತೋರುತ್ತದೆ’ ಎಂದರು.

ದೇಶದ ಅಭಿವೃದ್ಧಿಗೆ ಕೊಂಕಣಿ ಭಾಷಿಕರ ಕೊಡುಗೆ ದೊಡ್ಡದು. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇವರ ಕೊಡುಗೆ ದೇಶದ ಇತರೆ ಜನರಿಗೆ ಮಾದರಿಯಾಗುವಂತಹದ್ದು ಎಂದು ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯದ ವಿಕಾರ್‌ ಮೊನ್ಸಿಂಜೋರ್‌ ಡೆನ್ನಿಸ್ ಮೊರಾಸ್‌ ಪ್ರಭು ಮಾತನಾಡಿ, ‘ಕೊಂಕಣಿ ಮಾತನಾಡುವವರ ನಡುವೆ ಇತರೆ ವಿಚಾರಗಳಲ್ಲಿ ತಾರತಮ್ಯವಿಲ್ಲ. ನಮ್ಮ ಪೂರ್ವಿಕರು ಶ್ರೀರಂಗಪಟ್ಟಣದಲ್ಲಿ ಕೈದಿಗಳಾಗಿದ್ದಾಗಲೂ ಕೊಂಕಣಿಯನ್ನು ಮರೆಯಲಿಲ್ಲ. ಕಷ್ಟ, ಸುಖ ಎರಡೂ ಸಂದರ್ಭದಲ್ಲಿ ಕೊಂಕಣಿಯೇ ನಮ್ಮ ಭಾಷೆಯಾಗಿತ್ತು. ಮುಂದೆಯೂ ಅದನ್ನು ಹಾಗೆಯೇ ಕಾಪಾಡಿಕೊಳ್ಳುವ ಮತ್ತು ಸಮೃದ್ಧವಾಗಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.

ಕೊಂಕಣಿ ಪ್ರೀತಿಯ ಭಾಷೆ, ಸ್ವರ್ಗದ ಭಾಷೆ. ಹಿಂದೂ, ಕ್ರೈಸ್ತ, ಮುಸ್ಲಿಂ, ಜೈನ ಧರ್ಮೀಯರು ಈ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಧರ್ಮದ ಕಾರಣಕ್ಕಾಗಿ ಯಾವತ್ತೂ ಭಾಷೆಯ ಬಳಕೆಗೆ ತೊಡಕುಗಳು ಉಂಟಾಗಿಲ್ಲ. ಜಿಲ್ಲೆಯಲ್ಲಿ ಶಾಂತಿ, ಸಮಾಧಾನ ಸದಾಕಾಲವೂ ಇರಬೇಕು ಎಂಬುದು ಎಲ್ಲಾ ಕೊಂಕಣಿ ಭಾಷಿಕರ ಆಶಯ ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಮಾತ ನಾಡಿ, ‘ಐದು ರಾಜ್ಯಗಳಲ್ಲಿ ಕೊಂಕಣಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಧರ್ಮ, ಜಾತಿ ಬೇರೆಯಾದರೂ ಭಾಷೆ ಗಾಗಿ ಅವರು ಒಗ್ಗಟ್ಟಿನಿಂದ ಬದುಕುತ್ತಿ ರುವುದು ಸಂತಸದ ವಿಚಾರ. ಕೊಂಕಣಿ ಭಾಷಿಕರು ಯಾವುದೇ ಕ್ಷೇತ್ರದಲ್ಲಿದ್ದರೂ ಬದ್ಧತೆ ಮತ್ತು ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಆ ಕ್ಷೇತ್ರಗಳ ತುತ್ತತುದಿ ತಲುಪಲು ಪ್ರಯತ್ನಿಸುತ್ತಾರೆ. ಅಭಿವೃ ದ್ಧಿಯ ಕಡೆಗೆ ಹೆಚ್ಚಿನ ಗಮನಹರಿಸುವ ಇವರು, ಅಪರಾಧ ಕೃತ್ಯಗಳಿಂದ ದೂರ ಇರುತ್ತಾರೆ ಎಂಬುದು ನನ್ನ ಅನುಭವಕ್ಕೆ ಬಂದಿದೆ’ ಎಂದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಲೇಖಕಿ ಗ್ಲೇಡಿಸ್ ಕ್ವಾಡ್ರಸ್ ಅವರ ‘ಭಾರತಾಚ್ಯಾ ಸುಟ್ಕೆಂ ಝಾಜಾಂತ್ ಸ್ತ್ರೀಯೋ' ಹಾಗೂ ಕ್ಯಾಥರಿನ್ ರಾಡ್ರಿಗಸ್ ಅವರ ‘ಆಜ್ ತಾಕಾ ಪಲ್ಯಾ ತುಕಾ' ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ‘ಪ್ರದೇಶ ದಿಂದ ಪ್ರದೇಶಕ್ಕೆ ಕೊಂಕಣಿ ಭಾಷಿಕರ ಜೀವನ ವಿಧಾನ, ಸಂಸ್ಕೃತಿಯಲ್ಲಿ ಭಿನ್ನತೆ ಇದೆ. ಭಾಷೆಯಲ್ಲೂ ಸಾಕಷ್ಟು ವ್ಯತ್ಯಾಸ ವಿದೆ. ಆದರೆ, ಕೊಂಕಣಿಯ ಮೂಲ ದೊಂದಿಗಿನ ಅವರೆಲ್ಲರ ನಂಟು ಹಾಗೆಯೇ ಉಳಿದಿದೆ. ಮೇಲರಿಮೆ– ಕೀಳರಿಮೆಗಳಿಲ್ಲದ ಕೊಂಕಣಿ ಭಾಷಿಕರ ಬದುಕು ಭವಿಷ್ಯದ ತಲೆಮಾರಿಗೆ ದೊಡ್ಡ ಮಾದರಿಯಾಗುತ್ತದೆ’ ಎಂದು ಹೇಳಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೋ, ಮಾಜಿ ಅಧ್ಯಕ್ಷರಾದ ಬಸ್ತಿ ವಾಮನ ಶೆಣೈ, ಎರಿಕ್ ಒಝೇರಿಯೋ, ಬಿ.ವಿ.ಬಾಳಿಗಾ, ಅಕಾಡೆ ಮಿಯ ರಿಜಿಸ್ಟ್ರಾರ್ ದೇವದಾಸ್ ಪೈ, ಸದಸ್ಯರಾದ ಶೇಖರ ಗೌಡ, ಲೂಲೂಸ್ ಕುಟಿನ್ಹೋ, ಮಮತಾ ಕಾಮತ್, ಶಿವಾನಂಧ ಶೇಟ್, ಕಮಲಾಕ್ಷ ಶೇಟ್, ಡಾ. ಚೇತನಾ ನಾಯಕ್, ಡಾ. ವಾರಿಜಾ, ಲಾರೆನ್ಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಕಾರ್‍ಯಕ್ರಮಕ್ಕೂ ಮೊದಲು ಕೊಂಕಣಿ ವಸ್ತು ಪ್ರದರ್ಶನವನ್ನು ಮೇಯರ್ ಹರಿನಾಥ್ ಉದ್ಘಾಟಿಸಿದರು.

ಸಿದ್ದಿ ಬುಡಕಟ್ಟು ಸಮುದಾಯದ ಕಲಾವಿದರಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ಎರಿಕ್‌ ಒಝೇರಿಯೋ ನಿರ್ದೇಶನದಲ್ಲಿ 82 ಗಾಯಕರು ವೀರ ಕೊಂಕಣಿ, ಕೊಂಕಣಿ ಲೋಕೋತ್ಸವ, ಕೊಂಕಣಿ ಗಾನಾ ಎನ್ನುವ ಗೀತೆಗಳನ್ನು ಪ್ರಸ್ತುತಪಡಿಸಿದರು.

ಬಿಕ್ಕಟ್ಟು ನೆನೆದು ನೋವು
ಕೊಂಕಣಿ ಭಾಷಿಕರ ಒಗ್ಗಟ್ಟನ್ನು ಶ್ಲಾಘಿಸಿದ ಪೊಲೀಸ್ ಕಮಿಷನರ್‌ ಎಂ.ಚಂದ್ರಶೇಖರ್‌, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಒಂದೇ ಭಾಷೆಯವರಾಗಿದ್ದೂ, ಸಂಘರ್ಷದ ಮೂಲಕ ವಿಭಜನೆಯಾಗಿರುವುದನ್ನು ನೆನೆದು ನೋವು ಹೊರಹಾಕಿದರು. ‘ನಾನು ತೆಲುಗು ಭಾಷಿಕ. ನಮ್ಮಲ್ಲಿ ಒಂದೇ ಭಾಷೆಯ ಜನರು ಪ್ರಾಂತ್ಯದ ಹೆಸರಿನಲ್ಲಿ ಕಿತ್ತಾಡಿಕೊಂಡೆವು. ಕೆಟ್ಟ ಸನ್ನಿವೇ ಶದಲ್ಲಿ ಎರಡು ರಾಜ್ಯಗಳಾಗಿ ವಿಭ ಜನೆ ಆದೆವು. ನಿಮ್ಮ ಒಗ್ಗಟ್ಟನ್ನು ನೋಡಿ ಖುಷಿ ಆಗುತ್ತಿರುವಾಗಲೇ ನಮ್ಮ ಸ್ಥಿತಿ ನೆನಪಾಗಿ ನೋವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT