ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮಾ ಪ್ರಸವ ಅಥವಾ ಪ್ರಸವ ಲಹರಿ

ಪ್ರಬಂಧ
Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
-ರೇಖಾ ಹೆಗಡೆ, ಬಾಳೇಸರ
 
**
‘ಮರದೊಳಗೆ ಮರ ಹುಟ್ಟಿ, ಮರ ಚಕ್ರ ಕಾಯಾಗಿ, ತಿನ್ನಲಾರದ ಹಣ್ಣು ಬಲು ರುಚಿ’ ಎಂಬ ಒಗಟೊಂದಿದೆ. ಉತ್ತರ ಗೊತ್ತಲ್ವ –  ಮಗು. ಇದೇ ರೀತಿ ‘ಬೇನೆಯೊಳಗೆ ಭ್ರಮೆ ಹುಟ್ಟಿ, ಭ್ರಮೆಯೊಳಗೆ ಪದ ಹುಟ್ಟಿ, ಬರೆಯದೇ ಹೋದ ಗದ್ಯ ಬಲು ಮೋಜು’ ಎಂದರೆ ಹೇಗೆ? ಒಗಟಾಗಿದೆಯಲ್ಲವೇ? ಆದರೆ ಇದಕ್ಕೆ ಉತ್ತರವನ್ನು ಒಂದು ಪದದಲ್ಲಿ ಕೊಡಲಾಗದು, ಲೇಖನವನ್ನೇ ಬರೆಯಬೇಕು.
 
ಎರಡು ವರ್ಷದ ಹಿಂದಿನ ಮಾತು. ಹೆರಿಗೆ ಬೇನೆ ಸಹಿಸಿಕೊಳ್ಳುತ್ತ ಸಿಂಗಪುರದ ಆಸ್ಪತ್ರೆಯೊಂದರ ಹಾಸಿಗೆ ಮೇಲೆ ಬಿದ್ದುಕೊಂಡಿದ್ದೆ. ನೋವು ನಿವಾರಣೆಗೆಂದು ಡಾಕ್ಟರು ಸೂಚಿಸಿದ್ದ ‘ಎಂಟೋನಾಕ್ಸ್’ (ನೈಟ್ರಸ್ ಆಕ್ಸೈಡ್ ಮತ್ತು ಆಮ್ಲಜನಕ) ಗಾಳಿಯ ಮಿಶ್ರಣವನ್ನು ಉಸಿರೆಳೆದುಕೊಳ್ಳುತ್ತ, ಎಳೆದುಕೊಳ್ಳುತ್ತ ಅದೆಷ್ಟು ಹೊತ್ತಾಗಿತ್ತೋ ಗೊತ್ತಿಲ್ಲ. ಅರೆ ಎಚ್ಚರ, ತುಸು ಮಬ್ಬಿನ ಸ್ಥಿತಿಯಲ್ಲಿ ಇದ್ದೆ. ನಿಧಾನಕ್ಕೆ ನನ್ನ ಕಣ್ಣೆದುರು ಉರಿಯುತ್ತಿದ್ದ ಗೋಲಾಕಾರದ ಲೈಟು ಕಿತ್ತು ಗಿರಿ ಗಿರಿ ಹೊಡೆಯುತ್ತ ಹಾರಿ ಹೋದಂತಾಯಿತು. ನೋಡ್ತಾ ನೋಡ್ತಾ ಹೋಗಿ ಆಕಾಶದಲ್ಲಿ ಮೇಲೆ ಏರಿ, ದೊಡ್ಡದಾಗಿ... ಅದೇ ಸೂರ್ಯನಂತೆ ಹೊಳೆಯತೊಡಗಿತು. ಸೂರ್ಯನೇ ಆಯಿತಾ?! ಗೊತ್ತಿಲ್ಲ. ಪ್ರಖರ ಪ್ರಭೆ ತಾಳದೇ ಕಣ್ಣು ಮುಚ್ಚಿದೆ. ಕಣ್ಣು ತೆರೆದಾಗ ಲೈಟ್ ಗೋಲ ಅಲ್ಲೇ ಇತ್ತು, ಮಂದವಾಗಿ ಉರಿಯುತ್ತಿತ್ತು. 
 
ನೋವು ಅತಿಯಾಗುತ್ತಿದಂತೆ ಮತ್ತೆ ಗಾಳಿ ಹೀರಿದೆ. ಹೀರೇ ಹೀರಿದೆ. ಏನಾಗುತ್ತಿದೆ ನನಗೆ? ಎಲ್ಲೆಲ್ಲೋ ಏನೇನೋ ಕೇಳುತ್ತಿದೆ, ಕಾಣುತ್ತಿದೆ. ಎಲ್ಲ ಅಯೋಮಯವಾಗಿ ಇದೆಯಲ್ಲ! ಗೋಡೆಯ ಮೇಲಿನ ಪಟ, ಬಾಗಿಲಿಗಿದ್ದ ಪರದೆ, ಕೈಯಲ್ಲಿದ್ದ ಮಾಸ್ಕ್, ಅದೂ ಇದೂ ಎಲ್ಲ ಮಂಜಾಗಿ ಮಾಯವಾಗುತ್ತಿವೆಯಲ್ಲ. ಕೊನೆಗೆ ಮೈಯೆಲ್ಲ ಹಗುರ ಹಗುರಾಗಿ ಸ್ವತಃ ನಾನೇ ತೇಲಿ, ತೇಲಿ ಹೋಗಿ... ಅಯ್ಯೋ! ಮಾಯ!! 
 
ಹೀಗೆ ಮಬ್ಬು ಮುಸುಕಿದ ಲಹರಿಯಲ್ಲಿ ಎಷ್ಟು ಹೊತ್ತು ಮುಳುಗಿದ್ದೆನೋ, ಮಧ್ಯೆ ಯಾರ್ಯಾರೋ ನರ್ಸುಗಳು ಬಂದು, ನೋಡಿ... ‘ಇನ್ನೂ ತುಂಬ ಹೊತ್ತು ಬೇಕು’ ಎಂದು ಹೇಳಿ ಟೆನ್ಷನ್ ಹೆಚ್ಚಿಸಿ ಹೋಗುತ್ತಿದ್ದರು. ಮಧ್ಯರಾತ್ರಿ ಎಷ್ಟೋ ಹೊತ್ತು... ನೋವು ಇರಿಯತೊಡಗಿ ನಿದ್ದೆಯೂ ಬರದಾಗಿತ್ತು. ಅರಿವಳಿಕೆ ಗಾಳಿ ಎಳೆಯುತ್ತಲೇ ಇದ್ದೆ. ತಲೆ ಹಗುರಾಗಿ ಹತ್ತಿಯಾಗಿತ್ತೇ ಹೊರತು, ನೋವು ನಿವಾರಣೆ ಮಾತ್ರ ಆಗುತ್ತಲೇ ಇರಲಿಲ್ಲ. ಇದ್ಯಾಕೋ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಅನುಮಾನ ಶುರುವಾಯಿತು. ಪಕ್ಕದಲ್ಲೇ ಸೋಫಾ ಮೇಲೆ ಒರಗಿ ನಿದ್ದೆ ಹೊಡೆಯುತ್ತಿದ್ದ ಪತಿಯನ್ನು ಎಬ್ಬಿಸಿದೆ. ‘ಹ್ಯಾಲೂಸಿನೇಶನ್ ಆಗ್ತಿದೆ’ ಎಂದರೆ, ‘ಅಂಥವೆಲ್ಲಾ ಭ್ರಮೆ ಹಚ್ಕೋಬೇಡ, ಕಣ್ಮುಚ್ಚಿ ಮಲಗೋ ಪ್ರಯತ್ನ ಮಾಡು’ ಎಂಬ ಸಲಹೆ ಬಂತು. ಅದೇ ತಾನೇ ನಾನೂ ಹೇಳ್ತಿದ್ದಿದ್ದು, ಮತ್ತೆ ಎಬ್ಬಿಸಿದೆ. ಅವರು ಹೋಗಿ ನರ್ಸನ್ನು, ಡ್ಯೂಟಿ ಡಾಕ್ಟರನ್ನು ಕರೆದು ಬಂದರು. 
 
ನೋವು ಕಡಿಮೆ ಆಗುತ್ತಿಲ್ಲ ಎಂದು ಹೇಳಿದ್ದರಿಂದ ಡಾಕ್ಟರು ‘ಎಂಟೋನಾಕ್ಸ್’ ಬದಲು ‘ಪೆಥಿಡೈನ್’ ಇಂಜೆಕ್ಷನ್ ಚುಚ್ಚಿಹೋದರು. ನಾನು ನಿಧಾನಕ್ಕೆ ನಿದ್ದೆ ಹೋದೆ. ಸ್ವಲ್ಪ ಹೊತ್ತಿಗೆ ಮತ್ತೆ ಎಚ್ಚರಾಯಿತು. ನೋವು ತಡೆಯಲಾರದಷ್ಟಾಗಿತ್ತು. ಚುಚ್ಚುಮದ್ದು ಏನೇನೂ ಸಹಾಯ ಮಾಡುತ್ತಿಲ್ಲ. ತಲೆ ಹಿಂದುಗಡೆ ಇದ್ದ ಮಾಸ್ಕ್ ಎಳೆದುಕೊಂಡು ‘ಎಂಟೋನಾಕ್ಸ್’ ಎಳೆಯತೊಡಗಿದೆ. 
 
ತಲೆಯಲ್ಲಿ ಮತ್ತೆ ಹೊಸ ಯಕ್ಷಗಾನದ ಧೀಂಗಣ ಶುರು. ಎಲ್ಲೋ ಬಾವಿಯೊಳಗಿನಿಂದ ಎಂಬಂತೆ ಮೊಳಗುವ ದನಿ ಬರುತ್ತಿದೆ. ಮನಸ್ಸೆಂಬುದಂತೂ ನಿರಂತರ ಬದಲಾಗುತ್ತಿರುವ ಪರದೆ. ತೆರೆಯ ಮೇಲೆ ಬಣ್ಣ, ಕುಣಿತ, ಬಳ್ಳಿ, ಮರ, ಬಾನು... ಎಲ್ಲವೂ ಗಿರಿ ಗಿರಿ ಬುಗುರಿ. ಅರೆಕ್ಷಣಕ್ಕೊಂದು, ಮರುಕ್ಷಣಕ್ಕೊಂದು ಪಟ ಬದಲಾಗುತ್ತಿದೆ. ಹಾರುವ, ತೇಲುವ, ಗಿರಕಿ ಹೊಡೆಯುವ, ಸುಳಿಯಲ್ಲಿ ಕಳೆದುಹೋಗುವ... ಮೂಲತಃ ಗುರುತ್ವದ, ನೆಲೆಯ ಹಂಗಿಲ್ಲದ ಚಿತ್ರಣಗಳೇ ತುಂಬಿದ ಭ್ರಮಾಲಹರಿ. 
 
ಈ ಮಧ್ಯೆ ಕೊಂಚ ಎಚ್ಚರವಿದ್ದ ಹೊತ್ತಿನಲ್ಲಿ ‘ನನಗೆ ಹ್ಯಾಲೂಸಿನೇಶನ್ ಆಗುತ್ತಿದೆ’ ಎಂಬ ಅರಿವಾಗಿತ್ತಲ್ಲ, ಆಗಲೇ ನಾನು ಹೆರಿಗೆ ಮುಗಿಸಿ ಮನೆಗೆ ಹೋದಮೇಲೆ ಈ ಬಗ್ಗೆ ಒಂದು ಲೇಖನ ಬರೆಯಬೇಕು ಎಂದು ತೀರ್ಮಾನಿಸಿದ್ದೆ. ಈಗ ಇತ್ತ ನನ್ನ ಭ್ರಮಾಲೋಕದಲ್ಲಿ ಆ ಲೇಖನ ಜೀವ ತಾಳಿ ಪ್ರಕಟಣೆಯನ್ನೂ ಕಂಡಿತ್ತು. ಲ್ಯಾಪ್‌ಟಾಪ್ ತೆರೆದು ಪ್ರಕಟಿತ ಲೇಖನ ಓದಲು ತೊಡಗುತ್ತಿದ್ದಂತೆಯೇ ಮೊದಲು ಒಂದೊಂದೇ ಸಾಲುಗಳು, ನಂತರ ಅಕ್ಷರಗಳು ಬಿಡಿಬಿಡಿಯಾಗಿ ಎದ್ದು ಬಂದು ನನ್ನನ್ನು ಸುತ್ತಿಕೊಳ್ಳತೊಡಗಿದವು. ಅಸಲಿಗೆ ನಾ ಬರೆಯದೇ ಇದ್ದ ಉದ್ದದ ಲೇಖನವನ್ನು ಒಂಚೂರೂ ಬಿಡದೇ ಬುಡದಿಂದ ತುದಿಯವರೆಗೆ ಓದಿ ಮುಗಿಸಿದೆ, ಹೆರಿಗೆ ಮಂಚದ ಮೇಲೆ ಮಲಗಿಕೊಂಡು... ಮಾಯಾ ಪರದೆ ಮೇಲೆ... ತೇಲುವ ಅಕ್ಷರಗಳ ಮೂಲಕ.
 
ಅದಾಗಲೇ ತುಂಬ ಸಮಯ ಸರಿದುಹೋಗಿತ್ತು. ಮಗು ಮಾತ್ರ ‘ನನ್ನ ಹುಟ್ಟು, ನಾನಿಟ್ಟ ಮುಹೂರ್ತ’ ಎಂಬಂತೆ ಭಾರಿ ನಿಧಾನಕ್ಕೆ ಬರುವ ಸೂಚನೆ ಕೊಟ್ಟುಕೊಂಡು ಒಳಗೇ ಕುಳಿತಿತ್ತು. ನೋವುಣ್ಣುತ್ತಿದ್ದ ನಾನು, ನನಗೆ ಬೇಜಾರಾಗದಿರಲಿ ಎಂದು ಜೊತೆಗೆ ಬಂದು ಕೂತು – ಕಾದೂ ಕಾದೂ ಬೋರು ಹೊಡೆಸಿಕೊಂಡಿದ್ದ ಪತಿ, ಮನೆಯಲ್ಲಿ ನಮ್ಮ ಕರೆಗೆ ಕಾಯುತ್ತ ಟೆನ್ಷನ್ ಮಾಡಿಕೊಂಡಿದ್ದ ಅಮ್ಮ–ಅಪ್ಪ, ಮಗರಾಯ ಎಲ್ಲರದ್ದೂ ಸಹನೆ ‘ಈಗಲೋ ಆಗಲೋ’ ಅನ್ನೋ ಸ್ಥಿತಿ ತಲುಪಿತ್ತು. ಈ ನಡುವೆ ಪೆಥಿಡೈನ್ ಇಂಜೆಕ್ಷನ್ ಪರಿಣಾಮಕಾರಿಯಾಗಿಲ್ಲ ಎಂದು ಬೆನ್ನುಹುರಿಗೆ ಎಪಿಡ್ಯುರಲ್ ಚುಚ್ಚಿಸಿಕೊಂಡಾಗಿತ್ತು. ಪರಿಣಾಮ ನೋವೇನೋ ತಿಳಿಯದಾಯ್ತು, ಜೊತೆಗೆ ಎರಡೂ ಕಾಲೂ ಮರಗಟ್ಟಿ ದಿಮ್ಮಿಯಂತಾಗಿದ್ದವು. 
 
ಮತ್ತೊಂದೆರಡು ತಾಸು ಇದೇ ರೀತಿ ಮುಂದುವರೆದವು. ಮೊದಲು ಆಗಾಗ ಬಂದು ನೋಡಿ ಹೋಗ್ತಾ ಇದ್ದ ಡಾಕ್ಟ್ರಮ್ಮ ಇಲ್ಲೇ ಕುಳಿತು ಕಾಯಲಾರಂಭಿಸಿದರು. ನರ್ಸುಗಳ ಶಿಫ್ಟ್ ಬದಲಾಗಿ ಬೇರೆಯವರು ಬಂದರು. ಮಕ್ಕಳ ತಜ್ಞ, ಜೂನಿಯರ್ ಡಾಕ್ಟರುಗಳು ಯಾರು ಯಾರೋ ಬಂದು ಜಮಾಯಿಸಿದರು. ಮಗು ಮಾತ್ರ ಹೊರಬರಲಿಲ್ಲ. ಬಸವಳಿದಿದ್ದ ನಾನು ಯಾವ ಮಾಯದಲ್ಲೋ ಕಣ್ಮುಚ್ಚಿದೆ.
 
ಅಂತೂ ಇಂತೂ ಹೆರಿಗೆಯಾಗಿ ಮಗು ನನ್ನ ಕೈಗೆ ಬಂತು. ಹಂಬಲಿಸಿ ಹಡೆದಿದ್ದ ಮಗು, ಆಗಲೇ ಅದಕ್ಕೆ ಹೆಸರಿಟ್ಟಾಗಿತ್ತು ನಾನು. ಮುದ್ದು ಮುದ್ದು ಕೈ, ಗುಂಡು ಗುಂಡು ಮೈ. ಎತ್ತಿಕೊಂಡು ನೆತ್ತಿ ನೇವರಿಸಿ, ಎದೆಗಪ್ಪಿಕೊಂಡು ಅಮೃತಪಾನ ಮಾಡಿಸಬೇಕು ಇನ್ನೇನು... ‘ಪುಶ್ ಮಾ’ ಎಂಬ ಡಾಕ್ಟರ ದಪ್ಪ ದನಿ ಕೇಳಿಸಿತು. 
 
ಕಣ್ಣು ಬಿಟ್ಟರೆ ಮತ್ತದೇ ನಿರಾಸೆಮಯ ವಾತಾವರಣ. ಹುಟ್ಟಿದ್ದು ಮಗುವಲ್ಲ, ಮತ್ತೊಂದು ಭ್ರಮೆ! ನಂಗ್ಯಾಕೋ ಅದೇ ಹೆಚ್ಚು ಆಪ್ಯಾಯಮಾನವೆನಿಸಿ ಮತ್ತೆ ಕಣ್ಣು ಮುಚ್ಚಿದೆ. ನಂತರದ ಅರ್ಧ ಮುಕ್ಕಾಲು ತಾಸು ಪರಮ ದುಃಸ್ವಪ್ನ. ಸಂಪೂರ್ಣ ನಿಶ್ಶಕ್ತಳಾಗಿದ್ದ ನಾನು, ನಾರ್ಮಲ್ ಹೆರಿಗೆಯನ್ನೇ ಮಾಡಿಸಬೇಕೆಂಬ ಡಾಕ್ಟರ್, ಅವರ ಸಲಹೆಯಂತೆ ನನ್ನ ಹೊಟ್ಟೆಯನ್ನು ಒತ್ತಿ ಒತ್ತಿ ಸಹಾಯಕ್ಕೆ ತೊಡಗಿದ ಸಹಾಯಕರು... ಒಳ್ಳೆ ಯುದ್ಧಭೂಮಿಯ ವಾತಾವರಣ. ಗಾಂಧಾರಿ ನೂರು ಮಕ್ಕಳಿದ್ದ ಭ್ರೂಣವನ್ನು ಒಬ್ಬಳೇ ಗುದ್ದಿ ಗುದ್ದಿ ಹೊರತಂದಿದ್ದಳಂತೆ, ನನಗೆ ನಾಲ್ಕಾರು ಗುದ್ದಾಳುಗಳು. ಇಂಥ ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿಯಲ್ಲಿ ನನ್ನ ಮನಸ್ಸು ಘಾಸಿಯಾಗದಂತೆ ರಕ್ಷಾಕವಚವಾಗಿದ್ದು ದೇಹದಲ್ಲಿ ಅಳಿದುಳಿದ ಎಂಟೋನಾಕ್ಸಿನ ಭ್ರಾಮಕ ಪ್ರಭಾವ. 
 
ಹೆರಿಗೆ ಮುಗಿಸಿ ಹೋಗುವ ಮುನ್ನ ಡಾಕ್ಟರ ಬಳಿ ಈ ಬಗ್ಗೆ ಹೇಳಿದೆ. ಓವರ್ ಡೋಸ್ ಆಗಿರಬೇಕು ಎಂದರು ಅವರು. ‘ಏನೇನು ಹಲುಬಿದೆನೋ ಏನೋ’ ಎಂದು ಹಳಹಳಿಸಿದೆ. ‘ನೀವು ಪರ್ವಾಗಿಲ್ಲ, ಅರ್ಥ ಆಗೋ ಥರ ಆಡಿದ್ರಿ, ಕೆಲವರು ನಾನ್ಸೆನ್ಸ್ ಮಾತಾಡ್ತಾರೆ’ ಎಂದು ನಕ್ಕರು ಅವರು. ಹಲವು ವರ್ಷಗಳ ಹಿಂದೆ ಮೊದಲ ಹೆರಿಗೆಯ ಸಮಯದಲ್ಲಿ ಕೂಡ ನಾನು ಇದೇ ನೈಟ್ರಸ್ ಆಕ್ಸೈಡ್ ಮಿಶ್ರಣ ಬಳಸಿದ್ದೆ. ಏನೇನೂ ತೊಂದರೆ ಆಗಿರಲಿಲ್ಲ. ಕಡಿಮೆ ಅವಧಿಗೆ, ಕಡಿಮೆ ಪ್ರಮಾಣದಲ್ಲಿ ಬಳಸಿದ್ದೆನಾದ್ದರಿಂದ ಭ್ರಮೆಯಿಂದ ಬಚಾವಾಗಿದ್ದೆ ಅನಿಸುತ್ತದೆ. 
 
***
ಹೆರಿಗೆ ಸಮಯದ ಎಲ್ಲ ಯಾತನೆಗಳನ್ನು ನೆನಪಿನ ಅಂಗಳದಿಂದ ದೂರ ಗುಡಿಸಿ ಒಗೆದಿರುವೆನಾದರೂ ಈ ಭ್ರಮಾಲೋಕದ ಬಣ್ಣಗಳು ಆಗಾಗ ಬಂದು ರಂಗೋಲಿ ಹಾಕುತ್ತವೆ. ನನಗೇನೂ ಅಭ್ಯಂತರವಿಲ್ಲ. ಮಗಳ ಜೊತೆ ಹೋಗುವಾಗ ಹಾದಿಯಲ್ಲಿ, ಪಾರ್ಕಿನಲ್ಲಿ ಸಿಕ್ಕವರೆಲ್ಲ ‘ನಿಮ್ಮ ಮಗಳು ಚೈನೀಸ್\ಜಪಾನೀಸ್ ಥರ ಇದ್ದಾಳೆ’ ಎಂದಾಗ, ಪತಿರಾಯರು ಅನುಮಾನಮಿಶ್ರಿತ ದನಿಯಲ್ಲಿ ‘ಇವಳೇನಾದ್ರೂ ಆಸ್ಪತ್ರೆಯಲ್ಲಿ ಬದಲಾಗಿ ಹೋಗಿರಬಹುದಾ’ ಎಂದು ಛೇಡಿಸುವಾಗ ನಾನು ಕಣ್ಣು ಮುಚ್ಚಿಕೊಂಡು ಮತ್ತದೇ ಭ್ರಾಮಕ ಚಿಪ್ಪಿನೊಳಗೆ ತೂರಿಕೊಳ್ಳುತ್ತೇನೆ. ಯಾರೋ ಮಾತನಾಡುತ್ತಿದ್ದಾರೆ, ನನಗೆ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಏನೇನೋ ಬೆರಳು ಮಾಡಿ ತೋರಿಸುತ್ತಿದ್ದಾರೆ, ಸರಿಯಾಗಿ ಕಾಣಿಸುತ್ತಿಲ್ಲ. ಪುಟ್ಟ ಪುಟ್ಟವೆರಡು ಕೈಗಳು ಬಂದು ಬಿಗಿದಪ್ಪುತ್ತವೆ. ಆಹಾ! ಈ ಸ್ಪರ್ಶ ಸುಸ್ಪಷ್ಟ... ಭ್ರಮೆಯಲ್ಲೂ... ಬದುಕಲ್ಲೂ... ನಿದ್ದೆಯಲ್ಲೂ... ನಿಜದಲ್ಲೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT