ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೃದಯರ ಸ್ಪಂದನ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸಮಕಾಲೀನ ಬರಹ
ಸಮಕಾಲೀನ ಸಂಗತಿಗಳನ್ನು ಕುರಿತು ನಾನು ಇತ್ತೀಚೆಗೆ ಓದಿದ ಅತ್ಯುತ್ತಮ ಗಂಭೀರ ಲೇಖನಗಳಲ್ಲಿ ಒಂದು ‘ಬಿಗ್ ಬಾಸ್’ ರಿಯಾಲಿಟಿ ಷೋ ಕುರಿತ ಲೇಖನ (ಜ. 29. ಲೇ: ರಘುನಾಥ ಚ.ಹ.). ಬಹು ಜನಪ್ರಿಯವಾದ ಈ ಷೋನ ಸ್ವರೂಪ, ಅಲ್ಲಿ ಸ್ಪರ್ಧಿಗಳು (ಅನಿವಾರ್ಯವಾಗಿ) ಮಾಡುವ ಟಾಸ್ಕ್ ಗಳು, ಗೆಲ್ಲಲು ಪ್ರತಿಯೊಬ್ಬರೂ ಅನುಸರಿಸುವ ತಂತ್ರಗಳು, ಇತ್ಯಾದಿಗಳನ್ನು ಈ ಲೇಖನ ಆಳವಾಗಿ ವಿಶ್ಲೇಷಿಸುತ್ತದೆ.  
 
ಇದು ‘ನಮ್ಮ ವಿಕಾರಗಳನ್ನು ಮುಖಕ್ಕೆ ಹಿಡಿಯುವಂತೆ ರೂಪುಗೊಂಡಿರುವ ಕಾರ್ಯಕ್ರಮ’ ಎಂದು ವ್ಯಾಖ್ಯಾನಿಸಿರುವುದು ತುಂಬಾ ಅರ್ಥಪೂರ್ಣವಾಗಿದೆ. ಈ ಲೇಖನದಲ್ಲಿ ಇನ್ನೂ ಮುಖ್ಯವಾದ ಸಂಗತಿಯೆಂದರೆ, ಸಮಕಾಲೀನ ಭಾರತೀಯ ರಾಜಕೀಯ–ಸಾಮಾಜಿಕ ವ್ಯವಸ್ಥೆ ಮತ್ತು ಈ ಬಿಗ್‍ ಬಾಸ್ ಕಾರ್ಯಕ್ರಮದ ಚೌಕಟ್ಟು – ಇವೆರಡನ್ನೂ ಅಕ್ಕಪಕ್ಕ ಇಟ್ಟು ಇವೆರಡಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ ಎಂದು ಲೇಖಕರು ಕೊಡುವ ಅಪರೂಪದ ಒಳನೋಟ.  
–ಸಿ.ಎನ್. ರಾಮಚಂದ್ರನ್, ಬೆಂಗಳೂರು
 
***
ಜನಪರ ಕಾವ್ಯದ ಜರೂರು
ಡಾ. ಸಿದ್ಧಲಿಂಗಯ್ಯನವರ ‘ಅರಿವಿನ ಹಣತೆ’ (ಜ. 22) ಕವಿತೆ ಓದಿದಾಗ ಸುಮಾರು ನಾಲ್ಕು ದಶಕಗಳಷ್ಟು ಹಿಂದೆ ಹೋದ ಅನುಭವವಾಯಿತು. ಅದೇ ಆಶಯ, ಅದೇ ಲಯ, ಅದೇ ಸರಳತೆ ಉಳಿಸಿಕೊಂಡ ಕವಿಯ ಪ್ರಸ್ತುತ ಕವನ, ಇಂದಿನ ಅನೇಕ ಕವಿಗಳಿಗೆ ಮಾರ್ಗದರ್ಶಕವಾಗಿದೆ. ಅತಿ ರೂಪಕ, ಸಂಕೀರ್ಣತೆಗಳಿಂದ ಓದುಗರಿಂದ ಬಹುದೂರ ಸರಿಯುತ್ತಿರುವ ಇಂದಿನ ಕನ್ನಡ ಕಾವ್ಯ, ಮತ್ತೆ ಜನಪರವಾಗಬೇಕಾದ ಅನಿವಾರ್ಯ ಪ್ರಸಂಗಕ್ಕೆ ಹಾತೊರೆಯುತ್ತಿದೆ.
 
ನಿಗಿನಿಗಿ ಕೆಂಡದಂತೆ ಉರಿಯುತ್ತಿರುವ ನಮ್ಮ ಸಾಮಾಜಿಕ ಅಸಮಾನತೆಗೆ ಹೇಗೆ ಸಿದ್ಧಲಿಂಗಯ್ಯನವರ ಕಾವ್ಯ ಪ್ರತಿರೋಧದ ಅಸ್ತ್ರವಾಗಿತ್ತು ಎಂಬುದು ನಮಗೆ ತಿಳಿದಿದೆ. ಇಂದಿನ ಕನ್ನಡ ಕಾವ್ಯವೂ ಅಂತರಂಗದ ಆಸ್ಪಾದನೆಯಾಗುವುದರ ಜೊತೆಗೆ, ಸಾಮಾಜಿಕ ಬಿಕ್ಕಟ್ಟಿಗೆ ಅಸ್ತ್ರವಾಗುತ್ತ, ತನ್ನ ಸರಳ ಅಭಿವ್ಯಕ್ತಿ ಮೂಲಕ ಜನಪರವಾಗಿ ನಿಲ್ಲಬೇಕಾದ ಜರೂರಿದೆ. 
–ಅಂಬಾದಾಸ ವಡೆ, ಬಾಗಲಕೋಟ
 
***
ಕಾವ್ಯರೂಪಿ ಚಿತ್ರಪಟ
ಒಂದು ಛಾಯಾಚಿತ್ರ ಕಾವ್ಯದ ಅನುಭವ ನೀಡಬಹುದು ಎನ್ನುವುದಕ್ಕೆ ಮಹೇಂದ್ರಸಿಂಹ ಅವರ ಚಿತ್ರಪಟಗಳು ಉದಾಹರಣೆಯಂತಿವೆ. ‘ಭೋಜನ ಶಾಲೆ ಯಾವ ಕಡೆ?’ ಎನ್ನುವ ಅಡಿ ಟಿಪ್ಪಣಿಯ ಛಾಯಾಚಿತ್ರವಂತೂ ತನ್ನ ಅಪಾರ ಸಾಧ್ಯತೆಗಳಿಂದ ಮನಸೆಳೆಯಿತು.
–ಬೀರಪ್ಪ ಡಿ. ಡಂಬಳಿ, ಕೋಹಳ್ಳಿ, ಅಥಣಿ
 
***
ರೋಚಕ ಜುಗಲಬಂದಿ
ಕೃಪಾಕರ ಸೇನಾನಿ ಅವರ ಕಾಡಿನ ಕಥೆಗಳ ಭಾವತೀವ್ರತೆಯಲ್ಲಿ ಓದುವುದು ಮತ್ತು ನೋಡುವುದು ಕೂಡಿಯೇ ಘಟಿಸಿ ವಿಶಿಷ್ಟ ಅನುಭೂತಿಯಿಂದ ಮನಸ್ಸು ತೋಯ್ದು ತೊಪ್ಪಡಿಯಾಗಿರುತ್ತದೆ. ಜ. 22ರ ‘ಹುಲುಮಾನವರು ಮತ್ತು ಕುನ್ಮಾರಿ ದೇವರು’ ಬರಹವಂತೂ ರೋಚಕವಾಗಿತ್ತು.
–ಆನಂದ ರಾಮತೀರ್ಥ, ಜಮಖಂಡಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT