ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಸೆಲೆ

ಕವನ
Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
-ನಂದಿನಿ ವಿಶ್ವನಾಥ್ ಹೆದ್ದುರ್ಗ
 
**
ಗಂಡ ಹೊರಡುವುದನ್ನೇ ಕಾದು
ಅದೇನೋ ನೆನೆದು ನಸುನಕ್ಕು
ಹೊಸ ಹುರುಪು ಎದೆಯೊಳಗೆ ಹೊಕ್ಕು
ಕೆನ್ನೆ ಕೆಂಪು...!
 
ಮುಗಿಸಿ ಮನೆಗೆಲಸ ಅತಿ ಬೇಗ
ಎದೆಯೊಳಗೆ ಸವಿ ಸವಿ ಆವೇಗ
ಮುಂಬಾಗಿಲಿಗೆ ಬೀಗ ಬಿಗಿದು
ಅಟ್ಟದಲ್ಲಿದ್ದ ಹಳೆ ಪೆಟ್ಟಿಗೆ ತೆಗೆದು
 
ಮೆದುವಾಗಿ ಅದನ್ನೊಮ್ಮೆ ಸವರಿ
ಬಿಚ್ಚಿದಳು ಆ ನಲವತ್ತರ ಸುಂದರಿ
ಒಪ್ಪವಾಗಿಟ್ಟ ಒಂದೊಂದನೇ ತೆಗೆದು
ನೆನಪು ಸಿಹಿಧಾರೆಯ ನೆರೆ ಹರಿದು
 
ಗೆಳತಿಗೆ ಗುಟ್ಟಾಗಿ ಬರೆದ 
ತನ್ನ ‘ಪ್ರಥಮ ಪ್ರೇಮ’ವ ಕುರಿತ
ಪತ್ರಗಳ ಕಟ್ಟು
 
ಅವನು ನೀಡಿದ್ದ 
ಆ ಕೆಂಗುಲಾಬಿಯ ಚಿತ್ರ
ಮತ್ತೆ ಹಾಗೇ ಪುಸ್ತಕದಲ್ಲಿಟ್ಟು
 
ಮೂರನೆ ಇಯತ್ತೆಯಲ್ಲಿ 
ಸೂಜಿಮಲ್ಲಿಗೆ ಕೊಟ್ಟು 
‘ಚಂದ ಇದ್ದೀಯ’ ಎಂದ ಸಿಂಬಳದ ಹುಡುಗ
ಅದರ ಆಹಾ ಪರಿಮಳ
ಆಘ್ರಾಣಿಸಿ
 
ತಮ್ಮ ಕೊಡಿಸಿದ ಕ್ಯಾಂಡಿಯ 
ಕಡ್ಡಿ ಇತ್ತ ಇಟ್ಟು
ಅಣ್ಣನ ಅರಳಿ ಗಣಪನಿಗೆ
ಕೈಮುಗಿದು
ಮೈನೆರೆದಾಗ 
ಅಜ್ಜಿ ಕೊಟ್ಟ ಹಳೇ ಸೀರೆಯ 
ಮೈಸವರಿ
 
ಕಣ್ತುಂಬಿ, ಸೆರೆ ಬಿಗಿದು...
 
ವೇಳೆಯಾಯಿತೇನೋ 
ಬಂದಾರು ಎನಿಸಿ 
ಪೆಟ್ಟಿಗೆಯ ಮುಚ್ಚಿ ಮುತ್ತಿಟ್ಟು,
ಮೇಲೆ ಹಳೇ ಪಾತ್ರೆ ಹೇರಿ
 
ಹುರುಪಿಂದ 
ಮಹಡಿ ಇಳಿದಳವಳು 
ಬಂದಂತೆ 
ಮತ್ತೆ ಹರೆಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT