ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟದ ಆಚೆಗೆ ಉಳಿಯುವ ನೈರೋಬಿ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
-ಪ್ರಜ್ಞಾ ಶಾಸ್ತ್ರಿ
 
**
ಅವಳ ಹೆಸರು ಮೇರಿ ಕಲುಂಡೆ. ವೃತ್ತಿ ಮನೆಗೆಲಸದ ಸಹಾಯಕಿ. ಕಲುಂಡೆ ಅವಳಜ್ಜಿಯ ಹೆಸರು. ಅಜ್ಜಿ ಹೆಸರು ಯಾಕೆ ಅಂತ ಕೇಳಿದರೆ, ‘ನನ್ನ ಅಜ್ಜಿ ಯಾವಾಗಲೂ ನನ್ನೊಂದಿಗೆ ಇದ್ದು ರಕ್ಷಣೆ ಮಾಡುತ್ತಾಳೆ. ನಮ್ಮ ಕಾಂಬಾ ಸಮುದಾಯದಲ್ಲಿ ತೀರಿಹೋದ ಅಜ್ಜ ಅಜ್ಜಿಯರ ಹೆಸರುಗಳನ್ನ ಇಟ್ಕೋತೀವಿ. ಕ್ರಿಶ್ಚಿಯನ್ ಹೆಸರಿನ ಜೊತೆಗೆ ಅದನ್ನೂ ಸೇರಿಸ್ತೀವಿ’ ಎನ್ನುತ್ತಾಳೆ. ಬೇರೆ ಪಂಗಡಗಳಲ್ಲೂ ಹೀಗೆಯೇ ಇದೆಯೆ ಎಂದು ಕೇಳಿದರೆ – ‘ಇಲ್ಲ, ಕೆಲವೊಂದು ಪಂಗಡಗಳಲ್ಲಿ ತೀರಿಹೋದವರ ಹೆಸರುಗಳನ್ನು ಇಟ್ಟುಕೊಳ್ಳುವುದಿಲ್ಲ’ ಎನ್ನುತ್ತಾಳೆ. ಹಿಂದಿನ ಆಚರಣೆಗಳ ಬಗೆಗೆ ಕೆದಕಿದರೆ ‘ಅಯ್ಯೋ ನನಗೆ ನೆನಪಿಲ್ಲ.
 
ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಹಳ್ಳಿ ಬಿಟ್ಟು ನೈರೋಬಿಗೆ ಬಂದೆ’ ಎಂದು ಕಿಸಕ್ಕನೆ ನಗುತ್ತಾಳೆ. ದಿನವೂ ಬೆಳಿಗ್ಗೆ ಏಳರ ಹೊತ್ತಿಗೆ ಅವಳು ವಾಸಿಸುವ ಕಾಂಗೆಮಿ ಸ್ಲಮ್ಮಿನಿಂದ ಹೊರಟು ಎರಡೆರಡು ಮಟಾಟು ಬದಲಾಯಿಸಿ ಕೆಲಸಕ್ಕೆ ಹೋಗುತ್ತಾಳೆ. ಸಾಯಂಕಾಲ ಏಳರ ಹೊತ್ತಿಗೆ ಮರಳಿ ಮನೆಗೆ. ಅವಳ ಗಂಡ ಅವಳಿರುವ ಸ್ಲಮ್ಮಿನಲ್ಲಿಯೇ ಒಂದು ಚಿಕ್ಕ ಟಿನ್ ಛಾವಣಿಯ ಮೆಸ್ಸಿನ ಯಜಮಾನ. ಇಲ್ಲೇ ಇದ್ದರೆ ಸಹವಾಸ ದೋಷದಿಂದ ಹಾಳಾಗಿ ಹೋಗುತ್ತಾನೆ ಎಂದು ದೊಡ್ಡ ಮಗನನ್ನು ಹಳ್ಳಿಯಲ್ಲಿರುವ ಬೋರ್ಡಿಂಗ್ ಶಾಲೆಗೆ ಹಾಕಿದ್ದಾಳೆ. ಅವನ ಸುಭದ್ರ ಭವಿಷ್ಯದ ಕನಸನ್ನು ಎದೆಗೇರಿಸಿಕೊಂಡು ಬದುಕುತ್ತಿರುವ ಮೇರಿ ಮತ್ತು ಅವಳಂತಹ ಎಷ್ಟೋ ಮನೆಗೆಲಸದ ಹೆಣ್ಣುಗಳು ನೈರೋಬಿಯ ದಿನನಿತ್ಯದ ಬದುಕಿನ ಒಂದು ಚಿಕ್ಕ ಭಾಗ ಅಷ್ಟೇ. ನೈರೋಬಿ ಕೀನ್ಯಾದ ರಾಜಧಾನಿ. 
 
(ನೈರೋಬಿ ಉದ್ಯಾನದಲ್ಲಿ ಮರಕ್ಕೆ ಕಟ್ಟಿರುವ ಜೇನುಪೆಟ್ಟಿಗೆ)
 
ನೀವು ಕೀನ್ಯಾಕ್ಕೆ ಪ್ರವಾಸಿಗರಾಗಿ ಬರುತ್ತೀರಾದರೆ ನಿಮ್ಮ ಕಣ್ಣೆದುರಿಗೆ ತರತರದ ಮಣಿಗಳ ಸರ ತೊಟ್ಟುಕೊಂಡು, ಕೆಂಪು ಚೌಕಳಿ ಕಂಬಳಿ ಹೊದ್ದುಕೊಂಡು, ಕೈಯಲ್ಲಿ ಈಟಿ ಮತ್ತು ಗುರಾಣಿ ಹಿಡಿದುಕೊಂಡು ಬೇಟೆಗೆ ಹೊರಡುವ, ಇನ್ನೂವರೆಗೂ ತಮ್ಮ ಮೂಲ ಸಂಸ್ಕೃತಿಯನ್ನು ಅನುಸರಿಸಿಕೊಂಡೇ ಬಂದಿರುವ, ಗೋಧೂಳಿಯ ಹೊತ್ತಿಗೆ ಕೆಂಪು ಸೂರ್ಯನ ಹಿನ್ನೆಲೆಯಲ್ಲಿ ದನ ಓಡಿಸಿಕೊಂಡು ದೂಳೆಬ್ಬಿಸುತ್ತ ಬರುವ ಮಸಾಯಿ ಗೋವಳಿಗರ ವರ್ಣರಂಜಿತ  ಚಿತ್ರ ಇರುತ್ತದೆ. 
 
ಕಣ್ಣು ಹಾಯಿಸಿದಷ್ಟಕ್ಕೂ ಕಾಣುವ ಹುಲ್ಲುಗಾವಲು, ರಸ್ತೆಗೆ ಅಡ್ಡ ಬರುವ ಝೀಬ್ರಾ, ಜಿರಾಫೆ, ಆನೆಗಳ ಹಿಂಡು, ಹುಲ್ಲಿನ ನಡುವೆ ಅಡಗಿಕೊಂಡು ಹೊಂಚುಹಾಕುವ ಸಿಂಹ, ಚಿರತೆಗಳು ಮತ್ತು  ಹಿಂಡು ಹಿಂಡು ವನ್ಯ ಜೀವಿಗಳು; ಅದೂ ಮೈ ಸವರಿ ಬಿಡೋಣ ಎನ್ನುವಷ್ಟು ಹತ್ತಿರದಲ್ಲಿ. ಪ್ರತಿ ವರ್ಷ ಜುಲೈನಲ್ಲಿ ಹಿಂಬದಿಯಿಂದ ದನದಂತೆ ಕಾಣುವ ವಿಚಿತ್ರ ಮುಖಗಳ ಕಾಡು ಪ್ರಾಣಿಗಳು ಹಿಂಡು ಹಿಂಡಾಗಿ ತಾಂಜಾನಿಯಾ ಮತ್ತು ಕೀನ್ಯಾದ ಗಡಿಯಲ್ಲಿರುವ ನದಿಗಳನ್ನು ದಾಟಿ ತಾಂಜಾನಿಯ ಕಡೆಯಿಂದ ಕೀನ್ಯಾದ ಕಡೆ ವಲಸೆ ಬರುತ್ತವೆ. ಈ ಬದಿಯ ಹುಲ್ಲು ಕಬಳಿಸಿ ಹಸಿವು ತೀರಿದ ಬಳಿಕ ಮತ್ತೆ ನದಿ ದಾಟಿ ತಾಂಜಾನಿಯದ ಬದಿಗೆ ಹೋಗುತ್ತವೆ. ಒಂದೆರಡಲ್ಲ,  ಲಕ್ಷಗಟ್ಟಲೆ ಪ್ರಾಣಿಗಳು. ಇದು ಎರಡು–ಮೂರು ತಿಂಗಳುಗಳವರೆಗೆ ನಡೆಯುತ್ತಿರುತ್ತದೆ. ನದಿ ದಾಟುವಾಗ ಹಸಿದ ಮೊಸಳೆಗಳ ಬಾಯಿಗೆ ಸಿಕ್ಕರಂತೂ ಮುಗಿಯಿತು. ಪ್ರಾಣದಾಸೆ ತೊರೆದು ನದಿ ದಾಟುವ ಈ ಪ್ರಾಣಿಗಳ ಪರದಾಟವನ್ನು ನೋಡಲು ಆ ಸೀಸನ್ನಿನಲ್ಲಿ ಜನವೋ ಜನ! ಕೀನ್ಯಾಕ್ಕೆ ಬರುವ ಪ್ರವಾಸಿಗರಿಗೆ ‘ಮಸಾಯಿ ಮಾರ ಅಭಯಾರಣ್ಯ’ ಬಹು ದೊಡ್ಡ ಆಕರ್ಷಣೆ. ಇದು ಜಗತ್ತಿನ ಎಲ್ಲ ವನ್ಯಜೀವಿ ಛಾಯಾಚಿತ್ರಕಾರರ ಸ್ವರ್ಗ. 
 
(ನೈರೋಬಿ ಉದ್ಯಾನದಲ್ಲಿ ಮರಕ್ಕೆ ಕಟ್ಟಿರುವ ಜೇನುಪೆಟ್ಟಿಗೆ)
 
ಕೀನ್ಯಾ ಪೂರ್ವ ಆಫ್ರಿಕಾದ ಪ್ರಜಾಪ್ರಭುತ್ವವಾದಿ ದೇಶಗಳಲ್ಲಿ ಒಂದು. ಇಥಿಯೋಪಿಯಾ, ದಕ್ಷಿಣ ಸೂಡಾನ್, ಉಗಾಂಡ, ತಾಂಜಾನಿಯಾ, ಸೋಮಾಲಿಯಾ ಮತ್ತು ಪೂರ್ವದ ಒಂದು ಭಾಗಕ್ಕೆ ಹಿಂದೂ ಮಹಾಸಾಗರವನ್ನು ಒಳಗೊಂಡ ಈ ದೇಶಕ್ಕೆ ಸುಮಾರು 68 ವರ್ಷಗಳ ವಸಾಹತುಶಾಹಿ ಇತಿಹಾಸವಿದೆ. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಆರಂಭಗೊಂಡ ಬ್ರಿಟಿಷ್ ಪ್ರಭುತ್ವವು 1963ರಲ್ಲಿ ಕೊನೆಗೊಂಡಿತ್ತು. ಅದಕ್ಕೂ ಮೊದಲು ಕೀನ್ಯಾ ಮತ್ತು ತಾಂಜಾನಿಯಾದ ಪೂರ್ವತೀರವನ್ನು ಆಕ್ರಮಿಸಿಕೊಂಡ ಅರಬ್ಬೀ ಸುಲ್ತಾನರಿದ್ದರು. ಅರಬ್ಬರ ಕಾಲಕ್ಕೆ ಕೀನ್ಯಾದ ಮಾಲಿಂದಿ, ಮೊಂಬಾಸ ಮತ್ತು ತಾಂಜಾನಿಯಕ್ಕೆ ಸೇರಿದ ಜಾಂಜೀಬಾರ್ ನಗರಗಳು ತೀರ ಪ್ರದೇಶದ ಪ್ರಮುಖ ಕೇಂದ್ರಗಳಾಗಿದ್ದವು. ಇಲ್ಲಿಂದಲೇ ಗುಲಾಮರ ರವಾನೆಯಾಗುತ್ತಿತ್ತು. 1963ರಲ್ಲಿ ಬ್ರಿಟಿಷ್ ಅಧಿಪತ್ಯ ಕೊನೆಗೊಂಡ ನಂತರ ಕೀನ್ಯಾದಲ್ಲಿ ಬಹಳ ವರ್ಷಗಳವರೆಗೆ ಏಕಪಕ್ಷೀಯ ಸರಕಾರವಿತ್ತು. ಈಗ ಬಹುಪಕ್ಷೀಯ ರಾಜಕಾರಣವಿದ್ದರೂ ಅದು ಹಣ,  ಅಧಿಕಾರ ಮತ್ತು ಗೂಂಡಾಗಿರಿಯ ಕೈಚಳಕ ಗೊತ್ತಿದ್ದವರ  ರಾಜಕಾರಣವಾಗಿದೆ. ಸದ್ಯಕ್ಕೆ 2017ರ ಆಗಸ್ಟಿನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗಾಗಿ ಪೈಪೋಟಿ ನಡೆಯುತ್ತಿದೆ. 
 
ಮಸಾಯಿ ಮಾರವಲ್ಲದೇ ಇಲ್ಲಿ ಇನ್ನೂ ಅನೇಕ ತಾಣಗಳಿವೆ. ಮನುಕುಲದ ಮೂಲ ಮಾನವರು ಬದುಕಿದ್ದರು ಎನ್ನಲಾಗುವ ಪೂರ್ವ ಆಫ್ರಿಕಾದ ಸೀಳುಕಣಿವೆಯ ಒಂದು ಭಾಗ ಕೀನ್ಯಾದಲ್ಲಿದೆ. ಈ ಸೀಳುಕಣಿವೆಯು ಉತ್ತರದ ಇಥಿಯೋಪಿಯಾದಿಂದ ಆರಂಭಗೊಂಡು ಕೀನ್ಯಾ, ತಾಂಜಾನಿಯಾ ದಾಟಿ ಮೊಝಾಂಬಿಕ್‌ವರೆಗೆ ಹಬ್ಬಿದೆ. ಎಷ್ಟೋ ಸಾವಿರ ವರ್ಷಗಳಿಂದ ಭೂಮಿಯ ಹೊರಪದರ ಕುಸಿಯುತ್ತ ಬಂದು ಸೀಳುಕಣಿವೆಯಾಗಿದೆ. ಮುಂದೊಂದು ದಿನ ಈ ಕಣಿವೆ ಪೂರ್ತಿ ಬಿರಿದು, ಒಳಗೆ ಸಮುದ್ರ ಸೇರಿಕೊಂಡು ಸೋಮಾಲಿಯಾದ ಭಾಗ ಬೇರ್ಪಡಬಹುದು ಎನ್ನಲಾಗುತ್ತದೆ.  
 
ಕಣಿವೆಯುದ್ದಕ್ಕೂ ಉಪ್ಪುನೀರಿನ ಸರೋವರಗಳೂ ಬಿಸಿ ನೀರಿನ ಬುಗ್ಗೆಗಳೂ ಮತ್ತು ಜ್ವಾಲಾಮುಖಿ ಪರ್ವತಗಳೂ ರೂಪುಗೊಂಡಿವೆ. ಕೀನ್ಯಾದಲ್ಲಿರುವ ಕೀನ್ಯಾ ಪರ್ವತ, ತಾಂಜಾನಿಯಾದ ಕಿಲಿಮಂಜಾರೋ, ಮೇರು – ಎಲ್ಲವೂ ಸೀಳುಕಣಿವೆಯ ಜ್ವಾಲಾಮುಖಿ ಪರ್ವತಗಳೇ. ಉಗಾಂಡ ಮತ್ತು ಕೀನ್ಯಾ ಎರಡೂ ದೇಶಗಳಲ್ಲೂ ಪಸರಿಸಿರುವ ಹಾಗೂ ನೈಲ್ ನದಿಯ ಉಗಮಸ್ಥಾನವಾದ ವಿಕ್ಟೋರಿಯಾ ಸರೋವರವನ್ನು ಬಿಟ್ಟು ಉಳಿದೆಲ್ಲಾ ಸರೋವರಗಳೂ ಸೀಳುಕಣಿವೆಯ ಉಪ್ಪುನೀರಿನ ಸರೋವರಗಳೇ. ತುರಕಾನ ಸರೋವರದ ಬಳಿ ಮೂಲ ಮಾನವರ ಪಳೆಯುಳಿಕೆಗಳು ದೊರೆತಿವೆ. ಅದು ವಾಯುವ್ಯ ಕೀನ್ಯಾದಲ್ಲಿದೆ. ನೈವಾಶ ಸರೋವರವು ಬಗೆಬಗೆಯ ಹಕ್ಕಿಗಳಿಗೆ ಆಶ್ರಯತಾಣವಾಗಿದೆ. ಬಗೋರಿಯಾ ಮತ್ತು ಬರಿಂಗೋ ಸರೋವರಗಳಲ್ಲಿ ಮನಮೋಹಕ ಫ್ಲೆಮಿಂಗೋಗಳನ್ನು ವೀಕ್ಷಿಸಬಹುದು. 
 
(ಬಗೋರಿಯಾ ಮತ್ತು ಬರಿಂಗೋ ಸರೋವರಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಫ್ಲೆಮಿಂಗೋ ಪಕ್ಷಿಗಳು)
 
ಮಸಾಯಿ ಪಂಗಡವಲ್ಲದೇ ಇನ್ನೂ 42 ಬಗೆಯ ಬುಡಕಟ್ಟುಗಳು ಇಲ್ಲಿ ವಾಸಿಸುತ್ತಿವೆ. ಇಲ್ಲಿನ ಬುಡಕಟ್ಟುಗಳ ಮೂಲ ಹುಡುಕಲು ಹೋದರೆ ಒಂದು ಶುದ್ಧವಾದ, ಬೆರಕೆಗೊಳ್ಳದ ಮಾದರಿ ಸಿಕ್ಕುವುದು ಕಷ್ಟ. ಕೆಲವು ಸಂಪ್ರದಾಯಗಳು ಬೇರೆ  ಪಂಗಡಗಳಲ್ಲೂ ಕಂಡುಬರುತ್ತವೆ. ಕೊಡುಕೊಳ್ಳುವಿಕೆ ನಡೆದಿರುತ್ತದೆ. ಸಾಕಷ್ಟು ಬೆರಕೆ ಆಗಿದೆ. ಹೆಚ್ಚಿನವರು ಈಗಿನ ಉಗಾಂಡ, ಕಾಂಗೋ, ಸುಡಾನ್, ಇಥಿಯೋಪಿಯ ಇರುವ ದಿಕ್ಕುಗಳಿಂದ  ತಮ್ಮ ಪಶುಗಳಿಗೆ ಹುಲ್ಲು, ನೀರು ಆಶ್ರಯ ಹುಡುಕುತ್ತ ವಲಸೆ ಬಂದವರು. ಈಗ ಹೆಚ್ಚುಕಮ್ಮಿ ಎಲ್ಲರೂ ಕ್ರೈಸ್ತರಾಗಿದ್ದರೂ ಪ್ರತಿಯೊಂದು ಬುಡಕಟ್ಟಿಗೂ ಅದರದ್ದೇ ಆದ ಭಾಷೆ ಮತ್ತು ಅನನ್ಯ ಸಂಪ್ರದಾಯಗಳಿವೆ. ಮುಖ್ಯವಾಗಿ ವಿವಾಹದ ಮತ್ತು ಸುನ್ನತಿಯ ಸಂಪ್ರದಾಯಗಳನ್ನು ಇನ್ನೂ ಉಳಿಸಿಕೊಂಡೇ ಬಂದಿವೆ.  
 
ವಧುವಿಗೆ ಕರ ತೆತ್ತು ಮದುವೆಯಾಗುವುದು ಬಹುತೇಕ ಪ್ರತಿ ಪಂಗಡದವರಲ್ಲೂ ಇದೆ. ಕೆಲವರಲ್ಲಿ ಆಡುಗಳನ್ನು, ಕೆಲವರಲ್ಲಿ ದನ ಅಥವಾ ಎಮ್ಮೆಗಳನ್ನು ವಧುವಿನ ಪೋಷಕರಿಗೆ ಕರದ ರೂಪದಲ್ಲಿ ಕೊಡಲಾಗುತ್ತದೆ. ಈ ಆಚರಣೆಯಾದ ಹೊರತು ಮದುವೆ ಅಧಿಕೃತವಾಗುವುದಿಲ್ಲ. ಒಟ್ಟಿಗೆ ಇದ್ದು ಎರಡು ಮೂರು ಮಕ್ಕಳಾದ ಮೇಲೆ ಕೆಲವು ಜೋಡಿಗಳು ವಧು ಕರದ ಆಚರಣೆ ಮಾಡಿ ತಮ್ಮ ವಿವಾಹವನ್ನು ಅಧಿಕೃತಗೊಳಿಸಿಕೊಂಡದ್ದೂ ಇದೆ. ಹೆಣ್ಣುಮಕ್ಕಳ ಸುನ್ನತಿಯನ್ನು ಈಗ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದರೆ ಗಂಡುಮಕ್ಕಳ ಆಚರಣೆಯನ್ನು ಈಗಲೂ ನಡೆಸುತ್ತ ಬಂದಿವೆ. ನಗರಗಳಲ್ಲಿ ಈಗೀಗ ಶಸ್ತ್ರಕ್ರಿಯೆ ಮೂಲಕ ಈ ಆಚರಣೆಯನ್ನು ನಡೆಸುತ್ತಾರೆ ಎಂದು ಕೇಳಿದೆ. 
 
ಎಲ್ಲಾ ಬುಡಕಟ್ಟಿನವರೂ ಪರಸ್ಪರ ಸಂವಹಿಸುವುದು ಸ್ವಾಹಿಲಿ ಅಥವಾ ಇಂಗ್ಲಿಷ್‌ನಲ್ಲಿ. ಅವರಷ್ಟೇ ಅಲ್ಲದೆ ಬ್ರಿಟಿಷರ ಕಾಲದಲ್ಲಿ ರೇಲ್ವೆ ಕೆಲಸಕ್ಕೆಂದು ಬಂದವರು ರೇಲ್ವೆ ಮಾರ್ಗದಲ್ಲಿ ಚಿಕ್ಕಪುಟ್ಟ ‘ದುಕ್ಕಾ’ಗಳನ್ನು (ಅಂಗಡಿಗಳು) ಕಟ್ಟಿಕೊಂಡು ಮುಂದೊಂದು ದಿನ ಕೀನ್ಯಾದ ವಾಣಿಜ್ಯ ವಹಿವಾಟಿನ ಬಹುಮುಖ್ಯ ಭಾಗವನ್ನು ಆಕ್ರಮಿಸಿಕೊಂಡು, ‘ನಾವು ಕೀನ್ಯಾದವರು’ ಎಂದು ಹೇಳಿಕೊಳ್ಳುವ ಭಾರತೀಯರ ಸಮುದಾಯವೂ ಇಲ್ಲಿದೆ. ಹಿಂದಿನ ಭವ್ಯ ಪರಂಪರೆಯ ಪಳೆಯುಳಿಕೆಗಳೋ ಎಂಬಂತೆ ಯುರೋಪಿಯನ್ನರೂ ಇದ್ದಾರೆ. ಇಲ್ಲಿನ ಜನರ ನಿತ್ಯದ ಸಂಭಾಷಣೆಯಲ್ಲಿ ‘ಮುಯುಂಗಿ’ ಮತ್ತು ‘ಮುಜುಂಗು’ ಎನ್ನುವ ಪದಗಳು ಬಂದರೆ ಅದು ಕ್ರಮವಾಗಿ ಭಾರತೀಯರು ಮತ್ತು  ಬ್ರಿಟಿಷ್ ಮೂಲದವರನ್ನು ಕುರಿತು ಹೇಳಿದ್ದು ಎಂದು ಅರ್ಥ ಮಾಡಿಕೊಳ್ಳಬೇಕು! 
ಕೊನೆಯದಾಗಿ, ನೀವು ಕೀನ್ಯಾಕ್ಕೆ ಯಾವುದೇ ಕಾರಣಕ್ಕೆ ಬಂದರೂ ಈ ಕೆಳಗಿನ ಒಂದು ವಿಚಾರವು ನಿಮ್ಮ ಮನದಲ್ಲಿರಲಿ. 
 
(ನೈರೋಬಿಯ ರಸ್ತೆ ಪಕ್ಕದಲ್ಲಿರುವ ವಿಶಿಷ್ಟ ತರಕಾರಿ ಅಂಗಡಿಗಳು)
 
ನೀವು ಆಫ್ರಿಕಾದ  ಬಗ್ಗೆ ಬರೆಯುತ್ತೀರಾದರೆ ನಿಮ್ಮ ಓದುಗರು ಒಂದೋ ಕರುಣೆ ತೋರಬೇಕು, ಇಲ್ಲವೇ ಆರಾಧಿಸಬೇಕು ಅಥವಾ ಅಳಬೇಕು ಹಾಗೆ ಬರೆಯುತ್ತೀರಿ! ಆಫ್ರಿಕಾ ಎಂದರೆ ಒಂದು ದೇಶವಲ್ಲ ಎಂದು ಕೀನ್ಯಾದ ಹೊಸ ತಲೆಮಾರಿನ ಪ್ರಭಾವಶಾಲಿ ಲೇಖಕರಾದ ಬಿನ್ಯಾವಾಂಗ ವೈನಾನ ಗುಡುಗುತ್ತಾರೆ. ಇದು ಕೀನ್ಯಾದ ಈ ತಲೆಮಾರಿನ ದನಿ. ಅವರ ಆಕ್ಷೇಪದಲ್ಲಿ ಹುರುಳಿದೆ. ಇವತ್ತಿಗೂ ಆಫ್ರಿಕಾ ಎಂದ ಕೂಡಲೆ ನಮ್ಮ ಮನಸ್ಸಿನೊಳಗೆ ಮೂಡುವ ಚಿತ್ರದಲ್ಲಿ ಬಡತನ, ಸಾಂಕ್ರಾಮಿಕ ರೋಗಗಳು, ಏಡ್ಸ್, ನಿರಕ್ಷರತೆ  ಮತ್ತು ದೈನ್ಯವಿರುತ್ತದೆ. ಅಥವಾ ವನ್ಯ ಜೀವಿಗಳು, ಸಫಾರಿ, ಮತ್ತು ಇನ್ನೂವರೆಗೂ ನಾಗರಿಕತೆಯ ಮುಖ ನೋಡದ ‘ಎಥ್ನಿಕ್’ ಎಂಬ ಗುರುತಿನ ಚೀಟಿಯನ್ನು ಲಗತ್ತಿಸಿಕೊಂಡು ಅವೂ ಪ್ರೇಕ್ಷಣೀಯ ಸಂಗತಿಗಳೆಂಬಂತೆ  ಬಿಂಬಿಸಲಾಗುವ ರಮ್ಯ ಜನ ಸಮುದಾಯಗಳು ಇರುತ್ತವೆ. ಇದೇ ಬಗೆಯ ಅರೆಬೆಂದ ಚಿತ್ರಣ ಮತ್ತು ಅವ್ಯಕ್ತ ಆತಂಕದೊಂದಿಗೆ ನಮ್ಮ ಸಂಸಾರ ಕೀನ್ಯಾದ ರಾಜಧಾನಿ ನೈರೋಬಿಗೆ ಬಂದಿಳಿದಿತ್ತು. ಈಗ ಮೊದಲಿನ ಆತಂಕವಿಲ್ಲ. ಜೊತೆಗೆ ಬಿನ್ಯಾವಾಂಗ ವೈನಾನರವರ ಆಕ್ರೋಶವನ್ನು ಅರ್ಥ ಮಾಡಿಕೊಳ್ಳುವ ಮಟ್ಟಿಗೆ ನನ್ನ ಅರಿವಿನ ಕ್ಷಿತಿಜ ವಿಸ್ತಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT