ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 12–2–1967

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಆಹಾರ ಧಾನ್ಯಗಳ ಆಮದು– ಭಾರಿ ರಷ್ಯಾ ನೆರವಿಗೆ ಭಾರತದ ಯತ್ನ
ನವದೆಹಲಿ, ಫೆ. 11–
ಪ್ರಸ್ತುತ ವರ್ಷದ ಅವಧಿಯಲ್ಲಿ ರಷ್ಯದಿಂದ ಭಾರಿ ಪ್ರಮಾಣದಲ್ಲಿ ಆಹಾರಧಾನ್ಯದ ನೆರವನ್ನು ಪಡೆಯುವುದೇ ಶ್ರೀ ಎಲ್.ಕೆ. ಝಾ ಅವರು ನಾಳೆ ಮಾಸ್ಕೋಗೆ ಹೋಗುವುದರ ಮೂಲ ಉದ್ದೇಶ.

ರಷ್ಯವು 2,50,000 ಟನ್ನುಗಳಷ್ಟು ಆಹಾರ ಧಾನ್ಯವನ್ನು ಈಗಾಗಲೇ ಕೊಡುಗೆಯಾಗಿ ಭಾರತಕ್ಕೆ ನೀಡಿದೆ. ಆದರೆ ರಾಷ್ಟ್ರದಲ್ಲಿ ಪ್ರಸ್ತುತ ಉಂಟಾಗಿರುವ ಕಠಿಣ ಆಹಾರ ಪರಿಸ್ಥಿತಿಯನ್ನು ಹೋಗಲಾಡಿಸುವುದಕ್ಕಾಗಿ ಗಣನೀಯ ಪ್ರಮಾಣದಲ್ಲಿ ಆಹಾರ ಧಾನ್ಯವನ್ನು ಪಡೆಯಲು ಪ್ರಯತ್ನಿಸುತ್ತಿದೆ.

ಪು.ತಿ.ನ.ರ ಗೀತ ರೂಪಕಕ್ಕೆ ಸಾಹಿತ್ಯ ಅಕಾಡಮಿ ಪ್ರಶಸ್ತಿ
ನವದೆಹಲಿ, ಫೆ. 11–
  ಪು.ತಿ. ನರಸಿಂಹಾಚಾರ್‌ರವರು  ಬರೆದ ‘ಹಂಸ ದಮಯಂತಿ ಮತ್ತು ಇತರ ರೂಪಕಗಳು’ ಎಂಬ ಗೀತ ನಾಟಕ ಕೃತಿಗೆ ಸಾಹಿತ್ಯ ಅಕಾಡಮಿಯ ಪ್ರಸ್ತುತ ಸಾಲಿನ ಪ್ರಶಸ್ತಿ ನೀಡಲಾಗಿದೆ.

ಇಲ್ಲಿ ಇಂದು ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರ ಅಧ್ಯಕ್ಷತೆಯಲ್ಲಿ ಸೇರಿದ ಅಕಾಡಮಿಯ ಕಾರ್ಯ ನಿರ್ವಾಹಕ ಮಂಡಳಿಯ ಸಭೆಯಲ್ಲಿ ಪ್ರಶಸ್ತಿ ಅರ್ಹ ಕೃತಿಗಳ ಆಯ್ಕೆ ಮಾಡಲಾಯಿತು. ಪ್ರತಿ ಭಾಷೆಯ ಅಕಾಡಮಿ ಸಲಹೆಗಾರರ ಶಿಫಾರಸಿನ ಮೇರೆಗೆ ಅಂತಿಮ ಆಯ್ಕೆಯನ್ನು ಮಾಡಲಾಗಿದೆ.

ಕಣ್ಣುಮುಚ್ಚಾಲೆ ಆಟದ ಚಿಕ್ಕಪೇಟೆ ಕ್ಷೇತ್ರ
ಬೆಂಗಳೂರು, ಫೆ. 11–
  ಗಳಿಸಿದ ಸ್ಥಾನವನ್ನು ಉಳಿಸಿಕೊಳ್ಳುವ ಕಾಂಗ್ರೆಸ್ಸಿನ ಯತ್ನ, ಅದನ್ನು ನಿಷ್ಫಲಗೊಳಿಸುವುದಕ್ಕೆ ದುಡಿದರೂ ಒಗ್ಗಟ್ಟಿನ ಅಭಾವದಿಂದ ತುಸು ಶ್ರಮಪಡಬೇಕಾದ ವಿರೋಧ ಪಕ್ಷ ಇವುಗಳಿಂದ ನಗರದ ಚಿಕ್ಕಪೇಟೆ ಕ್ಷೇತ್ರದ ಪ್ರಚಾರ ವೈಖರಿ ಗಮನಾರ್ಹ.

ವಿರೋಧ ಪಕ್ಷದ ಪ್ರಥಮ ಮಾಜಿ ಮೇಯರ್, ಉಪ ಸಚಿವರೊಬ್ಬರು, ಇಬ್ಬರು ಮಾಜಿ ಕಾರ್ಪೋರೇಷನ್ನಿನ ಸದಸ್ಯರು ಹಾಗೂ ಮತ್ತಿಬ್ಬರು ಸ್ವತಂತ್ರ ಸ್ಪರ್ಧಿಗಳು ಮತದಾರರ ಮನ ಒಲಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

ರಾಜಕಾರಣಕ್ಕೆ ಕನಿಷ್ಠ ಗಣನೆ ಚಿತ್ರದುರ್ಗ ಜಿಲ್ಲೆಯಲ್ಲಿ
ಚಿತ್ರದುರ್ಗ, ಫೆ. 11–
ಚಿತ್ರದುರ್ಗ ಜಿಲ್ಲೆಯ ಚುನಾವಣೆಯಲ್ಲಿ ಜಾತಿ, ಒಳಜಾತಿ, ಹಣ, ವ್ಯಕ್ತಿ ಕಲಹ, ರಾಜಕಾರಣ ಇವುಗಳ ಪೈಕಿ ಮೊದಲ ನಾಲ್ಕಕ್ಕೆ ಯಾವ ಯಾವ ಸ್ಥಾನವಿದೆಯೆಂಬುದನ್ನು ಹೇಳುವುದು ಕಷ್ಟವಾದರೂ ರಾಜಕಾರಣಕ್ಕೆ ಕೊನೆಯ ಸ್ಥಾನವೆನ್ನುವುದನ್ನಂತೂ ಹಿಂಜರಿಯದೆ ಹೇಳಬಹುದು.
ಈ ಜಿಲ್ಲೆಯಲ್ಲಿ ಯಾವ ಯಾವ ಶಕ್ತಿಗಳು ಯಾರು ಯಾರಿಗೆ ಬೆಂಬಲ ನೀಡುವುವೆಂಬುದೇ ಇನ್ನೂ ಸ್ಪಷ್ಟವಾಗಿಲ್ಲ.  ಪ್ರತಿ ಚುನಾವಣೆಯಲ್ಲಿ ಒಂದು ಮತದ ಒಳಗುಂಪುಗಳ ಪರಸ್ಪರ ವಿರೋಧ ತೀವ್ರಗೊಳ್ಳುವುದು. ಇದು ಈ ಸಾರಿಯೂ ಆಗಿದೆ.

‘ಬುಂಡೇನೆತ್ತಿ ಕುಡದ್ಬುಟ್ಟಾಂದ್ರೆ ಓಟಿನ್ಮೇಲೋಟು’
ಆಗ್ರ, ಫೆ. 11–
  ಸ್ಥಳೀಯ ಚುನಾವಣಾ ಕ್ಷೇತ್ರವೊಂದರಲ್ಲಿ ಕುಡುಕರ ವರ್ಗ ಸಭೆಯೊಂದನ್ನು ನಡೆಸಿ, ಅಂಗಡಿಗಳಲ್ಲಿ ಸಿಕ್ಕುತ್ತಿರುವ ‘ಕುಡತ’ ಕಲಬೆರಕೆಯದಾದುದರಿಂದ ಜನಕ್ಕೆ ‘ಪಕ್ಕಾ’ ಹೆಂಡ  ಒದಗಿಸುವ ಉಮೇದುವಾರನಿಗೆ ತಮ್ಮ  ಓಟೆಂದು ನಿರ್ಧರಿಸಿದರು.

‘ಹೆಂಡ ಬೇಡ– ಸೂಳೆ ಬೇಡ’: ಮಥುರಾ ಜಿಲ್ಲೆಯ ಗ್ರಾಮಾಂತರ ಮತದಾರರು  ಸೂಳೆಯರನ್ನು ಹೊರಕ್ಕೆ ಓಡಿಸಿರೆಂದೂ ಹೆಂಡದಂಗಡಿಗಳನ್ನೂ ಹೊರಹಾಕಿರೆಂದೂ ಉಮೇದುವಾರರನ್ನು ಕೇಳಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT