ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಹೊಗಳಿಕೆ ಅನಾವರಣ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ದಾವಣಗೆರೆ: ದಲಿತರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ  ಸದುದ್ದೇಶದಿಂದ ಇಲ್ಲಿನ ಗಾಂಧಿನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಗುಣಗಾನವೇ ಮೇಳೈಸಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೈಗಾರಿಕಾ ಇಲಾಖೆ ಹಾಗೂ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರೂ ಅವರಿಗೆ ಮಾತನಾಡಲು ಹೆಚ್ಚು ಅವಕಾಶವೇ ದೊರೆಯಲಿಲ್ಲ.

ಸಮುದಾಯದ ಕೆಲ ಮುಖಂಡರು ದೊರೆತ ವೇದಿಕೆಯನ್ನು ತಮ್ಮ ರಾಜಕೀಯ ಭಾಷಣಕ್ಕೆ ಧಾರಾಳವಾಗಿ ಬಳಸಿಕೊಂಡರು. ಮತ್ತೆ ಕೆಲವರು ಸಚಿವ ಆಂಜನೇಯ ಅವರ ಜೀವನ, ನಡೆದು ಬಂದ ಹಾದಿಯನ್ನು ಸ್ಮರಿಸಿದರು. ಪೌರಕಾರ್ಮಿಕರನ್ನು ಸುಲಿಗೆ ಮಾಡುತ್ತಿರುವ ಕೆಲವು ಮುಖಂಡರ ವಿರುದ್ಧ ಹರಿಹಾಯ್ದರು.

‘ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಪ್ರಶ್ನೆ ಎಲ್ಲಿ ಬಂತು? ಸ್ವಪ್ರತಿಷ್ಠೆಯ ಭಾಷಣ ಕೇಳೋಕೆ ಮೂರು ತಾಸು ಬಿಸಿಲಿನಲ್ಲಿ ಕೂರುವಂತಾಯಿತು’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತ ಮಹಿಳೆಯರು ಗೊಣಗುತ್ತಿದ್ದುದು ಕೇಳಿಬಂತು.
-ಎಲ್‌.ಮಂಜುನಾಥ

*
ತೋಳದ ಬಳಿ ರಕ್ಷಣೆ ಕೇಳಿದಂತೆ...!
ವಿಜಯಪುರ: 
‘ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಸಾರಥ್ಯದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಅನ್ನು  ಬೆಂಬಲಿಸುವುದು ತೋಳದ ಬಳಿ ಕುರಿ ರಕ್ಷಣೆ ಕೇಳಿದಂತೆ...’

ನಗರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಅವರು ನೀಡಿದ ಖಡಕ್‌ ಉತ್ತರವಿದು.

‘ಸಮಿತಿಯು ಈಶ್ವರಪ್ಪ ನೇತೃತ್ವದ ‘ಹಿಂದ’ ಸಂಘಟನೆಯನ್ನುಬೆಂಬಲಿಸಲಿದೆಯಾ’ ಎಂದು ಪ್ರಶ್ನಿಸುತ್ತಿದ್ದಂತೆ ಸಾಗರ್‌ ಈ ರೀತಿ ಪ್ರತಿಕ್ರಿಯಿಸಿದರು.
‘ಈಶ್ವರಪ್ಪ ಯಾವ ಪಕ್ಷದಲ್ಲಿದ್ದಾರೆ, ನವದೆಹಲಿಗೆ ಹೋಗಿ ಬರುವ ಮುನ್ನ ಅವರ ನಡವಳಿಕೆ ಹೇಗಿತ್ತು, ಅಲ್ಲಿಂದ ಬಂದ ಮೇಲೆ ಹೇಗಾಯ್ತು, ಇವರನ್ನು ಬೆಂಬಲಿಸಿದವರು ಈಗೇನು ಮಾಡಬೇಕು, ಇದಕ್ಕೂ ಮಿಗಿಲಾಗಿ ಬಿಜೆಪಿಯ ಮಾತೃಸಂಸ್ಥೆ, ಅದರ ಅಂಗ ಘಟಕಗಳು ಮೀಸಲಾತಿ ಕುರಿತು ಹೊಂದಿರುವ ನಿಲುವು ಏನು ಎಂಬುದು ಜಗಜ್ಜಾಹೀರಾಗಿರುವ ಸತ್ಯ.

ಇದನ್ನೆಲ್ಲ ತಿಳಿದಿದ್ದೂ ನಾವು ಈಶ್ವರಪ್ಪ ಅವರ ಬೆಂಬಲಕ್ಕೆ ಮುಂದಾದರೆ, ತೋಳವೊಂದು ಕುರಿ ಹಿಂಡಿನ ರಕ್ಷಣೆ ಹೊತ್ತಂತಾಗುತ್ತದೆ. ಏನಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬರುವುದರೊಳಗೆ ತೋಳದಿಂದ ಕುರಿಗಳ ಆಪೋಶನವಾದಂತೆ ನಮ್ಮ ಅಸ್ತಿತ್ವವೂ ಇಲ್ಲದಾಗುತ್ತದೆ. ಆದ್ದರಿಂದ ನಾವು ಸದಾ ತೋಳದಿಂದ ದೂರವಿರುತ್ತೇವೆ’ ಎಂದು ಅವರು ವ್ಯಂಗ್ಯವಾಡುತ್ತಿದ್ದಂತೆ, ಗಂಭೀರ ವಿಷಯದ ಪತ್ರಿಕಾಗೋಷ್ಠಿ ನಗೆಗಡಲಲ್ಲಿ ಮುಳುಗಿತು.
-ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT