ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಕಲಾಪ ಹಾಜರಾತಿಗೆ ಗಂಟೆ ಲೆಕ್ಕದಲ್ಲಿ ಭತ್ಯೆ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಿಧಾನಮಂಡಲ ಕಲಾಪದಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಅಧಿವೇಶನ ಅಡೆತಡೆಯಿಲ್ಲದೆ ನಡೆಯಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದ ವಿಧಾನಸಭೆ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಬೆಳಗಾವಿ ಅಧಿವೇಶನದಲ್ಲಿ ಕೆಲವು ಸುಧಾರಣೆ ತಂದಿದ್ದಾರೆ.

ಕಲಾಪದ ಸಮಯದಲ್ಲಿ ಶಾಸಕರು ಬೆಳಿಗ್ಗೆ ಮತ್ತು ಮಧ್ಯಾಹ್ನ ಹಾಜರಿ ಪುಸ್ತಕಕ್ಕೆ ಸಹಿ ಹಾಕುವ ಪದ್ಧತಿ ಜಾರಿಗೊಳಿಸಿದ್ದಾರೆ. ಆದರೂ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಸದಸ್ಯರು ಶಾಸನಸಭೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಶಾಸಕರಿಗೆ ಜವಾಬ್ದಾರಿ ಮನವರಿಕೆ ಮಾಡುವುದು ಹೇಗೆ? ಶಾಸನಸಭೆಯನ್ನು ಪರಿಣಾಮಕಾರಿಯಾಗಿ ನಡೆಸುವುದು ಹೇಗೆ? ಶಾಸಕರಿಗಾಗಿ ನಿರ್ಮಿಸುತ್ತಿರುವ ಕಾನ್‌ಸ್ಟಿಟ್ಯೂಷನ್ ಕ್ಲಬ್, ವಿಧಾನಸಭೆ ಸಚಿವಾಲಯದ ಕಾರ್ಯವೈಖರಿ ಕುರಿತು ಕೋಳಿವಾಡ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಕಲಾಪದಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಪ್ರತಿ ಸಲ ಅಧಿವೇಶನ ನಡೆದಾಗಲೂ ಗೈರುಹಾಜರಿ ಟೀಕೆಗೊಳಗಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?
ಶಾಸನಸಭೆಗಳಿಗೆ ಸದಸ್ಯರು ಗೈರುಹಾಜರಾಗುತ್ತಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಹಳ ಬೇಜಾರಾಗಿದ್ದಾರೆ. ಈ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ. ಸದನದಲ್ಲಿ ಶೇ 80ರಷ್ಟು ಹಾಜರಾತಿ ಇರುವ ಶಾಸಕರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೆಟ್ (ಬಿ ಫಾರಂ) ನೀಡುವುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಚರಿಕೆ ಕೊಡುವುದಾಗಿ ಹೇಳಿದ್ದಾರೆ.

ಕಲಾಪದ ವೇಳೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಸುವ ಪದ್ಧತಿ ಜಾರಿಗೆ ತಂದಿದ್ದೇನೆ. ಹಾಗಿದ್ದರೂ ಸಹಿ ಹಾಕಿ ಶಾಸಕರು ಹೊರಗೆ ಹೋಗುತ್ತಾರೆ. ಕಲಾಪದಲ್ಲಿ ಪ್ರಶ್ನೆ ಕೇಳಲಿ ಬಿಡಲಿ, ಕನಿಷ್ಠ ಕುಳಿತು ಕೇಳುವ ಸೌಜನ್ಯವೂ ಇಲ್ಲ.

*ಕಲಾಪದ ಗುಣಮಟ್ಟ ಸುಧಾರಣೆ ಆಗುವ ವಿಶ್ವಾಸ ಇದೆಯೇ?
ಶಾಸಕರು ಕಲಾಪದಲ್ಲಿ ಕುಳಿತು ಹಿರಿಯರು ವಿಷಯ ಮಂಡಿಸುವ ಪರಿಯನ್ನು ಗಮನಿಸಿದರೆ ಕಲಾಪದ ಗುಣಮಟ್ಟ ಸುಧಾರಣೆಯಾಗಲಿದೆ. ಆದರೆ, ಶಾಸಕರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಸಂಯಮ, ಆಸಕ್ತಿ ಇಲ್ಲ. ಸದನದಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿಕೊಂಡು ಬಂದರೆ ಗುಣಮಟ್ಟದ ಚರ್ಚೆ ಸಾಧ್ಯವಾಗಲಿದೆ. ಅಂತಹ ಆಸಕ್ತಿ ಶಾಸಕರಲ್ಲಿ ಕಾಣುತ್ತಿಲ್ಲ. ಜನ ನಮ್ಮನ್ನು ಏಕೆ ಆರಿಸಿ ಕಳುಹಿಸಿದ್ದಾರೆ, ಅವರಿಗಾಗಿ ನಾವು ಏನು ಮಾಡುತ್ತಿದ್ದೇವೆ ಎಂದು ಎಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ ಸಾಕು, ಶಾಸನಸಭೆಗೆ ಅರ್ಥ ಬರುತ್ತದೆ.

*ಶಾಸಕರಿಗೆ ನಿರಾಸಕ್ತಿ ಏಕೆ?
ನೋಡ್ರೀ... 3- 4 ಸಾರಿ ಗೆದ್ದಿರುವವರು, ಹಿರಿಯರು ಕಲಾಪದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ. ಹೊಸಬರಲ್ಲಿ ಕೆಲವರಿಗೆ ಆಸಕ್ತಿ ಇದೆ. ಉಳಿದವರ ಆಸಕ್ತಿ ಬೇರೆ!  ಅಷ್ಟಕ್ಕೂ ವರ್ಷಕ್ಕೆ 60 ದಿನಗಳೂ ಕಲಾಪ ನಡೆಯುವುದಿಲ್ಲ. ಈಗ ನೋಡಿ ಎರಡು  ದಿನ ಕಲಾಪ ವಿಸ್ತರಿಸಿದ್ದೇವೆ. ಶಾಸಕರಿಗೆ ಆಸಕ್ತಿ ಇಲ್ಲ ಅಂದ ಮೇಲೆ ವಿಸ್ತರಣೆ ಏಕೆ ಬೇಕಿತ್ತು?

*ಒಂದು ದಿನದ ಕಲಾಪಕ್ಕೆ ಎಷ್ಟು ಖರ್ಚಾಗುತ್ತದೆ?
ಒಂದು ಅಂದಾಜಿನಂತೆ ₹ 80 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ಸದನ ನಡೆದರೆ ಸಾರ್ವಜನಿಕರ ತೆರಿಗೆ ಹಣ ಉಪಯೋಗ. ಶಾಸಕರ ಪಾಲ್ಗೊಳ್ಳುವಿಕೆ ಇಲ್ಲ ಅಂದರೆ ನಿರುಪಯುಕ್ತ. ಇದನ್ನು ಎಲ್ಲ ಶಾಸಕರು ಗಮನಿಸಬೇಕು.

*ನೀವು ಆಯ್ಕೆಯಾಗಿದ್ದು ಯಾವಾಗ? ನಿಮ್ಮ ಪಾಲ್ಗೊಳ್ಳುವಿಕೆ ಹೇಗಿತ್ತು?
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ 1972ರಲ್ಲಿ ಈ ಸದನ ಪ್ರವೇಶಿಸಿದೆ. ಆಗ ನನಗೆ 26 ವರ್ಷ. ನಾನೇ ಅತ್ಯಂತ ಕಿರಿಯ ಶಾಸಕ. ಈಗ ನನಗೆ 72 ವರ್ಷ. 5 ಬಾರಿ ಗೆದ್ದು ಬಂದಿದ್ದೇನೆ. ಅಂದಿನಿಂದಲೂ ತೀರಾ ಅನಿವಾರ್ಯ ಕೆಲಸಗಳಿದ್ದಾಗ ಮಾತ್ರ ಕಲಾಪಕ್ಕೆ ಹಾಜರಾಗಿಲ್ಲ. ಮೊದಲ ಬಾರಿಗೆ ಬಂದಾಗ ಮಾತನಾಡಲು ಹೆದರಿಕೆ ಆಗುತ್ತಿತ್ತು. ಘಟಾನುಘಟಿಗಳು, ದೇಶ ಕಂಡ ಅತ್ಯುತ್ತಮ ಸಂಸದೀಯ ಪಟುಗಳು ಅಂದು ಸದನದಲ್ಲಿದ್ದರು. ಅವರಿಂದ ನಾನು ಬಹಳಷ್ಟು ಕಲಿತೆ.

*ಶಾಸಕರಿಗೆ ಜವಾಬ್ದಾರಿ ಮೂಡಿಸಲು ಯಾವ ಕ್ರಮಗಳನ್ನು  ಕೈಗೊಂಡಿದ್ದೀರಿ?
ತರಬೇತಿ ಕೊಡುವ ಕಾರ್ಯಕ್ರಮ ಮೊದಲಿನಿಂದಲೂ ಇದೆ. ಅದಕ್ಕೆ ಶಾಸಕರು ಹಾಜರಾಗುವುದಿಲ್ಲ. ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲಾ ರಾಜ್ಯಗಳಲ್ಲೂ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳುವುದು ಕಡಿಮೆಯಾಗುತ್ತಿದೆ. ಸಂಸತ್‌ನಲ್ಲಿಯೂ ಇದೇ ಕತೆ. ಶಾಸಕರು ತಮ್ಮ ವ್ಯವಹಾರ, ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡುವಷ್ಟು ಕಲಾಪಕ್ಕೆ ನೀಡುತ್ತಿಲ್ಲ. ಇಲ್ಲಿ ಬಂದು ಸಹಿ ಹಾಕಿ, ಹೊರಗೆ ನಡೆದುಬಿಡುತ್ತಾರೆ. ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಕಲಾಪ ನಡೆಯಬೇಕು. 1 ಗಂಟೆ ಭೋಜನ ವಿರಾಮದ ಅವಧಿ ಬಿಟ್ಟು ಉಳಿದ ಎಷ್ಟು ಹೊತ್ತು ಶಾಸಕರು ಭಾಗಿಯಾಗಿದ್ದರು ಎಂಬ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. ಪೂರ್ಣಾವಧಿ ಇದ್ದ ಶಾಸಕರಿಗೆ ಮಾತ್ರ ದಿನಭತ್ಯೆ, ಪ್ರಯಾಣ ಭತ್ಯೆ ಕೊಡುತ್ತೇವೆ. ಉಳಿದವರಿಗೆ ಗಂಟೆ ಲೆಕ್ಕ ಆಧರಿಸಿ ಭತ್ಯೆ ನೀಡುವ ಆಲೋಚನೆ ಇದೆ.

*ಶಾಸನಸಭೆಗೆ ಸುಧಾರಣೆ ತರಲು ಎಲ್ಲಾ ರಾಜ್ಯಗಳ ಸಭಾಧ್ಯಕ್ಷರು, ಸಭಾಪತಿಗಳ ಸಮಾವೇಶ ನಡೆಸುವ ಚಿಂತನೆ ಇತ್ತಲ್ಲಾ?
ಲೋಕಸಭೆಯ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕಲಾಪದ ಆರಂಭದಲ್ಲಿ ನಿಲುವಳಿ ಸೂಚನೆ ಮಂಡಿಸಿ ಇಡೀ ದಿನದ ಕಲಾಪ ಹಾಳುಗೆಡವಬಾರದು ಎಂಬ ಉದ್ದೇಶಕ್ಕೆ ತಂದ ನಿಯಮಗಳ ಬಗ್ಗೆ ಅವರಿಗೆ ವಿವರಿಸಿದ್ದೇನೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಸಮಾವೇಶ ನಡೆಸಲು ನಿಶ್ಚಯಿಸಲಾಗಿದೆ.

*ನಿಯಾಮವಳಿಗೆ ತಂದ ತಿದ್ದುಪಡಿ ಎರಡನೇ ಅಧಿವೇಶನದಲ್ಲಿಯೇ ಮುರಿದುಬಿತ್ತಲ್ಲ?
ಮೂರು ದಿನ ಸರಿಯಾಗಿ ನಡೆಯಿತು. ಆದರೆ, ಪ್ರಶ್ನೆ ಕೇಳಬೇಕಾದ ಶಾಸಕರು, ಉತ್ತರ ಕೊಡಬೇಕಾದ ಸಚಿವರು ಇರದೇ ಇದ್ದುದರಿಂದ ನಾಲ್ಕನೇ ದಿನ ಪ್ರಶ್ನೋತ್ತರ ನಡೆಸಲು ಆಗಲಿಲ್ಲ. ಆದರೆ, ದಿನದ ಆರಂಭದಲ್ಲಿ ನಿಲುವಳಿ ಸೂಚನೆಗೆ ಕಡಿವಾಣ ಹಾಕಿದ್ದರಿಂದಾಗಿ ಸುಗಮ ಕಲಾಪ ನಡೆಯುತ್ತಿದೆ. ಅದರ ಬಗ್ಗೆ ಸಮಾಧಾನವಿದೆ.

*ಕಲಾಪ ಬರೀ ಚರ್ಚೆಗೆ ಸೀಮಿತ ಆಗುತ್ತಿದೆ ಎಂಬ ಆಪಾದನೆ ಇದೆಯಲ್ಲಾ?
ಅದು ನಿಜ. ಮಹಾದಾಯಿ ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್‌ ಸೇರಿದಂತೆ ಅನೇಕ ಭರವಸೆಗಳು ಈಡೇರಿಲ್ಲ. ಸದನದಲ್ಲಿ ಸರ್ಕಾರ ನೀಡಿದ ಭರವಸೆ, ಕಾರ್ಯವೈಖರಿ ಅಧ್ಯಯನಕ್ಕೆ ವಿವಿಧ ಸಮಿತಿಗಳಿವೆ. ಈ ಸಮಿತಿಗಳು ನೀಡಿದ ವರದಿ ಜಾರಿಯಾಗುವುದಿಲ್ಲ. ವಿವಿಧ ಸಮಿತಿಗಳಿಗೆ ಕಾನೂನಾತ್ಮಕ ಬಲ ನೀಡುವ ಚಿಂತನೆ ಇದೆ. ಸರ್ಕಾರ ಮಾಡುವ ವೆಚ್ಚಗಳನ್ನು ಪರಿಶೀಲಿಸುವ ಸಮಿತಿಗಳಿವೆ. ಆದರೆ, ಸರ್ಕಾರಕ್ಕೆ ಬರುವ ಆದಾಯದ ಬಗ್ಗೆ ಪರಿಶೀಲನೆ ನಡೆಸುವ ಸಮಿತಿ ಇಲ್ಲ. ಅದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸುವ ಪ್ರಸ್ತಾಪ ಇತ್ತು. ಕೆಲವು ಸಚಿವರೇ ಅದಕ್ಕೆ ವಿರೋಧ ವ್ಯಕ್ತಪಡಿಸಿದರು.

*ನೀವು ಇಲ್ಲದ ಅಧಿಕಾರ ಬಳಸಿ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೀರಿ ಎಂದು ಸಚಿವರೇ ಟೀಕಿಸುತ್ತಿದ್ದಾರಲ್ಲ?
ಎಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂದು ವಿವರ ನೀಡಲಿ. ₹ 1.63 ಲಕ್ಷ ಕೋಟಿ ಬಜೆಟ್ ಹಣ ಖರ್ಚು ಮಾಡಲು ಅನುಮೋದನೆ ನೀಡುವುದು ಸದನ. ಯೋಜನೆಗಳು ಅನುಷ್ಠಾನವಾಗದೇ ಇದ್ದಾಗ, 224 ಶಾಸಕರಿಗೆ ಉತ್ತರದಾಯಿಯಾಗಿರುವ ನಾನು (ಸಭಾಧ್ಯಕ್ಷ) ಪ್ರಶ್ನಿಸುವುದು ತಪ್ಪೇ? ಅದು ಹಸ್ತಕ್ಷೇಪವೇ? ಕಾರ್ಯಕ್ರಮ ಅನುಷ್ಠಾನದಲ್ಲಿ ನಾನು ಕೈ ಹಾಕಿದ್ದರೆ ಟೀಕಿಸಬಹುದಿತ್ತು. ನನಗೆ ಆ ಅಧಿಕಾರವೇ ಇಲ್ಲವಲ್ಲ.

*ವಿಧಾನಸೌಧದ ನಿರ್ವಹಣೆಯನ್ನು ತೆಗೆದುಕೊಳ್ಳಲು ಮುಂದಾಗಿದ್ದೀರ ಎನ್ನುವ ಆರೋಪ ಇದೆ. ಈ ಬಗ್ಗೆ ಸಚಿವ ಕಾಗೋಡು ಕೂಡ ಟೀಕೆ ಮಾಡಿದ್ದರಲ್ಲ?
ನಾನು ಯಾಕೆ ವಿಧಾನಸೌಧವನ್ನು ಹಿಡಿತಕ್ಕೆ ತೆಗೆದುಕೊಳ್ಳಲಿ? ವಿಧಾನಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಿಧಾನಸೌಧದ ಮೊದಲ ಮಹಡಿ, ತಳ ಮಹಡಿಯ ಕೆಲವು ಕೊಠಡಿ, ಸುವರ್ಣಸೌಧದ ಕೆಲವು ಕೊಠಡಿಗಳ ಉಸ್ತುವಾರಿಯನ್ನು ನಮಗೆ ವಹಿಸಿ ಎಂದು ಕೇಳಿದ್ದು ತಪ್ಪೇ?

ಶಾಸಕರ ಭವನ ವಿಧಾನಸಭೆ ಸಚಿವಾಲಯದ ಸ್ವತ್ತಾಗಿದ್ದು, ಇಲ್ಲಿ ನಡೆಯುವ ಕಾಮಗಾರಿಗಳ ವೆಚ್ಚವನ್ನು ನಮ್ಮ ಸಚಿವಾಲಯದ ಲೆಕ್ಕ ಶೀರ್ಷಿಕೆಯಡಿ ಭರಿಸುತ್ತೇವೆ. ಆದರೆ, ಯಾವ ಕಾಮಗಾರಿ ಮಾಡಬೇಕು, ವೆಚ್ಚ, ಬಿಲ್ ತಯಾರಿಕೆ, ಕಾಮಗಾರಿ ಗುತ್ತಿಗೆ ನೀಡುವ ಅಧಿಕಾರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ.

ಅವರು ಶಾಸಕರ ಭವನದಲ್ಲಿ ಬೇಕಾಬಿಟ್ಟಿ ಕಾಮಗಾರಿ ಮಾಡುತ್ತಿದ್ದರು. ಮಾಲೀಕರು ನಾವು, ಆಡಳಿತ ಅವರದ್ದಾಗಿತ್ತು. ಇದನ್ನು ನಮಗೆ ಕೊಡಿ ಎಂದಿದ್ದಕ್ಕೆ ಲೋಕೋಪಯೋಗಿ ಇಲಾಖೆಯ ಕೆಲವು ‘ಪ್ರಭಾವಿ’ಗಳು ತಮ್ಮ ‘ವ್ಯವಹಾರ’ಕ್ಕೆ ಧಕ್ಕೆ ಬರುತ್ತದೆಂಬ ಕಾರಣಕ್ಕೆ ವಿರೋಧಿಸಿದರು. ಕಾಗೋಡು ತಿಮ್ಮಪ್ಪ ಹಿರಿಯರು, ಅವರು ಹಾಗೆಲ್ಲಾ ಹೇಳಬಾರದಿತ್ತು. ಶಾಸಕರ ಭವನವನ್ನು ಎರಡು ಭಾಗ ಮಾಡಿದ್ದು ಅವರ ಕಾಲದಲ್ಲಿ ಅಲ್ಲವೇ?

*ನಿಮ್ಮ ಜತೆ ಇರುವವರು ನಿಮ್ಮನ್ನು ದಿಕ್ಕು ತಪ್ಪಿಸುತ್ತಿದ್ದಾರಾ?
ಮತ್ತೊಬ್ಬರ ಮಾತು ಕೇಳಿ ಕೆಲಸ ಮಾಡುವ ದಡ್ಡ ನಾನಲ್ಲ. ಸ್ವತಂತ್ರವಾಗಿ ಆಲೋಚಿಸುವ ಶಕ್ತಿ ನನಗೆ ಇದೆ. ನಾನು ಬಂದ ಮೇಲೆ ಹೊಸಬರನ್ನು ನೇಮಿಸಿಕೊಂಡಿಲ್ಲ. ಕಾಗೋಡು ತಿಮ್ಮಪ್ಪನವರು ಸಭಾಧ್ಯಕ್ಷರಾಗಿದ್ದಾಗ ಇದ್ದವರೇ ಈಗಲೂ ಸಚಿವಾಲಯದಲ್ಲಿ ಮುಂದುವರಿದಿದ್ದಾರಲ್ಲವೇ?

*ಲೋಕೋಪಯೋಗಿ ಇಲಾಖೆ ಕೆಲಸವನ್ನು ನಿಮ್ಮ ವ್ಯಾಪ್ತಿಗೆ ತೆಗೆದುಕೊಳ್ಳುವ ಅಗತ್ಯವಿತ್ತೆ?
ನಮ್ಮ ಮಾಲೀಕತ್ವದ ಕಟ್ಟಡಗಳ ಕಾಮಗಾರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ. ಅಷ್ಟಕ್ಕೂ ಟೆಂಡರ್ ಇಲ್ಲದೆ ಯಾವುದೇ ಕಾಮಗಾರಿ ಮಾಡುವುದಿಲ್ಲ. ಶಾಸಕರ ಭವನದ ಸುತ್ತ ಇರುವ ಹೋಟೆಲ್, ಅಂಗಡಿಗಳನ್ನು ಬೇಕಾದವರಿಗೆ ನೀಡುತ್ತಿದ್ದರು. ನಾನು ಸ್ಪೀಕರ್‌ ಆದ ಮೇಲೆ  ಹರಾಜು ಮಾಡಿದ್ದೇನೆ.  ಕಾರುಗಳನ್ನು ಬೇಕಾಬಿಟ್ಟಿ ಬಳಸಲಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲಾಗಿದೆ. ಇದರಿಂದಾಗಿ ₹ 2 ಕೋಟಿ ಉಳಿತಾಯವಾಗಿದೆ.

*ಕೆರೆ ಒತ್ತುವರಿ ಸದನ ಸಮಿತಿಗೆ ನೀವು ಅಧ್ಯಕ್ಷರಾಗಿ ಮುಂದುವರಿದಿರುವುದು ಎಷ್ಟು ಸರಿ?
ಸಭಾಧ್ಯಕ್ಷನಾಗುವ ಮೊದಲು ಸದನ ಸಮಿತಿ ಅಧ್ಯಕ್ಷನಾಗಿದ್ದೆ. ಸಭಾಧ್ಯಕ್ಷನಾದ ಮೇಲೆ ಸದನ ಸಮಿತಿ ಅಧ್ಯಕ್ಷರಾಗಿ ನೀವೇ ಮುಂದುವರಿಯಿರಿ ಎಂದು ಪ್ರಸ್ತಾಪ ಮಾಡಿದವರು ಈಗ ಆಕ್ಷೇಪ ಎತ್ತಿರುವ ಬಿಜೆಪಿ ಶಾಸಕ ಸುರೇಶ ಕುಮಾರ್. ಅದನ್ನು ಉಳಿದ ಸದಸ್ಯರು ಅನುಮೋದಿಸಿದರು. ಸದನ ಸಮಿತಿ ಬಗ್ಗೆ ಗುಸುಗುಸು ಕೇಳಿಬರುತ್ತಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಒಂದೇ ಒಂದು ದಿನ ಸದನ ಸಮಿತಿಯಲ್ಲಿ ಆ ವಿಷಯ ಪ್ರಸ್ತಾಪಿಸಿಲ್ಲ. ಇವತ್ತಿಗೂ ಒಂದೇ ಒಂದು ಸಣ್ಣ ಆಪಾದನೆ ಬಂದರೂ ಅದಕ್ಕೆ ನಾನೇ ಹೊಣೆ. ಹಾಗೇನಾದರೂ ಇದ್ದರೆ ಅದನ್ನು ಸುರೇಶ ಕುಮಾರ್ ಬಹಿರಂಗಪಡಿಸಲಿ.

*ನಿಮ್ಮ ಅಧಿಕೃತ ವ್ಯವಹಾರಗಳಲ್ಲಿ ಕುಟುಂಬದವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಟೀಕೆ ಇದೆಯಲ್ಲಾ?
ಟೆಂಡರ್ ಇಲ್ಲದೆ ಯಾವುದೇ ಕಾಮಗಾರಿಯನ್ನೂ ಬೇರೆಯವರಿಗೆ ನೀಡಿಲ್ಲ. ನನ್ನ ಮಗ ಅಥವಾ ಮಗಳು ಎಂಬ ಕಾರಣಕ್ಕೆ ಅವರು ತಮ್ಮ ಉದ್ಯೋಗ ಮಾಡಬಾರದು ಎಂಬುದು ಸರಿಯಲ್ಲ. ಸಭಾಧ್ಯಕ್ಷನಾಗಿ ನಿರ್ವಹಿಸುವ ಜವಾಬ್ದಾರಿಯಲ್ಲಿ ಕುಟುಂಬದವರು ಹಸ್ತಕ್ಷೇಪ ಮಾಡಿದ್ದರೆ ತೋರಿಸಲಿ.

ಸಿ.ಎಂ ಹುದ್ದೆ ಕೊಡಲಿ
* ಸಚಿವರಾಗಲಿಲ್ಲ ಎಂಬ ಕೊರಗು ಇನ್ನೂ ಇದೆಯಾ? ಸಚಿವ ಸ್ಥಾನ ಕೊಟ್ಟರೆ?
ಇಲ್ಲ, ಖಂಡಿತಾ ಇಲ್ಲ. ಸಭಾಧ್ಯಕ್ಷನಾಗುವ ಮೊದಲು ಸಚಿವನಾಗಬೇಕು ಎಂಬ ತುಡಿತವಿತ್ತು. ಈಗ ಮಂತ್ರಿಯಾಗಿ ಮಾಡಬಹುದಾದ ಎಲ್ಲಾ ಕೆಲಸವನ್ನೂ ಈ ಹುದ್ದೆಯಿಂದಲೇ ಮಾಡಿಸಬಹುದು ಎಂದು ಗೊತ್ತಾಗಿದೆ. ಮುಖ್ಯಮಂತ್ರಿಯನ್ನೇ ನನ್ನ ಕೊಠಡಿಗೆ ಕರೆಸುತ್ತೇನೆ. ನಾನೆಂದೂ ಅವರ ಕೊಠಡಿಗೆ ಹೋಗುವುದಿಲ್ಲ. ಸಚಿವ ಸ್ಥಾನ ಕೊಟ್ಟರೂ ಬೇಡ. ಕೊಟ್ಟರೆ ಮುಖ್ಯಮಂತ್ರಿ ಹುದ್ದೆ ಕೊಡಲಿ, ಇಲ್ಲಾ ಕೇಂದ್ರ ಸಚಿವನಾಗಬೇಕಷ್ಟೆ. 

ಇಸ್ಪೀಟ್,  ಬಾರ್ ಇರಲೇಬೇಕಲ್ವ!
*ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಏನೆಲ್ಲಾ ಸೌಲಭ್ಯ ಇರುತ್ತದೆ?

ಶಾಸಕರು ತಮ್ಮ ವಿರಾಮದ ಅವಧಿಯನ್ನು ಕಳೆಯಲು ಏನೆಲ್ಲಾ ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಒದಗಿಸಲಾಗುವುದು. ಸುಸಜ್ಜಿತ ಕ್ಯಾಂಟೀನ್, ಈಜುಕೊಳ, ವ್ಯಾಯಾಮ ಶಾಲೆ, ಗ್ರಂಥಾಲಯ, ಟೆನ್ನಿಸ್, ಇಸ್ಪೀಟ್, ಬಾರ್ (ಮದ್ಯಪಾನ) ಎಲ್ಲವನ್ನೂ ಕೊಡಲೇಬೇಕಲ್ಲ. ಇಲ್ಲ ಅಂದರೆ ವಿಧಾನಸಭೆಗೇ ಬರದಿದ್ದವರು ಅಲ್ಲಿಗೆ ಬರುತ್ತಾರಾ? ಶಾಸಕರನ್ನು ಆಕರ್ಷಿಸಲು ಡ್ರಿಂಕ್ಸ್ ಇಲ್ಲ ಅಂದರೆ ಹೇಗೆ? ಅಂತಹ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT