ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರ

ದೇಶಪಾಂಡೆ ಫೌಂಡೇಷನ್‌ ಸಿಇಒ ಹೇಳಿಕೆ
Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರವು ಹುಬ್ಬಳ್ಳಿಯಲ್ಲಿ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ‘ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ 7 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ವಸತಿ ಸೌಲಭ್ಯ ಒಳಗೊಂಡ ಈ ಅತ್ಯಾಧುನಿಕ  ಕೇಂದ್ರ ತಲೆಎತ್ತಲಿದೆ.

ದೇಶಪಾಂಡೆ ಫೌಂಡೇಷನ್‌ ಆರಂಭಿಸಲಿರುವ ಈ ಕೇಂದ್ರದಲ್ಲಿ  ಒಂದು ಬಾರಿಗೆ 1,000 ಮಹಿಳೆಯರು ಮತ್ತು 1,500 ಪುರುಷರ ವೃತ್ತಿ ಕೌಶಲ ಅಭಿವೃದ್ಧಿಪಡಿಸುವುದು ಈ ಫೌಂಡೇಷನ್‌ ಧ್ಯೇಯವಾಗಿದೆ.

ಒಂದು ವರ್ಷದಲ್ಲಿ ಗರಿಷ್ಠ 5 ಸಾವಿರದಷ್ಟು ಸ್ತ್ರೀ– ಪುರುಷರ ವೃತ್ತಿ ಕೌಶಲ ಹೆಚ್ಚಿಸಿ ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳಿಸುವ ಗುರಿ ನಿಗದಿ ಮಾಡಲಾಗಿದೆ’ ಎಂದು ಫೌಂಡೇಷನ್‌  ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ನವೀನ್‌ ಝಾ ‘ಪ್ರಜಾವಾಣಿ’ಗೆ ತಿಳಿಸಿದರು.

‘5 ರಿಂದ 6 ತಿಂಗಳ ಅವಧಿಯ ಈ ಕೌಶಲ ಅಭಿವೃದ್ಧಿ ತರಬೇತಿಗೆ ಊಟ, ವಸತಿ ಸೇರಿದಂತೆ ವಿದ್ಯಾರ್ಥಿಗಳು ₹ 25 ರಿಂದ ₹ 30ಸಾವಿರದವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಕೌಶಲ ವೃದ್ಧಿಗೆ ತಗುಲುವ ಹೆಚ್ಚುವರಿ ವೆಚ್ಚವನ್ನು ಕಾರ್ಪೊರೇಟ್‌ಗಳ ನೆರವಿನಿಂದ ಭರಿಸಲಾಗುವುದು.

ಮೂಲತಃ ಹುಬ್ಬಳ್ಳಿಯವರಾದ ಸದ್ಯಕ್ಕೆ ಅಮೆರಿಕದಲ್ಲಿ ನೆಲೆಸಿರುವ ಉದ್ಯಮಿ ಡಾ. ಗುರುರಾಜ್‌ ದೇಶಪಾಂಡೆ ಅವರು ತಮ್ಮ ಸ್ವಂತ ಬಂಡವಾಳ ತೊಡಗಿಸಿ ಈ ಕೇಂದ್ರ ಆರಂಭಿಸುತ್ತಿ ದ್ದಾರೆ. ಇದುವರೆಗೆ ₹ 60 ಕೋಟಿಗಳಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ.

‘ಗುರುಕುಲ ಮಾದರಿಯಲ್ಲಿ ವಾರದ ಏಳೂ ದಿನಗಳ ಕಾಲ ಇಲ್ಲಿ ಕಲಿಕಾರ್ಥಿಗಳ ವ್ಯಕ್ತಿತ್ವ ವಿಕಸನ, ಕೌಶಲ ಅಭಿವೃದ್ಧಿಯ ವಿವಿಧ ಬಗೆಯ ತರಬೇತಿ ಕಾರ್ಯಕ್ರಮ ಇರಲಿವೆ.

‘ಕ್ಯಾಂಪಸ್‌ ನೇಮಕಾತಿ ಮಾದರಿಯಲ್ಲಿ  ಇಲ್ಲಿಯೂ ತರಬೇತಿ ಅವಧಿಯಲ್ಲಿಯೇ ನೇಮಕಾತಿ ಸೌಲಭ್ಯ ಇರಲಿದೆ. ಸ್ವತಂತ್ರವಾಗಿ ಉದ್ದಿಮೆ, ಕೈಗಾರಿಕೆ ಆರಂಭಿಸುವವರಿಗೆ ಸಾಲದ ನೆರವು ನೀಡುವ ಸಹಕಾರಿ ಸಂಘವೂ ಫೌಂಡೇಷನ್‌ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

‘ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಂದ ಹಿಡಿದು  ಸ್ನಾತಕೋತ್ತರ ಪದವಿ ಪಡೆದವರ ವೃತ್ತಿ ಕೌಶಲ ಹೆಚ್ಚಿಸುವ ಕಾರ್ಯಕ್ರಮಗಳು ಇಲ್ಲಿ ಇರಲಿವೆ. ದೇಶದಾದ್ಯಂತ ಕಲಿಕಾರ್ಥಿಗಳಿಗೆ ಇಲ್ಲಿ ಪ್ರವೇಶ ಅವಕಾಶ ಇರಲಿದೆ. ಗ್ರಾಮೀಣ ಮತ್ತು ಸಣ್ಣ – ಪುಟ್ಟ ನಗರಗಳ ಕಲಿಕಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು’ ಎಂದು ಝಾ ಹೇಳಿದರು.

ಮಾಹಿತಿಗೆ ಉಚಿತ ಕರೆ ಸಂಖ್ಯೆ 1800 3010 1221, e-mail: det@dfmail.org / www.detedu.org ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT